ಆ ಲಾಜಿನ ಸುತ್ತಮುತ್ತ!: ಗುರುಪ್ರಸಾದ ಕುರ್ತಕೋಟಿ


ಎರಡು ದಶಕಗಳ ಹಿಂದಿನ ಮಾತು… ಆಗ ಇಂಜಿನಿಯರಿಂಗ್ ಮಾಡಿದರೇನೇ ಏನೋ ಸಾಧನೆ ಮಾಡಿದಂಗೆ ಅಂದುಕೊಂಡು ಬಾಗಲಕೋಟೆಯ ಕಾಲೇಜಿನಲ್ಲಿ ಸೀಟನ್ನು ಬಗಲಲ್ಲಿರಿಕೊಂಡು, ಆ ಊರಿನಲ್ಲಿ ನನ್ನ ಮೊದಲನೆಯ ವರ್ಷದ ವ್ಯಾಸಂಗಕ್ಕೆ ವಾಸ್ತವ್ಯ ಹೂಡಿದ್ದ  ದಿನಗಳವು. ಆಗಿನ್ನೂ ಹಳೆಯ ಬಾಗಲಕೋಟೆಯು ಮುಳುಗಡೆಯಾಗಿರಲಿಲ್ಲ. ನನ್ನ ವಿದ್ಯಾಭ್ಯಾಸ ಮುಗಿದಮೇಲೆ ಮುಳುಗಿತು! ಅಪ್ಪನಿಗೆ ಪರಿಚಯದವರ ಸಂಬಂಧಿಕರ ಮನೆಯೊಂದು ಅಲ್ಲಿತ್ತು, ಅವರ ಮನೆಯ ಆವರಣದಲ್ಲಿನ್ನೊಂದು ಒಂಟಿ ಮನೆಯೂ ಇದ್ದು, ನನ್ನ ಅದೃಷ್ಟಕ್ಕೊ ದುರದೃಷ್ಟಕ್ಕೋ ಅದು ಲಭ್ಯ ಇತ್ತಾದ್ದರಿಂದ ನನಗೆ ಅಲ್ಲಿ ವಾಸಿಸಲು ಅವರು ಅವಕಾಶ ನೀಡಿದ್ದರು. ಪುಕ್ಕಟೆಯಲ್ಲ, ತಿಂಗಳಿಗಿಷ್ಟು ಅಂತ ಬಾಡಿಗೆಯೂ ನಿಗದಿಯಾಗಿತ್ತು! ಆ ಮನೆಯ ಹತ್ತಿರದಲ್ಲೇ ಬಸ್ ನಿಲ್ದಾಣವೂ ಇದ್ದು ಅದಕ್ಕೆ ರಾಜ್ ಕುಮಾರ್ ಸ್ಟಾಪ್ ಅನ್ನುತ್ತಿದ್ದರು. ಅದ್ಯಾಕೆ ಆ ಹೆಸರು ಅಂದರೆ ನನ್ನ ರೂಮಿನ ಅತಿ ಹತ್ತಿರದಲ್ಲೇ ರಾಜಕುಮಾರ್ ಎಂಬ ಟೆಂಟ್ ಸಿನೆಮಾ ಮಂದಿರವೊಂದಿತ್ತು. ಅದು ಎಷ್ಟು ಹತ್ತಿರವಿತ್ತೆಂದರೆ ಸಿನೆಮಾದಲ್ಲಿನ ಹಾಡುಗಳು ಹಾಗೂ ಸಂಭಾಷಣೆಗಳು ನನಗೆ ಸ್ಪಷ್ಟವಾಗಿ ಕೇಳುತ್ತಿದ್ದವು! ಇದೂ ಅಲ್ಲದೆ ರೂಮಿನ ಎದುರಿಗೆ ಒಂದು ಯಡಿಯೂರು ಸಿದ್ಧಲಿಂಗೇಶ್ವರ ದೇವರ ಗುಡಿಯೂ ಇತ್ತು. ಗುಡಿಯಿದ್ದ ಮೇಲೆ ಅಲ್ಲಿ ಭಕ್ತರೂ ಬರುತ್ತಿದ್ದರು. ಅಲ್ಲಿಗೆ ಬರದ ಇನ್ನಿತರ ಭಕ್ತರನ್ನು ಆಕರ್ಷಿಸಲು ಲೌಡ್ ಸ್ಪೀಕರ್ ನಲ್ಲಿ ಹಾಡುಗಳು, ಭಕ್ತಿ ಗೀತೆಗಳು ಮೊಳಗುತ್ತಿದ್ದವು. ಒಟ್ಟಿನಲ್ಲಿ ದೇವರನ್ನು ಬಿಟ್ಟು ಅಲ್ಲಿ ಎಲ್ಲವೂ ಇದ್ದವೆನ್ನಿ. ದಿನವೂ ಸಂಜೆಯಾಗುತ್ತಲೇ ಅವೇ ಭಜನೆಗಳ  ಕೇಳಿ ಕೇಳಿ ನನಗೆ ಹಾಡುಗಳು ಬಾಯಿಪಾಠವಾಗಿದ್ದವು. ಈಗಲೂ ಅಕಸ್ಮಾತಾಗಿ ಆ ಹಾಡುಗಳನ್ನು ಕೇಳಿದರೆ ನನ್ನ ಮನಸ್ಸು ಭೂತಕಾಲಕ್ಕೆ ಹೋಗಿಬಿಡುತ್ತದೆ. ಆಗಿದ್ದ ವಾತಾವರಣ, ಆಗಿನ ಮನಸ್ಥಿತಿಗಳನ್ನೆಲ್ಲ ಮನಸ್ಸು ನೆನಪಿಸಿಕೊಳ್ಳುತ್ತ ಅದರಲ್ಲೇ  ಲೀನವಾಗಿ ಪುಳಕಗೊಳ್ಳುತ್ತೇನೆ. ಹಾಡುಗಳಿಗಿರುವ ಶಕ್ತಿಯೇ ಅಂಥದ್ದು. ಇರಲಿ…. ಮೊದಮೊದಲು ಅದೆಲ್ಲಾ ಗಲಾಟೆ ಅನಿಸಲಿಲ್ಲವಾದರೂ ತಿಂಗಳುಗಳು ಉರುಳಿ ಓದುವುದು ಜಾಸ್ತಿಯಾದಂತೆ ಒಂತರಹದ ತೊಂದರೆ ಅನಿಸತೊಡಗಿತು. ಅದೂ ಅಲ್ಲದೆ, ಮೇಲೆಲ್ಲ ಕೆಂಪು ಹೆಂಚಿನ ಹೊದಿಕೆಯಿಂದ ಅವೃತ್ತವಾಗಿದ್ದ ಆ ರೂಮಿನ ಮೇಲಿನಿಂದ ಗಿಡದಿಂದ ಉದುರಿದ ಎಲೆಗಳೂ ಹೆಂಚಿನ ಕಿಂಡಿಗಳಿಂದ ಒಳಗೆ ಹೇಗೋ ನುಸುಳಿ ನನ್ನ ಕೋಣೆಯ ನೆಲದ ಮೇಲೆ ಎಲೆಯ ಹಾಸಿಗೆಯನ್ನು ಸೃಷ್ಟಿಸುತ್ತಿದ್ದವು! 

