ಮೂವರ ಕವನಗಳು: ಬಿದಲೋಟಿ ರಂಗನಾಥ್, ನಂದಾ ದೀಪ, ರೇಣುಕಾ ಹೆಳವರ್

ಜೋಲಿ ಕಟ್ಟಿ ತೂಗುವ ನೆಲದವ್ವ

ನೆಲದ ಕರುಣೆಯ ತೊರೆಯಲು
ಮನಸ್ಸಿಗೆ ಮಾರುದ್ದ ದುಃಖ
ಕನಸಿನ ಗುಹೆಗೆ ಭಯದ ಭೈರಿಗೆ

ನೆಲದ ಕರುಳ ಮಾತೃಕೆಗೆ ಸೋತು
ಭಾವ ಉಕ್ಕಿದ ಮನಸ್ಸೆಂಬ
ಸಮುದ್ರ ಮಂಥನಕೆ
ಸಾಕ್ಷಿಯೇ ಇಲ್ಲದ ದಾವೆ

ಸಿಟ್ಟೆಂಬ ಬೀಜ ಸಿಡಿದರು
ಮೊಳಕೆಯಾಗದ ಅನುಬಂಧ
ಆದರೂ ನನ್ನವ್ವ ಭೂತಾಯಿಗೆ
ನಾನು ಸದಾ ಆಳುಮಗನೆ.

ಗುಡಿಸಿದರೂ ಸವೆಯದೆ
ಅಗೆದು ಬಗೆದರೂ ಹರಿಯದ
ನನ್ನವ್ವಳ ಜೀವದ ಗಟ್ಟಿತನಕ್ಕೆ
ಸರ್ವರು ಸವಕಲೇ.

ಆದಿಯನ್ನು ಗುಡಿಸದೆ
ಇತಿಹಾಸ ನಿರ್ಮಾತೃ ಹೃದಯಕೆ
ಜೋಲಿಕಟ್ಟಿ ತೂಗುವ ನೆಲದವ್ವಳ
ಮಮಕಾರಕ್ಕೆ ತಲೆಬಾಗಿದ್ದೇನೆ.

-ಬಿದಲೋಟಿ ರಂಗನಾಥ್

 

 

 

 


 

ಯಾರು?
1. ಎರಗೆರಗಿ ಎರಚಿದರು,
ಕಿರ್ರನೆ ಕಿರುಚಿದರು,
ಮಡಿಚಿ ಮುಚ್ಚಿಟ್ಟರು.-
ಸತ್ಯಗಳ ಸಾವಿರಾರು.
ಧರ್ಮದಿ ಧಂಧೆ ಮಾಡಿದರು,
ಮೋಸದಿ ಲೂಟಿ ಮಾಡಿದರು,
ಅರಿತಂತೆ ನಟಿಸುವ ಸುಳ್ಳರು.
ಹೀಗೆಂದು ಹೇಳುವುದಾರಿಗೆ? ಕೇಳುವವರಾರು?
ಹೇಳಿದರು, ಕೇಳಿದರು, ಒಪ್ಪಿಕೊಂಡರು,
ಆಚರಣೆ ಬದಲಾಗಲು ಸಮಯ ಬೇಕೆ? 
ಬದಲಿಸುವವರು ಯಾರು?

ಕವನದ ಕಥೆ
2. ಕವನದ ಕದನ ಮನದೊಳು
ಕದನದ ಕಥನ ಕನಸೊಳು
ಕನಸಿನ ಕವಚ ಕಳೆಯಲು 
ಕವನದ ಕಣಕಣವ ಕೆಣಕಿ
ಮನಸಿನ ಅಣುಅಣುವ ಇಣುಕಿ
ತಡಕಾಡಿದಾಗ ಕಾಣಿಸಿತು
ಕದಡಿದ ಮನದ ಕವನ ಕಡು ಕದನ.

ಆಸೆ
3. ಆಟಗಳ ಮಾಲೀಕ 
ಲೆಕ್ಕಗಳ ಪುಟ ತೆರೆದಾಗ
ಕಾಟ ಕೊಟ್ಟ, ವೀರ ಕೆಟ್ಟ ದಿಟ್ಟ ಧೀರ.
ಎಷ್ಟರ ಮಟ್ಟಿಗೆ ಮಟ್ಟ ಹಾಕುವನೋ
ಸೊಟ್ಟಗಾಗುವವರಾರೊ, ನೆಟ್ಟಗಿರುವವರಾರೊ
ಅವನಿಗೇ ಗೊತ್ತು. ನನಗಂತು-
ದಿಟ್ಟ ಧೀರನೆ ಆಗುವ ಆಸೆ.

ಕಾರಣ
4. ಕರ್ಣನ ಕರುಣೆ ಕಾರಣವೆ ಕವಚ ಕಳೆಯಲು?
ವರುಣನ ವರ್ಣನೆ ಕಾರಣವೆ ಮಾನವ ಮನವ ತೋಯಲು?
ಮಾನವನ ಮನ ಕವಚ ಕಳೆಯಲು-
ಹಳಸಲು, ತಂಗಳು, ಮಂಗಗಳು, 
ಮೆದು ಮೃದುಲ ಮೌನ ತರಂಗಗಳು,
ಅನ್ನದಗುಳು ಅಕ್ಕಿಕಾಳು.

