ತಾಯಿಯ ಆಶ್ರು ಒರೆಸಿದ ಪದ್ಮಶ್ರೀ ಪುರಸ್ಕೃತ ಮಲ್ಲೇಶಂ: ಉದಯ ಪುರಾಣಿಕ

Udaya Puranika

ಭಾರತ ಜ್ಯೋತಿ ಲೇಖನ ಸರಣಿ :
ತೆಲಂಗಾನಾದ ಚಿಂತಕಿಂಡಿ ಮಲ್ಲೇಶಂ, ಹುಟ್ಟಿದ್ದು ತೆಲಂಗಾನಾ ರಾಜ್ಯದಲ್ಲಿರುವ ಪುಟ್ಟ ಹಳ್ಳಿ ಶಾರ್ಜಿಪೇಟೆಯ ಬಡ ನೇಕಾರ ಕುಟುಂಬವೊಂದರಲ್ಲಿ. ಕುಟುಂಬದ ಆರ್ಥಿಕ ಸಂಕಷ್ಟದಿಂದಾಗಿ, ಶಾಲೆಯಲ್ಲಿ 6ನೆ ತರಗತಿ ಓದುವಾಗಲೇ ತನ್ನ ವಿದ್ಯಾಭ್ಯಾಸ ನಿಲ್ಲಿಸಿದ್ದರು. ಆದರೆ ಅವರು ಮಾಡಿರುವ ಸಾಧನೆಗಾಗಿ ದೊರೆತಿರುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವಗಳನ್ನು ಒಮ್ಮೆ ನೋಡಿ.

ಇವರು, ವರ್ಷ 2009ರಲ್ಲಿ ಭಾರತದ ರಾಷ್ಟ್ರಪತಿಗಳಿಂದ ಗೌರವ ಪುರಸ್ಕಾರ, ವರ್ಷ 2016ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಅಮೇಜಿಂಗ್ ಇಂಡಿಯನ್ ಗೌರವ ಪ್ರಶಸ್ತಿ, ಮತ್ತು ವರ್ಷ 2017ರಲ್ಲಿ ಪದ್ಮಶ್ರೀ ಪುರಸ್ಕೃತ ಪ್ರಶಸ್ತಿ ಪಡೆದಿದ್ದಾರೆ. ಅಂತರಾಷ್ಟ್ರೀಯ ಖ್ಯಾತಿಯ ಫೋಭ್ರ್ಸ ನಿಯತಾಲಿಕೆಯು ಪ್ರಕಟಿಸಿರುವ ಗ್ರಾಮೀಣ ಭಾರತದ ಅತ್ಯಂತ ಪ್ರಭಾವಿ ನವ ಉದ್ಯಮಿಗಳ ಪಟ್ಟಿಯಲ್ಲಿ ಇವರ ಸಾಧನೆಯನ್ನು ಕೊಂಡಾಡಿದೆ. 

ಹೀಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಗೌರವ ಪಡೆದಿರುವ ಚಿಂತಕಿಂಡಿ ಮಲ್ಲೇಶಂರವರ ಸಾಧನೆಯನ್ನು ಕುರಿತು ನಾವು ತಿಳಿದುಕೊಳ್ಳೋಣ. 

ಪೋಚಂಪಲ್ಲಿ ಸೀರೆಯನ್ನು ನೇಯುವಾಗ ಬಳಸುವ ಸಾಂಪ್ರದಾಯಿಕ “ಅಸು” ವಿಧಾನದಲ್ಲಿ ನೇಕಾರನ ಭುಜ, ಕೈಗಳ ಮೇಲೆ ತೀವ್ರ ಒತ್ತಡ ಬೀಳುತ್ತದೆ. ಒಂದು ಸೀರೆ ನೇಯಲು, ನಾಲ್ಕರಿಂದ ಐದು ಗಂಟೆಗಳ ಅವಧಿಯಲ್ಲಿ ಕನಿಷ್ಠ 9,000 ಸಲ ತನ್ನ ಕೈಗಳನ್ನು ಚಲಿಸಬೇಕಾಗಿದ್ದರಿಂದ ವಿಪರೀತ ನೋವಾಗುತ್ತದೆ. ಮಲ್ಲೇಶಂರವರ ತಾಯಿ ಪ್ರತಿದಿನ ಆಸು ವಿಧಾನದಲ್ಲಿ ಕೆಲಸ ಮಾಡುತ್ತಿದ್ದರಿಂದ, ನೋವು ತಡೆಯಲಾರದೆ ಜೋರಾಗಿ ಅಳುತ್ತಿದ್ದರು. ಆದರೆ ಕುಟುಂಬ ನಿರ್ವಹಣೆಗೆ ಅವರು ಪ್ರತಿ ದಿನ ಆಸು ವಿಧಾನವನ್ನು ಬಳಸುವುದು ಅನಿವಾರ್ಯವಾಗಿತ್ತು. ತನ್ನ ತಾಯಿ ಪ್ರತಿದಿನ ಪಡುತ್ತಿದ್ದ ಕಷ್ಟ, ನೋವು, ಸಂಕಟ ಮತ್ತು ಅವರಿಗೆ ಸಹಾಯ ಮಾಡಲಾಗದ ಅಸಹಾಯಕತೆ, ಬಾಲಕ ಮಲ್ಲೇಶಂನ ಮೇಲೆ ತೀವ್ರ ಪರಿಣಾಮ ಬೀರಿತು. 