ದಿನಕಳೆದಂತೆ ನನ್ನ ಮಿತ್ರ ವೃಂದವೂ ಹೆಚ್ಚತೊಡಗಿತು. ಅದೂ ಅಲ್ಲದೆ ಕೆಲವು ಮಿತ್ರರು ನನ್ನ ಆ ವಾಸ್ತವ್ಯದ ಅವಸ್ಥೆ ನೋಡಿ ಸಿಕ್ಕಾಪಟ್ಟೆ ಹಾಸ್ಯ ಮಾಡತೊಡಗಿದರು. ನನಗೂ ಸಿಟ್ಟು ಬಂದು ಆ ರೂಮನ್ನು ಬಿಟ್ಟು ಬೇರೆ ಕಡೆಗೆ ಹೋಗುವ ಯೋಚನೆ ಮಾಡಿದೆ. ಇಂಥದೇ ಯೋಚನೆಯಲ್ಲಿದ್ದ ಇನ್ನಿಬ್ಬರು ಗೆಳೆಯರ ಜೊತೆ ಸೇರಿ ಬೇರೆ ರೂಮನ್ನು ಬಾಡಿಗೆಗೆ ಹಿಡಿದೆವು. ಅದೊಂದು ಲಾಜ್ ಆಗಿತ್ತು. ಅದು ಬಾಗಲಕೋಟೆ ಶಹರದ ಮಧ್ಯಭಾಗದಲ್ಲೇ ಇತ್ತು, ಹತ್ತಿರದಲ್ಲೇ ಬಸ್ ಸ್ಟ್ಯಾಂಡು, ಹೀಗಾಗಿ ಎಲ್ಲ ಸೌಕರ್ಯಗಳು ಅಲ್ಲಿ ಲಭ್ಯವಿದ್ದವು. ಮಹಡಿಯ ಮೇಲಿನ ಒಂದು ರೂಮು ನಮ್ಮದು. ಅದನ್ನು ಬಿಟ್ಟು ಇನ್ನೂ ಕೆಲವು ರೂಮುಗಳು ಅಲ್ಲಿದ್ದವು. ಅದು ಹೆಸರಿಗೆ ಲಾಜ್ ಆಗಿದ್ದರೂ ಅಲ್ಲಿ ದಿನ ಬಾಡಿಗೆ ಲೆಕ್ಕಕ್ಕಿಂತ ತಿಂಗಳ ಬಾಡಿಗೆಗೆ ನಮ್ಮಂತಹ ಹುಡುಗರೇ ಅಧಿಕ ಸಂಖೆಯಲ್ಲಿದ್ದರು. ಅದು ನನಗೆ ಅರಿವಾಗಿದ್ದು ಮೊದಲ ದಿನ ಬೆಳ್ಳಂ ಬೆಳಿಗ್ಗೆ, ನಮ್ಮ ರೂಮುಗಳ ಮಧ್ಯದಲ್ಲಿ ರತ್ನದಂತೆ ಕಂಗೊಳಿಸುತ್ತಿದ್ದ ಏಕೈಕ ಶೌಚಾಲದ ಮುಂದೆ ತಮ್ಮ ಒತ್ತಡವನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನ ಮಾಡುತ್ತಾ, ಅದರ ಫಲವಾಗಿ ಕೆಟ್ಟದಾಗಿ ಮುಖಗಳನ್ನು ಮಾಡಿಕೊಂಡು, ಕೈ ಹೊಸೆಯುತ್ತಾ ತಮಗೊಂದೇ ಒಂದು ಅವಕಾಶ ಸಿಕ್ಕರೂ ಅಷ್ಟೇ ಸಾಕು ಅಂತ ಕಾದು ನಿಂತಿದ್ದ ಹುಡುಗರ ಪಾಳಿಯನ್ನು ನೋಡಿದಾಗ! ನಾನೂ ಮೊದಲನೇ ದಿನ ಕೈ ಹೊಸೆಯುತ್ತಲೇ ಅವರ ಹಿಂದೆಯೇ ಮೂಗು ಮುಚ್ಚಿಕೊಂಡು  ನಿಂತೆನಾದರೂ, ಮಾರನೆ ದಿನದಿಂದ ಬೆಳಿಗ್ಗೆ ಬೇಗ ಎದ್ದು ನನ್ನ ಕೆಲಸ ಮುಗಿಸುವ ಅಭ್ಯಾಸ ಮಾಡಿಕೊಂಡೆ. ಯಾಕೆಂದರೆ ಅಲ್ಲಿದ್ದವರಲ್ಲಿ ಬಹಳಷ್ಟು ಜನ ಬೆಳಿಗ್ಗೆ ಬೇಗ ಏಳುವುದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕರ ಎಂದೇ ನಂಬಿ ಅದನ್ನು ನಿತ್ಯ ಪಾಲಿಸುವವರಾಗಿದ್ದರು! 

