ಜನ ಸೇರಿ ಕೊಂದ ಗಜಪುತ್ರಿಯ ಕಥೆ!: ಅಖಿಲೇಶ್ ಚಿಪ್ಪಳಿ


[ಶಿರಸಿ-ಹಾನಗಲ್-ಸೊರಬ ಗಡಿಭಾಗದಲ್ಲಿ ಮಾನವ ಚಟುವಟಿಕೆಗಳಿಂದಾಗಿ ದಿಕ್ಕುತಪ್ಪಿದ ಆನೆಮರಿ ಪ್ರಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ, ತನಿಖಾ ಮಾದರಿಯಲ್ಲಿ ಸತ್ಯವನ್ನು ಕಂಡು ಹಿಡಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ದಿನಾಂಕ:27/10/2015ರಿಂದ 31/10/2015ರ ವರೆಗೆ ಮಾಮೂಲಿ ದಿನಪತ್ರಿಕೆಗಳಲ್ಲಿ ಅರಣ್ಯ ಇಲಾಖೆ ಹೇಳಿದ ವಿಷಯಗಳನ್ನು ಮಾತ್ರ ಸತ್ಯವೆಂದು ಪರಿಗಣಿಸಿ ವರದಿ ತಯಾರಿಸಿ ಎಲ್ಲಾ ಪತ್ರಿಕೆಗಳು ಪ್ರಕಟಿಸಿದ್ದವು. ಇಲಾಖೆಯ ವೈಫಲ್ಯವನ್ನಾಗಲೀ ಅಥವಾ ಸ್ಥಳೀಯರ ಮೌಢ್ಯದಿಂದಾದ ಅವಘಡವನ್ನಾಗಲಿ ಯಾವುದೇ ಪತ್ರಿಕೆ ವರದಿ ಮಾಡಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ].

ಗಾಂಧಿಜಯಂತಿಯನ್ನು ಆಚರಿಸಿ, ದೇಶಕ್ಕೆಲ್ಲಾ ಅಹಿಂಸೆಯ ಪಾಠ ಹೇಳಿ ಸುಸ್ತಾದ ನಾಯಕಮಣಿಗಳು ವಿರಮಿಸುವ ಹೊತ್ತಿನಲ್ಲೇ, ರಾಜ್ಯ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳು ವನ್ಯಜೀವಿ ಸಪ್ತಾಹವೆಂಬ ಸರ್ಕಾರಿ ಶ್ರಾದ್ಧವನ್ನು ಆಚರಿಸುವ ಅನಿವಾರ್ಯತೆಯಲ್ಲಿ ಸಿಲುಕಿ ನಲುಗಿದ್ದರು, ಸಪ್ತಾಹದ ಆಚರಣೆಗಾಗಿ ಖರ್ಚು ಮಾಡಿ ಭೇಷ್ ಎನಿಸಿಕೊಳ್ಳಲು ದುಡ್ಡಿಗೇನು ಕೊರತೆಯಿರಲಿಲ್ಲ ಈ ಐಎಫ್‍ಎಸ್ ಟೋಳಿಗಳಿಗೆ. ಕೆಳಗಿನ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದರಷ್ಟೇ ಸಾಕು, ತಿಂಗಳಿಡೀ ಒಟ್ಟು ಮಾಡಿದ ಗಿಂಬಳದ ಒಂದು ಭಾಗವನ್ನು ದೇಣಿಗೆಯೆಂದು ತಿಳಿದು ಧಾರೆಯರೆದು ಧನ್ಯರಾಗುತ್ತಾರೆ. ಆನೆ ಬಿಡಾರದ ಆನೆಗಳಿಗೆ ಬಲವಂತದ ಓಟದ ಸ್ಪರ್ಧೆ ಏರ್ಪಡುತ್ತದೆ. ಗೆದ್ದಾನೆಗಳಿಗೆ ಬಹುಮಾನ ನೀಡಿ, ಫೋಟೋ ತೆಗೆಸಿಕೊಂಡ ಅಧಿಕಾರಿ-ವಂದಿಮಾಗಧರು ದಾಖಲೆಯ ರೂಪದಲ್ಲಿ ಅದೇ ಫೋಟೋವನ್ನು ಫೈಲಿಗೆ ಸೇರಿಸಿ, ಕೆಲವರು ಫೇಸ್ ಬುಕ್, ವ್ಯಾಟ್ಸ್ ಅಪ್‍ಗೆ ವರ್ಗಾಯಿಸಿ ಲೈಕು ಕಾಮೆಂಟುಗಳಿಗೆ ವೈಟ್ ಮಾಡುತ್ತಾರೆ. ವನ್ಯಜೀವಿ ಸಪ್ತಾಹ ಆಚರಿಸಿದ ವರದಿಯೂ ಮೇಲಿನ ಮೇಲಾಧಿಕಾರಿಗಳಿಗೆ ವರ್ಗಾಯಿಸಿ, ನಿರುಮ್ಮಳರಾಗುತ್ತಾರೆ. ಇದೇ ಹೊತ್ತಿನಲ್ಲಿ, ದಸರಾ ಹಬ್ಬದಲ್ಲಿ ಮಿಂದೆದ್ದು ಮಲಗಿದ ನಾಗರೀಕ ಸಮಾಜ ಬರಲಿರುವ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆಗಾಗಿ ಭರದ ತಯಾರಿಯಲ್ಲಿತ್ತು. ನಾಡು-ನುಡಿ ರಕ್ಷಿಸುವ ಮಾತನಾಡಲು ಆಡಳಿತ ಯಂತ್ರ ಅದೇ ಹಳೇ ಕ್ಯಾಸೆಟ್ಟಿನ ಬಾಯಿಪಾಠದ ತಯಾರಿ ನಡೆಸುತ್ತಿತ್ತು.

