ಸಮಯ ಪರಿಪಾಲನೆ: ಅನಿತಾ ನರೇಶ್ ಮಂಚಿ

                          
ನನ್ನ ಲ್ಯಾಪ್ಟಾಪಿಗೆ ಜ್ವರ ಬಂದಿತ್ತು. ಜ್ವರ ಅಂದರೆ ಅಂತಿಂಥಾ ಜ್ವರವಲ್ಲ..ಮೈಯ್ಯೆಲ್ಲಾ ಬಿಸಿಯೇರಿ ತೇಲುಗಣ್ಣು  ಮಾಲುಗಣ್ಣು ಮಾಡಿಕೊಂಡು ಕೋಮಾ ಸ್ಥಿತಿಗೆ ಹೋಯಿತು. ಹೋಗುವಾಗ ಸುಮ್ಮನೇ ಹೋಗಲಿಲ್ಲ. ನಾನು ಕಷ್ಟಪಟ್ಟು ತಾಳ್ಮೆಯಿಂದ ಬರೆಯುತ್ತಿದ್ದ  ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದ್ದ ಘನ ಗಂಭೀರ  ಲೇಖನವೊಂದನ್ನು ಕರೆದುಕೊಂಡೇ ಹೋಯಿತು. ಅದೆಷ್ಟು ತಪಸ್ಸುಗಳ ಫಲವೋ ನಾನು ಅಷ್ಟೊಂದು ಸೀರಿಯಸ್ ವಿಷಯದ ಬಗ್ಗೆ ಬರೆಯಹೊರಟಿದ್ದು. ಒಂದೆರಡು ಬಾರಿ ಆ ಲೇಖನವನ್ನು ನಾನು  ಓದಿದಾಗ ನನಗೇ ಅರ್ಥವಾಗದಷ್ಟು ವಿಷಯ ತುಂಬಿತ್ತದರಲ್ಲಿ.. ಅಂದ ಮೇಲೆ ಆ ಲೇಖನ ಎಷ್ಟು ಮಹತ್ವದ್ದಿರಬೇಕು ಆಲೋಚಿಸಿ. 
ತಲೆಯ ಮೇಲೆ ಕೈ ಹೊತ್ತು ಕೂರುವ ಹೊತ್ತಲ್ಲ ಇದು ಎಂದುಕೊಂಡು  ನನ್ನ ಇಂತಹ ಸಮಸ್ಯೆಗಳಿಗೆ ಉತ್ತರವಾಗುವ  ಗೆಳೆಯನಿಗೆ ಕಾಲ್ ಮಾಡಿದೆ. ಅದು ನಿನ್ನದೇ ತಪ್ಪು. ಸುಮಾರು ದಿನದಿಂದ ಅದಕ್ಕೆ ಗೂರಲು ರೋಗ ಇದೆ ಅಂತ ಹೇಳಿದರೂ ಶುಶ್ರೂಷೆ ಮಾಡದೇ ಮನೆಯಲ್ಲಿಟ್ಕೊಂಡಿದ್ದೆಯಲ್ಲಾ.. ಅದಕ್ಕೆ ಈ ಅವಸ್ಥೆ ಈಗ. ಅದರ ಕೂಲಿಂಗ್ ಸಿಸ್ಟಮ್ ಪೂರಾ ಕೆಟ್ಟು ಹೋಗಿರಬೇಕು. ಇನ್ನೇನಿದ್ದರೂ ಆಪರೇಷನ್  ಮಾಡಿಯೇ ಗೊತ್ತಾಗಬೇಕಷ್ಟೇ.. ನಂಗೆ ಕೊರಿಯರ್ ಮಾಡಿದ್ರೆ ನೋಡಿ ಸರಿ ಮಾಡಿ ಕಳಿಸ್ತೀನಿ ಎಂಬ ಭರವಸೆಯೂ ಅವನಿಂದ ಬಂತು. 
 
ಭರ್ತಿ ಐದು ಕೇಜಿ ತೂಕದ ಹತ್ತು ವರ್ಷಗಳಿಗಿಂತಲೂ ಹೆಚ್ಚಾದ ಈ ರೋಗಿಯನ್ನು ಅಷ್ಟು ದೂರ ಕಳಿಸುವ ಖರ್ಚಲ್ಲಿ ಇಲ್ಲೇ ರಿಪೇರಿ ಮಾಡಿಕೊಳ್ಳಬಹುದೆಂಬ ಆರ್ಥಿಕ ಚಿಂತನೆಯಿಂದ ರೋಗಿಯನ್ನು ಮನೆಯಲ್ಲೇ ಇಟ್ಟುಕೊಂಡು ವೈದ್ಯರ ಶೋಧನೆಗೆ ಹೊರಟೆ. 