ತೊರೆದರೊಳಿತು
5. ತೊರೆದೆ ತೋರಿಕೆ
ಎರೆದೆ ಅಂಟ ಸೋರಿಕೆಗೆ
ಆದರು ಪ್ರೀತಿ ಮರೀಚಿಕೆ
ಸಾಗಲೆ ಸಾಗರಕೆ 
ತೀರಿಸಲು ತೀರದ ನೀರಡಿಕೆ?
ತೀರಿದರು ದಾಹ
ತೋರಿದರು ಮೋಹ
ಬರದಿರೆ ಸನಿಹ
ಕಪಟ ನಾಯಕನ ಕಲಹ ಪ್ರೀತಿ
ಕಡೆಗಣಿಸುದೇ ರೀತಿ-ನೀತಿ.

-ನಂದಾ ದೀಪ

 

 

 

 


ಮಾಯ ಬಜಾರು       

ಹಿಂದೊಮ್ಮೆ
ಮುತ್ತು ಹವಳ ಹರಾಜಾದ ಬೀದಿಯೀಗ
ಬೀಕೊ ಎನ್ನುತ್ತಿದೆ ಪರದೇಶಿಯಂತೆ !
“ನಾ” ಎಂದು ಮೆರೆದವರೆಲ್ಲಾ ಮಣ್ಣು
ಸೇರಿದ್ದಾರೆ; ಇತಿಹಾಸದ ಪುಟ
ತಿರುವಿ ಹಾಕಲ್ಲಿಕ್ಕೆ ತಿರುಪೆಯವನಿಗೊ ಪುರಸೋತ್ತಿಲ್ಲ
ಆ ಬಜಾರಿನಲ್ಲೀಗ ಮಾರಾಟವಾಗುತ್ತಿವೆ
ಮಾನ, ಮರ್ಯಾದೆ, ನೀತಿ, ಪ್ರೀತಿ,
ಮಿಗಿಲಾಗಿ ಮಾನವೀಯತೆ !!

ಮೆರೆದ ಕೋಟೆಗಳು ಕುಸಿದು ಕುಪ್ಪೆಯಾಗಿ
ಧೂಳು ತಿನ್ನುತ್ತಿವೆ! ದೀಪಗಳ ಬೆಳಕಿಲ್ಲಾ
ಅಲ್ಲಿರುವದು ಬರೀ ಕತ್ತಲಿನ ಮಡುವು
ಉಳಿದಿರುವುದು ಪಾಳು ಬಿದ್ದ ಕೋಟೆ
ಕೋತ್ತಲುಗಳಲ್ಲಿಯ ನರಳಾಟದ ಆರ್ತವಾರ್ತೆ
ನಾ-
ಧ್ವನಿ ಬಂದ ಕಡೆ ಸಾಗುತಿಹೆನು ಶಬ್ದವರಸಿ
ಮುತ್ತು ಹವಳ ಮಾರಿದ ಮಾರ್ಗಗಳಲ್ಲಿ!
ಬೆವರು ಬಾಯಾರಿದ ಮೈಗಳು ಮಾರಾಟಕ್ಕಿವೆ
ಲಲಿತ ಲತಾಂಗಿಯರು ತುಟಿಬಿಚ್ಚಿ ಪಿಟಕ್ಕೆನ್ನದೆ 
ಚಟ್ಟಕ್ಕೇರಿದ ಈ ಮಾಯಾ ಸಂತೆಯಲಿ
ಈ ಖರೀದಿಖೋರ್ ಸಂಸ್ಕøತಿಯಲಿ!!

ಹಗಲಿಗೆ ಹೆಡಮುರಿಗೆ ಕಟ್ಟಿ ಇರುಳಿಗೆ ಕೈ
ಚಾಚುತಿಹರು ಬೀಕೋ ಎನ್ನುವ ಈ ಬೀದಿಯಲ್ಲಿ  
ಯಾರಿಗೂ ಕೇಳುವ ಖಯಾಲಿ ಇಲ್ಲಾ 
ಆದರೂ ಬದುಕಲೇ ಬೇಕು
ಈ ಮಾಯಾ ಬಜಾರಿನಲಿ!!!

ಇಲ್ಲಿ-
ಸತ್ಯ ಸತ್ತಿದೆ ಅನ್ಯಾಯ ಸೆಟೆದು ಸೆಡ್ಡು ಹೊಡೆದಿದೆ
ಪ್ರೀತಿಯ ಘಮಲು ಕಮರಿ 
ಕಿರು ಬೆರಳಿನ ತುಂಬೆಲ್ಲ ಕೀವು ನಂಜು!
ನನ್ನ ಎದೆಯಾಸೆ-    
ಒಮ್ಮೆ ಇಲ್ಲೂ ಗಾಳಿ ಬೀಸಲಿ
ಮೊಹಬತ್ತಿನ ಉಸಿರು ಪಿಸುದನಿಯಲ್ಲಾದರೂ ತೇಲಿ ಬರಲಿ!!
-ರೇಣುಕಾ ಹೆಳವರ್                                                    
 

 

 

 

 

 


                   


                                

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x