ವಿಕಟ ವಿನಾಯಕ: ಎಸ್. ಜಿ. ಸೀತಾರಾಮ್, ಮೈಸೂರು.


      ವಿಚಿತ್ರ ಮೈಸಿರಿ-ಮೈಮೆಗಳಿಂದ, ಆಕೃತಿ-ಅಲಂಕಾರಗಳಿಂದ, “ವಿಕಟಾಯ ನಮಃ” ಎಂದೇ ಆರಾಧಿಸಲ್ಪಡುವ ವಿನಾಯಕನ ವಿಕಟಬಿಂಬವೊಂದನ್ನು ಸೆರೆಹಿಡಿಯಲು ಈ ಅಕ್ಷರಬಂಧದಲ್ಲಿ ಯತ್ನಿಸಲಾಗಿದೆ. ಇದರಲ್ಲಿ “ಅಕಟವಿಕಟ ನುಡಿಕಟ್ಟು”, “ಘನೇಶ ಭವಿಷ್ಯೋತ್ತರ ಪ್ರಲಾಪವು”, “ಚೆಲುಗನ್ನಡದಲ್ಲಿ ಚೆನ್‍ಗಣೇಶ”, “ವಿಶೇಷ ವಿಘ್ನೇಶ” ಮತ್ತು “ವಿನಾಯಕನ ವಿನಿಕೆಗಾಗಿ” ಎಂಬೆನಿಸುವ ಪಂಚಖಂಡಗಳು ಒಳಗೂಡಿವೆ.  
ಅಕಟವಿಕಟ ನುಡಿಕಟ್ಟು

     ಗಣೇಶವಿಚಾರವನ್ನು ಕುರಿತಂತೆ ‘ಕೃಷ್ಣಶಕ ಹದಿನೂರನೇ’ ಶತಮಾನದ ಕೆಲವು ಸೊಟ್ಟಸೊಲ್ಲುಗಳು ಇಲ್ಲಿವೆ. “ಇವುಗಳನ್ನು ಯುಕ್ತಿಯಿಂದ ನೋಡಿದಲ್ಲಿ, ಬುದ್ಧಿನಾಥನು ಪ್ರಸನ್ನವದನನಾಗಿ ಒಂದೊಂದನ್ನು ನೋಡಿದಾಗಲೂ ಒಂದೊಂದು ವಿಘ್ನವನ್ನು ಉಪಶಾಂತಿಗೊಳಿಸುತ್ತಾ ಹೋಗುವನು” ಎಂದು ಪರಮನಮ್ಯ ವಿಘ್ನಾನಂದ ಮಹಾಬಾಬಾ ಅವರು ಪ್ರಪಂಚಿಸಿರುತ್ತಾರೆ:
> ಗಣಪತಿ ಹಬ್ಬಕ್ಕೆ ಬಿಳಿಆನೆದಾನ ಮಹಾಶ್ರೇಷ್ಠ
> ಗಣಪನ ಹೊಟ್ಟೆಗೆ ಮೂರ್ಕಾಸಿನ ಸಜ್ಜಿಗೆ
> ಸೊಂಡಿಲಯ್ಯನಿಗೆ ಓಡಾಟ, ಸುಂಡಿಲಿರಾಯನಿಗೆ ಒದ್ದಾಟ 
> ಬೆನಕನ ಮಾಡೆಂದರೆ ಬೆನಕನ ಜನಕನನ್ನು ಮಾಡಿಟ್ಟ
> ಬೆನಕನ ಮಾಡೆಂದರೆ ‘ಬೆಣಚು ಬೇಡವೇ?’ ಎಂದ 
> ಗಣೇಶನನ್ನು ಚಿತ್ರಿಸೆಂದರೆ ನಾಕುಗೆರೆ “ಚತುರ್ಭುಜವಂ” ಎಳೆದಿಟ್ಟ  
> ಬಿಚ್ಚೋಲೆ ಗೌರಮ್ಮನಿಗೆ ಹಟ್ಟಿಬೆನಕನೇ ಗತಿ
> ಗೌರಿ ‘ಮೊರ’ ಕೊಡಲು ಗಣೇಶ ‘ಕಿವಿ’ಗೊಡಬೇಕು 
> ಗೌರವ್ವನಿಗೆ ಗೌರವ ಕೊಡದವರು ಗಣದೇವನಿಗೆ ಗಣ್ಯರಾಗುವರೇ?
