ಮೋದಿಯ ಹಾದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

 somashekar-k-t

ದೇಶವನ್ನು ಆಳುವವರ ಉದ್ದೇಶ ದೇಶದ ನೆಮ್ಮದಿ. ದೇಶವನ್ನು ಕಾಡುವ ಸಮಸ್ಯೆಗಳನ್ನು ಗುರುತಿಸಿ, ಹೋಗಲಾಡಿಸುವ ಮಾರ್ಗಗಳನ್ನು ತಿಳಿದು, ಅದಕ್ಕೆ  ಶಾಶ್ವತ ಯೋಜನೆಗಳನ್ನು ರೂಪಿಸಿ, ನಿಗಧಿತ ಸಮಯದೊಳಗೆ ಅವುಗಳನ್ನು ಪರಿಹರಿಸುವುದು ಉತ್ತಮ ಆಡಳಿತಗಳ ಲಕ್ಷಣ. ಆಗ ಸರ್ಕಾರಗಳ ಹೊರೆ  ಕಡಿಮೆಯಾಗಿ, ಹೆಸರು ಜಾಸ್ತಿಯಾಗಿ, ಜನಕ್ಕೆ ನೆಮ್ಮದಿ ಲಭಿಸೀತು.

ಭಾರತ ವಿಜ್ಙಾನ, ತಂತ್ರಜ್ಙಾನ,  ಬಾಹ್ಯಾಕಾಶ … ಗಳಲ್ಲಿ ರಭಸವಾಗಿ ಮುನ್ನುಗ್ಗುತ್ತಿದೆ. ಸರ್ವತೋಮುಖ ಅಭಿವೃದ್ದಿಗೆ  ಅನೇಕ ಸಮಸ್ಯೆಗಳು ಅಡ್ಡಿಯಾಗಿವೆ. ಆ ಸಮಸ್ಯೆಗಳಲ್ಲಿ ಎರಡು ವಿಧ. ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳು.  ಬಡತನ, ನಿರುದ್ಯೋಗ,  ಭ್ರಷ್ಟಾಚಾರ …. ಮುಂತಾದ ಸಮಸ್ಯೆಗಳ ಒಂದೆಡೆಯಾದರೆ, ರಾಜ್ಯಗಳ ನಡುವೆ ಭಾಷೆ, ನೆಲ, ಜಲ, ಗಡಿ… ಮುಂತಾದ ಸ್ಪೋಟಕ ಶಕ್ತಿ ಹೊಂದಿದ ವಿವಾದಗಳು ಇನ್ನೊಂದೆಡೆ. ಇವು ಆಂತರಿಕ ಸಮಸ್ಯೆಗಳು. ಇವು ತುಂಬ ಸೂಕ್ಷ್ಮವಾದವು. ಸಮರ್ಥ ನಾಯಕನ ಧಿಟ್ಟ ನಿರ್ದಾರಗಳಿಂದ ಮಾತ್ರ ಬಗೆಹರಿಸಲು ಸಾಧ್ಯ. ಇಲ್ಲವಾದರೆ ಒಕ್ಕೂಟದ ವ್ಯವಸ್ಥೆಗೆ ಸವಾಲಾಗಿಬಿಡುತ್ತವೆ. ಈಗಾಗಲೇ ಕೆಲವು ಸಮಸ್ಯೆಗಳನ್ನು — ಮಹದಾಯಿ,  ಕಾವೇರಿ, ಬೆಳಗಾವಿ, — ಸಮರ್ಥವಾಗಿ ನಿಭಾಯಿಸದ ಕಾರಣ ಆ ರೀತಿ ಬೆಳೆದಿವೆ. ಇವುಗಳನ್ನು ಬಗೆಹರಿಸುವ ಸವಾಲು ಹಿಂದಿಗಿಂತ ಇಂದಿನ ಸರ್ಕಾರಗಳಿಗೆ ಹೆಚ್ಚು ಅವಶ್ಯವಾಗಿದೆ. ಏಕೆಂದರೆ ಅವು ಬಿಗಡಾಯಿಸಿವೆ.