ಸೊರಬ-ಹಾನಗಲ್-ಶಿರಸಿಯ ಗಡಿವ್ಯಾಪ್ತಿಯಲ್ಲಿ ಒಂದಿಷ್ಟು ಆನೆ ಹಿಂಡು ಮರಿಗಳ ಸಮೇತ ಬೀಡು ಬಿಟ್ಟಿದ್ದವು. ಅಕ್ಟೋಬರ್ 27ರ ಮುಂಜಾವಿನಲ್ಲಿ ಪಕ್ಕದ ಸಂತೊಳ್ಳಿ-ನೇರಲಗಿ ಊರಲ್ಲಿ ಅದೇ ದಿನ ಸೀಗೆ ಹುಣ್ಣಿಮೆಯ ಹಬ್ಬ ಜೋರಾಗಿ ನಡೆದಿತ್ತು. ಮೌಢ್ಯಾಧಾರಿತ ಹಬ್ಬಗಳಿಗೆ ಯಾವುದೇ ನಿರ್ಧಿಷ್ಟ ಮೌಲ್ಯಗಳೇ ಇರುವುದಿಲ್ಲ. ಪಟಾಕಿ ಹೊಡೆಯುವುದು ಕಡ್ಡಾಯವೆಂಬಂತೆ ರೂಢಿಯಾಗಿತ್ತು. ಪಟಾಕಿ ಸದ್ದಿಗೆ ಬೆದರಿದ ಕಾಡಾನೆಗಳು ಓಡಿದವು.  ಇನ್ನೂ ತಿಂಗಳು ತುಂಬದ ಹೆಣ್ಣು ಮರಿಯೊಂದು ಗಾಬರಿಯಿಂದ ಓಡಲಾಗದೆ ನಿಂತು ಬಿಟ್ಟಿತು. ಇಷ್ಟೇ ಆಗಿದ್ದರೆ, ಪಟಾಕಿ ಸದ್ದು ಅಡಗಿದ ನಂತರ ತಾಯಾನೆಗಳು ಬಂದು ಮರಿಯನ್ನು ತಮ್ಮ ಸಂಗಡ ಕರೆದೊಯುತ್ತಿದ್ದವು. ಸೀಗೆ ಹುಣ್ಣಿಮೆಯ ಅಮಲಿನಲ್ಲಿದ್ದ ಕೋತಿಬುದ್ಧಿಯ ಜನರ ಕಣ್ಣಿಗೆ ಆನೆಮರಿ ಬಿತ್ತು. ದೊಡ್ಡಾನೆಗಳು ಬಂದಾಗ ದಿಕ್ಕಾಪಾಲಾಗಿ ಓಡುವ ಜನ, ಅಸಾಯಕತೆಯಿಂದ ಬೆದರಿ ನಿಂತಿರುವ ಮುದ್ದುಮರಿಯನ್ನು ನೋಡಿದರು, ಉಮೇದಿಯಿಂದ ಮರಿಯನ್ನು ಹೆಡೆಮುರಿ ಕಟ್ಟಿ ಹಿಡಿದರು. ಸಾಲದೆಂಬಂತೆ ಊರಿಗೆ ಒಯ್ದರು. ಕುಂಕುಮ ಹಚ್ಚಿ ಪೂಜೆ ಮಾಡುವ ಮೂಲಕ ಮೌಢ್ಯದ ಮೆಟ್ಟಿಲ ತುದಿಯನ್ನೇರಿದರು. ರಣಕೇಕೆ ಹಾಕುತ್ತಾ ಊರ ತುಂಬಾ ಮೆರವಣಿಗೆ ಮಾಡಿದರು. ಇಷ್ಟೂ ಸಾಲದೆಂಬಂತೆ ಬಲವಂತವಾಗಿ ಅಕ್ಕಿ-ಬಾಳೆಹಣ್ಣುಗಳನ್ನು ಮರಿಯ ಬಾಯಿಗೆ ತುರುಕಲಾಯಿತು. ಉತ್ತರ ಪ್ರದೇಶ ಮತ್ತು ಬಿಹಾರಗಳ ಕೆಲವು ಕಡೆಗಳಲ್ಲಿ ಬೇಡದ ಹೆಣ್ಣು ಸಂತಾನವನ್ನು ಹತ್ಯೆಗೈಯಲು ಹುಟ್ಟಿದ ಹಸುಳೆಯ ಬಾಯಿಗೆ ಭತ್ತವನ್ನು ತುರುಕುವ ಒಂದು ಅಮಾನುಷ ಪದ್ಧತಿ ಜಾರಿಯಲ್ಲಿದೆ. ನೇರಲಗಿಯ ಭಕ್ತರು ಗಣಪತಿಯ ಪ್ರತಿರೂಪವೆಂದು ಬಗೆದು ತುರುಕಿದ ಅಕ್ಕಿ ಮರಿಯಾನೆಯ ಪಾಲಿಗೆ ಮೃತ್ಯಸದೃಶವೇ ಆಯಿತು. ತಾಯಿಯ ದೇಖಿರೇಖಿಯಲ್ಲಿ ಆಡಾಡುತ್ತಾ ಬೆಳೆಯಬೇಕಿದ್ದ ಎಳೆಮರಿ ಮನುಷ್ಯರೆಂಬ ಆಧುನಿಕ ರಕ್ಕಸರ ಕೈಯಲ್ಲಿ ಸಿಕ್ಕು ನಲುಗಿತು. ದೈಹಿಕವಾಗಿ ಮತ್ತು ಮಾನಸಿಕವಾಗಿ ಆಘಾತವನ್ನು ಅನುಭವಿಸಿತು. ಇಷ್ಟರಲ್ಲೇ ಹೆಬ್ಬಾವಿನಂತೆ ಮಲಗಿದ್ದ ಅರಣ್ಯ ಇಲಾಖೆಗೆ ಸುದ್ದಿ ಸಿಕ್ಕಿತು. ಹಾನಗಲ್ ವಲಯ ಅರಣ್ಯಾಧಿಕಾರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಸ್ಥಳೀಯರ ಸಲಹೆಯೇ ಆತನಿಗೆ ಅತೀ ಮಹತ್ವ್ತದ್ದಾಗಿ ತೋರಿತು. ಇಷ್ಟೊತ್ತಿಗೆ ಮರಿ ನಿತ್ರಾಣವಾಗಿತ್ತು. ಆನೆ ಮರಿಗೆ ಕೊಟ್ಟೆ ಹಾಲನ್ನೇ ಮತ್ತೆ ಕುಡಿಸಲಾಯಿತು. ಆನೆಯಂತಹ ಪ್ರಾಣಿ ದೈಹಿಕವಾಗಿ ಎಷ್ಟೇ ಬಲಿಷ್ಟವಾಗಿದ್ದರೂ, ಅದರ ಆಹಾರ ಪದ್ಧತಿಗಳು ನಾಜೂಕಾಗಿರುತ್ತವೆ. ಯೂರಿಯಾ ಬೆರೆಸಿದ ಪ್ಯಾಕೇಟ್ ಹಾಲು ಕೂಡ ಅದಕ್ಕೆ ವಿಷವಾಗಿಯೇ ಪರಿಣಮಿಸಿತು. ತನ್ಮಧ್ಯೆ ಮೇಲಾಧಿಕಾರಿಗಳಿಗೆ ಆನೆಮರಿಯ ಕುರಿತ ಸಂದೇಶ ಹೋಯಿತು. ದೂರವಾಣಿಯ ಮುಖಾಂತರವೇ ಎಲ್ಲಾ ಚರ್ಚೆಗಳು ತರಾತುರಿಯಲ್ಲಿ ನಡೆದವು. ಶಿವಮೊಗ್ಗದ ಆನೆಬಿಡಾರವಾದ ಸಕ್ರೆಬೈಲಿನ ವೈದ್ಯರ ದೂರವಾಣಿ ಸಲಹೆಯ ಮೇರೆಗೆ, ಮರಿಗೆ ಸ್ಥಳೀಯ ಜಾನುವಾರು ವೈದ್ಯರು ಚಿಕಿತ್ಸೆ ನೀಡಿದರು. 