ಎಲ್ಲ ಊರುಗಳಂತೆ ಇಲ್ಲಿಯೂ ಕೆಟ್ಟ ಹುಳುಗಳು ಇದ್ದವು. ಅಲ್ಲಿ ಸಿಕ್ಕಾಪಟ್ಟೆ ದಾದಾಗಿರಿ ನಡೆಯುತ್ತದೆಂದೂ, ತಾನು ಅದೆಲ್ಲವನ್ನು ತನ್ನ ಕಣ್ಣಾರೆ ಕಂಡಿದ್ದೆನೆಂದೂ, ಆ ಊರಿನ ಬಗ್ಗೆ ತನಗೆ ಮಾತ್ರ ಎಲ್ಲಾ ಗೊತ್ತು ಅಂತ ತಿಳಿದಿದ್ದ ದಿವಾಕರ ಹೇಳಿದ್ದ. ಅಥವಾ ಅವನಿಗೆ ಆ ಊರಿನ ಬಗ್ಗೆ ಎಲ್ಲಾ ತಿಳಿದಿದೆಯೆಂಬ ತಪ್ಪು ತಿಳುವಳಿಕೆಯಲ್ಲಿ ನಾವಿದ್ದೆವೇನೋ! ಇದೆ ಕಾರಣದಿಂದ, ಹೊಸದಾಗಿ ಊರಿನ ಮಧ್ಯಭಾಗದಲ್ಲಿ, ಅದೂ ಒಂದು ಲಾಜಿನಲ್ಲಿ ವಾಸ್ತವ್ಯ ಹೂಡಿದ್ದ ನಾವುಗಳು ಯಾವಾಗಲೂ ಸ್ವಲ್ಪ ಹುಶಾರಿನಲ್ಲೇ ಇರುತ್ತಿದ್ದೆವು. ನಾವು ಅಲ್ಲಿಗೆ ಬಂದಿದ್ದು ಕಲಿಯಲು, ನಮ್ಮಷ್ಟಕ್ಕೆ ನಾವಿದ್ದರಾಯ್ತು, ದುಷ್ಟರ ಸಹವಾಸ ಮಾತ್ರ ಮಾಡಬಾರದು ಅಂತ ನಾವಾಯ್ತು ನಮ್ಮ ತಿರುಗಾಟವಾಯ್ತ ಅಂತ ಅಲೆಯುತ್ತಾ, ಅಡ್ಡಾಡಿ ಸುಸ್ತಾಗಿ ಊಟ ಮಾಡುತ್ತಲೂ, ಪರೀಕ್ಷೆ ಹತ್ತಿರ ಬಂದಾಗ ಬೇಜಾರಾದರೂ ಹೇಗೋ ಸಂಭಾಳಿಸಿಕೊಂಡು ನಮ್ಮ ಶಕ್ತ್ಯಾನುಸಾರ ಅಭ್ಯಾಸ ಮಾಡಿಕೊಂಡಿದ್ದೆವು!  ಅಂಥದರಲ್ಲಿ ನಡೆದ ಎರಡು ಘಟನೆಗಳು ಅಚ್ಚಳಿಯದಂತೆ ನೆನಪಿನಲ್ಲುಳಿದಿವೆ.   