mallesham

ಅದೇ ಸಮಯದಲ್ಲಿ, ಇಷ್ಟು ನೋವು ನೀಡುವ “ಅಸು” ವಿಧಾನದಿಂದಾಗಿ ಅನೇಕ ಕುಟುಂಬಗಳು ನೇಕಾರ ವೃತ್ತಿಯನ್ನು ಬಿಡಲಾರಂಭಿಸಿದವು. ಇದೆಲ್ಲವನ್ನು ಗಮನಿಸುತ್ತಿದ್ದ ಮಲ್ಲೇಶಂ, ಹೇಗಾದರೂ ಮಾಡಿ ಸಾಂಪ್ರದಾಯಿಕ ಅಸು ವಿಧಾನದಲ್ಲಿ ಸುಧಾರಣೆ ತರಬೇಕು ಎಂದು ಯೋಚಿಸತೊಡಗಿದರು. ಸಾಂಪ್ರದಾಯಿಕ ಆಸು ಪದ್ಧತಿಯಲ್ಲಿ ಸಹಾಯಕರು ಬೇಕು ಮತ್ತು ಹೆಚ್ಚೆಂದರೆ ದಿನಕ್ಕೆ ಒಂದು ಅಥವಾ ಎರಡು ಸೀರೆ ನೇಯಬಹುದು. ಈ ವಿಧಾನದಲ್ಲಿ ಸುಧಾರಣೆ ತಂದರೆ, ಸಹಾಯಕರು ಬೇಕಾಗುವುದಿಲ್ಲ ಮತ್ತು ಒಂದು ಸೀರೆಗೆ ಬೇಕಾದ ಅವಧಿ ಕಡಿಮೆಯಾಗುತ್ತದೆ. ಹೀಗಾಗಿ, ನೇಕಾರನು, ಪ್ರತಿದಿನ ಹೆಚ್ಚು ಸೀರೆ ನೇಯಬಹುದು. ಇದರಿಂದ ನೇಕಾರರ ಕುಟುಂಬಕ್ಕೆ ಹೆಚ್ಚು ಆದಾಯ ಸಿಗುತ್ತದೆ.  ಸಾಲ ತೀರಿಸಲಾಗದೆ ನೇಕಾರರು ಅತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಸಂಗಗಳು ಕಡಿಮೆಯಾಗುತ್ತವೆ ಎಂದು ಮಲ್ಲೇಶಂ ಯೋಚಿಸತೊಡಗಿದರು. 

ಮಲ್ಲೇಶಂಗೆ ತಾಂತ್ರಿಕ ಶಿಕ್ಷಣವಾಗಲಿ ಅಥವಾ ಆ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವಾಗಲಿ ಇರಲಿಲ್ಲ. ಹೀಗಾಗಿ ಅವರು ಅಸು ವಿಧಾನಲ್ಲಿ ತರಲು ಯತ್ನಿಸಿದ ಅನೇಕ ಸುಧಾರಣೆಗಳು ವಿಫಲವಾದವು. ಬೇರೆಯವರು ಅಪಹಾಸ್ಯ ಮಾಡುತ್ತಿದ್ದರೂ, ಧೃತಿಗೆಡದೆ ಮಲ್ಲೇಶಂ ತಮ್ಮ ಪ್ರಯೋಗಗಳನ್ನು ಮುಂದುವರೆಸಿದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಅವರಿಗೆ ಪ್ರತಿಕೂಲವಾದಾಗ, ಅವರು ಸಾಲ ಮಾಡಲು ಪ್ರಾರಂಭಿಸಿದರು. ಮಲ್ಲೇಶಂರವರ ಪ್ರಯತ್ನಗಳು ವಿಫಲವಾಗುತ್ತಿರುವುದು ಮತ್ತು ಸಾಲಕೊಟ್ಟವರಿಗೆ ಮರುಪಾವತಿ ಮಾಡಲು ಸಾಧ್ಯವಾಗದಿರುವುದು, ನೆರೆಹೊರೆ ಮತ್ತು ಸ್ನೇಹಿತರ ಅವಮಾನದಿಂದಾಗಿ ಮಲ್ಲೇಶಂ ಮತ್ತು ಅವರ ಕುಟುಂಬದವರು ತೀವ್ರವಾಗಿ ನೊಂದರು. ಸ್ವಲ್ಪ ದಿನಗಳಲ್ಲಿ ಇವರ ತಂದೆ ತಾಯಿ, ಹೆಂಡತಿ ಮತ್ತು ಬಂಧುಗಳು ಕೂಡಾ ಮಲ್ಲೇಶಂರವರಿಗೆ ಅಸು ಸುಧಾರಣೆಯ ಕೆಲಸ ಬಿಟ್ಟು, ಜೀವನೋಪಾಯಕ್ಕಾಗಿ ತಮ್ಮ ಕುಟುಂಬ ಬಳಸುತ್ತಿರುವ ಸಾಂಪ್ರದಾಯಿಕ ಅಸು ವಿಧಾನವನ್ನು ಬಳಸಿ ಕೆಲಸ ಮಾಡಲು ಹೇಳತೊಡಗಿದರು. ಆಗ, ಅದುವರೆಗೂ ಅವರು ಸಿದ್ಧಪಡಿಸಿದ ಸುಧಾರಿತ ಅಸು ಮಗ್ಗದ ಮಾದರಿಯನ್ನು ಬಿಚ್ಚಿ, ಅದರ ಬಿಡಿಭಾಗಗಳೊಂದಿಗೆ ಊರು ಬಿಟ್ಟು ಮಲ್ಲೇಶಂ ಹೈದರಾಬಾದಿಗೆ ಬಂದು ನೆಲೆಸಿದರು. 

ಹೈದರಾಬಾದಿನ ವಿವಿಧ ಕಾರ್ಖಾನೆಗಳಲ್ಲಿ ಅರೆಕಾಲಿಕ ನೌಕರನಾಗಿ ದುಡಿಯಲು ಪ್ರಾರಂಭಿಸಿದ ಮಲ್ಲೇಶಂ, ಅಲ್ಲಿರುವ ವಿವಿಧ ಯಂತ್ರಗಳು ಹೇಗೆ ಕೆಲಸ ಮಾಡುತ್ತವೆ, ಅವುಗಳನ್ನು ಹೇಗೆ ವಿನ್ಯಾಸ ಮಾಡುತ್ತಾರೆ ಎಂದು ನೋಡಿ ಕಲಿಯಲಾರಂಭಿಸಿದರು. ಬರುವ ಆದಾಯದ ಒಂದು ಭಾಗವನ್ನು ತಾವು ಈ ಮೊದಲು ಮಾಡಿದ ಸಾಲ ತೀರಿಸಲು ಬಳಸಿದರೆ, ಬಹುಭಾಗವನ್ನು ತಮ್ಮ ಅಸು ವಿಧಾನ ಸುಧಾರಣೆಯ ಕೆಲಸಕ್ಕಾಗಿ ಮುಡುಪಾಗಿಟ್ಟರು. 

