Facebook

ಮಹಿಳಾ ಕಲಾವಿದರ “ಏಕಲವ್ಯ” ದೊಡ್ಡಾಟ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ಕನ್ನಡದ ಬರಹಗಳನ್ನು ಹಂಚಿ ಹರಡಿ

hipparagi

ದಲಿತ ಕವಿ ಡಾ.ಸಿದ್ದಲಿಂಗಯ್ಯನವರು ರಚಿಸಿದ ‘ಏಕಲವ್ಯ’ ನಾಟಕವನ್ನು ಉತ್ತರ ಕರ್ನಾಟಕದ ಜನಪದರ ದೊಡ್ಡಾಟ ಶೈಲಿಗೆ ಅಳವಡಿಸಿ ದಶಕಗಳಷ್ಟು ಹಿಂದೆಯೇ ಮೆಚ್ಚುಗೆ ಪಡೆದ ಹಿರಿಯ ಕಲಾವಿದ ಟಿ.ಬಿ.ಸೊಲಬಕ್ಕನವರ ಮಾರ್ಗದರ್ಶನದಲ್ಲಿ ಹರಪನಹಳ್ಳಿಯ ‘ಸಮಸ್ತರು’ ತಂಡದ ಮಹಿಳಾ ಕಲಾವಿದರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ (ಕವಿವ) ಸಂಘದಲ್ಲಿ ಇತ್ತೀಚೆಗೆ (ಜ.17) ಬಿ.ಪರಶುರಾಮ ನಿರ್ದೇಶನದಲ್ಲಿ ಅಭಿನಯಿಸಿದರು. ಕವಿವ ಸಂಘದ ಕಲಾಮಂಟಪದ ಆಶ್ರಯದಲ್ಲಿ ಜರುಗಿದ ಈ ಪ್ರದರ್ಶನದಲ್ಲಿ ಒಂದೆರಡು ಪ್ರಮುಖ ಪಾತ್ರಗಳನ್ನು ಹೊರತುಪಡಿಸಿದರೆ ಎಲ್ಲರೂ ಮಹಿಳಾ ಕಲಾವಿದರು ದೊಡ್ಡಾಟದ ತಾಳಕ್ಕೆ ಹೆಜ್ಜೆಹಾಕಿದ್ದು ಇತ್ತೀಚಿನ ದಿನಗಳಲ್ಲಿ ಹೊಸಪ್ರಯೋಗವೆನಿಸಿ, ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ವಿಶೇಷವಾಗಿ ಭೀಮನ ಪಾತ್ರದಲ್ಲಿ ಸೌಮ್ಯ ಸ್ವಭಾವದ ಉದಯೋನ್ಮುಖ ರಂಗ ಕಲಾವಿದೆ ಶ್ರೀಮತಿ ಗಿರಿಜಾ ಹಿರೇಮಠ ಗಮನಸೆಳೆದರು. 

166

????????????????????????????????????

????????????????????????????????????

