ರೈತರ ಸಾವಿಗೆ ಪೂರಕವಾಗಿವೆಯೇ ನಮ್ಮ ಅಭಿವೃದ್ಧಿ ಯೋಜನೆಗಳು….?: ಮಂಜುಳ ಎಸ್.

            
ದೇಶದಲ್ಲಿ ನೀರಿಗೆ, ಅನ್ನಕ್ಕೆ ಬರವಿರುವಂತೆಯೇ, ಅನ್ನದಾತನ ಆತ್ಮಹತ್ಯೆಗಳು ಸಹ ಬರವಿಲ್ಲದಂತೆ ಪ್ರತಿ ರಾಜ್ಯ, ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕವಾಗಿ ನಡೆಯುತ್ತಿವೆ. ಕೃಷಿಯಲ್ಲಿ ಅವೈಜ್ಞಾನಿಕ ಪದ್ದತಿಯನ್ನು ಬಳಸುತ್ತಿರುವುದು, ಸಾಲ ಮಾಡುತ್ತಿರುವುದು, ಮದುವೆ ಸಮಾರಂಭಗಳಿಗೆ ಹೆಚ್ಚು ದುಂದು ವೆಚ್ಚ ಮಾಡುತ್ತಿರುವುದೇ ರೈತರ ಸರಣಿ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ ಎಂದು ನಮ್ಮ ಸರ್ಕಾರಗಳು ಅಮಾನವೀಯವಾಗಿ ಉತ್ತರಿಸುತ್ತಾ ಒಂದಿಷ್ಟು ಪರಿಹಾರ ಧನವನ್ನು ನೀಡಿ, ಸಂತ್ರಸ್ತ ಕುಟುಂಬಗಳಿಗೆ ಆ ಕ್ಷಣಕ್ಕೆ ಸಮಾಧಾನ ಪಡಿಸುತ್ತಿವೆ. ರೈತರ ಸರಣಿ ಆತ್ಮಹತ್ಯೆಗಳು ನೆನ್ನೆ ಮೊನ್ನೆಯದಲ್ಲ, ಸುಮಾರು ವರ್ಷಗಳಿಂದ ಎಸ್.ಇ.ಝೆಡ್, ಹಸಿರು ಕ್ರಾಂತಿ, ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯಂತಹ ಮುಖವಾಡಗಳನ್ನು ಹೊತ್ತ ಯೋಜನೆಗಳು ಕಾನೂನಾತ್ಮಕವಾಗಿ ರೂಪುಗೊಂಡು ಬರುತ್ತಿರುವ ಪ್ರಕ್ರಿಯೆಯ ಪರಿಣಾಮ ಎಂದು ಜನರಿಗೆ ಅರ್ಥಮಾಡಿಸುವ ಬಹು ದೊಡ್ಡ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನೆಡೆಯುತ್ತಿದೆ.
    
ಮುಕ್ತ ವ್ಯಾಪಾರದ ವಲಯಗಳು, ರಫ್ತು ಸಂಸ್ಕರಣಾ ವಲಯಗಳು, ಮುಕ್ತ ವಲಯಗಳು, ಕೈಗಾರಿಕಾ ವಸಾಹತುಗಳು ಹೀಗೆ ಹಲವಾರು ವಲಯಗಳಲ್ಲಿ ವಿಷೇಶ ಆರ್ಥಿಕ ವಲಯ ವಿಸ್ತಾರಗೊಂಡಿದ್ದು ರಾಷ್ಟ್ರ ವ್ಯಾಪಿ ಕಾನೂನುಗಳನ್ನು ಸ್ಥಗಿತಗೊಳಿಸಿ ಎಂ.ಎನ್.ಸಿ ಕಂಪನಿಗಳ ರೂಪದಲ್ಲಿ ವದೇಶಿ ಹೂಡಿಕೆದಾರರಿಂದ ನಡೆಯುವ ವಿದೇಶಿ ನೇರ ಹೂಡಿಕೆಯನ್ನು ಹೆಚ್ಚಿಸುವುದು ಇದರ ಗುರಿಯಾಗಿದೆ.
    