> ಬೆನಕನಿಗೆ ಮದುವೆ ಎಂದು ಶುನಕನ ಬಾಲ ನೆಟ್ಟಗಾಯ್ತು
> ಬೆನಕನಿಗೆ ಹಬ್ಬವಾದರೆ ಶುನಕನಿಗೇನಾಯ್ತು? 
> ವಿನಾಯಕನೆಂದರೆ ವಿನಾಶದಿಂದ ವಿನಾಯಿತಿಯಾದಂತೆ
> ಕೆಟ್ಟ ಕೆಲಸಕ್ಕೆ ಒಡನೆಯೇ ಲಗ್ನ, ಒಳ್ಳೆಕೆಲಸಕ್ಕೆ ಒಂಬೈನೂರು ವಿಘ್ನ
> ಆನೆಮೊಗ ಹಬ್ಬಕ್ಕೆ ಬಂದಾನೆ, ಕೇಳಿದ್ದನ್ನ ಕೈತುಂಬ ತಂದಾನೆ!
> ವಿನಾಯಕನ ಪೂಜಿಸಿದ್ರೂ ನಾಯಕರ ಬಾಲ ಡೊಂಕೇ
> ಊಟಕ್ಕೆ ಮುಂಚೆ ಊರುಗಾಯಿ, ಊರುಗಾವಲಿಗೆ ಮೊದಲು ಗಣೇಶ 
> ಮೂಗೊಳು ಶೀತಭೂಗೋಳ, ಡೊಳ್ಳೊಳು ಶೀತೋಷ್ಣಖಗೋಳ, ಗಜವಲ್ಲಭನಲಿ ಜಗವೈಖರಿಯನೆ ಕಂಡೆ
> ಗಣೇಶನಲ್ಲಿ ಆಫ್ರಿಕಆನೆ ಕಿವಿ ಕಂಡೆ, ಅದರಲ್ಲಿ ಆಫ್ರಿಕ ಭೂಪಟವನೆ ಕಂಡೆ
> ಇಲಿ-ಹಾವು ಒಡನಾಟದಲ್ಲಿ ಬೆನಕನ ಬೊಂಬೆಯಾಟವ ಕಂಡೆ
> ಗಣಪನ ಜನಿವಾರದಲ್ಲಿ ಬ್ರಹ್ಮಸೂತ್ರದ “ಹೆಡೆ” ಕಂಡೆ
> ಹೆಗ್ಣನಾಶಕದ ಬಳಕೆಯನ್ನು ವಿಘ್ನನಾಶಕನೊಪ್ಪುವನೇ?
> ಉದರವೈಭೋಗವಿದು ನಮ್ಮ ಲಂಬೋದರನಲಿ ಲವಲೇಶ ಲೆಕ್ಕವಿಲ್ಲ
> ಕರಿಗಡುಬುಣ್ಣೋ ನಿರಂತರ, ಜ್ವರಗತಿಗಿದು ನಿಜದ್ವಾರ (ಯಮುನಾಕಲ್ಯಾಣಿ ರಾಗದಲ್ಲಿ)
> ಬಕೇಶ ಬಂದ, ಕಾಯಿಕಡುಬು ಮುಕ್ದ, ಹೊಟ್ಟೆನೋವು ಎಂದ, ಚಿಕ್ ಏರಿಗೆ ಎದ್ದ, ದೊಡ್ ಗುಳಿಗೆ ನುಂಗ್ದ 
> ಉಂಡೆಗಡುಬು ಉಂಡುಂಡು ಬೆಂಡುಬತ್ತಾಸಾದ
> ಆನೆಮೊಗನಿದ್ದೆಡೆ ಶಿಶುವು ಆನೆಮೊಮ್ಮಗನಂತೆ ಶಾನೆ ಬೆಳೆವುದು ತಾನೆತಾನೆ
> ಸೊಣಗವ ಕಂಡು ಸಲಗವು ಬೊಗಳುವುದುಂಟೇ? 