ನಾವೆಲ್ಲಾ ಆ ಅರಮನೆಗೆ ಬಂದು ಆಗಲೇ ಒಂದು ವಾರವಾಗಿತ್ತು. ಅಲ್ಲಿ ಎಲ್ಲದಕ್ಕೂ ಬಹು ಬೇಗನೆ ಹೊಂದಿಕೊಂಡುಬಿಟ್ಟೆವು. ಶಹರದಲ್ಲಿ ಮನೆಯ ಮಾಡಿ ಪೋಲಿ ಅಲಿಯದಿದ್ದರೆ ದ್ಯಾವ್ರು ಮೆಚ್ಚುವನೆ? ದಿನವೂ ಸಂಜೆ ರೂಂ ಗೆ ಬೀಗ ಜಡಿದು ಅಲ್ಲಿ ಇಲ್ಲಿ ಅಲಿಯುವುದೇ ಒಂದು ದೊಡ್ಡ ಉಮೇದಿಯಾಗಿತ್ತು. ಎಷ್ಟಂದ್ರೂ ಹೊಸ ಹುರುಪು! ಹೀಗೆ ಅವತ್ತೂ ಅಲೆದು ರಾತ್ರಿ ಎಲ್ಲೋ ಊಟ ಮಾಡಿ ಹತ್ತು ಗಂಟೆಯ ಸುಮಾರಿಗೆ  ರೂಮಿಗೆ ಬಂದರೆ, ಯಾರೋ ದುರುಳರು ಬೀಗ ಮುರಿದು ಒಳಗೆಲ್ಲ ಝಳ  ಝಳ ಮಾಡಿದ್ದರು! ನಮ್ಮ ರೂಂ ಕಳುವಾಗಿತ್ತು. ಕಳ್ಳ ಪ್ಯಾಂಟು ಶರ್ಟ್ ಗಳನ್ನೇ ಜಾಸ್ತಿ ಕದ್ದಿದ್ದ. ಅದರ ಜೊತೆಗೆ ಒಂದು ಗಡಿಯಾರ, ಎರಡು ಕ್ಯಾಲ್ಕುಲೇಟರ್ ಹೀಗೆ ಒಂದಿಷ್ಟು ಬೆಲೆಬಾಳುವ ವಸ್ತುಗಳನ್ನೂ ಕದ್ದಿದ್ದ. ನಮಗೆಲ್ಲ ತುಂಬಾ ಬೇಜಾರಾಗಿತ್ತು. ಎರಡು ಮೂರು ದಿನ ಪೋಲಿ ಅಲಿಯುವುದು ಬಿಟ್ಟು ರೂಮಿನಲ್ಲೇ ಕುಳಿತೆವು. ಆದರೆ ಎಷ್ಟು ದಿನ ಅಂತ ಅದನ್ನೇ ನೆನೆದು ಅಳುವುದು? ಅಂತ ತತ್ವಜ್ಞಾನ ಹೇಳಿಕೊಂಡು ಮತ್ತೆ ಅಲೆಯಲು ಶುರು ಮಾಡಿದೆವು! 

ಅವತ್ತೊಂದು ವಿಚಿತ್ರ ಸಂಭವಿಸಿತು. ನಮ್ಮ ಲಾಜಿನ ಸ್ವಲ್ಪ ದೂರದಲ್ಲೇ ಹೊರಟಿದ್ದಾಗ ನಮ್ಮ ಮುಂದಿದ್ದ ಒಬ್ಬ ವ್ಯಕ್ತಿಯ ಪ್ಯಾಂಟು ಶರ್ಟು ಎಲ್ಲೋ ನೋಡಿದಂತೆ ಅನಿಸಿ ಸ್ವಲ್ಪ ಹತ್ತಿರಕ್ಕೆ ಹೋದಾಗ ಅದು ನಮ್ಮ ರೂಮಿನಿಂದ ಕಳುವಾಗಿದ್ದ ನನ್ನ ಗೆಳೆಯನ ಪ್ಯಾಂಟು ಶರ್ಟ ಅಂತ ಗೊತ್ತಾಗಲು ಜಾಸ್ತಿ ಸಮಯ ಹಿಡಿಯಲಿಲ್ಲ. ಕಳ್ಳ ಸಿಕ್ಕಿ ಬಿದ್ದಿದ್ದ! ನನಗೆ ಈಗಲೂ ಆಶ್ಚರ್ಯವಾಗುತ್ತೆ. ಅದು ಹೇಗೆ ಆ ಕಳ್ಳ ನಮ್ಮ ಎದುರಿಗೆ ನಮ್ಮ ಕಣ್ಣಿಗೆ ಕಂಡ? ಅದೂ ಅಲ್ಲದೆ, ಅವನು ಕದ್ದಿದ್ದ ಪ್ಯಾಂಟಿನ ಜೊತೆಗೆ ಬೇರೆ ಶರ್ಟ್ ಹಾಕಿದ್ದರೂ ನಮಗದರ ಗುರುತೇ ಸಿಗುತ್ತಿರಲಿಲ್ಲ. ಅವನನ್ನು ಬೆನ್ನು ಹತ್ತಿ ಅವನೆಲ್ಲಿಗೆ ಹೋಗುವನೋ ನೋಡುವ ನಿರ್ಧಾರ ಮಾಡಿಯಾಗಿತ್ತು. ನಮ್ಮ ಧೈರ್ಯ ಮೆಚ್ಚುವಂಥದ್ದೆ ಆಗಿತ್ತು. ಯಾಕೆಂದರೆ ಅಲ್ಲಿ ದಾದಾಗಿರಿ ನಡೆಯುತ್ತದೆಂದು ದಿವಾಕರ್ ಬೇರೆ ಹೆದರಿಸಿದ್ದ. ಅದೂ ಅಲ್ಲದೆ ನಾವು ಮೂರೂ ಜನ ಪಾರ್ಟನರ್ ಗಳು ಒಬ್ಬರಿಗಿಂತ ಒಬ್ಬರು ಕಡ್ಡಿ ಪೈಲ್ವಾನರು. ನಮ್ಮ ಧೈರ್ಯಕ್ಕೆ ಇದ್ದ ಒಂದೇ ಕಾರಣವೆಂದರೆ ಅವತ್ತು ನಮ್ಮ ಜೊತೆಗಿದ್ದ ಸೀನು ಎಂಬ ಇನ್ನೊಬ್ಬ ಗೆಳೆಯ. ಅವನಿಗೆ ಕರಾಟೆ ಬರುತ್ತಿತ್ತು ಅಂತ ನಮಗೆ ತಿಳಿದಿತ್ತು! ಅದೂ ಅಲ್ಲದೆ ಅವನು ನಮಗಿಂತ ಒಂದು ವರ್ಷ ಮೊದಲಿನಿಂದಲೇ ಆ ಊರಿನಲ್ಲಿದ್ದ. ಹೀಗಾಗಿ ಅವನಿಗೆ ಅಲ್ಲಿನ ಗಲ್ಲಿಗಳು ನಮಗಿಂತ ಚೆನ್ನಾಗಿ ಗೊತ್ತಿದ್ದವು. ಏನಾದರೂ ಆದರೆ ತಪ್ಪಿಸಿಕೊಂಡು ಓಡಿ ಹೋಗಲು ನಮಗವನೆ ದಾರಿ ತೋರಿಸುತ್ತಾನೆಂಬ ಧೈರ್ಯ ನಮಗೆ!        