ವಿಶೇಷ ಆರ್ಥಿಕ ವಲಯ ಇದು ಸ್ವತಂತ್ರ ಪ್ರದೇಶವಾಗಿದ್ದು ಯಾವುದೇ ರೀತಿಯ ಅಡಚಣೆಗಳಿಲ್ಲದೆ ನಿರ್ವಿಘ್ನವಾಗಿ, ನಿರಾಯಾಸವಾಗಿ ಕಾಲಿಗೆ ಬಿದ್ದವರನ್ನು ತುಳಿಯುತ್ತಾ ಮುಂದುವರಿಯುತ್ತಿದೆ. ಈ ಯೋಜನೆಯಡಿಯಲ್ಲಿ ಬರುವ ಉದ್ದಿಮೆಗಳಿಗೆ ಐದು ವರ್ಷಗಳ ತನಕ ಆದಾಯ ತೆರಿಗೆ, ಸೇಲ್ಸ್ ತೆರಿಗೆ, ಸರ್ವಿಸ್ ತೆರಿಗೆ ಇತ್ಯಾದಿ ತೆರಿಗೆಗಳು ಇರುವುದಿಲ್ಲ…! ಹೊರಗಿನಿಂದ ಆಮದು ಮಾಡಿಕೊಳ್ಳಲು, ಶೇಕಡ ೧೦೦ ರಷ್ಟು ವಿದೇಶಿ ಬಂಡವಾಳ ಹೂಡಲು ನಮ್ಮ ಸರ್ಕಾರಗಳು ಅನುಮತಿ ನೀಡಿವೆ. ಉಧ್ಯಮವನ್ನು ಶುರು ಮಾಡುವಾಗ ಪರಿಸರದ ಮೇಲಿನ ಪರಿಣಾಮಗಳ ಸಮೀಕ್ಷೆಗಳ ಅಗತ್ಯ, ವಿದ್ಯುತ್ ಮತ್ತು ಇತರ ಸಂಪನ್ಮೂಲಗಳಿಗೂ ತೆರಿಗೆ ಕಟ್ಟುವ ಅಗತ್ಯವಿಲ್ಲ. ಈ ಯೋಜನೆ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಯಾವುದೇ ಅಡಚಣೆಗಳಿಲ್ಲದಂತೆ ಸೌಲಭ್ಯಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.
    
ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಪ್ರತಿಫಲ ಪಡೆಯುತ್ತಾರೆ ಹಾಗೂ ಹಣದುಬ್ಬರದ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪ್ರತಿಪಾಧಿಸಿತ್ತು. ವಾಲ್ಮರ್ಟ್, ಟೆಸ್ಕೋ ಮುಂತಾದ ಬಹು ರಾಷ್ಟ್ರೀಯ ಕಂಪನಿಗಳು ದೇಶದ ಆಂತರಿಕ ಮಾರುಕಟ್ಟೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿವೆ. ತಮ್ಮ ಬಳಿ ಇದ್ದ ಒಂದೆರಡು ರುಪಾಯಿಗಳಲ್ಲಿ ಸ್ಥಳೀಯ ಕಿರಾಣಿ ಅಂಗಡಿಗಳಿಂದ ದಿನಿಸಿ ಸಾಮಗ್ರಗಳನ್ನು ತಂದು ಜೀವನ ನಡೆಸುತ್ತಿದ್ದ ಕಡುಬಡವರಿಗೆ ವಿದೇಶಿ ನೇರ ಬಂಡವಾಳ ಹೂಡಿಕೆ ಕಂಟಕವಾಗಿ ಪರಿಣಮಿಸಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಹುಬ್ರಾಂಡಿನ ಕಂಪನಿಗಳ ಜೊತೆ ಪೈಪೋಟಿಗೆ ನಿಲ್ಲಲಾಗದೆ ಸಣ್ಣ ಪುಟ್ಟ ಕಿರಾಣಿ ಅಂಗಡಿಗಳು, ಬೀದಿ ಬದಿಯ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಬೀದಿಗಿಳಿಯುತ್ತಿದ್ದಾರೆ ಮತ್ತು ಈ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಕಿರಾಣಿ ಅಂಗಡಿಗಳು, ಬೀದಿಬದಿಯ ವ್ಯಾಪಾರ, ಸಣ್ಣ ಸಣ್ಣ ಟೆಂಟ್‌ಗಳು, ಥಿಯೇಟರ್‌ಗಳು,  ಸಂತೆಗಳು ನಡೆಯುತ್ತಿದ್ದ ಜಾಗದಲ್ಲಿ, ಎಲ್ಲಾ ರೀತಿಯ ಐಶರಾಮಿ ವಸ್ತಗಳು, ಆಹಾರ ಪದಾರ್ಥಗಳು, ಮನರಂಜನೆ ವಸ್ತಗಳು ಒಂದೇ ಕಡೆ ಸಿಗುವಂತೆ, ಏಕ ರೂಪಿ ಮಾರುಕಟ್ಟೆಯಾದ ದೊಡ್ಡ ದೊಡ್ಡ ಮಾಲ್‌ಗಳು ರಾರಾಜಿಸುತ್ತಿವೆ. 
    