ಇಷ್ಟು ವರ್ಷ ಬಗೆಹರಿಯದ ಸಮಸ್ಯೆಗಳನ್ನು ಒಮ್ಮೆಗೆ ಬಗೆಹರಿಸುವುದು ಕಷ್ಟ. ಸರ್ಕಾರ ಆದ್ಯತೆ, ಸಮಸ್ಯೆಯ ತೀವ್ರತೆ  ಮೇರೆಗೆ ಬಗೆಹರಿಸುವ ತೀರ್ಮಾನ ಮಾಡಿದಲ್ಲಿ ಕೆಲವಾದರೂ ಮುಕ್ತಿ ಕಂಡಾವು. ಜತೆಗೆ ಆ ಛಾತಿಯನ್ನು ಧೀಮಂತ ಮುಂದಾಳತ್ವ,  ದಿಟ್ಟ, ಸ್ಪಷ್ಟ ನಿರ್ಧಾರಗಳ ತೆಗೆದುಕೊಳ್ಳುವ ಮೂಲಕ ಭರವಸೆ ಮೂಡಿಸುವ ಅಗತ್ಯತೆ ಇದೆ.

ಇನ್ನು  ಬಾಹ್ಯ ಸಮಸ್ಯೆ : ನಮ್ಮ ಒಕ್ಕೂಟದ ವ್ಯವಸ್ಥೆಗೆ ಧಕ್ಕೆ ತರುವಂತಿರುವ ಭಯೋತ್ಪದಕತೆ ನಮಗಲ್ಲದೆ ವಿಶ್ವಕ್ಕೇ ಸವಾಲಾಗಿದೆ. ನಾವು ಅದರ ಕೆಟ್ಟ ಪರಿಣಾಮಕ್ಕೆ ನಿರಂತರವಾಗಿ ಆಹುತಿಯಾಗುತ್ತಿದ್ದೇವೆ. ಪಾಕಿಸ್ತಾನದ ಅಸ್ಥಿರ ಆಡಳಿತದಂತೆ, ರಾಜಕೀಯ ನಿಲವುಗಳ ಅಸ್ಥಿರತೆ , ಯಾವುದೇ ವಿಷಯಕ್ಕೆ ಭದ್ಧತೆ ಪ್ರದರ್ಶಿಸದಿರುವಿಕೆ, ನಯವಂಚಕ ಅಮಾನವೀಯ ನಡೆಗಳು ಕಾರಣಗಳಾಗಿವೆ. ಪಿಒಕೆ, ಚೀನಾ ಗಡಿ ವಿಚಾರ, ಬಾಂಗ್ಲಾ,  ಪಾಕಿಸ್ತಾನದೊಂದಿಗೆ ನದಿ ನೀರಿನ ಸಮಸ್ಯೆಗಳಿದ್ದರು, ಪಾಕಿಸ್ತಾನದ ಪ್ರಾಯೋಜಕ ಭಯೋತ್ಪಾದನೆ ಭೀಕರವಾಗುತ್ತಿದೆ. ಇವೆಲ್ಲವುಗಳು ಎಲ್ಲಾ ಸರಕಾರಗಳು ಅನೇಕ ಕಾರಣಗಳಿಗಾಗಿ ಜೀವಂತವಾಗಿರಿಸಿಕೊಂಡ ಪ್ರಯುಕ್ತ ಹದ್ದುಮೀರಿ ಕಂಟಕಪ್ರಾಯವಾಗಿವೆ. ಇಂದಿನ ಸರ್ಕಾರ ಗಂಭೀರವಾಗಿ ಪರಿಗಣಿಸಲೇ ಬೇಕಿದೆ.

ಪಾಕಿಸ್ತಾನಕ್ಕೆ ನಮ್ಮ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನೆಗಳಿಗೆ ಸಾಕ್ಷಾಧಾರಗಳನ್ನು ನೀಡಿ ತನ್ನ ತಪ್ಪನ್ನು ತಿದ್ದಿಕೊಳ್ಳಲಿ, ಒಪ್ಪಿಕೊಳ್ಳಲಿ ಎಂದು ಹಲವು ಬಾರಿ ಅಪ್ಪಿದ್ದು, ಪಠಾಣ್ ಕೊಟ್, ಉರಿ ಸೈನ್ಯ ನೆಲೆಗಳ ಮೇಲೆನ ಧಾಳಿಯ ಕೊಡುಗೆಗಳ ಪಡೆದದ್ದು, ಅದಕ್ಕೆ ಪ್ರತಿ ತಂತ್ರ ಹೆಣೆದದ್ದು, , — ೨೯ ಸೆಪ್ಟಂಬರ್ ೧೬ ಸರ್ಜಿಕಲ್ ದಾಳಿ —  ಹೆಣೆದಿದ್ದರ ಕುರುಹು ಸಿಗದಂತೆ ಮಾಡಿದುದು ಮೋದಿಯ ಮಮತೆಯ ಚಾಣಾಕ್ಷ ಹಾದಿ!

ಭಾರತ ರಥದ ಧೀಮಂತ ಸಾರಥಿಯಾಗಿ ಅಭಿವೃದ್ದಿಯ ಪಥದಲ್ಲಿ ನಡೆಯಿಸುವ ಕಂಕಣ ಕಟ್ಟಿಕೊಡಂತೆ ಉನ್ನತಿಯೆಡೆಗೆ ನಡೆಯಿಸುತ್ತಿದ್ದಾರೆ. ೫೬ ಇಂಚು ಎದೆಯುಳ್ಳ ಮುಂಗಾಣ್ಕೆಯುಳ್ಳ ಸನ್ಯಾಸಿ! ನಡದದ್ದೇ ದಾರಿ, ನುಡಿದದ್ದೇ ವೇದವಾಕ್ಯವಾಗುತ್ತಿದೆಯೇನೋ ಅನ್ನುವಂತಿದೆ ರಥದ ರಭಸ.

ಛಾಯ್ ವಾಲಾ ಆದದ್ದು, ಹಿಮಾಲಯಕ್ಕೆ ತಪಸ್ಸಿಗೆ ಹೋದದ್ದು, ಗುರುವಿನ ಮಾರ್ಗದರ್ಶನದಂತೆ ನಾಡಿಗೆ ಹಿಂದಿರುಗಿದ್ದು, ಗುಜರಾತಿನ ರಾಜಕೀಯಕ್ಕೆ ದುಮುಕಿದ್ದು,ಮುಖ್ಯ ಮಂತ್ರಿಯಾಗಿ ರಾಜ್ಯವು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದುದು, ಭಾರತದ ಪ್ರಧಾನಿ ಯಾದದ್ದು, ವಿಶ್ವದ ಮುಖ್ಯ ರಾಷ್ಟ್ರಗಳ ಗಿರನೆ ಸುತ್ತಿದ್ದು, ವಿಶ್ವ ನಾಯಕರ ಮಧ್ಯ ಅತಿ ಶೀಘ್ರ ಗಣ್ಯಾತಿ ಗಣ್ಯರ ಸ್ಥಾನ ಗಳಿಸಿದ್ದು, ಡಿಜಿಟಲ್ ಇಂಡಿಯ, ಮೇಕ್ ಇಂಡಿಯ, ಸ್ಕಿಲ್ ಇಂಡಿಯ ಕಾರ್ಯಗತಗೊಳಿಸಿದ್ದು , ಯೋಗವ ವಿಶ್ವ ದಿನ ಆಗಿಸಿದ್ದು  ಮೋದಿ ವಿಶ್ವವ ಗೆಲ್ಲುತ್ತಿರುವ ಹಾದಿ !

