ಕಾಡು(ವ) ಕಟ್ಟುವ ಕತೆ!! ಭಾಗ-೧: ಅಖಿಲೇಶ್ ಚಿಪ್ಪಳಿ


ಲೋಕೋಬಿನ್ನರುಚಿ: ಎನ್ನುವ ಮಾತು ಸಾರ್ವಕಾಲಿಕ ಸತ್ಯವಾದದು. ಒಬ್ಬೊಬ್ಬರದೂ ಒಂದೊಂದು ತರಹದ ವಿವೇಕ, ವಿವೇಚನೆ, ಹವ್ಯಾಸ, ಅಭ್ಯಾಸ ಹೀಗೆ ಏನೇ ಹೇಳಿ ಒಬ್ಬರಿಂದೊಬ್ಬರು ಬಿನ್ನ. ಕೆಲವರಿಗೆ ಚೆನ್ನಾಗಿ ಓದಬೇಕು, ದೊಡ್ಡ ಕೆಲಸ ಹಿಡಿಯಬೇಕು, ಕೈತುಂಬಾ ಸಂಬಳ, ಇರಲೊಂದು ಐಷಾರಾಮಿ ಮನೆ, ದೊಡ್ಡದೊಂದು ಕಾರು, ಮುದ್ದಿನ ಮಡದಿ, ಮಡದಿಗೆ ಮೈತುಂಬಾ ಬಂಗಾರ, ಮನೆಯಲ್ಲಿ ಎಲ್ಲಾ ತರಹದ ಆಧುನಿಕ ತಂತ್ರಜ್ಞಾನದ ಸಲಕರಣೆಗಳು, ಜೊತೆಗೆರೆಡು ಮಕ್ಕಳು, ಅವು ಅಸಾಧಾರಣ ಬುದ್ಧಿವಂತರಾಗಿರಬೇಕು, ದೊಡ್ಡವರಾಗುತ್ತಿದ್ದ ಹಾಗೆಯೇ ಎಲ್ಲರ ಮಕ್ಕಳಿಗಿಂತ ವಿದ್ಯಾವಂತರಾಗಬೇಕು, ಕ್ಲಾಸಿಗೆ, ಶಾಲೆಗೆ, ರಾಜ್ಯಕ್ಕೆ ಮೊದಲಿಗರಾಗಬೇಕು ಇತ್ಯಾದಿ ಇತ್ಯಾದಿಗಳು. ಇದೊಂತರ ಉಳ್ಳವರ ಅಥವಾ ಮೇಲ್‌ಮಧ್ಯಮವರ್ಗದವರ ವಾಂಛೆ. ಕೂಲಿ ಮಾಡುವವರಿಗೂ ಆಸೆಗಳಿಗೇನು ಕೊರತೆಯಿರಲಾರದು, ಆದರೆ ಅದನ್ನು ಪೂರೈಸಿಕೊಳ್ಳುವ ಶಕ್ತಿ, ಹಣಕಾಸು ಕೇಂದ್ರಿತ ಆಧುನಿಕ ಸಮಾಜದಲ್ಲಿ ಇಲ್ಲ ಅಷ್ಟೆ. ಒಂದು ದಿನವೂ ಹೊಟ್ಟೆ ತುಂಬಾ ಊಟ ಮಾಡಿರದ, ಶಾಲೆಯ ಮುಖವನ್ನೇ ನೋಡಿರದ ೫-೬ ವರ್ಷದ ಡೊಂಬರದ ಬಾಲಕಿಯ ಹಗ್ಗದ ಮೇಲಿನ ಜೀವನ ಕೌಶಲಕ್ಕೆ ಬೆಲೆ ಹೇಗೆ ಕಟ್ಟುವುದು. ಯಾವುದೇ ತಂತ್ರಜ್ಞರ ನೆರವಿಲ್ಲದೆ, ನುರಿತ ಕೋಚ್‌ಗಳ ಸಹಕಾರವಿಲ್ಲದೇ ನೋಡು-ನೋಡುತ್ತಲೇ ಜೀವನ ಸಂಗ್ರಾಮಕ್ಕೆ ಇಳಿಯುವ ಬಾಲೆಯ ಬದುಕಿಗೆ ಯಾವುದೇ ಇನ್ಸೂರೆನ್ಸ್ ಇರುವುದಿಲ್ಲ. ಎರಡು ಕೋಲಿನ ಮಧ್ಯದಲ್ಲಿ ಕಟ್ಟಿದ ಹಗ್ಗದ ಮೇಲೆ ಅಲ್ಯೂಮಿನಿಯಂ ತಟ್ಟೆಯ ಮೇಲೆ ಪುಟ್ಟ ಪಾದಗಳನ್ನಿಟ್ಟು ತಮಟೆಯ ಸದ್ದಿಗೆ ಲಯವಾಗಿ ಜಾರುತ್ತಾ ಒಂದು ತುದಿಯಿಂದ ಮತ್ತೊಂದು ತುದಿಗೆ ದಾಟುವ ಪರಿ ಯಾವ ಒಲಂಪಿಕ್ ಕ್ರೀಡೆಗಿಂತ ಕಡಿಮೆ ಹೇಳಿ. ರಸ್ತೆಯ ಪಕ್ಕದಲ್ಲೇ ಇಷ್ಟು ದೊಡ್ಡ ಸಾಹಸಗೈಯುವ ಬಾಲೆಯ ತಾಯಿಗೋ ಅಥವಾ ಅಣ್ಣನಿಗೋ ೫-೧೦ ರೂಪಾಯಿ ಸಂಪಾದನೆಯಾದರೆ ಹೆಚ್ಚು. ಸಾಹಸ ನೋಡಿ ಬೆರಳು ಕಚ್ಚುವ ಜನರೆಲ್ಲಾ ಒಂದೊಂದು ರೂಪಾಯಿ ಹಾಕಿದರೂ ಸಾಕು ಸಂಪಾದನೆ ನೂರರ ಗಡಿಯನ್ನು ದಾಟಬೇಕು. ವಾಸ್ತವದಲ್ಲಿ ಹಾಗಾಗುವುದೇ ಇಲ್ಲ. ಅರ್ಧಗಂಟೆಯ ಆಟ ಮುಗಿದ ನಂತರ ಮತ್ತೊಂದು ರಸ್ತೆಯ ಪಕ್ಕದಲ್ಲಿ ಸಲಕರಣೆಗಳನ್ನು ಹೂಡಿ, ಮತ್ತೊಂದು ಆಟಕ್ಕೆ ಶುರುವಿಟ್ಟುಕೊಂಡರೇ ಮಾತ್ರ ರಾತ್ರಿಯ ಗಂಜಿಗಾದೀತು! ದಿನವಿಡೀ ಹಗ್ಗದ ಮೇಲೆ ಕುಣಿದು ಸುಸ್ತಾದ ಪುಟ್ಟ ಪಾದಕ್ಕೆ ಅಮೃತಾಂಜನ್ ಲೇಪವೂ ಇಲ್ಲ, ಬಿಸಿಲಿನಲ್ಲಿ ಬಸವಳಿದ ಎಳೆ ದೇಹಕ್ಕೆ, ಆಸೆಗೂಡಿದ ನಾಲಗೆಗೆ ಕ್ಯಾಡ್‌ಬರೀಸ್ ಭಾಗ್ಯವೂ ಇಲ್ಲ.

ಇನ್ನು ಸಂಪತ್ತಿನ ಒಡೆಯರಾದವರಿಗೆ, ತಮ್ಮ ಸಂಪತ್ತನ್ನು ಇನ್ನಷ್ಟು ದ್ವಿ-ಗುಣ, ತ್ರಿಗುಣಗೊಳಿಸುವ ಕುರಿತಂತೆ ಯೋಜನೆಗಳೇ ತುಂಬಿಕೊಂಡರೆ ಆಶ್ಚರ್ಯಪಡಬೇಕಾಗಿಲ್ಲ. ಇದರಲ್ಲೂ ಹಲವು ಶ್ರೀಮಂತರು ಅಪವಾದವಾಗಿ ನಿಮಗೆ ಕಾಣ ಸಿಗುತ್ತಾರೆ. ದುಡಿದಿದ್ದೆಲ್ಲಾ ನನಗೇ ಇರಲಿ ಎಂಬ ಭಾವ ಅವರಿಗೆ ಇರುವುದಿಲ್ಲ, ಕೆಲವರು ದಾನ-ಧರ್ಮ ಮಾಡುತ್ತಾರೆ, ಆದರೆ ಇವರಿಗಿನ್ನೊಂದು ಗೀಳು ಜನ್ಮಜಾತವಾಗಿಯೇ ಇರುತ್ತದೆ. ಕೊಟ್ಟಿದ್ದು ಸಮಾಜಕ್ಕೆ ಗೊತ್ತಾಗಬೇಕು. ತಮ್ಮ ಹೆಸರನ್ನು ಢಾಣ-ಡಂಗುರ ಸಾರಬೇಕು, ಅಮೃತಶಿಲೆಯಲ್ಲಿ ತಮ್ಮ ಹೆಸರನ್ನು ಕೆತ್ತಿಡಬೇಕು. ಅವರ ದಾನ ಕಾರ್ಯಗಳಿಗೆ ಹೋಲಿಸಿದರೆ, ಇದೇನು ತಪ್ಪಲ್ಲ ಬಿಡಿ. ಈ ಕೆಲವರಲ್ಲೂ ಕೆಲವರಿಗೆ ಪ್ರಶಸ್ತಿ-ಪ್ರತಿಷ್ಠೆ-ಜಾಹಿರಾತಿನ ಗೊಡವೆ ಬೇಡವೆಂಬಂತೆ ಇರುತ್ತಾರೆ. ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕು ಆದರೆ ಅದು ಅಪಾತ್ರವಾಗಿರಬಾರದು ಎಂಬ ನೈಜ ಕಾಳಜಿ ಹೊಂದಿದವರು. ತಮ್ಮ ವ್ಯವಹಾರದ ಸಮಯದಲ್ಲಿ, ಸಮಾಜಕ್ಕಾಗಿ ಸಮಯ-ಹಣ ಎರಡನ್ನೂ ಮೀಸಲಿಡಲು ಇವರಿಂದ ಕಷ್ಟವಾಗುತ್ತದೆ ಹಾಗೂ ಇವರಿಗೆ ಹಣಕ್ಕಿಂತ ಸಮಯ ಬಲುಮುಖ್ಯ

ಇನ್ನೊಂದಿಷ್ಟು ಜನ ಇದ್ದಾರೆ. ಅವರಿಗೋ ಸಂಸಾರ ನಡೆಸಲು ಬೇಕಾಗುವಷ್ಟು ಹಣ ಸಂಪಾದನೆ ಮಾಡುವುದರಲ್ಲೇ ಜೀವ ಸವೆದು ಹೋಗಿರುತ್ತದೆ. ತಿಂಗಳು-ತಿಂಗಳು ಸಂಪಾದನೆಯಾದ ಹಣದಲ್ಲಿ ಒಂದು ಫ್ಯಾಮಿಲಿ ಪ್ಯಾಕ್ ಐಸ್‌ಕ್ರೀಂ ಕೊಂಡರೋ ಅಥವಾ ಮಕ್ಕಳಿಗೊಂದು ಬ್ರಾಂಡೆಡ್ ಕಂಪನಿಯ ಅಂಗಿ ಕೊಡಿಸಿದರೋ, ಅಲ್ಲಿಗೆ ಮುಗಿಯಿತು. ಅತ್ತ ಬ್ಯಾಂಕ್‌ನಲ್ಲಿರುವ ಸಾಲಕ್ಕೆ ಕಂತು ಕಟ್ಟಲು ಪರದಾಡಬೇಕು. ಇಂತವರಲ್ಲೂ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಒಳತೋಟಿಯಿರುತ್ತದೆ. ಸಮಯ-ಹಣ ಎರಡೂ ಇಲ್ಲವಾದ್ದರಿಂದ ತಮ್ಮ ಇಚ್ಛೆಯನ್ನು ಬಲವಂತವಾಗಿ ಅದುಮಿಟ್ಟುಕೊಂಡೇ ಕೊರಗುತ್ತಾರೆ. ಅತಿಕ್ಲಿಷ್ಟವಾದ ಜೀವನವೆಂಬ ವಿಲಕ್ಷಣ ಬೃಹದ್ಗಣಿತ ಸೂತ್ರದಲ್ಲಿ  ಹಲವು ವಿಷಯಗಳಲ್ಲಿ ಭಿನ್ನತೆ ಹೊಂದಿ, ಕೆಲವು ವಿಚಾರಗಳಲ್ಲಿ ಸಾಮ್ಯತೆ ಹೊಂದಿದವರು ಮುಖಾಮುಖಿಯಾದರೆ ಸಮಾಜಮುಖಿ ಕೆಲಸಗಳೂ ಆಗಬಹುದು. 