ಸರಕುಗಳ ಸಾಗಾಣಿಕೆಗಾಗಿ ಸಮುದ್ರ ಉತ್ತಮವಾದ ಪ್ರವೇಶವಕಾಶವನ್ನು ಹೊಂದಿರುವುದರಿಂದ ಚೀನಾದ ದಕ್ಷಿಣ ಭಾಗದ ತೀರಪ್ರದೇಶದಲ್ಲಿರುವ ಪ್ರಾಂತ್ಯಗಳನ್ನು ವಿಶೇಷ ಆರ್ಥಿಕ ವಲಯವನ್ನಾಗಿ ಘೋಶಿಸಿದೆ. ಎಸ್.ಇ.ಝೆಡ್‌ಗಾಗಿ ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾ ಕಂಪನಿಗೆ ಅತಿ ಅಗ್ಗದಲ್ಲಿ ಭೂಮಿಯನ್ನು ಭೋಗ್ಯಕ್ಕೆ ಕೊಟ್ಟಿದ್ದಲ್ಲದೆ, ಈ ಕಂಪನಿಗೆ ಶೇಕಡ ೧ ರಂತೆ ಸಾಲವನ್ನು ಕೊಡುವ ಸೌಲಭ್ಯದಿಂದಾಗಿ ೨೦೦೯-೧೦ರಲ್ಲಿ ಸಿಂಗೂರು ಮತ್ತು ನಂದಿಗ್ರಾಮಗಳು ಹೆಸರಾಗಿದ್ದವು. 
    
ಭೌತಿಕ ಸಂಪನ್ಮೂಲಗಳ ಕೊರತೆ ಇಲ್ಲದಿರುವ ಪ್ರದೇಶಗಳಲ್ಲಿ ಭೂಮಿ ಬಂಜರಾಗಿದ್ದರೂ ಸರಿ, ಒಂದು ವೇಳೆ ಆ ಭೂಮಿ ಫಲವತ್ತಾಗಿದ್ದರೆ ಬಂಜರು ಭೂಮಿಯನ್ನಾಗಿ, ವಿಶೇಷ ಆರ್ಥಿಕ ವಲಯವನ್ನಾಗಿ ಮಾರ್ಪಡಿಸಿರುವುದಕ್ಕೆ ಬೆಂಗಳೂರು, ಮಂಗಳೂರು, ಮಧ್ಯ ಪ್ರದೇಶ, ಮುಂಬೈನಂತಹ ಉದಾಹರಣೆಗಳು ಭಾತರದಲ್ಲಿಯೂ ಹೇರಳವಾಗಿ ಸಿಗುತ್ತವೆ. ವಿಶ್ವಬ್ಯಾಂಕ್ ೨೦೦೭ರ ಅಂದಾಜುಗಳ ಅನುಸಾರ ವಿಶ್ವದಾದ್ಯಂತದ ೧೨೦ ದೇಶಗಳಲ್ಲಿನ ವಿಶೇಷ ಆರ್ಥಿಕ ವಲಯಗಳಲ್ಲಿ ೩೦೦೦ಕ್ಕೂ ಹೆಚ್ಚಿನ ಯೋಜನೆಗಳು ನೆರವೇರಿತ್ತು. 
    