ತನಗೇಕೆ ಇಲ್ಲದ ಉಸಾಬರಿ ಎಂದುಕೊಂಡ ಹಾನಗಲ್ ವಲಯ ಅರಣ್ಯಾಧಿಕಾರಿ ಮರಿಯನ್ನು ಹಿಂಡಿಗೆ ಸೇರಿಸುವ ನೆಪದಲ್ಲಿ ಸೊರಬದ ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದರು. ಮರಿಯನ್ನು ಕಳೆದುಕೊಂಡ ತಾಯಾನೆ ಮರಿಯನ್ನು ಹುಡುಕುತ್ತಾ ವಾಪಾಸು ಹಿಂಡಿನ ಸಮೇತ ಬಂದಿತು. ಮರಿಯನ್ನು ಅಲ್ಲೇ ಬಿಟ್ಟು ಶಾಂತವಾಗಿ ಕಾದಿದ್ದರೆ, ತಾಯಾನೆ ಮರಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಿತ್ತು. ಇಡೀ ಪ್ರಕರಣವನ್ನು ವೈಯಕ್ತಿಕ ನೆಲೆಯಲ್ಲಿ ನಿಭಾಯಿಸುವ ಸಾಮಥ್ರ್ಯವಿಲ್ಲದ ಅರಣ್ಯಾಧಿಕಾರಿ ಪ್ರತಿಯೊಂದಕ್ಕೂ ಮೇಲಾಧಿಕಾರಿಗಳ ಅಪ್ಪಣೆಗೆ ಕಾಯಬೇಕಾದ ಪರಿಸ್ಥಿತಿ ಇತ್ತು. ಮರಿಯನ್ನು ಮರಳಿ ಹಿಂಡಿಗೆ ಸೇರಿಸುವ ಅಯಶಸ್ವಿ ಪ್ರಯತ್ನ ನಡೆಯಿತಾದರೂ, ಈ ನಡೆ ಶಿಸ್ತುಬದ್ಧವಾಗಿರಲಿಲ್ಲ. ಅಸಂಖ್ಯೆ ಜನರನ್ನು ನೋಡಿದ ತಾಯಾನೆ ಮತ್ತೆ ಮರಳಿ ಕಾಡಿಗೆ ಹೋಯಿತು. ಇತ್ತ ಮರಿಯ ಆರೋಗ್ಯ ಕ್ಷಣ-ಕ್ಷಣಕ್ಕೂ ಹದಗೆಡುತ್ತಿತ್ತು. 