ಗುರಿ, ದಾರಿ, ನಿರ್ದಾರಗಳು ಬಹಳ ಸ್ಪಷ್ಟವಾದಂತಿವೆ. ಇದರ ಭಾಗವಾಗಿ ಇಂದಿನ ಸರ್ಕಾರ ಕೆಲವು ಉತ್ತಮ ಯೋಜನೆಗಳನ್ನು ರೂಪಿಸಿದಂತಿದೆ. ಇಂದು ಪಾಕ್ ಗೆ ನುಗ್ಗಿ ಉಗ್ರರ ಸದೆಬಡಿಯಲು ಸಾಧ್ಯವಾದದ್ದು , ನುಗ್ಗಿ ಉಗ್ರರ ಸದೆಬಡಿದರೂ ಅಸಹಾಯಕನಾಗುವಂತೆ ಮಾಡಿರುವುದು, ೨೫ ದೇಶಗಳಿಗೆ ಸರ್ಜಿಕಲ್ ದಾಳಿ ನಡೆಯಿಸಿದ ಸವಿವರ ಮಾಹಿತಿ ಒದಗಿಸುವ ದಿಟ್ಟ ನಿರ್ಧಾರ ಮಾಡಿದ್ದು,  ಚೀನಾ, ಬಾಂಗ್ಲ, ಆಪ್ಘಾನಿಸ್ಥಾನ, ಅಮೆರಿಕ ಸೇರಿದಂತೆ ನಾನಾ ದೇಶಗಳು ಭಾರತದ ನಡೆಯನ್ನು ಸಮರ್ಥಿಸುವಂತೆ ಮಾಡಿದ್ದು  ವಿಶ್ವ ಸಮುದಾಯದೆದುರು ಪಾಕ್ ಅನ್ನು ವಿಶ್ವ ಸಂಸ್ಥೆಯಲ್ಲಿ ಅಲ್ಲದೆ ಪಾಕ್ ಗೆ  ನುಗ್ಗಿ ಉಗ್ರರ ಸದೆಬಡಿದುದರ ಘಟನೆಯಲೂ ಒಂಟಿಯಾಗುವಂತೆ ಮಾಡಿದ್ದು, ಪಾಕ್ ನಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗ ಸಭೆಗೆ ಬಹಿಷ್ಕಾರ ಹಾಕಿ, ಸಾರ್ಕ್ ಸದಸ್ಯ ರಾಷ್ಟ್ರಗಳ ಬೆಂಬಲ ಪಡೆದು, ಸಭೆಯೇ ರದ್ದಾಗುವಂತೆ ಮಾಡಿದ್ದು, ಸಿಂಧೂ, ಝೀಲಂ ಮತ್ತು ಚೀನಾಬ್ ನದಿಯ ಗರಿಷ್ಟ ಪ್ರಮಾಣದ ನೀರನ್ನು ಬಳಸಿಕೊಳ್ಳಲು ಹೋಗಿದ್ದು, ಅದನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸುವಂತೆ ಒತ್ತಡದ ವ್ಯೂಹ ಹೆಣೆದದ್ದು, ರಾಜಕೀಯವಾಗಿ, ಆರ್ಥಿಕವಾಗಿ ಸಾಮಾಜಿಕವಾಗಿಯೂ ಮಟ್ಟಹಾಕಿ ಭಯೊತ್ಪಾದಕತೆಯನ್ನು ಹತ್ತಿಕ್ಕಲು ಹೊರಟಿರುವುದು ಮೋದಿ ಸ್ಪಷ್ಟ, ದಿಟ್ಟ ಹಾದಿ!

ವಿರೋಧ ಪಕ್ಷಗಳ ಟೀಕೆಗೆ ತಲೆಕೆಡಿಸಿಕೊಳ್ಳದೆ ವಿಶ್ವದ ಅನೇಕ ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಕೆಲವಕ್ಕೆ ಮತ್ತೆ, ಮತ್ತೆ ಹೋಗಿದ್ದು, ಹೋದಾಗಲೆಲ್ಲಾ ಭವ್ಯ ಸ್ವಾಗತಕ್ಕೆ ಭಾಜನವಾಗಿದ್ದು, ಭಾರತದ ಉದಾತ್ತತೆಯನ್ನು ಮೆರೆದದ್ದು. ಕೆಲವು ವಿಷಯಗಳ ಬಗ್ಗೆ ಸ್ಪಷ್ಟ ನಿರ್ಧಾರವನ್ನು ತಾಳಿದ್ದು, ಭಾರತದ ಬಗೆಗಿನ ಪೂರ್ವಗ್ರಹ ತಪ್ಪು ತಿಳುವಳಿಕೆಯನ್ನು ದೂರ ಮಾಡಿ, ಪಾರದರ್ಶಕ ವ್ಯಕ್ತಿತ್ವ,ದಿಟ್ಟ ನಡೆ, ಸ್ಪಷ್ಟ ನುಡಿ, ಸದೃಢ ನಿರ್ದಾರಗಳಿಂದ, ಹೃದಯ ಗೆದ್ದು ವಿಶ್ವಾಸ ಹುಟ್ಟುವಂತೆ ಮಾಡಿ ಭಾರತದ ಪರವಾಗಿ ಎಲ್ಲಾ ದೇಶಗಳು ನಿಲ್ಲುವಂತೆ ಮಾಡಿದ್ದು, ವಿಶ್ವ ಸಮುದಾಯದಿಂದ ಪಾಕ್ ಗೆ ಬುದ್ದಿ ಹೇಳಿಸಿದ್ದು, ಮೋದಿ ವಿಶ್ವಾಸದ ಹಾದಿ !