ಆ ಕಳ್ಳ ಮುಂದೆ ಮುಂದೆ ಹೊರಟಿದ್ದ. ನಾವು ಅವನ ಹಿಂದೆ ಮುಫ್ತಿಯಲ್ಲಿದ್ದ ಪೋಲೀಸರ ಥರ ಬೆನ್ನಟ್ಟಿದ್ದೆವು. ಅವನು ಅಲ್ಲಿ ಇಲ್ಲಿ ಸಂದಿ ಗೊಂದಿ ಹಾದು ಕಡೆಗೂ ಒಂದು ಕಡೆ ನಿಂತ. ನಾವು ಕೂಡಲೇ ಅವನಿಗೆ ದಿಗ್ಬಂಧನ ಹಾಕಿದ್ದೆವು. ಅವನ ಜೊತೆ ವಾದ ಶುರುವಾಗುತ್ತಲೂ ಕಳ್ಳನಿಗೆ ತಾನು ಸಿಕ್ಕಿಬಿದ್ದ ಅರಿವಾಗಿತ್ತು. ಆದರೂ ಅದು ಅವನದೇ ಏರಿಯ ಆಗಿದ್ದರಿಂದ ನಮಗೆ ಆ ಭಯವೂ ಇತ್ತು. ಅಷ್ಟೊತ್ತಿಗೆ ಅಲ್ಲೊಬ್ಬ ವ್ಯಕ್ತಿ ಬಂದು ಏನಾಯ್ತು ಅಂತ ಕೇಳಲು ನಾವು ಅವನಿಗೆ ನಮ್ಮ ದೂರು ಹೇಳಿದ್ದೆ ತಡ ಅವನು ಹಿಂದೆ ಮುಂದೆ ನೋಡದೆ ಆ ಕಳ್ಳನಿಗೆ ಕಪಾಳಕ್ಕೆ ಎರಡು ಬಾರಿಸಿಬಿಟ್ಟ! ಕಳ್ಳನಿಗಾದಂತೆ ನಮಗೂ ಅದು ಅನಿರೀಕ್ಷಿತವಾಗಿತ್ತಾದರೂ ಒಂದು ತರಹ ಖುಷಿಯಾಗಿತ್ತು. ಅವನು ನಮ್ಮನ್ನು ಕರೆದು "ನೀವೇನೂ ತಲಿ ಕೆಡ್ಸಿಕೋಬ್ಯಾಡ್ರಿ. ಅ ಕಳ್ಳ ಸೂ… ಮಗನ ಹತ್ರ ನಿಮ್ಮ ಸಾಮಾನು ಇಸಕೊಂಡು ಕೊಡೊ ಜವಾಬ್ದಾರಿ ನಂದು. ಅಂವಾ ಎಲ್ಲಿರ್ತಾನ ಅನ್ನೋದು ನನಗ ಗೊತ್ತು." ಅಂದ. ನಮ್ಮ ಫೋನ್ ನಂಬರ್ ಕೂಡ ತೊಗೊಂಡ, ಅವನದೂ ನಂಬರ್ ಕೊಟ್ಟ. ಕಳ್ಳನಿಗೇ ಕಪಾಳಕ್ಕೆ ಹೊಡೆದವನು ಆ ಏರಿಯಾದ ದಾದಾ ಆಗಿರದೆ ಬೇರೇನೂ ಆಗಿರಲು ಸಾಧ್ಯವೇ ಇಲ್ಲವೆಂದು ನಮಗೆ ಖಾತ್ರಿಯಾಗಿತ್ತು. ಅಂಥ ದಾದಾನ ಸಂಪರ್ಕಕ್ಕೆ ನಾವು ಬಂದಿದ್ದೂ ನಮಗೊಂಥರ ಅಭಿಮಾನದ ಸಂಗತಿಯೇ ಆಗಿತ್ತು!

