Facebook

ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

prashasti
ಸುಮಾರಷ್ಟು ಜನರಿಗೆ ಸುಬ್ರಹ್ಮಣ್ಯ ಅಂದ್ರೆ ಅಲ್ಲಿ ನಡೆಯೋ ನಾಗಪ್ರತಿಷ್ಟೆ, ಆಶ್ಲೇಷ ಬಲಿಗಳು ನೆನಪಾಗುತ್ತೆ. ಟ್ರೆಕ್ಕಿಂಗು ಅಂತ ಹೋಗೋರಿಗೆ ಅದಕ್ಕೆ ಸಮೀಪದಲ್ಲಿರೋ ಕುಮಾರ ಪರ್ವತ ನೆನಪಾಗಬಹುದು. ಆದರೆ ಸುಬ್ರಹ್ಮಣ್ಯ ದೇವಸ್ಥಾನದ ಹಿಂದಿರುವ ಮರಕತ ಪರ್ವತ ಗೊತ್ತಾ ಎಂದರೆ, ಆದಿ ಸುಬ್ರಹ್ಮಣ್ಯ, ಕಾಶಿ ಕಟ್ಟೆ ಗಣಪತಿ, ಅಭಯ ಗಣಪತಿ, ವನದುರ್ಗಾ ದೇವಿ ನೋಡಿದ್ದೀರಾ ಎಂದರೆ ಎಲ್ಲಿದೆಯಪ್ಪಾ ಇವು ಎನ್ನಬಹುದು. ಸುಬ್ರಹ್ಮಣ್ಯದಿಂದ ೨೦ ಕಿಮೀ ದೂರದ ಒಳಗಿರುವ ಪಂಜ ಪಂಚಲಿಂಗೇಶ್ವರ ದೇವಸ್ಥಾನ, ಬಿಳಿನೆಲೆ ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನ, ಬನವನ ಮೂಲೆ ಈಶ್ವರ ದೇವಸ್ಥಾನ, ಮರಕತ ದುರ್ಗಾಪರಮೇಶ್ವರಿ ದೇವಸ್ಥಾನ, ಹರಿಹರ ಹರಿಹರೇಶ್ವರಸ್ವಾಮಿ ದೇವಸ್ಥಾನಗಳ ಬಗ್ಗೆಯೂ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಅವುಗಳ ಪರಿಚಯವೇ ಈ ಲೇಖನದ ಉದ್ದೇಶ

ಕುಕ್ಕೆಗೆ ಹಾಗೇ ಏಕೆ ಹೆಸರು ? 
ಕುಕ್ಕೆಯ ಹಿಂಭಾಗದಲ್ಲಿರುವ ಪರ್ವತದಲ್ಲಿ ಮರಕತ ರತ್ನಗಳು ಸಿಕ್ಕುತ್ತಿದ್ದರಿಂದ ಅದಕ್ಕೆ ಹಾಗೇ ಹೆಸರು ಬಂದಿತ್ತಂತೆ. ಅದರ ಚಾರಣ ಮಾಡಲು ಈಗಲು ಅರಣ್ಯ ಇಲಾಖೆಯ ಅನುಮತಿ ಬೇಕಂತೆ. ಅದರಲ್ಲಿ ದೊರಕುತ್ತಿದ್ದ ಮರಕತ ರತ್ನಗಳಿಗಾಗಿ ಅದರಲ್ಲಿ ಮಲೆಕುಡಿಯ ಜನಾಂಗದವರು ಹುಡುಕುತ್ತಿದ್ದರಂತೆ. ಹೀಗೆ ಒಮ್ಮೆ ಪರ್ವತವನ್ನೇರಿದ್ದ ಜನರ ಕುಕ್ಕೆಯೊಳಗೆ(ಬೆತ್ತದ ಬುಟ್ಟಿ) ಹೊಕ್ಕ ಹಾವೊಂದು ನಾನು ಹೇಳಿದ ಜಾಗದಲ್ಲಿ ನನ್ನನ್ನು ಇಳಿಸಿ ಎಂದಿದಂತೆ. ಅವರು ಹಾವನ್ನು ಇಳಿಸಿದ ಜಾಗವೇ ಇಂದಿನ ಕುಕ್ಕೆ ಸುಬ್ರಹ್ಮಣ್ಯ ಎಂದು ಹೆಸರಾಗಿದೆ. ಮೊದಲು ಇದ್ದ ಹಾವಿನ ಹುತ್ತವಿದ್ದ ಜಾಗವನ್ನು ಆದಿ ಸುಬ್ರಹ್ಮಣ್ಯವೆಂದೂ ಈಗಿರುವ ದೇವಸ್ಥಾನದ ಪೇಟೆಯನ್ನು ಹೊಸ ಸುಬ್ರಹ್ಮಣ್ಯವೆಂದೂ ಕರೆಯುತ್ತಾರೆ