ತಮ್ಮ ಬಿಡುವಿನ ಸಮಯದಲ್ಲಿ ಅಸು ವಿಧಾನದಲ್ಲಿ ಸುಧಾರಣೆ ತರುವ ಪ್ರಯತ್ನವನ್ನು ಮಲ್ಲೇಶಂ ಮುಂದುವರೆಸಿದರೂ, ಯಶಸ್ಸು ಮಾತ್ರ ಅವರಿಗೆ ದೊರೆಯುತ್ತಿರಲಿಲ್ಲ. ಹೀಗೆ ಎಂಟು ವರ್ಷಗಳ ಕಾಲ, ಅನೇಕ ಬಾರಿ ವಿಫಲರಾದರೂ, ಎಡಬಿಡದೆ ಅವರು ಮಾಡಿದ ಕೆಲಸದ ಪ್ರತಿಫಲವಾಗಿ ವರ್ಷ 1999ರಲ್ಲಿ ಅವರ ಸುಧಾರಿತ “ಅಸು” ಮಗ್ಗ ಸಿದ್ಧವಾಯಿತು. 

picture1

picture2

ಮೊದಲು ಕಟ್ಟಿಗೆಯಿಂದ ಮಾಡಿದ ಫ್ರೇಮ್ ಬಳಸಿ ಸಿದ್ಧಪಡಿಸಿದ್ದ ಈ ಮಗ್ಗವನ್ನು ಬಳಸಿ ಅವರ ಸ್ನೇಹಿತನೊಬ್ಬ, ಮೊದಲ ಸೀರೆಯನ್ನು ನೇಯಲು ಮುಂದಾದ. ಹೀಗೆ ಸಿದ್ಧವಾದ ಸೀರೆಯ ಗುಣಮಟ್ಟವು, ಸಾಂಪ್ರದಾಯಿಕ ಅಸು ವಿಧಾನದಲ್ಲಿ ಸಿದ್ಧವಾದ ಸೀರೆಗಿಂತ ಉತ್ತಮವಾಗಿತ್ತು. ಇದರಿಂದ ಉತ್ತೇಜಿತರಾದ ಮಲ್ಲೇಶಂ, ಮತ್ತಷ್ಟು ಸುಧಾರಣೆಗಳನ್ನು ತಮ್ಮ ಅಸು ಮಗ್ಗದಲ್ಲಿ ತಂದರು. ಕಟ್ಟಿಗೆಯ ಫ್ರೇಮ್ ಬದಲು ಸ್ವೀಲ್ ಬಳಸಿ, ಗುಣಮಟ್ಟ ಮತ್ತು ಮಗ್ಗ ನಿರ್ವಹಣೆ ಸುಲಭವಾಗಲು ವಿದ್ಯುನ್ಮಾನ ಉಪಕರಣಗಳನ್ನು ಬಳಸಿ ತಯಾರಿಸಿದ ಅಸು ಮಗ್ಗಕ್ಕೆ ತಮ್ಮ ತಾಯಿಯ ಹೆಸರನ್ನು ಇಟ್ಟಿದ್ದಾರೆ. 

ತಮ್ಮ ತಾಯಿಯ ಆಶ್ರು ಒರೆಸಲು, ಆಸು ವಿಧಾನದಲ್ಲಿ ಸುಧಾರಣೆ ತರುವ ಭಗೀರಥ ಪ್ರಯತ್ನದಲ್ಲಿ ಮಲ್ಲೇಶಂ ಯಶಸ್ವಿಯಾಗಿದ್ದಾರೆ. ಪುಟ್ಟ ಹಳ್ಳಿಯಲ್ಲಿ ಹುಟ್ಟಿ, ಶಾಲಾಭ್ಯಾಸವನ್ನೂ ಮುಗಿಸದ ಯುವಕನೊಬ್ಬ, ತನ್ನ ಕೌಶಲ್ಯ, ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದ ಇಂತಹ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಕೇವಲ ಶಿಕ್ಷಣ ಮಾಧ್ಯಮ, ಪದವಿ, ಅಂಕಗಳಿಗೆ ಪ್ರಮುಖ್ಯತೆ ನೀಡುವುದರ ಬದಲು ವ್ಯಕ್ತಿಯಲ್ಲಿರುವ ಕೌಶಲ್ಯ, ಪರಿಶ್ರಮವನ್ನೂ ಪರಿಗಣಿಸಿದರೆ, ಮಲ್ಲೇಶಂರಂತಹ ಅನೇಕ ಯುವಕ-ಯುವತಿಯರು ನಮ್ಮ ನಾಡಿಗೆ ನೀಡುತ್ತಿರುವ ಕೊಡುಗೆಗೆ ಗೌರವ ನೀಡಿದಂತಾಗುತ್ತದೆ.
 