ನಮ್ಮ ನಮ್ಮ ಸಾಹಸಗಳ ಕನವರಿಸುತ್ತ ರೂಮಿಗೆ ತೆರಳಿದೆವು. ಎರಡು ದಿನಗಳಾದ ಮೇಲೆ ಆ ದಾದಾ ನಮ್ಮಲ್ಲೊಬ್ಬನನ್ನು ಕರೆದು ಆ ಸಾಮಾನುಗಳಲ್ಲಿ ಕೆಲವನ್ನು ಆ ಕಳ್ಳ ಅಡವಿಟ್ಟಿದ್ದಾನೆಂತಲೂ, ಅದನ್ನು ಬಿಡಿಸಿ ತರಲು ಸ್ವಲ್ಪ ದುಡ್ಡು ಬೇಕೆಂದು ನಮ್ಮ ಮುಂದೆ ಡಿಮಾಂಡ್ ಇಟ್ಟ! ಕಲಿಯುತ್ತಿದ್ದ ನಮಗೆ ಆಗಿನ ಕಾಲಕ್ಕೆ ಅದು ಸ್ವಲ್ಪ ಜಾಸ್ತಿಯೇ ಅನಿಸುವ ಮೊತ್ತವಾಗಿತ್ತಾದರೂ ನಮ್ಮ ವಸ್ತುಗಳು ನಮಗೆ ವಾಪಸ್ಸು ದೊರಕುವವೆಂಬ ಆಸೆಯಿಂದ ಎಲ್ಲರೂ ಇಷ್ಟಿಷ್ಟು ಅಂತ ಹಾಕಿ ಅವನ ಕೈಗೆ ಸುರಿದೆವು. ಅವನು ಮಾತಿಗೆ ತಪ್ಪಲಿಲ್ಲ! ಎರಡೇ ದಿನಗಳಲ್ಲಿ ಒಂದು ಗಂಟನ್ನು ತಂದು ಕೊಟ್ಟು ಲಗುಬಗೆಯಿಂದ ಹೊರಟು ಹೋದ. ನಾವು ಖುಷಿಯಲ್ಲಿ ನಮ್ಮ ರೂಮಿಗೆ ಹೋಗಿ ಗಂಟು ಬಿಡಿಸಿದೆವು. ನಮ್ಮೆಲ್ಲರ ಕಳೆದು ಹೋದ ಬಟ್ಟೆ ಬರೆಗಳಲ್ಲಿ ಸುಮಾರು ವಾಪಸ್ಸು ಬಂದಿದ್ದವು. ಆದರೆ…. ಅವೆಲ್ಲವನ್ನೂ ಕಳ್ಳ ತನ್ನ ಮೈಗೆ ಹೊಂದುವಂತೆ ಮಾರ್ಪಡಿಸಿಕೊಂಡಿದ್ದ! ಹೀಗಾಗಿ ಅವು ವಾಪಸ್ಸು ಸಿಕ್ಕಿದ್ದು ಏನೇನೂ ಉಪಯೋಗಕ್ಕೆ ಬರಲಿಲ್ಲ. ಮಿಕ್ಕಂತೆ ಒಂದು ಸಣ್ಣ ಟೈಮ್ ಪೀಸ್ ವಾಪಸ್ಸು ಸಿಕ್ಕಿತು. ಕಳೆದಿದ್ದ ಎರಡು ಕ್ಯಾಲ್ಕುಲೇಟರ್ ಗಳೂ ವಾಪಸ್ಸು ಬಂದಿರಲಿಲ್ಲ. ಇವೆಲ್ಲದರ ಜೊತೆಗೆ ಹೋಗಿದ್ದು ಆ ದಾದಾನಿಗೆ ಕೊಟ್ಟ ದುಡ್ಡು!  ಈ ಸಲ ನಮ್ಮ ಕಣ್ಣ ಮುಂದೆಯೇ ಕಳುವಾಗಿತ್ತು!     
   