ಕುಕ್ಕೆಯ ದೇಗುಲ ಪ್ರಾಂಗಣ: 
ಕುಕ್ಕೆಯ ದೇಗುಲ ಪ್ರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇಗುಲವಲ್ಲದೇ ಸೋಮನಾಥ ದೇಗುಲ, ಇಲ್ಲಿನ ಸುಬ್ರಹ್ಮಣ್ಯ ಮಠ, ಮಠದ ವ್ಯಾಪ್ತಿಗೆ ಬರುವ ನರಸಿಂಹ ದೇವಸ್ಥಾನ, ಹೊಸಲಿಂಗಮ್ಮ, ಕಾಲಭೈರವ, ಕುಕ್ಕೆ ಲಿಂಗ ಮುಂತಾದ ಗುಡಿಗಳಿವೆ. ಇದರ ಹಿಂಭಾಗದಲ್ಲಿ ಬರುವ ನದಿಯೇ ದರ್ಪಣ ತೀರ್ಥ. ಇದಕ್ಕಿಂತ ಸ್ವಲ್ಪ ಮುಂಚೆ ಸಿಗುವ ಕುಮಾರ ಧಾರಾದಲ್ಲಿ ಅಥವಾ ದರ್ಪಣ ತೀರ್ಥದಲ್ಲಿ ಮಿಂದು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬರುವುದು ವಾಡಿಕೆ. ದರ್ಪಣ ತೀರ್ಥದಿಂದ ಕುಕ್ಕೆಗೆ ಬರೋ ಮಾರ್ಗದಲ್ಲಿ ಆ ಕಾಲದಲ್ಲಿ ದೇಗುಲ ನಿರ್ಮಾಣಕ್ಕೆ ಸಹಕರಿಸಿರಬಹುದಾದ ಜನರ ಹೆಸರುಗಳನ್ನು ಹಳೆಗನ್ನಡದಲ್ಲಿ ಕೆತ್ತಲಾಗಿದೆ ! ಸುಮಾರು ಜನ ಮಿಸ್ ಮಾಡಿಕೊಳ್ಳುವ ಈ ಶಿಲ್ಪಗಳನ್ನು ನೋಡೋಕೆ ಸ್ವಲ್ಪ ತಾಳ್ಮೆ ಬೇಕು . ದರ್ಪಣ ತೀರ್ಥದ ಪಕ್ಕದಲ್ಲೇ ಇರುವ ಅಶ್ವಥ ಕಟ್ಟೆಯಲ್ಲೂ ಒಂದು ವಿಶೇಷವಿದೆ. ಇದರ ಬೇಲಿಗಳಿಗೆ ಜನರು ಕರ್ಚೀಪುಗಳನ್ನು ತೊಟ್ಟಿಲುಗಳಂತೆ ಕಟ್ಟಿರುವುದನ್ನು ಕಾಣಬಹುದು. ಇದು ಮಕ್ಕಳಾಗದವರು ಮಕ್ಕಳಾಗಲಿ ಎಂದು ಹೊರುವ ಹರಕೆಯಂತೆ !

????????????????????????????????????

????????????????????????????????????

????????????????????????????????????

????????????????????????????????????

ಸುಬ್ರಹ್ಮಣ್ಯದ ರಥಗಳು: 
ಒಂದು ದೇವಸ್ಥಾನದಲ್ಲಿ ಎಷ್ಟು ರಥಗಳಿರಬಹುದು ಅಂದ್ರೆ ಒಂದು ಬಂಗಾರದ್ದೋ, ಬೆಳ್ಳಿಯದೋ ರಥ, ಮತೊಂದು ಮರದ್ದು ಅಂತ ಲೆಕ್ಕ ಹಾಕಿ ಎರಡೋ ಮೂರೋ ಇರಬಹುದು ಅನ್ನಬಹುದು. ಆದರೆ ಕುಕ್ಕೆಯಲ್ಲಿ ನಾಲ್ಕು ರಥಗಳಿವೆ. ಒಂದು ವರ್ಷಕ್ಕೊಮ್ಮೆ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಮಾತ್ರ ಬಳಸ್ಪಡುವ ಬ್ರಹ್ಮ ರಥ(ಎಲ್ಲಾ ರಥಗಳಿಗಿಂತ ದೊಡ್ಡದು). ಇನ್ನೊಂದು ಪ್ರತೀ ಪಂಚಮಿಯ ದಿನ ಎಳೆಯಲ್ಪಡುವ ಹೂವಿನ ರಥ. ಮೂರನೆಯದು ಪ್ರತೀ ಚೌಥಿಯಂದು ಎಳೆಯಲ್ಪಡುವ ಮರದ ರಥ. ಈ ಮೂರೂ ರಥಗಳು ದೇಗುಲದ ಹೊರಭಾಗದಲ್ಲಿದ್ದರೆ ವಿಶೇಷ ಷಷ್ಠಿಗಳಂದು(ಪೂಜೆಗಳಿದ್ದಾಗ) ಎಳೆಯಲ್ಪಡುವ ಮತ್ತೊಂದು ರಥ ದೇವಸ್ಥಾನದ ಒಳ ಪ್ರಾಂಗಣದಲ್ಲಿದೆ. ಅದನ್ನು ಎಳೆಯುವ ಪೂಜೆಗೆ "ಬಂಡಿ ಪೂಜೆ" ಎಂದು ಹೆಸರು. ಅಂದ ಹಾಗೆ ಬ್ರಹ್ಮ ರಥೋತ್ಸವದ ಸಂದರ್ಭಕ್ಕೆ ಮಲೆಕುಡಿಯರೇ ಬಂದು ಬೆತ್ತದಿಂದ ಬ್ರಹ್ಮರಥವನ್ನು ಅಲಂಕರಿಸುತ್ತಾರಂತೆ.