ಅರಣ್ಯ ಭವನದ ಮುಖ್ಯಸ್ಥರು, ಗಜಕಾರ್ಯಪಡೆಯ ಐಎಎಸ್‍ಗಳು ಖುದ್ದು ಬಂದು ನಿಭಾಯಿಸಬೇಕಾದ ಸನ್ನಿವೇಶವನ್ನು ಏನೇನು ಅನುಭವವಿಲ್ಲದ ವಲಯ ಅರಣ್ಯಾಧಿಕಾರಿ ನಿಭಾಯಿಸುವ ಜವಾಬ್ದಾರಿ ಬಿತ್ತು. ಹಾವೇರಿ ವಿಭಾಗದ ಡಿ.ಎಫ್.ಓ. ರಾಜೆಂದ್ರ ಮೂಲತ: ಮೈಸೂರಿನವರು. ಅರಣ್ಯ ಇಲಾಖೆಯ ಅತಿ ಮುಖ್ಯ ಹುದ್ಧೆ ಅಲಂಕರಿಸಿರುವ ಈ ಅಧಿಕಾರಿಗೆ ಸಾಮಾನ್ಯ ಜ್ಞಾನದ ಕೊರತೆ ಅಧಿಕವಾಗಿ ಕಾಡುತ್ತಿತ್ತು. ಈತ ತನ್ನ ಕೆಳಗಿನ ಅಧಿಕಾರಿ ಹಾನಗಲ್ ರೇಂಜರ್ ಹೇಳಿದ್ದನ್ನೆ ಬೆಂಗಳೂರಿನ ಮೇಲಾಧಿಕಾರಿಗಳಿಗೆ ವರ್ಗಾಯಿಸುವ ಪೋಸ್ಟ್‍ಮನ್ ಕೆಲಸವನ್ನಷ್ಟೇ ಮಾಡಿ ಕುಳಿತುಕೊಂಡ. ಆನೆಮರಿಯ ಆರೋಗ್ಯ ಇನ್ನಷ್ಟು ಹದಗೆಟ್ಟಿತು. ಒತ್ತಾಯಪೂರ್ವಕವಾಗಿ ತುರುಕಿದ ಅಕ್ಕಿ-ಬಾಳೆಹಣ್ಣು ಹಾಗೂ ಪ್ಯಾಕೇಟ್ ಹಾಲು ಆನೆಮರಿಯ ಆರೋಗ್ಯವನ್ನು ಮತ್ತಷ್ಟು ಹಾಳುಗೆಡವಿತು. ರಾಜ್ಯಮಟ್ಟದ ಸುದ್ಧಿಯಾಗಬಲ್ಲ ಈ ಸೂಕ್ಷ್ಮ ಘಟನೆಯ ಹೊಣೆ ತಮಗೆ ಬೇಡವೆಂದು ತೀರ್ಮಾನಿಸಿದ ಸ್ಥಳೀಯ ಅರಣ್ಯ ಇಲಾಖೆ ಮರಿಯನ್ನು ಶಿವಮೊಗ್ಗದ ಆನೆಬಿಡಾರವಾದ ಸಕ್ರೆಬೈಲಿಗೆ ಸಾಗಹಾಕಿ ಕೈತೊಳೆದುಕೊಂಡಿತು.