ಮೂಲತ: ಕೃಷಿ ಕುಟುಂಬದವರೇ ಆದ ಇವರು ಹಾಲಿ ಬೆಂಗಳೂರಿನಲ್ಲಿರುತ್ತಾರೆ. ತಮ್ಮದೇ ಕಂಪನಿಯಲ್ಲಿ ನೂರಾರು ಜನರಿಗೆ ಕೆಲಸವನ್ನು ನೀಡಿದ್ದಾರೆ. ಈಗ ಕಾಡು ಬೆಳೆಸಲು ಹೊರಟಿರುವ ಜಮೀನು ಇವರು ಕೊಂಡದ್ದು, ಕೊಂಡಿದ್ದೇನೋ ಆಯಿತು. ಇವರ ಹೆಸರಿಗೆ ನೋಂದಣಿಯಾಗಬೇಕಲ್ಲ. ಸರ್ಕಾರದ ಕೆಲಸವೆಂದರೆ ದೇವರ ಕೆಲಸ, ಆದರೆ ಈ ದೇವರಿಗೆ ಪ್ರತಿ ಹಂತದಲ್ಲೂ ನೈವೇಧ್ಯ ಆಗಲೇ ಬೇಕು. ಇಲ್ಲದಿದ್ದರೆ, ಯಾವ ಕಡತವೂ ಮುಂದೆ ಸಾಗುವುದಿಲ್ಲ. ಇವರ ಹೆಸರಿಗೆ ಖಾತೆ ಮಾಡುವಷ್ಟರಲ್ಲಿ ಪ್ರಾಮಾಣಿಕರೆಂಬ ಫೋಸು ಕೊಡುವ ಅಧಿಕಾರಿಗಳ ನಿಜ ಬಣ್ಣವೂ ಬಯಲಾಯಿತು. ಕಡತ ಜಿಲ್ಲಾಧಿಕಾರಿಗಳ ಕಚೇರಿಯನ್ನು ನೋಡಿ ಬಂತು. ಸಾಗರದಿಂದ ಬರೀ ೮ ಕಿ.ಮಿ. ದೂರದಲ್ಲಿರುವ ೨೦ ಎಕರೆ ಜಾಗದಲ್ಲಿ ಹಿಂದಿನ ಮಾಲಿಕರು ದುಡ್ಡು ತರುವ ಅಕೇಶಿಯಾ ಹಾಗೂ ನೀಲಗಿರಿಯೆಂಬ ರಾಕ್ಷಸ ಕಳೆಯನ್ನು ಬೆಳೆಸಿದ್ದರು. ಕಟಾವು ಮಾಡಿಕೊಂಡು ಇವರಿಗೆ ಮಾರಲಾಗಿತ್ತು. ಜಮೀನು ಇವರ ಸುಪರ್ಧಿಗೆ ಬಂದ ಮೇಲೆ ಗಡಿ ಬಂದೋಬಸ್ತು ಮಾಡಿಕೊಂಡು, ನೀಲಗಿರಿ ಹಾಗೂ ಅಕೇಶಿಯಾ ಕೂಳೆಗಳನ್ನು ಕೀಳುವ ಕೆಲಸವಾಯಿತು. ದೊಡ್ಡ-ದೊಡ್ಡ ಕೂಳೆಗಳು, ಜೆಸಿಬಿ ಯಂತ್ರಕ್ಕೆ ಬಾರಿ ಕೆಲಸವಾಯಿತು. ನೀಲಗಿರಿಯನ್ನು ರಕ್ತಬೀಜಾಸುರನಿಗೆ ಹೋಲಿಸಬಹುದು. ಮಣ್ಣಿನಡಿಯಲ್ಲಿ ಒಂದು ಚಿಕ್ಕ ಬೇರು ಉಳಿದುಕೊಂಡರೂ ಸಾಕು, ಮತ್ತೆ ಚಿಗುರಿ ಮೇಲೆಳುತ್ತದೆ. ಒಂದು ಸ್ಥಳದಿಂದ ಇದನ್ನು ಸರ್ವನಾಶ ಮಾಡಬೇಕೆಂದರೆ, ಮಣ್ಣಿನಿಂದ ಕೀಳುವುದೊಂದೇ ದಾರಿ. ಹಾಗೆಯೇ ಅಕೇಶಿಯಾ ಚಿಗುರುವುದಿಲ್ಲವಾದರೂ, ಇದರ ಲಕ್ಷಾಂತರ ಬೀಜಗಳು ಪ್ರತಿವರ್ಷ ಹುಟ್ಟುತ್ತಲೇ ಇರುತ್ತವೆ. ಅತಿವೇಗವಾಗಿ ಬೆಳೆಯುವ ಈ ಎರಡೂ ಸಸ್ಯಗಳು ಅಂತರ್ಜಲವನ್ನು ಬರಿದು ಮಾಡುತ್ತವೆ ಹಾಗೂ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತವೆ. ಅದಕ್ಕೆ ಈ ಏಕಜಾತಿಯ ನೆಡುತೋಪುಗಳನ್ನು ಹಸಿರು ಮರಳುಗಾಡು ಎನ್ನಲಾಗುತ್ತದೆ. ಈ ಮರಗಳಲ್ಲಿ ಹಕ್ಕಿಗಳು ವಾಸ ಮಾಡಿದ್ದಾಗಲಿ, ಜೇನು ಗೂಡು ಕಟ್ಟಿದ್ದಾಗಲಿ ಯಾರೂ ಕಂಡವರಿಲ್ಲ. ಬರೀ ಮನುಷ್ಯನ ಲಾಭಕ್ಕಾಗಿ ಮಾತ್ರ ಬೆಳೆಸುವ ಈ ಸಸ್ಯಗಳಿಂದ ಯಾವ ಪಾರಿಸಾರಿಕ ಸೇವೆಯೂ ದೊರಕುವುದಿಲ್ಲ. ಹೀಗೆ ೨ ವರ್ಷಗಳ ಅಂತರದಲ್ಲಿ ಸುಮಾರು ೮೦ ಭಾಗದಷ್ಟು ಕೂಳೆಗಳನ್ನು ಕಿತ್ತು ತೆಗೆಯಲಾಯಿತಾದರೂ, ಇನ್ನೂ ನೀಲಗಿರಿ ಕೂಳೆಗಳು ಏಳುತ್ತಲೇ ಇವೆ. ಅಕೇಶಿಯಾ ಗಿಡಗಳು ಮೊಳೆಯುತ್ತಲೇ ಇವೆ. 

ಮೂಲ ಜಮೀನಿನ ಸುತ್ತ ಅಗಳವೇನೋ ಇತ್ತು. ಆದರೆ ಸರಿ-ಸಸೂತ್ರ ಇರಲಿಲ್ಲ. ಒಮ್ಮೆ ಮಣ್ಣನ್ನು ಎತ್ತಿಸಿ ಏರಿ ಮಾಡುವುದೆಂದು ತೀರ್ಮಾನವಾಯಿತು. ಈ ಜಮೀನಿನ ಮೂರು ದಿಕ್ಕಿಗೆ ಇತರೆ ಖಾಸಗಿ ವ್ಯಕ್ತಿಗಳ ಜಮೀನುಗಳಿವೆ. ಅದರಲ್ಲೂ ಅಕೇಶಿಯಾ-ನೀಲಗಿರಿಗಳಿವೆ. ಇನ್ನೊಂದು ದಿಕ್ಕಿನಲ್ಲಿ ಧಾರ್ಮಿಕ ಆಶ್ರಮವೊಂದಿದೆ. ಆಶ್ರಮದ ೩೦ ಎಕರೆ ಜಮೀನಿನಲ್ಲಿ ಮತ್ತೊಂದು ಲಾಭದಾಯಕ ಬೆಳೆಯಾದ ರಬ್ಬರ್ ತೋಟವುಂಟು. ಗಡಿಗೆ ನಡಾನಿಡಿ ಅಗಳವಿದೆ. ಆ ಅಗಳವನ್ನು ಸ್ವಚ್ಛ ಮಾಡಲು ಹೇಳಿದೆ. ಆಗ ಬಂದ ಆಶ್ರಮದ ಮುಖ್ಯಸ್ಥ? ವೈ ಯು ಆರ್ ಕ್ಲಿನೀಂಗ್ ಮೈ ಟ್ರೆಂಚ್? ನಾನು ಹೇಳಿದೆ ಅಗಳವನ್ನೇನು ಮುಚ್ಚುತ್ತಿಲ್ಲ ದೇವರೇ, ಅಗಳ ಇಬ್ಬರಿಗೂ ಸೇರಿದ್ದಾಗಿದ್ದರಿಂದ ಅದನ್ನು ಸ್ವಚ್ಛಗೊಳಿಸುತ್ತಿದ್ದೇನೆ ಎಂದೆ. ಆ ದೇವರಿಗೆ ಸಮಾಧಾನವಾಗಲಿಲ್ಲ. ನೋ ಇಟ್ ಬಿಲಾಂಗ್ಸ್ ಟು ಮಿ, ಯು ಶುಡ್ ನಾಟ್ ಟಚ್ ಇಟ್. ಅವನ ಮಾತನ್ನು ತಲೆಗೆ ಹಾಕಿಕೊಳ್ಳದಂತೆ ಸ್ವಚ್ಛ ಮಾಡಿಯಾಯಿತು. ಸಂಜೆಯವರೆಗೂ ಅವರ ರಗಳೆ ಮುಂದುವರೆದಿತ್ತು. ಮಧ್ಯದಲ್ಲಿ ತಾಳ್ಮೆ ಕಳೆದುಕೊಂಡು ಗೆಟ್ ಲಾಸ್ಟ್ ಎಂದು ಬೈಯ್ದದ್ದು ಆಯಿತು. ಸರಿ ಸುಮಾರು ೬೦-೬೫ ವರ್ಷದ ಆ ಧಾರ್ಮಿಕ ಮುಖಂಡ ಬಹುಷ: ಅಲೆಕ್ಸಾಂಡರ್ ಅಂತಿಮ ಇಚ್ಛೆಯ ಕತೆಯನ್ನು ಕೇಳಿರಲಿಲ್ಲವೇನೋ? ಅಥವಾ ಪೃಥ್ವಿಯಿಂದ ನಿರ್ಗಮಿಸುವಾಗ ಜಾಗವನ್ನು ಹೊತ್ತೊಯ್ಯುತ್ತಾನೋ? ಸರಿ ನೆರೆಹೊರೆಯೆಂದರೆ, ಪ್ರತಿ ದಿವಸ ಒಬ್ಬರ ಮುಖವನ್ನೊಬ್ಬರು ನೋಡಬೇಕು. ೪ ಅಡಿ ಜಾಗಕ್ಕಾಗಿ ಸದಾ ಮುಖಗಂಟಿಕ್ಕಿಕೊಂಡಿರುವುದಾದರೆ ಏನು ಚೆನ್ನ. ಸರಿ ಸಂಜೆ ಅವರ ಹತ್ತಿರ ಮತ್ತೆ ಮಾತನಾಡಿದೆ. ಸರ್ಕಾರಿ ಮೋಜಣಿದಾರರನ್ನು ಕರೆಸಿ ಮತ್ತೆ ಗಡಿ ಗುರುತು ಮಾಡುವ ಎಂದೆ. ಓಕೆ ಎಂದ. ಅರ್ಧರ್ಧ ಖರ್ಚು ಹಾಕಿಕೊಂಡು ಮೋಜಣಿ ಮಾಡಿಸಿದೆವು. ಮೋಜಣಿದಾರ ಅಗಳ ಅವರ ಗಡಿಯಲ್ಲೇ ಇದೆ ಎಂಬ ವರದಿ ಕೊಟ್ಟ. ಸರಿಯೆಂದು ಅವನು ಹೇಳಿದ್ದನ್ನು ಒಪ್ಪಿಕೊಂಡೆವು. ಮಾರನೇ ದಿನ ಹೋದಾಗ ಆಘಾತ ಕಾದಿತ್ತು. ಆಶ್ರಮದ ಎಲ್ಲಾ ಪ್ಲಾಸ್ಟಿಕ್ ತ್ಯಾಜ್ಯ, ಹಳೇ ಚಪ್ಪಲಿ, ನೀರಿನ ಬಾಟಲಿ, ಟೈರ್‌ಗಳು ಇತ್ಯಾದಿ ಎಲ್ಲಾ ಕೊಳಕುಗಳನ್ನು ತಂದು ಅಗಳಕ್ಕೆ ಎಸೆದಿದ್ದರು. ದೊಡ್ಡವರೆಂದು ಸಮಾಜ ಗುರುತಿಸುವ ಧಾರ್ಮಿಕ ನಾಯಕ ತೀರಾ ಕೆಳಮಟ್ಟಕ್ಕಿಳಿದಿದ್ದ. ಅಗಳ ಅವರದೆಂದು ಒಪ್ಪಿಕೊಂಡಾದ ಮೇಲೆ ನಾನಾದರೂ ಏನು ಮಾಡಲಾದೀತು? 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x