ಕಾಶೀ ಕಟ್ಟೆ ಗಣಪತಿ: 
ಸುಬ್ರಹ್ಮಣ್ಯ ದೇವಸ್ಥಾನದ ಬೀದಿಯನ್ನು ದಾಟಿ ಕುಮಾರಧಾರೆಯ ಕಡೆ ಬರುವಾಗ ಸಿಗುವುದು ಕಾಶೀ ಕಟ್ಟೆ ಗಣಪತಿ ದೇವಸ್ಥಾನ. ಇದನ್ನು ಸುತ್ತುವರಿದೇ ರಸ್ತೆ ಹಾದು ಹೋಗಿದೆ. ಈ ಗಣಪತಿ ಮೊದಲು ಸುಬ್ರಹ್ಮಣ್ಯದ ದೇವಸ್ಥಾನದ ಪ್ರಾಂಗಣದಲ್ಲೇ ಇತ್ತೆಂದೂ ನಂತರ ಅದನ್ನು ಇಲ್ಲಿಗೆ ಸ್ಥಳಾಂತರಿಸಲಾಯಿತು ಎನ್ನುತ್ತಾರೆ. ಅದನ್ನು ಸ್ಥಳಾಂತರಿಸಿದವರಿಗೆ ಈಗಲೂ ಕಷ್ಟಗಳು ತಪ್ಪಿಲ್ಲವೆಂದೂ ಇಲ್ಲಿನ ಜನರ ನಂಬುಗೆ. ಅದಿದ್ದ ಜಾಗದಲ್ಲೇ ಈಗಿನ ನರಸಿಂಹ ದೇಗುಲವಿದೆ ಎನ್ನಲಾಗುತ್ತದೆ.

ಬಿಲದ್ವಾರ:  
ಕಾಶೀಕಟ್ಟೆಯಿಂದ ಮುಂದೆ ಬರುತ್ತಿದ್ದ ಹಾಗೆ ವಾಸುಕಿ ಪುಷ್ಪೋದ್ಯಾನ ಎಂಬ ಒಂದು ಉದ್ಯಾನವನ ಸಿಗುತ್ತದೆ. ಅದರ ಮುಂಭಾಗದಲ್ಲಿರುವುದೇ ಬಿಲದ್ವಾರ. ಇದರಲ್ಲಿರುವ ಎರಡು ಮಾರ್ಗಗಳಲ್ಲಿ ಒಂದು ಕಾಶಿಗೆ ಹೋಗುತ್ತದೆ ಎಂಬ ನಂಬಿಕೆಯಿದೆ. ಆದರೆ ಈಗ ಮಣ್ಣು ಜರಿದು ಹೋಗಿರುವ ಅದರಿಂದ ಎಲ್ಲಿಗೆ ಹೋಗಲೂ ಅಸಾಧ್ಯವಾಗಿದೆ. ಬಲಗಡೆಯಲ್ಲಿರುವ ಮತ್ತೊಂದು ದ್ವಾರದಲ್ಲಿ ಬ್ಯಾಟರಿಗಳ ಸಹಾಯದಿಂದ ಸುಮಾರು ನೂರು ಮೀಟರ್ಗಳಷ್ಟು ದೂರ ತೆರಳಬಹುದೆಂದು ಇಲ್ಲಿನ ಸ್ಥಳೀಯರು ತಿಳಿಸುತ್ತಾರೆ. ಆದರೆ ಮಳೆಗಾಲದ ದಿನಗಳಲ್ಲಿ ಇದರಲ್ಲಿ ಕೆಸರು ತುಂಬಿರುವುದರಿಂದ ಆ ಕೆಲಸ ಕಷ್ಟಸಾಧ್ಯ. ಬೇಸಿಗೆಯಲ್ಲಿ ಬಂದರೆ ಸ್ಥಳೀಯರ ನೆರವಿನಿಂದ ಆ ಸಾಹಸಕ್ಕೆ ಕೈಹಾಕಬಹುದು