ಸಕ್ರೆಬೈಲಿನ ಪಶುವೈದ್ಯರಾದ ಡಾ:ವಿನಯ ನೇತೃತ್ವದ ತಂಡ ಅರೆಜೀವವಾಗಿದ್ದ ಆನೆಮರಿಗೆ ಜೀವ ತುಂಬುವ ವ್ಯರ್ಥ ಪ್ರಯತ್ನವನ್ನಷ್ಟೇ ಮಾಡಿತು. ನಿರ್ಜಲಿಕರಣ ಹಾಗೂ ಮಾನಸಿಕವಾಗಿ ತೀವ್ರ ಆಘಾತಗೊಂಡ ಮುದ್ದುಮರಿ ಆನೆ ದಿನಾಂಕ:31/10/2015ರ ಮುಂಜಾವಿನಲ್ಲಿ ಇಹಲೋಕ ತ್ಯಜಿಸಿತು. ಮಾನವನ ಅತಿರೇಕದ ಮೌಢ್ಯಕ್ಕೆ ಹಾಗೂ ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾದ ಮರಿಯನ್ನು ಕೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಸಕ್ರೆಬೈಲಿನಲ್ಲೇ ಮಣ್ಣು ಮಾಡಿ “ಅಂತ್ಯಸಂಸ್ಕಾರ”ವೆಂಬ ಗಂಭೀರ ಪದಗುಚ್ಛವನ್ನು ಆರೋಪಿಸಿ ನಿರುಮ್ಮಳವಾದರು.

