Facebook

ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

   
ಪದ್ದು ಮುಂಜಾನೆ ಮಂಜಾನೆ ಹಾಸಿಗೆಲಿ ಇದ್ದಾಗಲೆ ಮನ್ಯಾಗ ಒಕ್ಕರಿಸಿಕೊಂಡ, ‘ಏನಾತೋ ಪದ್ದು ಹಿಂಗ್ಯಾಕ ಗಾಬರಿ ಆಗಿದಿ’ ಅಂದೆ. ‘ಇಲ್ಲ ದೊಸ್ತ್ಯಾ ಸಾಲಗಾರರ ಕಾಟ ಬಾಳ ಆಗ್ಯಾದ. ಮಾರ್ಯದೆಯಿಂದ ಬದುಕೊ ಮನುಷ್ಯ. ಸಾಲ ಸಕಾಲಕ್ಕ ತೀರಿಸುವುದಾಗವಲ್ತು ಮೂರು ತಿಂಗಳ ಟೈಮು ಸಿಕ್ರ ಎಲ್ಲಾನೂ ಅಡ್ಜೆಸ್ಟ ಮಾಡಬಹುದು. ಇವರು ಸಿಕ್ಕ-ಸಿಕ್ಕಲ್ಲಿ ವಾಮಾಗೋಚರವಾಗಿ ಬಯ್ಯತಾರ ಏನು ಮಾಡಲಿ’ ಎಂದು ತನ್ನ ಅಳಲು ತೋಡಿಕೊಂಡ. 
‘ಅದಕ್ಯಾಕ ಚಿಂತಿ ಮಾಡತಿ ಒಂದು ವ್ರತ ಅದ ಮಾಡ್ತಿ ಏನು?’
 ‘ವ್ರತಾನ! ವ್ರತದಿಂದ ಸಾಲ ತೀರುತ್ತೇನೋ’ 
 ‘ಸಾಲ ತೀರಿಸೋದು ಬಿಡೋದು ನಿನಗಬಿಟ್ಟದ್ದು. ಬಿಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಾಕ ಉಪಾಯದ ಮಾಡ್ತಿನಿ ಅಂದ್ರ ಹೇಳ್ತಿನಿ’ 
‘ಹೇಳಿ ಪುಣ್ಯ ಕಟ್ಟಿಕೊ ದೊಸ್ತಾ……..’ 
 ‘ಅದೆಪಾ ಮಾಲೆ ಹಾಕ್ಕೊಂಡು ಬಿಡು, ಸ್ವಾಮಿ ಶರಣಂ ಅಯ್ಯಪ್ಪ ವ್ರತ ಹಿಡಕೊಂಡು ಬಿಡು. ಸಾಲಗಾರರೂ ಯಾರು ತಂಟೆಗೆ ಬರೊದಿಲ್ಲ’
‘ಅದ್ಹೆಂಗ ಆಗತ್ತ?’ 
‘ಮಾಲೆ ಹಾಕ್ಕೊಂಡ್ರೆ ನಿನಗ ಸ್ವಾಮಿ ಸ್ವಾಮಿ ಅನಬೇಕು. ಜೋರ ಮಾಡ ಮನಸು ಬರಾಂಗಿಲ್ಲ. ಸ್ವಲ್ಪದಿನ ಸ್ವಾಮಿ ಸ್ವಾಮಿ ಅನ್ನಕೋತ ಸೇಫ್ ಆಗಿರಬಹುದು ನಿನ್ನ ಚಟಾನೂ ಕಡಿಮೆ ಮಾಡಿಕೊಳ್ಳಬಹುದು’