ಅಭಯ ಗಣಪತಿ ಮತ್ತು ವನದುರ್ಗಾ ದೇವಿ
ಅಲ್ಲಿಂದ ಮುಂದೆ ಬರುತ್ತಿದ್ದಂತೆ ಸಿಗುವುದು ಏಕಶಿಲೆಯ ಬೃಹತ್ ಅಭಯ ಗಣಪತಿ ಮತ್ತು ವನದುರ್ಗಾ ದೇವಿಯ ದೇವಸ್ಥಾನಗಳು. ಗಣಪತಿಯ ದೇಗುಲಗಳು ಹಲವೆಡೆ ಇದ್ದರೂ ಏಕಶಿಲಾ ದೇಗುಲವಿರುವುದು ವಿರಳ.

ಹತ್ತಿರವಿರುವ ಇನ್ನಿತರ ದೇಗುಲಗಳು: 
೧. ಪಂಜ ಪಂಚಲಿಂಗೇಶ್ವರ ದೇವಸ್ಥಾನ: ಸುಬ್ರಹ್ಮಣ್ಯದಿಂದ ೨೦ ಕಿ.ಮೀ. (ಪ್ರತೀ ಒಂದು ಘಂಟೆಗೊಂದು ನೇರ ಬಸ್ಸಿದೆ)
೨. ಮರಕತ ದುರ್ಗಾಪರಮೇಶ್ವರಿ ದೇವಸ್ಥಾನ. ಸುಬ್ರಹ್ಮಣ್ಯದಿಂದ ಸುಮಾರು ೧೫ ಕಿ.ಮೀ
೩. ಹರಿಹರ ಹರಿಹರೇಶ್ವರ ದೇವಸ್ಥಾನ. ಸುಬ್ರಹ್ಮಣ್ಯದಿಂದ ಸುಮಾರು ೧೨ ಕಿ.ಮೀ
೪. ಬಸವನ ಮೂಲೆ ಈಶ್ವರ ದೇವಸ್ಥಾನ: ಸುಬ್ರಹ್ಮಣ್ಯದಿಂದ ಸುಮಾರು ೯ ಕಿ.ಮೀ
೬. ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನ. ಸುಬ್ರಹ್ಯಣ್ಯದಿಂದ ಸುಮಾರು ೧೫ ಕಿ.ಮೀ( ಕೈಕಂಭದಿಂದ ಪುತ್ತೂರಿಗೆ ಸಾಗುವ ಎಡತಿರುವಿನಲ್ಲಿ ಸುಮಾರು ೩ ಕಿ.ಮೀ ಸಾಗಿದರೆ ಸಿಗುತ್ತದೆ)

ತಿರುಗಿದಷ್ಟೂ ಮುಗಿಯದಷ್ಟು ಜಾಗಗಳಿವೆಯಿಲ್ಲಿ. ಬರೆದಷ್ಟೂ ಮುಗಿಯದ ಕತೆಗಳು ಕೂಡ. ಆದರೆ ಕೇಳಲು, ನೋಡಲು ಸಮಯ, ವ್ಯವಧಾನಗಳಿರಬೇಕಷ್ಟೆ.ಮತ್ತೊಂದಿಷ್ಟು ನೆನಪುಗಳೊಂದಿಗೆ ಮುಂದಿನ ವಾರ ಭೇಟಿಯಾಗುವ…
 


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಸುಬ್ರಹ್ಮಣ್ಯ ಸುತ್ತಮುತ್ತ: ಪ್ರಶಸ್ತಿ”

  1. Adithi says:

    ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಾಂಗಣದಲ್ಲಿರುವುದು ಹೊಸಲಿಂಗಮ್ಮ ಗುಡಿಯಲ್ಲ; ಹೊಸಳಿಗಮ್ಮನ ಗುಡಿ.

    ಅಂತೆಯೇ ಅಲ್ಲಿ ಉಮಾಮಹೇಶ್ವರ,  ಮುಖ್ಯಪ್ರಾಣ, ಗಣಪತಿ ಗುಡಿಗಳೂ ಇವೆ.

Leave a Reply