ಕತೆ ಇಲ್ಲಿಗೆ ಮುಗಿಯಿತೇ? ಜನಮಾನಸದ ನೆನಪಿನ ಶಕ್ತಿಗೆ ಹೆಚ್ಚಿನ ಆಯುಷ್ಯವಿರುವುದಿಲ್ಲ. ಬಲವಂತವಾಗಿ ಮೆರವಣಿಗೆ ಮಾಡಿದ ಉನ್ಮತ್ತ ಜನರೀಗ ಬೇರೆಯದೇ ಕೆಲಸದಲ್ಲಿ ತೊಡಗಿಕೊಂಡಿರಬಹುದು. ಸೀಗೆ ಹುಣ್ಣಿಮೆಯ ದಿನದಂದು ಖುದ್ಧು ಗಣಪನೇ ತಮ್ಮೂರಿಗೆ ಬಂದ್ದಿದ್ದ, ನಾವೆಲ್ಲಾ ಸೇರಿ ಸಾಕ್ಷಾತ್ ಗಣಪನಿಗೇ ಪೂಜೆ ಮಾಡಿದೆವು ಎಂಬ ಭಾವವೂ ಕೆಲವು ಆಸ್ತಿಕ ಮಹಾಶಯರ, ಮೌಢ್ಯತುಂಬಿದ ಮಸ್ತಕದಲ್ಲಿ ದಾಖಲಾಗಿ ಉಳಿಯಬಹುದು. ಬಲವಂತ ಪೂಜೆ ಮಾಡಿಸಿಕೊಂಡ ಆನೆಮರಿಯೇನು ಶಾಪ-ಧೂಪವನ್ನೇನು ನೀಡುವುದಿಲ್ಲ. ಆದರೆ, ಮರಿಯನ್ನು ಕಳೆದುಕೊಂಡ ತಾಯಾನೆ ಸುಮ್ಮನೆ ಉಳಿಯುತ್ತದೆಯೇ?

ಆನೆಗಳನ್ನು ಅಭ್ಯಸಿಸಿದ ತಜ್ಞರ ಪ್ರಕಾರ, ಸಾವಿನ ವಿಚಾರದಲ್ಲಿ ಆನೆಗಳು ಥೇಟ್ ಮನುಷ್ಯರಂತೆ ವರ್ತಿಸುತ್ತವೆ. ಅಪಘಾತದಲ್ಲೋ ಅಥವಾ ಅನಾರೋಗ್ಯದಿಂದಲೋ ಮರಿಯೊಂದು ಸತ್ತರೆ, ಇಡೀ ಆನೆ ಹಿಂಡು ತಾಸುಗಟ್ಟಲೇ ಮರಿಯ ಸುತ್ತ ನೆರೆದು ಶೋಕಾಚರಣೆ ನಡೆಸುತ್ತವೆ. ಕಣ್ಣೀರು ಹಾಕುತ್ತವೆ. ಸತ್ತಿದ್ದು ಖಾತ್ರಿಯಾದ ನಂತರವಷ್ಟೇ ಆ ಸ್ಥಳವನ್ನು ಬಿಟ್ಟು ಹೋಗುತ್ತವೆ. ಹೆದ್ದಾರಿಯಲ್ಲಿ ಅಪಘಾತಕ್ಕೆ ಸಿಲುಕಿ ಸತ್ತ ಮರಿಯನ್ನು ಸುತ್ತುವರೆದು ರೋಧಿಸುವ, ಇಡೀ ಹೈವೇಯನ್ನೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಉದಾಹರಣೆಗಳು ನಮಗೆ ಸಿಗುತ್ತವೆ. ಹಾನಗಲ್ ವಿಷಯದಲ್ಲೂ ಆನೆಗಳು ಹಿಂತಿರುಗಿ ಬರುತ್ತವೆ. ಮರಿಯನ್ನು ಕಾಣದ ತಾಯಾನೆ ಮರಿಯನ್ನು ಹುಡುಕುವ ಪ್ರಯತ್ನ ಮಾಡುತ್ತದೆ. ತನ್ನ ಮರಿ ಸತ್ತು ದೂರದ ಸಕ್ರಬೈಲಿನ ಮಣ್ಣಿನಡಿಯಲ್ಲಿ ಕೊಳೆಯುತ್ತಿದೆ ಎಂದು ಅದಕ್ಕೆ ಗೊತ್ತಿಲ್ಲ. ಮರಿಯನ್ನು ಕಳೆದುಕೊಂಡ ತಾಯಾನೆ ಸ್ವಾಭಾವಿಕವಾಗಿ ವ್ಯಗ್ರವಾಗಿರುತ್ತದೆ. ದಾರಿಯಲ್ಲಿ ಸಿಗುವ ಅಮಾಯಕರ ಮೇಲೆ ಎರಗುವ ಸಾಧ್ಯತೆಯ ಪ್ರಮಾಣ ಹೆಚ್ಚು. ಸಕ್ರೆಬೈಲಿಗೆ ಮರಿಯನ್ನು ಸಾಗಿಸಿ ಕೈತೊಳೆದುಕೊಂಡ ಸ್ಥಳೀಯ ಅರಣ್ಯ ಇಲಾಖೆಗೆ ಉಳಿದ ಆನೆಹಿಂಡನ್ನು ಮತ್ತೆ ಕಾಡಿಗೆ ತಲುಪಿಸುವ ಅತ್ಯಂತ ಮಹತ್ವ್ತದ ಜವಾಬ್ದಾರಿಯಿದೆ. ಮತ್ತಷ್ಟು ಪಟಾಕಿ ಸದ್ದು ಅಲ್ಲಿ ಮೊಳಗಲಿದೆ. ಅಥವಾ ಸ್ಥಳೀಯ ಜನರೇ ಆನೆಗಳ ಸಂಭಾವ್ಯ ದಾಳಿಗೆ ಹೆದರಿ, ವಿದ್ಯುತ್ ತಂತಿ ಹರಿಸಿ ಹಿಂಡನ್ನೇ ಕೊಲ್ಲಬಹುದಾದ ಸಾಧ್ಯತೆಯೂ ದಟ್ಟವಾಗಿದೆ. ಅಸಾಹಾಯಕ ಮರಿಯನ್ನೇ ಸರಿಯಾದ ರೀತಿಯಲ್ಲಿ ನಿಭಾಯಿಸುವಲ್ಲಿ ಎಡವಿದ ಇಲಾಖೆ, ಇನ್ನು ದೊಡ್ಡಾನೆಗಳನ್ನು ನಿಭಾಯಿಸಲು ಸಾಧ್ಯವೆ? ಎಂಬುದು ಈಗಿರುವ ಪ್ರಶ್ನೆ.