ಭಾರತ ಸರ್ಕಾರವು ೨೦೦೦ದ ಏಫ್ರಿಲ್‌ನಲ್ಲಿ ವಿಶೇಷ ಆರ್ಥಿಕ ವಲಯದ ಕಾರ್ಯ ನೀತಿಯನ್ನು ಪರಿಚಯಿಸಿತ್ತು. ೨೦೦೫ರಲ್ಲಿ ಈ ಕಾಯ್ದೆ ಅನುಮೋದನೆಗೊಂಡು, ಈ ವಲಯಗಳು ವಿದೇಶಿ ಪ್ರದೇಶವಾಗಲಿವೆ ಎಂದು ಭಾವಿಸಲಾಗಿತ್ತು. ೨೦೦೭ರ ವೇಳೆಗೆ ೫೦೦ಕ್ಕೂ ಹೆಚ್ಚಿನ ವಿಶೇಷ ಆರ್ಥಿಕ ವಲಯಗಳು ಪ್ರಸ್ತಾಪಿಸಲ್ಪಟ್ಟು ಅವುಗಳ ಫೈಕಿ ೨೨೦ ರಷ್ಟು ವಿಶೇಷ ಆರ್ಥಿಕ ವಲಯಗಳು ಸೃಷ್ಟಿಸಲ್ಪಟ್ಟವು. ಏಷ್ಯದಲ್ಲೇ ಅತಿದೊಡ್ಡ ಹೊರ ಗುತ್ತಿಗೆ ಕೈಗಾರಿಕೆಯನ್ನು ಹೊಂದುವುದರ ಮೂಲಕ ವಿಶೇಷ ಆರ್ಥಿಕ ವಲಯದ ನೆಲೆಯನ್ನು ಗಟ್ಟಿಗೊಳಿಸುವುದರಲ್ಲಿ ಭಾರತ ಸಹಕಾರಿಯಾಗಿದೆ. 
    
ವಿಶೇಷ ಆರ್ಥಿಕ ವಲಯಗಳ ಸೃಷ್ಟಿಗೆ, ಅಭಿವೃದ್ಧಿಗೆ ತುಂಬಿ ತುಳುಕುವಷ್ಟು ಸವಲತ್ತುಗಳನ್ನು ನೀಡುತ್ತಿರುವ ನಮ್ಮ ಪ್ರಭುತ್ವ ಅಪೌಷ್ಟಿಕತೆಯಿಂದ, ಒಂದು ತುತ್ತಿನ ಅನ್ನಕ್ಕೂ ಗತಿಯಿಲ್ಲದೆ ಸಾಯುತ್ತಿರುವ, ಅನ್ನ ಬೆಳೆದೂ ಸಾಯುತ್ತಿರುವ ದೇಶದ ಸುಮಾರು ೩೦ ಕೋಟಿಗೂ ಹೆಚ್ಚಿರುವ ಬಡಜನರಿಗೆ ನೇರವಾಗಿ ಸಹಾಯ ಮಾಡಲು ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
    