ಸಾವಿರಾರು ಕುಟುಂಬಗಳಿಗೆ ಸಹಾಯ ಮತ್ತು ಆಶಾಕಿರಣವಾಗುತ್ತಿರುವ ಈ “ಲಕ್ಷ್ಮೀ ಅಸು” ಮಗ್ಗದ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಚಿಂತಕಂಡಿ ಮಲ್ಲೇಶಂರವರಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗೌರವ, ಪುರಸ್ಕಾರಗಳು ದೊರೆಯುತ್ತಿವೆ. 

ಒಂದು ಲಕ್ಷ್ಮೀ ಅಸು ಮಗ್ಗಕ್ಕೆ ಅಂದಾಜು 25,000 ರೂಪಾಯಿ ಬೆಲೆ ಇದೆ. ತೆಲಂಗನಾದಲ್ಲಿ ಗೃಹ ಕೈಗಾರಿಕೆ ಎಂದು ಪರಿಗಣಿಸಿರುವ ಕಾರಣ, ತೆರಿಗೆ ವಿನಾಯತಿ ನೀಡಲಾಗಿದೆ.  ಆದರೂ, ಬಡ ನೇಕಾರ ಕುಟುಂಬದವರಿಗೆ ಇದನ್ನು ಖರೀದಿಸಲು ಕಷ್ಟವಾಗಿದೆ ಎನ್ನುವ ಕೊರಗು ಮಲ್ಲೇಶಂರವರಿಗೆ ಇದೆ. ತೆಲಂಗಾನಾ ರಾಜ್ಯದಲ್ಲಿರುವ ಸ್ವಯಂ ಸೇವಾ ಸಂಸ್ಥೆಯೊಂದು ಈ ಮಗ್ಗಗಳನ್ನು ಬಡ ನೇಕಾರರಿಗೆ ತಲುಪಿಸಲು ಪ್ರಯತ್ನಿಸುತ್ತಿದೆ. 

ಲಕ್ಷ್ಮೀ ಅಸು ಮಗ್ಗದ ಪ್ರಮುಖ ವಿವರಗಳು ಹೀಗಿವೆ :
ಸಾಂಪ್ರದಾಯಿಕ ಅಸು ವಿಧಾನದಲ್ಲಿ ಒಂದು ಸೀರೆಯನ್ನು ನೇಯಲು 5ರಿಂದ 6 ಗಂಟೆಗಳು ಬೇಕಾದರೆ, ಲಕ್ಷ್ಮೀ ಅಸು ಮಗ್ಗದಲ್ಲಿ ಕೇವಲ 90 ನಿಮಿಷಗಳು ಮಾತ್ರ ಸಾಕಾಗುತ್ತದೆ. 
ಸಾಂಪ್ರದಾಯಿಕ ಅಸು ವಿಧಾನದಲ್ಲಿ ಸಹಾಯಕರು ಬೇಕಾದರೆ, ಲಕ್ಷ್ಮೀ ಅಸು ಮಗ್ಗವನ್ನು ನೇಕಾರರೊಬ್ಬನೆ ನಿರ್ವಹಿಸಬಹುದು.

ಲಕ್ಷ್ಮೀ ಅಸು ಮಗ್ಗದಲ್ಲಿ ಒಂದು ದಿನದಲ್ಲಿ ಕನಿಷ್ಠ ಆರು ವಿವಿಧ ಡಿಜೈನ್‍ಗಳ ಸೀರೆಗಳನ್ನು ನೇಯಲು ಸಾಧ್ಯವಾಗುತ್ತಿರುವುದು ನೇಕಾರರಿಗೆ ಹೆಚ್ಚಿನ ಮಾರುಕಟ್ಟೆ ಮತ್ತು ಆದಾಯವನ್ನು ತರುತ್ತಿದೆ. 