ಗೆಳತಿಯೊಬ್ಬಳು ಇಲ್ಲೇ ಹತ್ತಿರದಲ್ಲೇ ಒಳ್ಳೆಯ ವೈದ್ಯರು ಇದ್ದಾರೆ ನನ್ನ ಎರಡೂ ಲ್ಯಾಪ್ಟಾಪಿಗೂ ಯಾವಾಗಲೂ ಅವರದೇ ಚಿಕಿತ್ಸೆ ಅಂದಳು. ಇದ್ದೊಂದು ಲ್ಯಾಪ್ಟಾಪನ್ನೇ ಮರ್ಯಾದೆಯಲ್ಲಿ ನೋಡಿಕೊಳ್ಳದ ನನಗೆ,  ನನ್ನಂತೆಯೇ ಗೃಹಿಣಿಯಾಗಿರುವ ಅವಳಿಗೆ ಎರಡು ಲ್ಯಾಪ್ಟಾಪು ಯಾಕೆ ಎಂಬ  ವಿಷಯ ಅರ್ಥವಾಗದೇ ಅವಳನ್ನೇ ಕೇಳಿದೆ. 

“ ಅಯ್ಯೋ  ಈ ಎರಡೆರಡು ಲ್ಯಾಫ್ತಾಪಿನ  ಸಲಹೆ ನನ್ನ ವೈದ್ಯರದ್ದೇ   ಕಣೇ..  ಒಂದು ಗುಣವಾಗಿ ಮನೆಗೆ ಬರುವಾಗ ಇನ್ನೊಂದು ರೋಗ ಹಿಡಿದು ಅವರ ಕ್ಲಿನಿಕ್ಕಿಗೆ ಅಡ್ಮಿಟ್ ಆಗೋ ಸ್ಥಿತಿಗೆ ತಲುಪಿರುತ್ತೆ. ಅದಕ್ಕೆ ಎರಡು ಲ್ಯಾಫ್ಟಾಪು ಇರ್ಲಿ ಅಂದಿದ್ದಾರೆ”

“ ಹಾಗಿದ್ರೆ ಗುಣವಾಗಿ ಬರಲು ಎಷ್ಟು ಟೈಮ್ ತೆಗೊಳ್ಳತ್ತೆ” ಎನ್ನುವುದು ನನ್ನ ಪೆದ್ದು  ಪ್ರಶ್ನೆ..
ಅದು ನಿನ್ನ ಹಣೇಬರಹದ ಮೇಲೆ  ಡಿಪೆಂಡ್ ಆಗುತ್ತೆ ಕಣೇ.. 
ಅಂದ್ರೇ..ನನ್ನ ಕಣ್ಣುಗಳು ದೊಡ್ಡದಾಗಿದ್ದವು

ಅಂದ್ರೇನಿಲ್ಲ.. ಗುಣಮುಖವಾಗಿ ಬಂದ ಲ್ಯಾಪ್ಟಾಪು ಹಾಳಾಗಿದೆ ಅಂತ ನೀನು ಫೆÇೀನ್ ಮಾಡಿದ ಒಂದು ವಾರವೋ ಎರಡು ವಾರವೋ ಕಳೆದ ಬಳಿಕ ಅಲ್ಲಿರೋ ಲ್ಯಾಪ್ಟಾಪು ಮನೆ ಸೇರುತ್ತದೆ. ಆದ್ರೆ ಕೆಲಸ ಮಾತ್ರ ಪರ್ಫೆಕ್ಟು ಕಣೇ.. ಬಿಲ್ ಮಾತ್ರ ಸ್ವಲ್ಪ ಹೆಚ್ಚು. ತಿಂಗಳಿಗೆ ಇಷ್ಟು ಅಂತ ನೀನು ತೆಗ್ದಿಟ್ಟಿರ್ಬೇಕಾಗುತ್ತೆ ಎಂಬ ಎಚ್ಚರಿಕೆಯ ಬಾಣವನ್ನು ಬಿಟ್ಟಳು.
 