ಯಾವದೇಶ ತಮ್ಮ ದೇಶವನ್ನು ಪ್ರವೇಶಿಸಲು ಪರವಾನಿಗಿ ನೀಡಲು ನಿರಾಕರಿಸಿತ್ತೋ, ಆ ದೇಶ ಕೆಂಪು ಹಾಸಿನ, ವಿಶ್ವದ ಯಾವ ನಾಯಕರಿಗೂ ನೀಡದ ಭವ್ಯ ಸ್ವಾಗತವನ್ನು ನೀಡುವಂತೆ ಮಾಡಿದ್ದು, ಪ್ರತಿ ಮಾತಿಗೂ ಆ ದೇಶದ ಸಂಸದರು ಎದ್ದು ನಿಂತು ಕರತಾಡನ ಮಾಡುವಂತೆ ಮಾಡಿದ್ದು,  ವಿಶ್ವದ ಪ್ರಸಿದ್ಧ ನಾಯಕರ ಸಾಲಿನಲ್ಲಿ ಭಾರತೀಯತೆಯನ್ನು, ತನ್ನನ್ನು ರಾರಾಜಿಸುವಂತೆ ಮಾಡಿಕೊಂಡದ್ದು, ಚೀನಾದ ಪಾಕ್ ನ ಭಯೋತ್ಪಾದಕತೆಯ ಪರ ನಿಲವನ್ನು, ಅಹಿಂಸೆಯ ಪರ ವಹಿಸುವಂತೆ ಮಾಡಿದುದು,ಮತ್ತೆ ಮತ್ತೆ ಭಯೋತ್ಪಾದನೆ ಪರ, ಪಾಕ್ ಪರ ನಾವಿಲ್ಲ ಎಂದು ಸ್ಪಷ್ಟ ಹೇಳಿಕೆ ಕೊಡುವ ಸನ್ನಿವೇಶ ಚೀನಾಕ್ಕೆ  ಉಂಟಾಗುವಂತೆ ಮಾಡಿದ್ದು ಸರ್ಜಿಕಲ್ ಸ್ಟ್ರೇ, ಬ್ರಿಕ್ಸ್ ಉಗ್ರವಾದದ ವಿರುದ್ದ ಒಗ್ಗಟ್ಟು ಪ್ರದರ್ಶನ ಮೋದಿ ಯಶಸ್ಸಿನ ಹಾದಿ !

ಭಾರತದ ಯೋಗವನ್ನು ವಿಶ್ವದ ಪ್ರಮುಖ ನಾಯಕರೂ ಕಲಾವಿದರೂ ಅಭ್ಯಾಸಿಸುವಂತೆ ಮಾಡಿ ವಿಶ್ವ ವಿಖ್ಯಾತಗೊಳಿಸಿ, ಮನುಕುಲದ ಕಾಳಜಿ ಮೆರೆದದ್ದು, ಸ್ವಚ್ಛ ಭಾರತ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ಗಳಿಸಿದ್ದು, ಗಂಗಾ ಶುದ್ಧೀಕರಣದ ಭೃಹತ್ ಯೋಜನೆ ರೂಪಿಸಿ ಕಾರ್ಯ ಆರಂಭಿಸುವಂತೆ ಮಾಡಿದುದು,ಮನ್ ಕಿ ಬಾತ್ ನಲ್ಲಿ ಶೌಚಾಲಯ ಬೇಕೆಂದು ಧರಣಿ ಮಾಡಿದ ಮಲ್ಲಮ್ಮನ ನಿಲವನ್ನು ಶ್ಲಾಗಿಸಿ ಮುನ್ನೆಲೆಗೆ ತಂದದ್ದು, ಮೋದಿಯ ಸ್ವಚ್ಛ ಹಾದಿ!

ಸೈನಿಕರ ಬಹುದಿನದ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ಕಪ್ಪು ಹಣ ಹಿಂತರುವ  ಕಾರ್ಯ ಜರೂರಾಗಬೇಕಿದೆ.ಆ ದಿಸೆಯಲ್ಲಿ ೫೦೦ ಮತ್ತು ೧೦೦೦ ರೂಗಳ  ನೋಟುಗಳ ಹಿಂಪಡೆದುದು ದಿಟ್ಟ, ಐತಿಹಾಸಿಕ ಹೆಜ್ಜೆಯಾದರೂ ಈ ದಿಸೆಯಲ್ಲಿ ಸವೆಸಬೇಕಾದ ಹಾದಿ ಬಹಳಷ್ಟಿದೆ. ಈ ವಿಚಾರವಾಗಿ ಸದ್ಯಕ್ಕೆ ಕೋಟಾನೋಟಿಗೆ ಕಡಿವಾಣ ಬೀಳುತ್ತದೆ. ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಕಪ್ಪು ಹಣದ ಬಗ್ಗೆ ಇನ್ನೂ ಪರಿಣಾಮಕಾರಿ ಯೋಜನೆಗಳು ಜಾರಿಗೆ ಬರಬೇಕಿದೆ. ಇದು ಮೋದಿಯ ಭರವಸೆಯ ಹಾದಿ!