ಮರಿಯಾನೆ ಪ್ರಕರಣ ಶುರುವಾದ ದಿನದಿಂದ, ಅರಣ್ಯ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಸಾರಾಂಶವನ್ನು ಇಲ್ಲಿ ದಾಖಲಿಸಿಲಾಗಿದೆ. ಅವರ ಪ್ರತಿಕ್ರಿಯೆ ಏನಿತ್ತು ನೋಡಿ. ಇತ್ತ ಮರಿಯಾನೆ ಸಾವು-ಬದುಕಿನ ಹೋರಾಟದಲ್ಲಿದ್ದ ಹೊತ್ತಿನಲ್ಲಿ, ಹಾನಗಲ್ ರೇಂಜರ್ ಜಂಗಮವಾಣಿಗೆ ಕರೆ ಮಾಡಿದರೆ ಸ್ವಿಚ್ ಆಫ್. ಕಚೇರಿಗೆ ಫೋನ್ ಮಾಡಿದರೆ, ಸಾಹೇಬರಿಗೆ ಮೈ ಹುಷಾರಿಲ್ಲ ರಜ ಹಾಕಿದ್ದಾರೆ ಎಂಬ ಉತ್ತರ.

ಸೊರಬ ತಾಲ್ಲೂಕಿನ ಸಹಾಯಕ ಉಪಅರಣ್ಯ ಸಂರಕ್ಷಣಾಧಿಕಾರಿಯನ್ನು ಮುಖತ: ಕಂಡು ಮಾತನಾಡಲಾಯಿತು. ಆನೆಮರಿಯನ್ನು ಉಳಿಸಿದ್ದೇ ನಾವು ಎಂಬಂತಹ ಮಾತನ್ನಾಡಿದರು. ಕಾಡಿನಲ್ಲಿ ಬಿಟ್ಟಿದ್ದರೆ ಮರಿ ಸತ್ತೇ ಹೋಗುತ್ತಿತ್ತು. ಅದನ್ನು ಮತ್ತೆ ತಂದು ಪಶುವೈದ್ಯರಿಂದ ಚಿಕಿತ್ಸೆ ಕೊಡಿಸುವಲ್ಲಿ ತಮ್ಮ ವಿಭಾಗದ ಪಾತ್ರ ಮುಖ್ಯವಾದದು ಎಂದು ಬೆನ್ನು ಚಪ್ಪರಿಸಿಕೊಂಡರು. 