 ‘ಹೌದು ಖರೆವದೂ ಹೇಳೊದು. ಮಾಲೆನ ಧರಿಸೊಕಂಡು ಬಿಡ್ತೀನಿ, ಜೈ ಸ್ವಾಮಿಯೇ ಅಯ್ಯಿ……….ಶರಣಂ ಅಯ್ಯಪ್ಪ’ ಅಂತ ಮುಂದು ಹೋಗಿ ನಿಂತುಕೊಂಡು ಮರಳಿ ಬಂದು ‘ಹೌದು ದೋಸ್ತ್ಯಾ ಒಳ್ಳೆ ಐಡಿಯಾ ಕೊಟ್ಟೆ, ಮೂರು ತಿಂಗಳ ತನ ಈ ಪ್ಲಾನ್ ವರ್ಕೌಟ್ ಆಗುತ್ತ. ಮುಂದ್ಹೆಂಗೋ?’ ಎಂದ.
 ‘ಸಾಲ ತೀರಿಸಿಬಿಡು’ 
‘ಆಗ ಸಾಧ್ಯ ಆಗದಿದ್ರೆ?’
‘ಸಾಧ್ಯ ಮಾಡಕೊಬೇಕಪ’
‘ಆದ್ರೂ ಸಪೋರ್ಟ ಆಗೋ ಐಡಿಯಾ ಹೇಳು’
‘ಒಂದು ಕೆಲಸ ಮಾಡು ಇನ್ನೊಂದು ವ್ರತಾ ಮಾಡು’
‘ಬೇಗ ಹೇಳು ಹೇಳು’
 ‘ಅದ ಶಿವ ಮಾಲೆ ಹಾಕು ಯುಗಾದಿ ತನ ಶಿವ ಶಿವಾ ಅಂತ ಮಂದುಕ ತಳ್ಳಬಹುದು!’
ದೋಸ್ತ್ಯಾ ಎಂಥಾ ಐಡಿಯಾ ಇದು. ಹೋದವರ್ಷ ನಮ್ಮ ಮಾಂತೇಶಿ ಹಾಕಿದ್ನಲ, ಅದನ ಈ ವ್ರತಾ. ಅದೇ ಶೇಷವಸ್ತ್ರ ಹಾಕಿಕೊಂಡು ಶ್ರೀಶೈಲ ಮಲ್ಲಿಕಾರ್ಜುನನ ಹೆಸರಲ್ಲಿ ವ್ರತಾ ಮಾಡೋದು ಅದಲಾ.?’
 ‘ಹೌದು ಅದೇನಪಾ’ 
‘ಥ್ಯಾಂಕ್ಸ ದೋಸ್ತಾ ಕಷ್ಟದ ಕಾಲಕ್ಕ ಗೆಳೆಯ ಅಂದ್ರಾ ನೀನ ನೋಡೋ’ ಎಂದು ಖುಷಿಯಿಂದ ಹೋಗಿ ತಿರುಗಿ ಮರಳಿ ಬಂದ.
 ‘ಮತ್ತೇನೋ?’  
‘ಅಲ್ಲ ಆರು ತಿಂಗಳೂ ಹ್ಯಾಂಗಾದ್ರೂ ದಾಟಿಗೆಂತಿನಿ ನಂತರದಲ್ಲಿ ಸಾಲಗಾರರು ಕಲೆಬಿದ್ರೆ……..!’ಅಂದ. ಇವನಾ ದುರಾ……ಲೋಚನೆ ಅರ್ಥ ಆಯ್ತು.  ಯಾರ್ಯಾರ ಹತ್ರ ಎಷ್ಟೆಷ್ಟು ಸಾಲ ಮಾಡಿದಿ ಲೆಕ್ಕ ಕೊಡು ಅಂದಾಗ ಪಟಪಟ ಬರದು ಲೀಸ್ಟ ಮಾಡಿ ಕೊಟ್ಟು ‘ದೋಸ್ತ್ಯಾ ಈ ಲೀಸ್ಟ ತೋಂಡು ಇವರ ಮೇಲೆ ಮಾಟಾ ಗೀಟಾ ಮಾಡಿ, ಅವರು ಈ ಸಾಲ ಮರೆಯುವಾಂಗ ಮಾಡಸವರು ಯಾರರ ಇದ್ರ ಆ ಕೆಲಸ ಮಾಡಪಾ’ ಎಂದು ಅಂಗಲಾಚಿದ. 