ಇದಾಗಿ ಕೆಲವು ದಿನಗಳಾಗಿದ್ದವು. ತಡ ರಾತ್ರಿಯವರೆಗೆ ಐದಾರು ಜನ ಸ್ನೇಹಿತರು ಸೇರಿಕೊಂಡು ಸಾಮೂಹಿಕ ಅಭ್ಯಾಸ (ಕಂಬೈನ್ಡ್ ಸ್ಟಡಿ ಗೆ ಈ ತರಹ ಅನ್ನಬಹುದೇನೋ!) ಮಾಡುತ್ತಿದ್ದೆವು. ಅದರಲ್ಲಿ ನಮ್ಮ ರೂಮಿನ ಸಂಗಾತಿಗಳೊಂದಿಗೆ ಬೇರೆ ಕಡೆಯಿಂದಲೂ ಓದಲು ಅಂತ ಬಂದವರೂ ಇದ್ದರೂ.  ಸಾಮೂಹಿಕ ಅಂದ ಮೇಲೆ ಸುಮ್ಮನೆ ಕುಳಿತು ಓದಲಾದೀತೇ? ಅಲ್ಲಿ ಬೇರೆ ಬೇರೆ ಗಹನವಾದ ವಿಷಯಗಳು ಚರ್ಚೆಯಾಗುತ್ತಿದ್ದವು. ಹೀಗೆ ಏನೋ ಮಾತಾಡುವಾಗ ನಮ್ಮಲ್ಲಿ ಇಬ್ಬರು ಗೆಳೆಯರ ಮಧ್ಯೆ ವಾದ ವಿವಾದಗಳು ಶುರುವಾಗಿ ತುಂಬಾ ಕಾವೇರಿತು. ಅದನ್ನು ತಣಿಸುವ ನಮ್ಮ ಪ್ರಯತ್ನಗಳ್ಯಾವವೂ ಫಲಿಸಲಿಲ್ಲ. ಕೊನೆಗೆ ಅದರಲ್ಲೊಬ್ಬ "ಮಾಡ್ತೀನಿ ತಡಿ ನಿನಗ" ಅಂತ ರೂಮಿನಿಂದ ಹೊರಬಿದ್ದ. ಆಗಲೇ ರಾತ್ರಿ ಒಂದಾಗಿತ್ತು. ಸಿಟ್ಟಿನಿಂದ ಹೋಗಿದ್ದವನು ನಾಳೆ ಬೆಳಿಗ್ಗೆ ಕೋಪ ತಣ್ಣಗಾದ ಮೇಲೆ ಬರುತ್ತಾನೆ ಎಂಬ ನಮ್ಮ ನಿರೀಕ್ಷೆಯನ್ನು ಸುಳ್ಳು ಮಾಡಿದ್ದನವನು. ಎರಡು ಗಂಟೆಯ ಸುಮಾರಿಗೆ ಮತ್ತೆ ನಮ್ಮ ರೂಮಿಗೆ ಬಂದ. ಅವನೊಬ್ಬನೇ ಅಲ್ಲ, ಜೊತೆಗೆ ಮೂರು ಜನ ದಾದಾಗಳೂ ಇದ್ದರು! ನೋಡಲು ನಮ್ಮಷ್ಟೇ ದಪ್ಪಗಿದ್ದರೂ(?) ಅವರ ಹಾವಭಾವಗಳನ್ನು ನೋಡಿದರೆ ಅವರು ಏನು ಮಾಡಲೂ ಹೇಸಲಾರರು ಎಂದು ನಮಗೆ ಸ್ಪಷ್ಟವಾಗಿತ್ತು. ಇಂಥದೆಲ್ಲ ನೋಡಿರದ ನಮಗೆ ಮೈ ಬೆವರಿತ್ತು. ದಿವಾಕರ ಹೇಳಿದ್ದು ಸತ್ಯ ಎನಿಸಿತು. ಇನ್ನೂ ಏನೇನಾಗುತ್ತೋ, ನಮ್ಮನ್ನೆಲ್ಲ ಪೊಲೀಸರು ಹಿಡಿದುಕೊಂಡು ಹೋಗುವ ದೃಶ್ಯ ಕಣ್ಣ ಮುಂದೆ ಬಂದು ಕಂಗಾಲಾದೆವು. ಒಬ್ಬ ದಾದಾ ಕೇಳಿದ 

"ಯಾರಾಂವಾ? ತೋರ್ಸು…"
"ದಾದಾ ಇಲ್ಲೇ ಕುಂತಾನ್ ನೋಡ್ರಿ. ನನಗ ಧಮಕಿ ಕೊಡ್ತಾನ"
"ಯಾಕಪಾ ಹೆಂಗ್ ಕಾಣತೈತಿ? ಬಿಡಲೆನ್ ಒಂದು?" ಒಬ್ಬ ದಾದಾ ಶುರು ಹಚ್ಚಿಕೊಂಡ. ನಾವು ಇನ್ನೂ ಬೆವರಿದೆವು. ಓಡಿ ಹೋಗಬೇಕೆಂದರೆ ನಮ್ಮ ರೂಮಿಗೆ ಇದ್ದುದೊಂದೇ ಬಾಗಿಲು, ಅದಕ್ಕಂಟಿಕೊಂಡೆ ಆ ದಾಂಡಿಗರು ನಿಂತಿದ್ದರಲ್ಲ! ಆದರೆ ಇನ್ನೊಬ್ಬ ಗೆಳೆಯ ಹೆದರಲಿಲ್ಲ, ತನ್ನ ಸಮಯಪ್ರಜ್ಞೆ ಮೆರೆದ! ತನಗೆ ಪರಿಚಯವಿದ್ದ ಕೆಲವು ದಾದಗಳ ಹೆಸರು ಹೇಳಿದ. ಅವುಗಳಲ್ಲಿ ಕೆಲವು ಹೆಸರುಗಳು ಇಲ್ಲಿದ್ದವರ ಕಿವಿ ನಿಮಿರಿಸಿದವು. ತನಗೆ ಗೊತ್ತಿದವರಿಗೂ ಹಾಗೂ ಇವರಿಗೂ ನಂಟು ಇದ್ದುದನ್ನು ಮನಗಂಡು, ಅವರಿಗೆ ಬೆಣ್ಣೆ ಹಚ್ಚತೊಡಗಿದ. ಕೂಡಲೇ ಅವನಿಗೆ ಹೊಡೆಯಲು ಬಂದಿದ್ದ ದಾದಾಗಳ ಮನಪರಿವರ್ತನೆ ಆಯ್ತು! ಅವರು ಜಗಳವಾಡಿದ್ದ ಗೆಳೆಯರಿಬ್ಬರಿಗೂ ಬುಧ್ಧಿ ಹೇಳಿ ಹಿಂಗೆಲ್ಲ ಜಗಳ ಮಾಡಬೇಡಿ ಅಂತ ಗದರಿ ಹೊರಟು ಹೋದರು. ದೊಡ್ಡದೊಂದು ಕಲಹವಾಗುವುದೆಂದು ನಿರೀಕ್ಷಿಸಿದ್ದ ನಮಗೆ ಸ್ವಲ್ಪ ನಿರಾಶೆಯಾಯ್ತು!