ಈ ಯೋಜನೆಯ ಕನಸಿನ ಕೂಸಾಗಿರುವ ಭೂಸ್ವಾಧೀನ ಕಾಯ್ದೆಯ ಪ್ರಕಾರ ಸರ್ಕಾರವು ಸ್ವಾಧೀನಕ್ಕೆ ತೆಗೆದುಕೊಳ್ಳುವ ಭೂಮಿಯ ಬೆಲೆಯನ್ನು ನಿರ್ಧರಿಸುವಾಗ, ಭೂಮಿಯ ಇಂದಿನ ಬಳಕೆಯ ಆಧಾರದ ಮೇಲೆಯೆ ಬೆಲೆಯನ್ನು ನಿರ್ಧರಿಸಬೇಕು. ಭೂಮಿಯನ್ನು ಕೊಂಡ ಮೇಲೆ ಅದರ ಬಳಕೆ ಹೇಗಾಗುತ್ತದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳಬಾರದು. ಉದಾ: ಮೈಸೂರಿನ ಹತ್ತಿರದ ಹೊರ ಪ್ರದೇಶದಲ್ಲಿ ಒಂದು ಎಕರೆ ಜಮೀನಿಗೆ ಮಾರುಕಟ್ಟೆಯಲ್ಲಿ ೩೫-೪೦ ಲಕ್ಷ ಬೆಲೆಯಿರುವ ಭೂಮಿಯನ್ನು ಸಾರ್ಕಾರ ವಶಪಡಿಸಿಕೊಂಡರೆ ೧೦-೧೫ ಲಕ್ಷರೂಗಳು ಮಾತ್ರ ಪರಿಹಾರ ಸಿಗಬಹುದು ಅಷ್ಟೆ. ಈ ರೀತಿಯ ತಲೆ ಸವರುವ ಪರಿಹಾರಗಳನ್ನು ನೀಡಿ ರೈತರನ್ನು ಮರುಳಾಗಿಸಿ, ನಾಜೂಕಾಗಿ ಕೃಷಿ ಭೂಮಿಯನ್ನು ಅಕ್ರಮವಾಗದಂತೆ ಸಕ್ರಮವಾಗಿಯೇ ವಶಪಡಿಸಿಕೊಂಡು ರೈತರನ್ನು ದಿವಾಳಿ ಎಬ್ಬಿಸುವ ಪ್ರಕ್ರಿಯೆ ನಡೆತ್ತಲೇ ಬಂದಿದೆ. 
    
೨೦೧೨ರಲ್ಲಿ ಒ.ಎನ್.ಜಿ.ಸಿ ಮತ್ತು ಪೆಟ್ರೋಲಿಯಂ ಕಂಪನಿಗಳಿಗಾಗಿ ಮಂಗಳೂರಿನ ಬಜಪೆ, ಕೆಳವಾರು, ಪೆರ್ಮುದೆ ಗ್ರಾಮಗಳ ೧೮೦೦ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈತರ ಕೈಗಳನ್ನು ಕಟ್ಟಿದ್ದಲ್ಲದೆ, ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದರಿಂದ ಅಲ್ಲಿನ ಮೀನುಗಾರರ ಕುಲಕಸುಬಿಗೆ ಮತ್ತು ಜಲಚರಗಳಿಗೆ ದೊಡ್ಡ ಒಡೆತ ಉಂಟಾಗಿದೆ. ಯಾರ ಅನುಮತಿಯನ್ನೂ ಪಡೆಯದೆ ಈ ಕಾಮಗಾರಿಗಳು ಜನರ ಪ್ರತಿಭಟನೆಯನ್ನೂ ಹತ್ತಿಕ್ಕಿ ಇಂದಿಗೂ ನಡೆಯುತ್ತಲೇ ಇದೆ.
    