ಲಕ್ಷ್ಮೀ ಅಸು ಮಗ್ಗದಲ್ಲಿ ಒಂದು ಸೀರೆಯನ್ನು ನೇಯಲು ಕೇವಲ 2 ರೂಪಾಯಿನಷ್ಟು ವಿದ್ಯುತ್ ಬಳಕೆಯಾಗುತ್ತದೆ. ಇದುವರೆಗೂ 800 ಲಕ್ಷ್ಮೀ ಅಸು ಮಗ್ಗಗಳನ್ನು ಪೋಚಂಪಲ್ಲಿ ಸೀರೆಯ ನೇಕಾರರಿಗೆ ನೀಡಿರುವ ಮಲ್ಲೇಶಂ, ಇನ್ನೂ 1,000 ಲಕ್ಷ್ಮೀ ಅಸು ಮಗ್ಗಗಳನ್ನು ನೀಡಿದರೆ ತನ್ನ ಜಿಲ್ಲೆಯಲ್ಲಿರುವ ಎಲ್ಲಾ ನೇಕಾರ ಕುಟುಂಬದವರಿಗೂ ಇದನ್ನು ಬಳಸಲು ಸಾಧ್ಯವಿದೆ ಎಂದು ಅಭಿಪ್ರಾಯ ಪಡುತ್ತಾರೆ. 


ಅಸು ಲಕ್ಷ್ಮೀ ಮಗ್ಗದಿಂದ ನೇಕಾರರಿಗೆ ದೊರೆಯುತ್ತಿರುವ ಪ್ರಯೋಜನದಿಂದ ಉತ್ತೇಜಿತರಾದ ಮಲ್ಲೇಶಂ ಈಗ ಸೀರೆ ನೇಯಲು ಬಳಸುವ ಸಾಂಪ್ರದಾಯಿಕ ಮಗ್ಗದ ಸುಧಾರಣೆಯಲ್ಲಿ ತೊಡಗಿದ್ದಾರೆ. ಸಾಂಪ್ರದಾಯಿಕ ಮಗ್ಗಗಳಲ್ಲಿ ಒಂದು ಸೀರೆಯನ್ನು ನೇಯಲು 2ರಿಂದ 3 ದಿನ ಬೇಕಾಗುತ್ತದೆ. ಈ ಅವಧಿಯಲ್ಲಿ ನೇಕಾರಿನಿಗೆ ಸುಮಾರು 3,000 ಸಲ ತನ್ನ ಕಾಲುಗಳನ್ನು ಮತ್ತು ಹೆಚ್ಚು ಕಡಿಮೆ ಅಷ್ಟೇ ಸಲ ತನ್ನ ಕೈಗಳನ್ನು ಬಳಸಬೇಕಾಗುತ್ತದೆ. ಇದರಿಂದ ನೇಕಾರಿನಿಗೆ ತುಂಬಾ ಪರಿಶ್ರಮ ಮತ್ತು ನೋವುಂಟಾಗುತ್ತದೆ. ಈ ಕಷ್ಟದ ಕೆಲಸ ಬೇಡವೆಂದು ಅನೇಕ ಯುವಕರು ಈ ಕೆಲಸವನ್ನೇ ಮಾಡುತ್ತಿಲ್ಲ. ಅದಕ್ಕೆ ಕೈ ಮತ್ತು ಕಾಲುಗಳನ್ನು ಇಷ್ಟು ಸಲ ಬಳಸದೆ, ಕಡಿಮೆ ಸಮಯದಲ್ಲಿ ಇನ್ನೂ ಉತ್ತಮ ಗುಣಮಟ್ಟದ ಸೀರೆಯನ್ನು ನೇಯುವ ಮಗ್ಗವನ್ನು ಸಿದ್ಧಪಡಿಸಿವುದು ಅಗತ್ಯವೆಂದು ಮಲ್ಲೇಶಂ ವಿವರಿಸುತ್ತಾರೆ. 

ತೆಲಂಗಾನಾದಲ್ಲಿರುವ ಅಲೇರ್ ಫೋಸ್ವ್ ಕ್ರಾಂತಿನಗರದಲ್ಲಿ, ಶಂಕರ ಇಂಜನೀಯರಿಂಗ್ ವಕ್ರ್ಸ ಹೆಸರಿನ ಉದ್ಯಮವನ್ನು ಮಲ್ಲೇಶಂ ನಡೆಸುತ್ತಿದ್ದಾರೆ. ಇಲ್ಲಿ ಆಸು ಮಗ್ಗಗಳನ್ನು ತಯಾರಿಸಲಾಗುತ್ತಿದೆ.  



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
Vishala Aradhya
Vishala Aradhya
4 years ago

ನಾವು ಹೇಗೆ ಇಲ್ಲಿಗೆ ಲೇಖನ ಕಳಿಸುವುದು? ದಯವಿಟ್ಟು ತಿಳಿಸಿ.

1
0
Would love your thoughts, please comment.x
()
x