ಇನ್ನೊಬ್ಬ ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರು ಇದು ನೇರಾ-ನೇರ ಇಲಾಖೆಯ ವೈಫಲ್ಯವೆಂದು ಒಪ್ಪಿಕೊಂಡರು. ಅಲ್ಲೇ ಪಕ್ಕದ ವಿಭಾಗದ ಅಧಿಕಾರಿಗಳು ತಮಗೆ ವಿಷಯ ಗೊತ್ತಾಗಿದ್ದೇ 2 ದಿನದ ನಂತರ ಹಾಗಾಗಿ ನಾವೇನು ಮಾಡುವ ಹಾಗಿರಲಿಲ್ಲ ಎಂದು ನುಣುಚಿಕೊಂಡರು.

ಹಾವೇರಿ ವಿಭಾಗದ ಡಿ.ಎಫ್.ಓ. ರಾಜೆಂದ್ರ ಇವರಿಗೆ ಕರೆ ಮಾಡಿದರೆ, ನಾನು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮೀಟಿಂಗ್‍ನಲ್ಲಿ ಇದ್ದೇನೆ ಒಂದು ತಾಸು ಬಿಟ್ಟು ಕರೆ ಮಾಡಿ ಎಂದರು. ಒಂದು ತಾಸು ಬಿಟ್ಟು ಮಾಡಿದಾಗ ಇನ್ನೂ ಮೀಟಿಂಗ್ ಮುಗಿದಿಲ್ಲ ಸಂಜೆ 5 ಗಂಟೆಗೆ ಮಾಡಿ ಎಂದರು. ಛಲ ಬಿಡದ ತ್ರಿವಿಕ್ರಮನಂತೆ ಸಂಜೆ 5 ಗಂಟೆಗೆ ಕರೆ ಮಾಡಿದರೆ, ಅವರ ಜಂಗಮವಾಣಿ ಸ್ವಿಚ್ ಆಫ್ ಆಗಿತ್ತು. ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ ಇದೇ ವ್ಯಕ್ತಿಗೆ ಮಾರನೇ ದಿನ ಕರೆ ಮಾಡಿದರೆ, ಬೆಂಗಳೂರಿನ ಮೇಲಾಧಿಕಾರಿಗಳ ಆಣತಿಯಂತೆ ಕಾರ್ಯನಿರ್ವಹಿಸಿದ್ದೇವೆ, ಇದರಲ್ಲಿ ನಮ್ಮ ತಪ್ಪು ಇಲ್ಲ, ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಅವರನ್ನೇ ಕೇಳಿ ಎಂಬ ಉಡಾಫೆ ಉತ್ತರ ಬಂತು. 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
ಗುರುಪ್ರಸಾದ ಕುರ್ತಕೋಟಿ

ಅಖಿಲೇಶ್, ಓದಿ ಕಣ್ಣಲ್ಲಿ ನೀರು ಬಂತು! ನಮ್ಮ ನಡುವೆ ಇಷ್ಟೊಂದು ಮೂಢರಿದ್ದಾರೆಯೆ!?

Akhilesh Chipli
Akhilesh Chipli
8 years ago

ಒಟ್ಟಾರೆ ಮೂಢರ ಸಂತೆ. ಬಲಿಯಾಗುತ್ತಿರುವುದು ವನ್ಯಲೋಕ.
ಧನ್ಯವಾದಗಳು ಕುರ್ತಕೋಟಿ

Dattatreya G.H
Dattatreya G.H
7 years ago

ನೀವು ಏನೇ ಬರೆದರೂ ಜನರ ಮೌಡ್ಯ ಕಳೆಯುವುದಿಲ್ಲ ಎಲ್ಲವೂ ಗೋರ್ಕಲ್ಲಮೇಲೆ ಮಳೆ ಸುರಿದಂತೆ ಸರ್ವಜ್ಞ

3
0
Would love your thoughts, please comment.x
()
x