ಯಾಕೋ ಈ ಮಹಾಶಯನ ಬಿಲ್ಲೆತ್ತುವ ರಾಮನಾಗಿ ಮನೆಯಲ್ಲಿ ರಾಮಾಯಣ ಮಾಡಲು ನನಗಿಷ್ಟವಾಗಲಿಲ್ಲ. 
ಆಗಲೇ ನನಗೆ ಬೇಕಾದ ಬಳ್ಳಿಯೇ ಕಾಲಿಗೆ ತೊಡರಿದ್ದು. ನಮ್ಮ ಡೆಸ್ಕ್ ಟಾಪಿನ ಡಾಕ್ಟರಿನ  ನಂಬರ್ ಮೊಬೈಲಿನಲ್ಲೇ ಇತ್ತು. ಡೆಸ್ಕ್ ಟಾಪಿಗೂ ಲ್ಯಾಪ್ಟಾಪಿಗೂ ಹೆಚ್ಚು ವ್ಯತ್ಯಾಸವಿಲ್ಲದ ಕಾರಣ ಇದು ಮನುಷ್ಯರ ಕಾಯಿಲೆಗೆ ಪಶು ವೈದ್ಯರನ್ನು ಕರೆದಷ್ಟು ಮೋಸವಲ್ಲವೆಂದುಕೊಂಡು ಕಾಲಿಸಿದೆ.  
 
ಐದಾರು ಬಾರಿ ಫೋನ್ ಮಾಡಿದ ಮೇಲೆಯೇ ಫೋನ್ ಎತ್ತಿ ನನ್ನ ಲ್ಯಾಪ್ಟಾಪಿನ ಖಾಯಿಲೆಯ ಪೂರ್ಣ ವಿವರ ಕೇಳಿದರು. ವಿವರಿಸಿದ ಬಳಿಕ ಬಹುಶ್‍ಃ ಡಸ್ಟ್ ಎಲರ್ಜಿ ಆಗಿರಬಹುದು.. ಯಾವುದಕ್ಕೂ ನೋಡಿಯೇ ಆಗ್ಬೇಕಷ್ಟೆ ಇಲ್ಲಿಗೆ ಕರ್ಕೊಂಡು ಬರ್ತೀರಾ? ಮನೆಗೆ ಬರ್ಬೇಕಾ ಅಂದರು. ಖಾಯಿಲೆಯ ಕಾರಣ ತಿಳಿದ ಬಳಿಕ ಮನೆಗೇ ಬಂದರೆ  ಒಂದು ಇಂಜೆಕ್ಷನ್ನಿನಲ್ಲೇ ಗುಣವಾಗಿಬಿಟ್ಟರೆ ಎಂಬಾಸೆ ಮೂಡಿ ಮನೆಗೆ ಬನ್ನಿ ಅಂದೆ. ಸರಿ ಇನ್ನೊಂದು ಗಂಟೆಯಲ್ಲಿ ಅಲ್ಲಿರುತ್ತೇನೆ ಎಂದು ಆ ಕಡೆಯಿಂದ ಬಂದ ಉತ್ತರ ನನ್ನಲ್ಲಿ ವಿಶ್ವಾಸ ಮೂಡಿಸಿತು.

ನಮ್ಮನೆಯಲ್ಲಿರುವ ಒಟ್ಟು ಗೋಡೆ ಗಡಿಯಾರಗಳ ಸಂಖ್ಯೆ ಏಳು. ಆದರೆ ಒಂದೊಂದು ಗಡಿಯಾರವೂ ತಮ್ಮದೇ ಮನೋಧರ್ಮ ಹೊಂದಿ ಒಂದೊಂದು ಗಂಟೆಯನ್ನು ತೋರಿಸುತ್ತಿದ್ದವು. ನಿಮಗೊಂದು ಗಂಟೆಯ ಅಂದಾಜು ಸಿಗಬೇಕಾದರೆ ಏಳೂ  ಗಡಿಯಾರಗಳಲ್ಲಿ ತೋರಿಸುವ ಸಮಯವನ್ನು ಕೂಡಿ ಮತ್ತದನ್ನು ಏಳರಿಂದ ಭಾಗಿಸಿ ಬಂದ ಉತ್ತರವನ್ನು ಇಷ್ಟಾಗಿರಬಹುದು ಈಗ ಸಮಯ ಎಂದು ಪರಿಗಣಿಸಬೇಕಾಗಿತ್ತು. ಹಾಗೆಲ್ಲಾ ಕೂಡಿ ಕಳೆದು ಗುಣಿಸಿ ಭಾಗಿಸಿ ನೋಡಿದರೆ ಬರುವ ಸಮಯ ನಮ್ಮ ಊಟದ ವೇಳೆಯನ್ನು ತೋರಿಸುತ್ತಿತ್ತು. ಬರುವವರ ಲೆಕ್ಕದಲ್ಲೂ  ಒಂದಿಷ್ಟು ಅಡುಗೆ ಬೇಯಿಸಿ ಇಟ್ಟೆ.  ನಮ್ಮ ಊಟ ಮುಗಿಸಿ ಮತ್ತೂ ಒಂದೆರಡು  ಗಂಟೆ ಕಾದು ತಡೆಯಲಾರದೇ ಫೋನ್ ಮಾಡಿದೆ. 

ಇಲ್ಲಿಂದ ಸರಿಯಾಗಿ ಅಲ್ಲಿಗೆ ತಲುಪಲು ಐವತ್ತೈದು ನಿಮಿಷ ಸಾಕು. ಇನ್ನು ಅಷ್ಟು ಹೊತ್ತಲ್ಲಿ ಅಲ್ಲಿರ್ತೇನೆ ಎಂಬ ಉತ್ತರ ಬಂದಿತು. ಅಂದರೆ ಇನ್ನು ಹೊರಟೇ ಇಲ್ವಾ ಎಂದೆ. 
‘ಈಗ ಹೊರಟೆ ಆದರೆ ನೀವು  ಒಂದು ವ್ಯಾಕ್ಯೂಮ್ ಕ್ಲೀನರ್ ಅಥವಾ ಬ್ಲೋವರಿನ ವ್ಯವಸ್ಥೆ ಮಾಡಿಡಿ. ನನ್ನ ಬ್ಲೋವರ್ ಹಾಳಾಗಿ ರಿಪೇರಿಗೆ ಹೋಗಿದ್ದು ಬರ್ಬೇಕಷ್ಟೆ’ ಎಂಬ ಉತ್ತರ ಸಿಕ್ಕಿತು. 
‘ಅಯ್ಯೋ.. ನನ್ನ ವ್ಯಾಕ್ಯೂಮ್ ಕ್ಲೀನರ್ ಕೂಡಾ ರಿಪೇರಿಗೆ ಹೋಗಿದ್ದು ಇನ್ನೂ ಬರ್ಲಿಲ್ಲ.. ಬೇಕಾದ್ರೆ ಮಗನ ಸೈಕಲ್ ಪಂಪ್ ಇದೆ’ ಎಂದೆ.  

 ಆ ಐವತ್ತೈದು ನಿಮಿಷವು ಧೀರ್ಘವಾಗಿ ಮತ್ತೂ ಅಂತಹುದೇ ಎರಡು ಐವತ್ತೈದು ನಿಮಿಷಗಳನ್ನು ಕೂಡಿಸಿಕೊಂಡ ಮೇಲೆ ಅವರು ಪ್ರತ್ಯಕ್ಷರಾದರು. ನನ್ನ ರೋಗಿಯನ್ನು ಅವರ ಕೈಗಿತ್ತೆ.
ತಿರುಗಿಸಿ ಮುರುಗಿಸಿ ನೋಡಿ ಅವರು ತಂದ ಸ್ಕ್ರೂ ಡೈವರನಂತಹುದೇನೋ ಇದ್ದದ್ದರಲ್ಲಿ ಲ್ಯಾಪ್ಟಾಪಿನ ಹೊಟ್ಟೆ ಬಗೆದರು.  ಅದರಲ್ಲಿರುವ ಡಸ್ಟ್ ರಿಮೂವ್ ಮಾಡುವುದು ಎಂಬ ಪ್ರಹಸನದಲ್ಲಿ ನಮಗೇ ಅಸ್ತಮಾ ರೋಗ ತಗಲುವಂತಾಯಿತು. ಕೆಮ್ಮುತ್ತಾ ಮುಖ ಒರೆಸಿಕೊಳ್ಳುತ್ತಾ ಅದನ್ನು ಪರೀಕ್ಷೆ ಮಾಡಿದಾಗ ಅದರ ಫ್ಯಾನಿನ ಮೋಟಾರ್ ಕೆಟ್ಟಿದೆ ಎಂಬ ಪಲಿತಾಂಶ ದೊರಕಿತು. 

ಇಲ್ಲೇನೂ ಮಾಡಲಾಗುವುದಿಲ್ಲ.. ಇನ್ನೆರದು ದಿನದಲ್ಲಿ ಗುಣ ಮಾಡಿಸಿ ತಂದು ನಿಮ್ಮ ಕೈಗೆ ಕೊಡ್ತೇನೆ ಎಂದರು.. 
ಎರಡು  ದಿನ ಎಂದರೆ ಎಷ್ಟಾಗುತ್ತದೆ ಎನ್ನುವುದನ್ನು ಇನ್ನು ಕಾದು ನೋಡಬೇಕಷ್ಟೇ.. 
-ಅನಿತಾ ನರೇಶ್ ಮಂಚಿ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

11 Comments
Oldest
Newest Most Voted
Inline Feedbacks
View all comments
ಹೆಚ್ ಎಸ್ ಅರುಣ್ ಕುಮಾರ್
ಹೆಚ್ ಎಸ್ ಅರುಣ್ ಕುಮಾರ್
8 years ago

ಸುಂದರವಾಗಿದೆ ಲ್ಯಾಪ್ಟಾಪ್ ಬವಣೆ . ರೋಗದ ಆಳ ವಿಸ್ತಾರದ ವಿವರಣೆ ಚನ್ನಾಗಿದೆ . ಮನೆಯಲ್ಲಿಯ ಏಳು ಗಡಿಯಾರಗಳ ಸ್ತಿತಿ ಮತ್ತು ಸಮಯ ಕಂಡು ಹಿಡಿಯುವ ಲೇಖಕಿಯ ಗಣಿತಾ ಯುಕ್ತಿ ಖುಷಿ ಕೊಟ್ಟಿತು .ಈ ತರಹದ ಸಮಯ ಪರಿ ಪಾಲಕರು ನಮ್ಮಲ್ಲಿ ಅನೇಕರು ಈ ಕೀರ್ತಿಗೆ ಸಲ್ಲುತ್ತಾರೆ . ಉತ್ತಮ ನಗೆ ಬರಹ 

Anitha Naresh Manchi
Anitha Naresh Manchi
8 years ago

ವಂದನೆಗಳು ಅರುಣ್ ಸರ್

Anantha Ramesh
8 years ago

ಓದುತ್ತಾ ಓದುತ್ತ ನನ್ನ ಲ್ಯಾಪ್ಟಾಪ್ ಮುಟ್ಟಿ ನೋಡಿದೆ. ಭಯವಾಯ್ತು! ಚೆಂದದ ನಗೆ ಲೇಖನ.

Anitha Naresh Manchi
Anitha Naresh Manchi
8 years ago
Reply to  Anantha Ramesh

Thank you 🙂

ಸಾವಿತ್ರಿ.ವೆಂ.ಹಟ್ಟಿ
ಸಾವಿತ್ರಿ.ವೆಂ.ಹಟ್ಟಿ
8 years ago

ಮತ್ತೆ ಈಗ ಬಂದಿರುವ ಈ ಪೋಸ್ಟ್ ಎಲ್ಲಿಂದ ಬಂತು ಮೇಡಮ್? 🙂

Anitha Naresh Manchi
Anitha Naresh Manchi
8 years ago

ಇದು ಆಪ್ತ ರಕ್ಷಕ ಡೆಸ್ಕ್ ಟಾಪಿನಲ್ಲಿ ಕುಟ್ಟಿದ್ದು 🙂

Bharathi b v
Bharathi b v
8 years ago

ಮಜವಾಗಿದೆ ಅನಿ 🙂 🙂 🙂

Deekshith
Deekshith
8 years ago

ಫಾನ್ ತೆಗ್ದು ,ಎಸಿ ಫಿಟ್ ಮಾಡಕ್ಕೇಳಿ ಮೇಡಂ ಜ್ವರನೇ ಬರೋಲ್ಲ.

sunil
8 years ago

Tumba chenagide

ಪುನೀತ್ ಕುಮಾರ್
ಪುನೀತ್ ಕುಮಾರ್
8 years ago

ಬಹಳ ಚೆನ್ನಾಗಿದೆ. ….ನಿಮ್ಮ ಲ್ಯಾಪ್ ಟಾಪ್ ಬೇಗನೆ ಉಷಾರಾಗಿ ಮನೆಸೇರಲಿ…wonderful writing

ka.la.raghu
ka.la.raghu
7 years ago

padapunjagalige kunchavaadisi sundara roopa maadiddiri.

11
0
Would love your thoughts, please comment.x
()
x