ಸಮಸ್ಯೆಗಳಿಗೆ ಬೆನ್ನುಹಾಕಿ ಓಡಿಹೋಗುವ ಇತಿಹಾಸ ರೈತ ವರ್ಗದಲ್ಲಿರಲಿಲ್ಲ. ಎಂತಹ ಸಂಕಷ್ಟದಲ್ಲೂ ಸಹ ಎದರದೆ ಗುಳೆ ಹೋಗುತ್ತಿದ್ದರೇ ಒರತು ಸಾಯುತ್ತಿರಲಿಲ್ಲ. ಆದರೆ ಕಳೆದ ೨೦ ವರ್ಷಗಳಲ್ಲಿ ೨,೫೦,೦೦ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಅದನ್ನು ನಾವು ಸಹಜವಾಗಿ ತೆಗೆದುಕೊಳ್ಳುವಂತಿಲ್ಲ. ರೈತರು ಬ್ಯಾಂಕಿನಲ್ಲಿ ಪಡೆದ ಸಾಲವನ್ನು ಬೆಳೆ ಬಂದಾಗ ಕಂತುಗಳ ರೂಪದಲ್ಲಿ ತೀರಿಸುತ್ತಿದ್ದರು, ಆದರೆ ೨೦೦೪ ರಲ್ಲಿ ಬ್ಯಾಂಕುಗಳ ಕೃಷಿ ಸಾಲದ ನೀತಿ ಬದಲಾದಾಗಿನಿಂದ ಅಸಲಿನ ಜೊತೆ ಬಡ್ಡಿ ಸಮೇತ ಸಾಲವನ್ನು ತೀರಿಸುವ ಇಕ್ಕಟ್ಟಿಗೆ ಸಿಲುಕಿಕೊಳ್ಳುವಂತೆ ಮಾಡಿ, ಮತ್ತಷ್ಟು ಒತ್ತಡವನ್ನು ಹೇರಿಸಲಾಯಿತು.
    
೧೯೬೩ರಲ್ಲಿ ಬಂದ ಹಸಿರು’ಕ್ರಾಂತಿ’ ಯೋಜನೆ ಎಂ.ಎನ್.ಸಿ ಕಂಪನಿಗಳ ಉದ್ಧಾರಕ್ಕಾಗಿ ಮತ್ತು ಮಾರುಕಟ್ಟೆಯನ್ನು ವಿಸ್ತರಿಸುವ ಉದ್ಧೇಶಕ್ಕಾಗಿ ಭಾರತದ ಬೆನ್ನೆಲುಭಾಗಿದ್ದ ಕೃಷಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿತು. ಅಲ್ಲಿಯವರೆಗೂ ರೈತರೇ ಉತ್ಪಾದಿಸಿಕೊಳ್ಳತ್ತಿದ್ದ ತಿಪ್ಪೆಗೊಬ್ಬರ, ಭಿತ್ತನೆ ಬೀಜಗಳು, ಜೀವಾಮೃತಗಳನ್ನು ತ್ಯಜಿಸಿ ದುಬಾರಿ ಕೀಟ ನಾಶಕಗಳು, ರಾಶಾಯನಿಕ ಗೊಬ್ಬರ, ಹೈಬ್ರಡ್ ತಳಿ ಬೀಜಗಳಿಗಾಗಿ ಎಂ.ಎನ್.ಸಿ ಕಂಪನಿಗಳ ಮೊರೆ ಹೋಗುವಂತೆ ಮಾಡಲಾಯಿತು. ಈ ಮೂಲಕ ಸ್ವಾವಲಂಭಿಯಾಗಿದ್ದ ರೈತರನ್ನು ದೊಡ್ಡ ದೊಡ್ಡ ಕಾರ್ಪೋರೇಟ್ ಕಂಪನಿಗಳ ದಾಸ್ಯಕ್ಕೆ ಬೀಳಿಸಿ, ಬಲವಂತವಾಗಿ ಸಾಲದ ಹೊರೆಯನ್ನು ಹೊರಿಸಲಾಯಿತು. ಕೋರಮಂಡಲ್, ಮಾನ್ಸಂಟೋ, ಡುಪಾಟ್‌ನಂತಹ ಕಂಪನಿಗಳು ವರ್ಷದಿಂದ ವರ್ಷಕ್ಕೆ ರೈತರ ಸಾಲದ ಪ್ರಮಾಣವನ್ನು ಹೆಚ್ಚಿಸುತ್ತಾ, ತಮ್ಮ ತಮ್ಮ ಲಾಭದ ಪ್ರಮಾಣವನ್ನೂ ಹೆಚ್ಚಿಸಿಕೊಳ್ಳುತ್ತಿವೆ. 
    