ರಂಗಭೂಮಿ, ಜಾನಪದ ಮತ್ತು ಕಲಾಕ್ಷೇತ್ರ ಸೇರಿದಂತೆ ಹಲವಾರು ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಹಿರಿಯ ಕಲಾವಿದ ಸೊಲಬಕ್ಕನವರ ಅವರು ಹೊಸ ಆಶಯದೊಂದಿಗೆ ಹೊಸಬರಿಗೆ ದೊಡ್ಡಾಟದ ತಿಳುವಳಿಕೆ, ಪ್ರಾತ್ಯಕ್ಷಿಕೆ, ಉತ್ಸವ, ತರಬೇತಿ ನೀಡುವ ಮೂಲಕ ದೊಡ್ಡಾಟದ ಕಾಯಕಲ್ಪಕ್ಕಾಗಿ ಶ್ರಮಿಸುವ ನಿಟ್ಟಿನಲ್ಲಿ “ಏಕಲವ್ಯ” ದೊಡ್ಡಾಟ ಉತ್ತಮ ಪ್ರಯತ್ನವಾಗಿದೆ. ಹಿಂದೊಮ್ಮೆ ‘ಯಕ್ಷಗಾನ ಕ್ಷೇತ್ರದಲ್ಲಿ ವಿದ್ಯಾವಂತರ ಪ್ರವೇಶದಿಂದಾಗಿ ಅದಕ್ಕೆ ಅಂತರರಾಷ್ಟ್ರೀಯ ಮನ್ನಣೆ ದೊರಕಿದೆ. ದೊಡ್ಡಾಟ ಕ್ಷೇತ್ರದಲ್ಲಿಯೂ ವಿದ್ಯಾವಂತರ ಪ್ರವೇಶವಾಗಬೇಕು’ ಎಂದು ಹೇಳಿದ ಮಾತಿಗೆ ತಕ್ಕಂತೆ ಶ್ರೀ ಸೊಲಬಕ್ಕನವರ್ ಅವರು ಹೊಸ ತಲೆಮಾರನ್ನು ದೊಡ್ಡಾಟದ ಕಲಾಕ್ಷೇತ್ರಕ್ಕೆ ತಯಾರು ಮಾಡುತ್ತಿದ್ದಾರೆ. ಮೂಲತಃ ‘ಏಕಲವ್ಯ’ ಕಥಾನಕವು ಪ್ರತಿಭಾವಂತನೊಬ್ಬನಿಗೆ ಜಾತಿ/ವರ್ಣಾಧಾರಿತ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯ ಮೂಲಕ ನಡೆದ ವ್ಯವಸ್ಥಿತ ಮೋಸದ ಕಥೆಯಾಗಿದ್ದು, ಮಹಾಭಾರತದಲ್ಲಿ ಬರುವ ಹಲವಾರು ಉಪಕಥೆಗಳಲ್ಲಿಯೇ ಮಹತ್ವದ್ದು. ಅರ್ಜುನನ ಕುತಂತ್ರದಿಂದ ತನ್ನ ಹೆಬ್ಬೆರಳನ್ನು ಗುರುಕಾಣಿಕೆಯಾಗಿ ಅರ್ಪಿಸುವ ಮೂಲಕ ‘ಏಕಲವ್ಯ’ ಶಕ್ತಿಹೀನನಾಗುತ್ತಾನೆ. ಶಕ್ತಿಹೀನನಾದರೂ ಛಲ ಬಿಡದೆ ಮತ್ತೇ ನಿರಂತರ ಪ್ರಯತ್ನದಿಂದ ಮತ್ತೇ ಬಿಲ್ವಿದ್ಯೆಯಲ್ಲಿ ಪರಿಣಿತನಾಗುವ ಏಕಲವ್ಯನಿಗೆ ಕುರುಕ್ಷೇತ್ರ ಯುದ್ಧದ ಸಂದರ್ಭದಲ್ಲಿ ತಂತಮ್ಮ ಪಕ್ಷವಹಿಸಿಕೊಳ್ಳಲು ಕೌರವರು-ಪಾಂಡವರು ಪ್ರತ್ಯೇಕವಾಗಿ ಬಂದು ವಿವಿಧ ಆಮಿಷಗಳನ್ನು ಒಡ್ಡುತ್ತಾ ವಿನಂತಿಸಿಕೊಳ್ಳುವ ಮೂಲಕ ಬುಡಕಟ್ಟು ಪ್ರತಿಭಾವಂತನ ಅನಿವಾರ್ಯತೆ ಮತ್ತು ಮಹತ್ವ ಕಂಡುಕೊಳ್ಳುವ ಮೂಲಕ ದೊಡ್ಡಾಟ ಮುಕ್ತಾಯವಾಗುತ್ತದೆ. 

ಸರಳ ರಂಗಸಜ್ಜಿಕೆಯಲ್ಲಿ ಪ್ರದರ್ಶನಗೊಂಡ ದೊಡ್ಡಾಟದಲ್ಲಿ ಅಶ್ವಿನಿ ಭದ್ರಶೆಟ್ಟಿ, ಗಿರಿಜಾ ಹಿರೇಮಠ, ಶಿಲ್ಪಾ ಮೈದೂರು, ವೀಣಾ, ಚೈತ್ರಾ, ಸುಮಂಗಲಾ, ಶ್ವೇತಾ, ಮುಕ್ತಿಯಾರ್, ಅಶೋಕಾ, ಪರಶುರಾಮ, ಚೇತನ ಮತ್ತು ಹನುಮಂತಪ್ಪ ಸೊಲಗಿ ಮುಂತಾದವರು ಸಂದರ್ಭೋಚಿತವಾಗಿ ಅಭಿನಯಿಸಿದರು. ಕೆ.ಆನಂದ ಅವರ ಬೆಳಕಿನ ವಿನ್ಯಾಸದಲ್ಲಿ ಸುಧಾರಣೆಯಾಗಬೇಕಿದೆ. ದೊಡ್ಡಾಟದ ಸುಮಧುರ ಸಂಗೀತವನ್ನು ಅತ್ಯುತ್ಸಾಹದಿಂದ ಉಣಬಡಿಸಿದವರು ಹಿರಿಯ ಕಲಾವಿದ ಬಸವರಾಜ ಸಿಗ್ಗಾಂವಿ ಮತ್ತು ಸಂಗಡಿಗರು. 

ಇಂಥಹ ಗಂಡುಕಲಾ ಪ್ರಕಾರಗಳನ್ನು ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆಸಕ್ತಿಯಿಂದ ಕಲಿತು ಪ್ರದರ್ಶನ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತಹ ಉದಯೋನ್ಮುಖ ಕಲಾವಿದೆಯರಿಗೆ ಕವಿವ ಸಂಘದ ಕಲಾ ಮಂಟಪದ ಸಂಚಾಲಕ ಮೋಹನ ನಾಗಮ್ಮನವರ ಮತ್ತು ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರೋತ್ಸಾಹಕರವಾಗಿ ಬೆಂಬಲಿಸಿರುವುದು ಸಹ ಸೃಜನಶೀಲರ ಮೆಚ್ಚುಗೆಗೆ ಪಾತ್ರವಾಗಿರುವ ಸಂಗತಿಯಾಗಿದೆ.

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply