ಭೂ ಕೊಳಕರ ವಶೀಲಿಬಾಜಿ!!!: ಅಖಿಲೇಶ್ ಚಿಪ್ಪಳಿ


(ಕಳೆದ 20 ಜಾಗತಿಕ ಹವಾಗುಣ ಶೃಂಗಗಳನ್ನು ವಿಫಲಗೊಳಿಸಿದ ಅಂತಾರಾಷ್ಟ್ರೀಯ ಕಂಪನಿಗಳ ಹುನ್ನಾರ ಜಗತ್ತಿನ ಹೆಚ್ಚಿನ ಜನರ ಅರಿವಿಗೆ ಬರಲಿಲ್ಲ. ಅತೀ ನಿರೀಕ್ಷಿತ 21ನೇ ಶೃಂಗ ಸಭೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಹುನ್ನಾರವನ್ನು ನಡೆಸಿರುವ ಜಗತ್ತಿನ ಅತೀ ಪ್ರತಿಷ್ಟಿತ ಕಂಪನಿಗಳ ಕಾರ್ಯಯೋಜನೆಗಳೇನು? ಎಂಬುದನ್ನು ಬಿಂಬಿಸುವ ಲೇಖನವಿದು. ವಿಶ್ವನಾಯಕರು ಹೇಳಿದ್ದಷ್ಟನ್ನೇ ಸುದ್ಧಿ ಮಾಡುವ ಮಾಧ್ಯಮಗಳು, ಈ ಅಂತಾರಾಷ್ಟ್ರೀಯ ಬಂಡವಾಳಶಾಹಿಗಳ ಗುಪ್ತ ಕಾರ್ಯಸೂಚಿಗಳನ್ನು ಬಯಲು ಮಾಡುವುದರಲ್ಲಿ ವಿಫಲವಾಗುತ್ತಿವೆ ಎಂಬ ಸಂಗತಿ ಅತ್ಯಂತ ಖೇದಕರವಾದದು).

ಈ ಪ್ರಪಂಚದ ಪರಿಸರದ, ಜೀವಜಾಲದ, ವಾತಾವರಣದ ಕುರಿತ ಕಾಳಜಿಯಿರುವವರು ಜಗತ್ತಿನ ಒಟ್ಟೂ ಜನಸಂಖ್ಯೆಗೆ ಹೋಲಿಸಿದರೆ ನಗಣ್ಯವೇ ಹೌದು. ಕೈಗಾರಿಕೋತ್ತರ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿದ್ದ ಹಾಗೆಯೇ ಈ ಸುಂದರ ಗ್ರಹದ ಮನುಷ್ಯೇತರ ಜೀವಿಗಳು ಕಷ್ಟಕ್ಕೆ ಸಿಲುಕಿದವು. ಅವು ನೆಲವಾಸಿಗಳಿರಬಹುದು, ಆಕಾಶಕಾಯಗಳಿರಬಹುದು ಅಥವಾ ಜಲವಾಸಿಗಳಿರಬಹುದು. ಅವು ಕಣ್ಣಿಗೆ ಕಾಣದಷ್ಟು ಚಿಕ್ಕದಿರಬಹುದು ಅಥವಾ ಆನೆ-ತಿಮಿಂಗಿಲಗಳಂತಹ ಬೃಹತ್ ದೇಹಿಗಳಿರಬಹುದು. ನಾಗರೀಕ ಮನುಷ್ಯನೆಂದು ಹಾಗೂ ಬುದ್ಧಿವಂತ ಪ್ರಾಣಿಯೆಂದು ತನಗೇ ತಾನೆ ಆರೋಪಿಸಿಕೊಳ್ಳುತ್ತಾ ಇವನು ಮಾಡಿದ ಅವಾಂತರಗಳು ಭೂಮಿಯ ಶೇ.55ರಷ್ಟು ಜೀವಸಂಕುಲಗಳನ್ನು ಬಲಿತೆಗೆದುಕೊಂಡು, ಇವತ್ತು ಮನುಜನ ಜೀವಕ್ಕೆ ಸಂಚಕಾರ ತರುವಷ್ಟು ಬೃಹತ್ತಾಗಿ ಬೆಳೆದು ನಿಂತಿದೆ. ಇದಕ್ಕೆ ವಾತಾವರಣ ಬದಲಾವಣೆ ಎಂಬ ಹೆಸರನ್ನೂ ನಾವೇ ಇಟ್ಟಿದ್ದೇವೆ. 1970ರ ದಶಕದಲ್ಲೇ ಹುಟ್ಟಿಕೊಂಡ ಈ ಸಮಸ್ಯೆಯನ್ನು ಜಗತ್ತಿನ ಯಾವ ದೇಶಗಳೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗೆಯೇ ಈ ಸಮಸ್ಯೆಗೆ ಗಡಿರೇಖೆಗಳು ಇಲ್ಲ. ಹಾಗಾಗಿಯೇ ಕಳೆದ ಇಪ್ಪತ್ತು ಜಾಗತಿಕ ಹವಾಗುಣ ಬದಲಾವಣೆ ಕುರಿತ ಜಾಗತಿಕ ಶೃಂಗಗಳು ವಿಫಲವಾದವು. ಈ ಇಪ್ಪತ್ತೂ ಜಾಗತಿಕ ಶೃಂಗಗಳನ್ನೂ ವಿಫಲಗೊಳಿಸಿದ್ದು, ಶ್ರೀಮಂತ ರಾಷ್ಟ್ರಗಳ ಅತೀ ಶ್ರೀಮಂತ ಬಂಡವಾಳಶಾಹಿ ಕಂಪನಿಗಳು. ಇದೀಗ ಪ್ಯಾರಿಸ್‍ನಲ್ಲಿ ನಡೆಯುತ್ತಿರುವ 21ನೇ ಜಾಗತಿಕ ಶೃಂಗಸಭೆಯತ್ತ ಇಡೀ ಜಗತ್ತಿನ ದೃಷ್ಟಿ ನೆಟ್ಟಿದೆ. ಭೂಬಿಸಿಯನ್ನು 2 ಡಿಗ್ರಿಗಿಂತ ಹೆಚ್ಚು ಏರಲು ಬಿಡಬಾರದು ಎಂಬ ಗಟ್ಟಿ ನಿಲುವು ಎಲ್ಲಾ ದೇಶಗಳೂ ತೆಗೆದುಕೊಳ್ಳಲಿವೆ ಎಂದೇ ನಂಬಿಕೊಳ್ಳಲಾಗಿದೆ. ಆದರೆ, ತಮ್ಮ ಲಾಭಕೋರತನಕ್ಕಾಗಿ ಏನನ್ನೂ ಮಾಡಲು ಹೇಸದಿರುವ ಹಾಗೂ ಇಡೀ ಪ್ರಪಂಚದ ಉದ್ದಗಲಕ್ಕೂ ತನ್ನ ಬಾಹುಗಳನ್ನು ಚಾಚಿಕೊಂಡಿರುವ ಅಂತಾರಾಷ್ಟ್ರೀಯ ಕಂಪನಿಗಳ ಹುನ್ನಾರವೇ ಬೇರೆಯದಿದೆ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಹೇಗೆ ಎಂಬುದನ್ನು ನೋಡೋಣ.

ಮೇ 2015ರಲ್ಲಿ ಪ್ಯಾರಿಸ್‍ನ ಯುನೆಸ್ಕೋ ಮುಖ್ಯಕಚೇರಿಯಲ್ಲೊಂದು ಸಭೆ ಏರ್ಪಟ್ಟಿತ್ತು. ಶಾಂಪೇನ್ ಸಮೇತ ಮಧ್ಯಾಹ್ನದ ಊಟ ಹಾಗೂ ರಾತ್ರಿಗೆ ಕಾಕ್‍ಟೈಲ್ ಪಾರ್ಟಿ ನಡೆಯಿತು. “ವ್ಯಾಪಾರಿಗಳು ಮತ್ತು ಸರ್ಕಾರಿ ಮುಖಂಡರು” ಸೇರಿದ್ದ ಈ ಸಭೆಯ ಆತಿಥ್ಯವನ್ನು ವಹಿಸಿದ್ದು, ಆರ್ಸೆಲರ್ ಮಿತ್ತಲ್, ಎನ್‍ಜಿ, ಟೋಟಲ್ ಎಂಬ ಅಂತಾರಾಷ್ಟ್ರೀಯ ಭೂ ಕೊಳಕರು. ಇದರಲ್ಲಿ ಮಿತ್ತಲ್ ಗೊತ್ತಲ್ಲ? ಜಗತ್ತಿನ ಅತಿದೊಡ್ಡ ಉಕ್ಕು ಉತ್ಪಾದಕ ಕಂಪನಿ. ಲಕ್ಷ್ಮೀ ಮಿತ್ತಲ್ ಇದರ ಒಡೆಯ. ಎನ್.ಜಿ-ಇದೊಂದು ಶಕ್ತಿಯನ್ನು ಉತ್ಪಾದಿಸುವ ಅಂತಾರಾಷ್ಟ್ರೀಯ ಕಂಪನಿ. 2014ರಲ್ಲಿ ಮರುಬಳಕೆ ಇಂಧನಗಳ ಮೇಲೆ ಹೂಡಿಕೆ ಮಾಡುತ್ತೇನೆ ಎಂದು ಹೇಳಿಕೊಂಡು ಸಾರ್ವಜನಿಕರಿಂದ “ಹಸಿರು ಬಾಂಡ್”ಗಳ ಮೂಲಕ 2.5 ಶತಕೋಟಿ ಪೌಂಡ್ ಹಣವನ್ನು ಪಡೆಯಿತು. ಇದೇ ಹಣದಿಂದ ಬ್ರೆಜಿಲ್ ದೇಶದ ದಟ್ಟಾರಣ್ಯವನ್ನು ಮುಳುಗಿಸಿ ಜಿರಾಯು ಎಂಬಲ್ಲಿ ಆಣೆಕಟ್ಟು ಕಟ್ಟಿತು. ಇದೊಂದು ಅತ್ಯಂತ ದಾರುಣವಾದ ಕ್ರಿಯೆಯಾಗಿತ್ತು. ಮುಳುಗಡೆಯಾಗಲಿರುವ ಸ್ಥಳದಿಂದ ಜನರನ್ನು ಬಲವಂತವಾಗಿ ಗುಳೆ ಕಳುಹಿಸಲಾಯಿತು. ಕಾಡಿನ ಸರ್ವನಾಶವಾಯಿತು, ಅಲ್ಲಿನ ಬಡವರನ್ನು ದೌರ್ಜನ್ಯದ ಮೂಲಕ ಕೂಲಿ ಕೆಲಸಕ್ಕೆ ಹಚ್ಚಲಾಯಿತು, ವನ್ಯಜೀವಿಗಳ ಹರಣವಾಯಿತು. ಸಾರ್ವಜನಿಕರಿಂದ ವಸೂಲಿ ಮಾಡಿದ ಹಣದಿಂದ ಇನ್ನಷ್ಟು ಆಣೆಕಟ್ಟುಗಳನ್ನು ಕಟ್ಟುವ ತಯಾರಿಯಲ್ಲಿ ಈ ಎನ್.ಜಿ ಕಂಪನಿ ಇದೆ. ಇನ್ನೂ ಟೋಟಲ್ ಎಂಬ ತೈಲ ಮತ್ತು ರಾಸಾಯನಿಕ ಕಂಪನಿ ಜಗತ್ತಿನ ಅತಿದೊಡ್ಡ ಆರು ಕಂಪನಿಗಳ ಪೈಕಿ ಒಂದಾಗಿದ್ದು, ಪಳೆಯುಳಿಕೆ ಇಂಧನಗಳ ರಾಜ ಎಂಬ (ಕು)ಖ್ಯಾತಿಗೆ ಒಳಗಾಗಿದೆ. ಫ್ರಾನ್ಸ್‍ನ ಅಧ್ಯಕ್ಷರು ಮತ್ತವರ ಮಂತ್ರಿಗಳು ಭಾಗವಹಿಸಿದ್ದ ಸಭೆಯಲ್ಲಿ, ಇನ್ನೂ ಹತ್ತಾರು ಬಂಡವಾಳಶಾಹಿ ಕಂಪನಿಗಳ ಸಿ.ಇ.ಓ.ಗಳು ಭಾಗವಹಿಸಿ ಮಾತನಾಡಿದರು. 

ಇದರಲ್ಲಿ ತೈಲ ಕಂಪನಿಗಳಿಗೆ ಹಣಕಾಸು ಒದಗಿಸುವ ಪ್ರಸಿದ್ಧ ಸಂಸ್ಥೆ ಪಿ.ಎನ್.ಬಿ.ಪರಿಬಾಸ್, ಯುರೋಪಿನ ಕುಖ್ಯಾತ ಪರಿಸರ ವಿರೋಧಿ ರಾಸಾಯನಿಕಗಳ ಲಾಬಿಯಾದ ಸಿಇಏಫ್‍ಐಸಿ ಅಲ್ಲದೆ ಸ್ಟ್ಯಾಟಾಯಿಲ್, ಆರ್.ಡಬ್ಲ್ಯೂ.ಇ., ಗ್ಲೆನ್‍ಕೋರ್, ಇಂಟರ್‍ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಇತ್ಯಾದಿಗಳು ಇದ್ದವು. 2015ರಲ್ಲಿ  ತಮ್ಮ ದೇಶದಲ್ಲೇ ನಡೆಯಲಿರುವ “ಜಾಗತಿಕ ಹವಾಗುಣ ಬದಲಾವಣೆ ಶೃಂಗ”ವನ್ನು ವಿಫಲಗೊಳಿಸಲು ಅಥವಾ ತಮ್ಮ ನಿಲುವಿಗೆ ಬದ್ಧರಾಗುವಂತೆ ಏನೆಲ್ಲಾ ಮಾಡಬಹುದು ಎಂಬ ಸುದೀರ್ಘ ಚರ್ಚೆ ನೆಡೆದು, ನಿರ್ಣಯಗಳ ರೂಪುರೇಷೆಗಳನ್ನು ಶೃಂಗ ಸಭೆಗೂ 6 ತಿಂಗಳ ಮೊದಲೇ ತೀರ್ಮಾನಿಸಲಾಗಿತ್ತು.

ಈ ಲೇಖನವನ್ನು ಬರೆಯುವ ಹೊತ್ತಿಗೆ ಪ್ಯಾರಿಸ್ ಶೃಂಗಸಭೆ ಮುಗಿದಿದ್ದು, ಭೂಬಿಸಿಯೇರಿಕೆಗೆ ಲಗಾಮು ಹಾಕುವ ನಿಯಮಗಳ ಕರಡು ಅಂತಿಮ ಹಂತದಲ್ಲಿದೆ. ಈ ಶತಮಾನದ ಅಂತ್ಯದ ವೇಳೆಗೆ ಇಡೀ ಭೂಮಿಯ ವಾತಾವರಣದ ಏರಿಕೆಯನ್ನು 1.5 ಡಿಗ್ರಿಗಿಂತ ಹೆಚ್ಚು ಮಾಡದಂತೆ ತಡೆಯುವ ನಿಟ್ಟಿನಲ್ಲಿ ಎಲ್ಲಾ ದೇಶಗಳೂ ಸೇರಿಕೊಂಡು ಕಾರ್ಯನಿರ್ವಹಿಸಬೇಕು ಎಂದು ಮುಂದುವರೆದ ರಾಷ್ಟ್ರಗಳ ನಿಲುವಾಗಿದ್ದರೆ, ಭಾರತದಂತಹ ಅಭಿವೃದ್ಧಿಶೀಲ ದೇಶಗಳ ನಿಲುವು ಬೇರೆಯೇ ಇದೆ. ಇಷ್ಟು ವರ್ಷ ಮುಂದುವರೆದ ರಾಷ್ಟ್ರಗಳ ಎಣೆಯಿಲ್ಲದ ಪಳೆಯುಳಿಕೆ ಇಂಧನಗಳ ಬಳಕೆಯಿಂದಾಗಿಯೇ ವಾತಾವರಣ ಇಷ್ಟು ಹದಗೆಟ್ಟಿದೆ, ಇದರ ನೈತಿಕ ಹೊಣೆಯನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹೊರಬೇಕು ಹಾಗೂ ನಮ್ಮ ದೇಶವಿನ್ನೂ ಅಭಿವೃದ್ಧಿ ಪಥದಲ್ಲಿಯೇ ಇರುವುದರಿಂದ ನಮಗೆ ಪಳೆಯುಳಿಕೆ ಇಂಧನಗಳ ಬಳಕೆಗೆ ಕಡಿವಾಣ ಹಾಕಲಾಗದು. ನಾವು ಕಲ್ಲಿದ್ದಲ್ಲನ್ನು, ಪೆಟ್ರೋಲ್ ಉರಿಸಿದರೆ ಅದನ್ನು ಪ್ರಶ್ನೆ ಮಾಡುವ ಹಾಗಿಲ್ಲ. ಕಲ್ಲಪ್ಪ-ಗುಂಡಪ್ಪ ಜಗಳದಲಿ ಮೆಣಸಪ್ಪ ಚಟ್ನಿಯಾದಂತೆ, ಅಭಿವೃದ್ಧಿ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಹಠಮಾರಿ ಧೋರಣೆಯಿಂದಾಗಿ, ಚಿಕ್ಕ ಹಾಗೂ ಹಿಂದುಳಿದ ಅನೇಕ ಚಿಕ್ಕ ದೇಶಗಳು ಸಂಕಷ್ಟಕ್ಕೆ ಸಿಲುಕಲಿವೆ. ಈಗಾಗಲೇ ಭೂಬಿಸಿಯ ಪರಿಣಾಮದ ಅನುಭವಿಸುತ್ತಿರುವ ಈ ದೇಶಗಳು ಯಾಕೆ 1.5 ಡಿಗ್ರಿ ಅಥವಾ 2 ಡಿಗ್ರಿ, ನಮ್ಮ ಉಳಿವಿಗಾಗಿ ಭೂಬಿಸಿಯನ್ನು 1 ಡಿಗ್ರಿಗೆ ಯಾಕೆ ಇಳಿಸುವ ಮಾತನಾಡುತ್ತಿಲ್ಲ ಎಂದು ಆಕೋಶಭರಿತವಾಗಿಯೇ ಪ್ರಶ್ನಿಸುತ್ತಿವೆ.

2050ರ ಹೊತ್ತಿಗೆ ಇಡೀ ಪ್ರಪಂಚದಲ್ಲಿ ಇಂಗಾಲಾಮ್ಲದ ತ್ಯಾಜ್ಯಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ವಿಜ್ಞಾನಿಗಳ – ತಜ್ಞರ ಅಭಿಮತ. ಇದಕ್ಕೆ ಬಿಲಿಯ-ಬಿಲಿಯಗಟ್ಟಲೇ ಹಣ ಬೇಕು. ಅಮೆರಿಕ ಹಣ ಕೊಡಲು ತಯಾರಿದೆಯಾದರೂ, ತಮ್ಮ ದೇಶಗಳ ಕಂಪನಿಗಳು ಹೊರಹೊಮ್ಮಿಸುವ ತ್ಯಾಜ್ಯವನ್ನು ಲೆಕ್ಕವಿಡುವುದನ್ನಾಗಲೀ ಅಥವಾ ಆ ಕಂಪನಿಗಳನ್ನು ಹೊಣೆ ಮಾಡುವುದಾಗಲಿ ಮಾಡಬಾರದು ಎಂದು ಬಲವಾಗಿಯೇ ವಿರೋಧಿಸಿದೆ. ಈ ಹಿಂದೆ ತಾನು ಹೊಮ್ಮಿಸಿದ ತ್ಯಾಜ್ಯದ ಪ್ರಮಾಣವನ್ನು ಪ್ರಶ್ನೆ ಮಾಡಬಾರದು ಎಂಬುದು ಅಮೆರಿಕದ ನಿಲುವು. ಇಲ್ಲಾ ನೀವು ಪ್ರಶ್ನಾತೀತರೇನಲ್ಲ, ನೀವು ಮಾಡಿದ ಕೊಳೆಯ ಪ್ರಮಾಣವನ್ನು ಪರಿಗಣಿಸಿಯೇ ಮುಂದಿನ ನಿಲುವು ತೆಗೆದುಕೊಳ್ಳಬೇಕು ಎಂಬುದು ಭಾರತದ ವಾದ.

2009ರಲ್ಲಿ ಕೋಪೆನ್‍ಹೇಗನ್ ಜಾಗತಿಕ ಶೃಂಗ ವಿಫಲವಾಯಿತಾದರೂ, ಅಲ್ಲೊಂದು ಹವಾಮಾನ ನಾಯಕ ಉದ್ಭವಿಸಿದ್ದ, ಮಾಲ್ಡೀವ್ಸ್ ಅಧ್ಯಕ್ಷ ನಶೀದ್ ನೀರಿನಡಿಯಲ್ಲಿ ಸಂಸತ್ ಅಧಿವೇಶನವನ್ನು ನಡೆಸಿ ವಿಶ್ವದ ಗಮನ ಸೆಳೆದಿದ್ದ. 2020ರ ವೇಳೆಗೆ ತನ್ನ ದೇಶವನ್ನು ಇಂಗಾಲಾಮ್ಲ ತ್ಯಾಜ್ಯ ಮಕ್ತವಾಗಿಸುವ ಪಣ ತೊಟ್ಟು ಕಾರ್ಯರೂಪಕ್ಕಿಳಿಸುವ ಪ್ರಯತ್ನದಲ್ಲಿದ್ದ. ಅಲ್ಲಿನ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ವಾಧಿಕಾರಿ ಪಡೆ ನಶೀದ್‍ನನ್ನು ಅಧಿಕಾರದಿಂದ ಕೆಳಗಿಳಿಸಿ ಜೈಲಿಗಟ್ಟಿತು. 2015ರ ಶೃಂಗಸಭೆಯಲ್ಲಿ ಅತ್ಯಂತ ಯಶಸ್ವಿ ಹವಾಮಾನ ಹೀರೋವಾಗಿ ಹೊರಹೊಮ್ಮಲಿದ್ದ ನತದೃಷ್ಟ ನಶೀದ್ ಜೈಲಿನ ಕಂಬಿ ಎಣಿಸುತ್ತಿರುವುದು ವಿಪರ್ಯಾಸವೇ ಸರಿ. ಸರ್ವಾಧಿಕಾರಿಗಳು ಅಧಿಕಾರ ಹಿಡಿದ ನಂತರದಲ್ಲಿ ದ್ವೀಪದೇಶ ಮಾಲ್ಡೀವ್ಸ್‍ನ ಕಡಲತೀರಗಳನ್ನೂ ಬಿಡದೇ ತೈಲಕಂಪನಿಗಳು ಭೂಮಿಯನ್ನು ಕೊರೆಯಲು ಪ್ರಾರಂಭಿಸಿವೆ. 

ಉರುಗ್ವೆಯಂತಹ ದೇಶ 2020ರ ಹೊತ್ತಿಗೆ ತನ್ನ ಇಂಗಾಲಾಮ್ಲ ತ್ಯಾಜ್ಯವನ್ನು ಶೂನ್ಯಕ್ಕಿಳಿಸುವ ಪ್ರಯತ್ನದಲ್ಲಿ ದಾಪುಗಾಲಿಕ್ಕಿದೆ. 94% ವಿದ್ಯುತ್ತನ್ನು ಮರುಬಳಕೆಯ ಇಂಧನದಿಂದ ಈಗಾಗಲೇ ಪಡೆಯುತ್ತಿದೆ. ಕಳೆದ 20 ವರ್ಷಗಳಿಂದ ಅಲ್ಲಿ ಜಲವಿದ್ಯುತ್ ಯೋಜನೆಗಾಗಿ ಆಣೆಕಟ್ಟು ಕಟ್ಟಿಲ್ಲ. ಅಣುವಿದ್ಯುತ್ ಸ್ಥಾವರಗಳನ್ನು ನಿರ್ಮಿಸಿಲ್ಲ. ಸಾರಿಗೆ-ಸಂಚಾರಕ್ಕೂ ಬ್ಯಾಟರಿಚಾಲಿತ ಯಂತ್ರಗಳನ್ನು ಬಳಸಲು ಶುರು ಮಾಡಿದೆ. ಅದೊಂದು ಚಿಕ್ಕ ದೇಶವೇ ಸರಿ, ಅಲ್ಲಿನ ಜನಸಂಖ್ಯೆ ಕಡಿಮೆಯೇ ಇರಬಹುದು. ಆದರೂ ಜಾಗತಿಕ ಹವಾಮಾನ ಏರಿಕೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಆ ಚಿಕ್ಕ ದೇಶದ ಪ್ರಯತ್ನ ಹಾಗೂ ಸಾಧನೆ ಜಗತ್ತಿನ ಇತರ ದೇಶಗಳಿಗೇಕೆ ಮಾದರಿಯಾಗುತ್ತಿಲ್ಲ?

ಇತ್ತ ಭೂಕೊಳಕರು, ಇಂಗಾಲಾಮ್ಲ ತ್ಯಾಜ್ಯವನ್ನೇ ತಮ್ಮ ಲಾಭದ ಸರಕನ್ನಾಗಿ ಪರಿವರ್ತಿಸಿಕೊಳ್ಳುವ ಹುನ್ನಾರದಲ್ಲಿವೆ. ವಾತಾವರಣದಲ್ಲಿರುವ ಹೆಚ್ಚಿನ ಇಂಗಾಲಾಮ್ಲವನ್ನು ಹಿಡಿದು ಸಮುದ್ರದ ಕೆಳಗೋ, ಭೂಮಿಯ ಒಳಗೋ ಸೇರಿಸುವ ತಂತ್ರಜ್ಞಾನವನ್ನು ಅಳವಡಿಸುವ ಮಾತನಾಡುತ್ತಿವೆ. ನೈಸರ್ಗಿಕ ಅನಿಲ ಶುದ್ಧವಾದದು ಎಂಬ ಮಿಥ್ಯೆಯನ್ನು ಜಾಗತೀಕರಣಗೊಳಿಸುತ್ತಾ, ಅರಣ್ಯ ಬೆಳೆಸುವ ಮಾತನ್ನು ಬದಿಗೊತ್ತುತ್ತಿವೆ. ಇದೇ ಸಮಯದಲ್ಲಿ ಇಂಗಾಲಾಮ್ಲಕ್ಕೆ ಮಿತಿಯನ್ನು ಹೇರಲು 2050ರವರೆಗೆ ಯಾಕೆ ಕಾಯುತ್ತೀರಿ, ಈಗಲೇ ಏಕಿಲ್ಲವೆಂದು ಖ್ಯಾತ ಹಾಲಿವುಡ್ ನಟ ಅರ್ನಾಲ್ಡ್ ಶಡ್ಜ್‍ನಾಲರ್ ಗುಡುಗಿದ್ದು ನ್ಯೂಯಾರ್ಕ್ ಟೈಮ್ಸ್‍ನಲ್ಲಿ ವರದಿಯಾಗಿದೆ.

ಪ್ಯಾರಿಸ್ ಶೃಂಗಸಭೆ ನಡೆಸಲು ಅಗತ್ಯವಿದ್ದ ಬಹುಪಾಲು ಹಣಕಾಸನ್ನು ನೀಡಿದ್ದು ಇದೇ ಭೂ ಕೊಳಕರೇ ಆಗಿದ್ದು ಒಟ್ಟಾರೆಯಾಗಿ ಬಹು ನಿರೀಕ್ಷಿತ ಜಾಗತಿಕ ಒಪ್ಪಂದಗಳು ನಿರ್ದಿಷ್ಟವಾದ ಅಂತ್ಯವನ್ನು ಕಾಣುವಲ್ಲಿ ವಿಫಲಗೊಳ್ಳುತ್ತಿವೆಯೇ? ಎಂಬುದನ್ನು ಕಾಲವೇ ಹೇಳಬೇಕು. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x