ಈ ಎರಡು ಘಟನೆಗಳಿಂದ ದಾದಾಗಿರಿಯ ಬಗ್ಗೆ ಒಂದಂತೂ ಸ್ಪಷ್ಟವಾಗಿತ್ತು. ಆ ಜಗತ್ತಿನಲ್ಲಿರುವವರ ಮೂಲ ಮಂತ್ರ ಹೆದರಿಕೆ ಹುಟ್ಟಿಸುವುದು ಅಷ್ಟೇ. ಹೊಡೆದಾಡಿ ರಕ್ತ ಹರಿಸುವುದಲ್ಲ! ಈ ಘಟನೆಗಳ ದೆಸೆಯಿಂದ ನಮಗೂ ಕೆಲವು ದಾದಾಗಳ ಹೆಸರು ಗೊತ್ತಾಗಿದ್ದರಿಂದ ಮುಂದಿನ ದಿನಗಳಲ್ಲಿ ಬಹಳ ಧೈರ್ಯದಿಂದಿದ್ದೆವು! ದಿವಾಕರನಂತೆ ನಾವೂ ಇಲ್ಲಿನ ದಾದಾಗಿರಿ ನೋಡಿದ್ದೇವೆ ಅಂತ ಕತೆಗಳ ಹೇಳಿ, ಅದನ್ನು ಬೇರೆಯವರು ಬಾಯಿ, ಕಣ್ಣು ಬಿಟ್ಟುಕೊಂಡು ಕೇಳುವಾಗ ಒಂದು ತರಹದ ವಿಚಿತ್ರ ಆನಂದ ಅನುಭವಿಸತೊಡಗಿದೆವು! 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

6 Comments
Oldest
Newest Most Voted
Inline Feedbacks
View all comments
Basavaraj H Mulagund
Basavaraj H Mulagund
8 years ago

its very intersting……………………..

ಗುರುಪ್ರಸಾದ ಕುರ್ತಕೋಟಿ

ಬಸವರಾಜ, ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು!

Vitthal Kulkarni
Vitthal Kulkarni
8 years ago

ಮಸ್ತ ಅನಸ್ತು ಓದಿ! ಪ್ರಶಾಂತ ಹೇಳಿಧಂಗ ನಮ್ಮ ಧಾರವಾಡ ಕನ್ನಡದಾಗ ಇದ್ದ್ರ ಇನ್ನು ಮಸ್ತ ಅನಸ್ತಿತ್ತು. ಕೆಳಿಗಿಂದ ಲೈನ್ ಛೊಲೊ ಬರದಿರಿ..
 ೧ ಬಾಗಲಕೋಟೆಯು ಮುಳುಗಡೆಯಾಗಿರಲಿಲ್ಲ. ನನ್ನ ವಿದ್ಯಾಭ್ಯಾಸ ಮುಗಿದಮೇಲೆ ಮುಳುಗಿತು!
 ೨ ಬೆಳಿಗ್ಗೆ ಬೇಗ ಏಳುವುದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಹಾನಿಕರ ಎಂದೇ ನಂಬಿ ಅದನ್ನು ನಿತ್ಯ ಪಾಲಿಸುವವರಾಗಿದ್ದರು! 
 ೩ ಶಹರದಲ್ಲಿ ಮನೆಯ ಮಾಡಿ ಪೋಲಿ ಅಲಿಯದಿದ್ದರೆ ದ್ಯಾವ್ರು ಮೆಚ್ಚುವನೆ?

ಗುರುಪ್ರಸಾದ ಕುರ್ತಕೋಟಿ

ವಿಟ್ಠಲ, ನಿಮ್ಮ ಅನಿಸಿಕೆ ಕೇಳಿ ಭಾಳ ಖುಷಿ ಆತು! ನಾನು ಯಾವ ಸಾಲು ಭಾರಿ ಬರ್ದೀನಿ ಅಂತ ನನ್ನ ಬೆನ್ನ್ ನಾನ ಚಪ್ಪರಿಸಿಕೊಂಡಿದ್ದೆ, ಅದಕ್ಕ ನೀವು  ಬೆನ್ನ್ ಚಪ್ಪರಿಸಿದ್ದು ಇನ್ನೂ ಖುಷಿ ಕೊಡ್ತು! 🙂 ಧನ್ಯವಾದಗಳು!  

umesh desai
umesh desai
8 years ago

ಗುರುವೇ ನಿಮ್ಮ ಅನುಭವ ರಸಾಮೃತ ಛಂದ ಅದ.

ಇಂಜೀನೀಯರ್ ಆದಾವರಿಗೆ ಈ ಅನುಕೂಲ ಇರತದ ಬ್ಯಾರೆ ಬ್ಯಾರೆ ಊರು ಅಲ್ಲಿ ಮಂದಿ ಊಟ..

ಗುರುಪ್ರಸಾದ ಕುರ್ತಕೋಟಿ
Reply to  umesh desai

ದೇಸಾಯರ, ನಿಮ್ಮ ಅನಿಸಿಕೆ ಓದಿ ಖುಷಿ ಆತು! ಹೌದು ನೀವು ಹೇಳಿದಂಗ ಬ್ಯಾರೆ ಊರಾಗ ಎಲ್ಲಾ ನಮೂನಿ ಅನುಕೂಲ ಇರತದ ಅದರ ಜೊತಿ ಅನಾನುಕೂಲನೂ ಭಾಳ ಇರತಾವು. ಈಗ ಅವ್ನ ನೆನಸಿಕೊಂಡ್ರ ನಗಿ ಬರ್ತದ. ಆದ್ರ ಆ ಪರಿಸ್ಥಿತಿಯೊಳಗ  ಇದ್ದಾಗ …. !? 🙂    

6
0
Would love your thoughts, please comment.x
()
x