‘ನಾನು ಲೀಸ್ಟು ಕೇಳಿದ್ದು ನಿನ್ನ ಆಸಿನ ಬಗ್ಗ ಬಡಿಲಿಕ್ಕೆ , ಇವರೆಲ್ಲರನೂ ಒಂದು ದಿನ ಕೂಡಿಸಿ ನಿನ್ನ ಹಣ್ಣುಗಾಯಿ ನೀರು ಗಾಯಿ ಮಾಡಲಿಕ್ಕೆ’ 
ಅವ ಸಾಷ್ಟಾಂಗ ಎರಗಿದ. ‘ಅಲ್ಲಯ್ಯ ಇಷ್ಟತನ ಬಚಾವ ಆಗಾಕ ಪ್ಲಾನ್ ಹೇಳಿಕೊಟ್ಟಿ, ಈಗ ಜೀವ ತೆಗೆಸ ಯೋಚನೆ ಮಾಡಕತಿಯಲ್ಲೋ’ ಎಂದ. 
‘ಆಸೆ ಇರಬೇಕಪ, ಅತಿ ಆಸೆ ಮಾಡಿದ್ರ ಹ್ಯಾಂಗೋ?’ 
 ಆಯ್ತಪ ಬರತಿನಿ ಅಂತ ಹೋದವ ಐದು ನಿಮಿಷದಾಗ ಮರಳಿ ಬಂದು ‘ಅಲ್ಲ ತಪ್ಪುತಿಳಕೊಬೇಡ. ಆಕಸ್ಮಾತಾಗಿ ಆರು ತಿಂಗಳಾದ್ರೂ ಮುಟ್ಟಸಾಕ ಆಗಲಿಲ್ಲ ಅಂದ್ರ…… ಪಾರಾಗಕ ಸಣ್ಣ ಉಪಾಯ ಹೇಳು ತಂದೆ’ ಅಂದ.
 ಇವನ ಲೆಕ್ಕಾಚಾರ ತಿಳಿತು.  ಬಾ ಇಲ್ಲಿ ಅಂದೆ. ಖುಷಿಯಿಂದ ಓಡಿಬಂದ. ಅಪ್ಪಣೆ ಮಾಡು ದೇವ್ರು ಅಂದ.. ‘ನಾಳೆ ಹೈದ್ರಾಬಾದ ಬಸ್ ಹತ್ತಮ’ 
 ‘ಎಸ್.. ಎಸ್..ಏಸ್’ ಅಂದ. 
‘ಅಲ್ಲಿ ಸ್ಪೇಶಲ್ ವೈದ್ಯರನ್ನ ಭೇೀಟಿಯಾಗಮ’ 
‘ಓ.ಓ ಎಸ್ ಎಸ್ ‘ಎಂದ 
‘ಅಲ್ಲಿಂದ ಸವದತ್ತಿಗೆ ಹೋಗೋಣ’
 ‘ಹಾಂ..ಹಾಂ.. ಎಸ್ ಎಸ್ ಹುರ್ರೇ’ ಎಂದ. 
ಅಲ್ಲಿ ಹೋಗಿ ದಿಕ್ಷೆ ತೊಟ್ಟು ‘ಮಾಮಾ’ ಆಗುವಂತಿ’ 
ಕೇಕೆ ಹಾಕುತ್ತ ‘ಹೌದಮ್ಮ ಎಸ್ ಎಸ್ ಎಸ್ ಎಸ್ಸೂ’ ಎಂದ. 
‘ಆಗ ನಿನಗ ಸನೇಕ ಒಬ್ಬನೂ ಸುಳಿಯಾಂಗಿಲ್ಲ, ಯಾಕ ಮಾಮಾ?’ ಅಂದೆ. 
ಮರುಕ್ಷಣದಾಗ ಏಕದಂ ಪ್ಲಾಶ್ ಆಗಿ ಅವ ಮುಂದು ಇದ್ರ ಕೇಳ್ರಿ. 


 


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಅಯ್ಯೋ! ಸಾಲಾ?: ಗುಂಡುರಾವ್ ದೇಸಾಯಿ”

  1. ಅರುಣ್ says:

    ತುಂಬಾ ಸುಂದರವಾಗೈತಿ ಸರಾ

Leave a Reply