ದೇಸಿ ಬೀಜ ಕೃಷಿ ನೆಲದಲ್ಲಿ ಹುಟ್ಟಬಾರದೆಂಬ ಉದ್ಧೇಶದಿಂದ ಹೈಬ್ರಿಡ್ ಬೀಜವನ್ನು ಭಿತ್ತುವ ಮೊದಲೇ ಗೊಬ್ಬರವನ್ನು ಹಾಕಿ ದೇಸಿ ಬೀಜವನ್ನು, ಫಲವತ್ತತೆಯನ್ನು ಸಂಪೂರ್ಣವಾಗಿ ನಾಶ ಮಾಡಲಾಗುತ್ತದೆ. ಭೂಮಿಯನ್ನು ’ಹದಗೊಳಿಸುವ’ ಹಂತದಿಂದ, ಆಹಾರ ಧಾನ್ಯ ಅಥವಾ ವಾಣಿಜ್ಯ ಧಾನ್ಯಗಳು ಕೈ ಸೇರುವವರೆಗೆ ಪ್ರತಿ ಹಂತದಲ್ಲಿಯೂ ಗೊಬ್ಬರ ಕಂಪನಿಗಳ ಲಾಭಿ ಶುರುವಾಗುತ್ತಾ ಹೋಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೆ, ಯಾವ ಬೆಳೆಯನ್ನೂ ಬೆಳೆಯದಂತಹ ಅನಿವಾರ್ಯ ಸ್ಥಿತಿಯನ್ನು ಈ ಕಂಪನಿಗಳು ನಿರ್ಮಾಣ ಮಾಡಿ ಪ್ರತಿಯೊಬ್ಬ ರೈತನನ್ನೂ ತನ್ನ ಹಿಡಿತದಲ್ಲಿಟ್ಟುಕೊಳ್ಳುತ್ತಿದೆ.
    
ರೈತರ ಸರಣಿ ಆತ್ಮಹತ್ಯೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳೂ ಸಹ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗುತ್ತಿವೆ. ರೈತರನ್ನು ಈ ರೀತಿಯ ಅಭಿವೃದ್ಧಿ ಯೋಜನೆಗಳ ಬಿಕ್ಕಟ್ಟಿನಲ್ಲಿ ಸಿಕ್ಕಿಸುವ ಹುನ್ನಾರಗಳ ನಡುವೆಯೂ ಅನ್ನ ಧಾತರಾದ ನಾವುಗಳೇ ಅನ್ನಕ್ಕೆ ವಿಷ ಬೆರೆಸಬಾರದೆಂದು ಎಚ್ಚೆತ್ತುಕೊಂಡು ಸಾವಯವ ಕೃಷಿ ಮಾಡಿ ನೆಮ್ಮದಿಯ ಜೀವನ ನೆಡೆಸುತ್ತಿರುವ ಮಂಡ್ಯ ಜಿಲ್ಲೆಯ ಕಿರುಗಾವಲು ಗ್ರಾಮದ ಘನಿಖಾನ್ ಮತ್ತು ಚುಕ್ಕಿ ನಂಜುಂಡಸ್ವಾಮಿಯಂತವರು  ಅಮೃತ ಭೂಮಿ ಎಂದು ಹೆಸರಿಟ್ಟು ಸಾವಯವ ಕೃಷಿಯನ್ನೇ ಒಂದು ಚಳುವಳಿಯನ್ನಾಗಿಸಿಕೊಂಡು ಬದುಕುವುದರ ಮೂಲಕ ಈ ವ್ಯವಸ್ಥೆಗೆ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾ ಮತ್ತು ಸಾವಿನ ಕಡೆ ಮುಖ ಮಾಡುತ್ತಿರುವ ರೈತರಿಗೆ ಮಾದರಿಯಾಗಿ ಕಾಣುತ್ತಿದ್ದಾರೆ. 

-ಮಂಜುಳ ಎಸ್.


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x