ಭಾರತೀಯರೆಲ್ಲರಿಗೂ ಅತಿ ಕಡಿಮೆ ಕಂತಿನ ಅಪಘಾತ ವಿಮೆ, ಜೀವ ವಿಮೆ ಮಾಡಿಸಿ ಜನರ ಮೇಲಿನ ಕಾಳಜಿ ಮೆರೆದಿರುತ್ತಾರೆ. ದೇಶದ ಆರ್ಥಿಕತೆ ಕೈಯಳತೆಯಲ್ಲಿರುವಂತೆ ಮಾಡಿರುತ್ತಾರೆ. ಸುಕನ್ಯಾ ಸಮೃದ್ದಿ ಯೋಜನೆ, ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮಗಳಿಂದ ಬಾಲಕಿಯರ ಬಗ್ಗೆ ವಿಷೇಶ ಕಾಳಜಿ ವಹಿಸಿರುತ್ತಾರೆ. ದೇಶವ ಔನತ್ಯಕ್ಕೇರಿಸುವ ಹುಚ್ಚು ಹಚ್ಚಿಕೊಂಡು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸದಾಗುತ್ತಿದ್ದಾರೆಂಬ ಅನುಮಾನಕೆ ಎಡೆಮಾಡಿಕೊಡದೆ, ಕೆಲವಕ್ಕೆ ಶೀಘ್ರ, ಮತ್ತೆ ಕೆಲವಕ್ಕೆ ನಿಧಾನವಾಗಿ ಸ್ಪಂದಿಸುವ ನಡೆ ಅನುಮಾನಕೆ ಎಡೆ ಆಗದ ಮುನ್ನ ಸ್ಪಂದಿಸಲಿ. ಒಕ್ಕೂಟ ವ್ಯವಸ್ಥೆಯಲ್ಲಿ  ಎಲ್ಲಾ ರಾಜ್ಯಗಳು ಕೇಂದ್ರದ ಮಾತು ಕೇಳುವುದು ಅನಿವಾರ್ಯ ಆ ದಿಟ್ಟ ತನ ತೋರಿ ಆತಂಕ, ಹಾನಿಗೆ ಕಾರಣವಾದ ಅಂತರ ರಾಜ್ಯ ಜಲ, ನೆಲದಂಥವಕ್ಕೆ ಸ್ಪಂದಿಸಿ ಆಂತರಿಕ ಸಮಸ್ಯೆಗಳಿಗೂ, ಬಾಹ್ಯ ಸಮಸ್ಯೆಗಳಿಗೆ ಕೊಟ್ಟಷ್ಟು ಪ್ರಾಮುಖ್ಯತೆ  ಕೊಡಬೇಕಾಗುತ್ತದೆ. ಬಡತನ,  ರೈತರ ಆತ್ಮಹತ್ಯೆ, ನಿರುದ್ಯೋಗ ಇಂಥಾ ಪ್ರಧಾನ ಸಮಸ್ಯೆಗಳನ್ನು ಬೇಗ ಬಗೆಹರಿಸಿ ಪ್ರಧಾನ ಸೇವಕನಾಗಬೇಕಿದೆ. ತನುವಿನ ಸ್ವಚ್ಛತೆಯಂತೆ, ಮನದ ಸ್ವಚ್ಛತೆಯೂ ಮುಖ್ಯ . ಪ್ರಯುಕ್ತ ಭ್ರಷ್ಟಾಚಾರ ನಿರ್ಮೂಲನಾ ಆಂದೋಲನ ಆರಂಭಿಸಲಿ. ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆ ಆಗಿದೆ. ಸಾಧಿಸಬೇಕಾದದು ಅಪಾರ ಇದೆ.  
– ಕೆ ಟಿ ಸೋಮಶೇಖರ ಹೊಳಲ್ಕೆರೆ.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x