> ಕಬ್ಬಿಗಾಗಿ ಒದೆಯುಣ್ಣುವ ಆನೆಗಿಂತ, ಸದ್ದಿಲ್ಲದೆ ಸಿಹಿಯುಣ್ಣುವ ಇರುವೆಯ ಇರವೇ ಇರಲಿ
> ಮೂವತ್ತೆರಡು ಹಲ್ಲಿನ ಹುಲಿಮನುಜ ಹದಿನಾರು ಹಲ್ಲಿನ ಇಲಿ ಮುಂದೆ ಹುಲುಮನುಜನಾದ
> “ಕೋಟಿಸೂರ್ಯ ಸಮಪ್ರಭ” ಕಿರಣಿಸಿದಲ್ಲಿ ಕೋಟಿಕೋಟಿ ಸೋಲಾರ್ ವ್ಯಾಟ್
> ಜೋಲುಮುಖ ಹರಡಿತು, ಗಜ-ವದನ “ಮೀಟರ್-ವದನ” ಆದ
> “ಬುದ್ಧೀನ ಮದುವೆ ಆಗುವಾಗ ಬುದ್ಧಿ ಇರ್ನಿಲ್ವಾ ಬುದ್ದಿ?” ಎಂದ್ಲು ಗಣೇಶಂಗೆ ನಮ್ ಸಿದ್ದಿ  
> ಆನೆಯ ಡ್ರೈವರನ್ನು “ಓವರ್ ಸ್ಪೀಡಿಂಗ್” ಅಂತ ನಿಲ್ಸಿ ಲೈಸೆನ್ಸ್ ಕೇಳೋದೇ?

ಘನೇಶ ಭವಿಷ್ಯೋತ್ತರ ಪ್ರಲಾಪವು
      ಕೃಷ್ಣಪೂರ್ವ 1947ರ ಮಧ್ಯದಲ್ಲಿ ವಿರಚಿತವಾಯಿತೆನ್ನಲಾಗುವ, ಮೂಲತಃ ಪದ್ಯರೂಪದಲ್ಲಿದ್ದ ಈ ಕಗ್ಗವನ್ನು “ನವಭಾರತ ಅವಗೀತಾ” ಎಂದೂ, “ಗಣಪತಿ ವಿದೂಷಣೋಪನಿಷತ್” ಎಂದೂ ಉದಾಸಚರಿತರು ಲೇವಡಿಸುವರು. ಇದರಲ್ಲಿರುವ “ದುಷ್ಕಾಲಜ್ಞಾನ” ಕುರಿತ ಕೆಲವು ಕಣಿಮುತ್ತುಗಳು ಇಂತಿವೆ:  
> ಗಣಭಾರತದ ಘನನಾಯಕರು ಪ್ರಜೆಗಳನ್ನು ಉದ್ವಿಗ್ನಗೊಳಿಸುವುದರಲ್ಲಿ ನಿರ್ವಿಘ್ನವಾಗಿ ಮಗ್ನರಾಗುವರು. ದೇಶವನ್ನು ಭಗ್ನಗೊಳಿಸುವ ಯಜ್ಞಕ್ಕೆ ಅಗ್ನಿಸಾಕ್ಷಿಯಾಗಿ ಲಗ್ನವಾಗಿ, ಅದನ್ನು ನಗ್ನಗೊಳಿಸಿ, ‘ವಿಗ್‍ನೇಶನ್’ – ‘ಟೋಪಿ’ದೇಶ – ಮಾಡಿಡುವ ವಿಘ್ನೇಶರಾಗುವರು. ಜನಗಣಮನಅಧಿನಾಶಕರಾಗಿ, ಭಾರತಭಾಗ್ಯವಿಘಾತರಾಗಿ, ಜನಗಣಕಾರ್ಯಕ್ಕೆ ಗಮನವನ್ನೇ ನೀಡದೆ, ಅದನ್ನು ಗಜಗಮನಗೊಳಿಸಿ, ಪಾಶಾಂಕುಶಗಳಡಿಯಲ್ಲಿ ತಳ್ಳುವರು. “ದಂತಿಪುರ” (ಹಸ್ತಿನಾಪುರ ಅಥವಾ ದೆಹಲಿ) ಸಿಂಹಾಸನಕ್ಕೆ ಹುಲಿದೊಗಲಿನ ಇಲಿದೊರೆಗಳೇರಿ, “ಭರತ” ಭೂಮಿಯನ್ನು “ಇಳಿತ” ಭೂಮಿಯಾಗಿಸುವರು, “ಮಹಾಬಿಲ” ಸುಕ್ಷೇತ್ರ ಮಾಡುವರು. ಹನ್ನೆರಡೂವರೆ ಅರ್ಬುದ- ಅದ್ಭುತ ಜನಬಾಹುಳ್ಯಕ್ಕೆ “ಗಣನಾಥ” ಎಂದು ಗಣಿತಿಸಲ್ಪಡಬೇಕಾದವರು, “ಹೆಗ್ಗಣನಾತ” ಎಂಬ “ಹೆಗ್ಗಳಿಕೆ” ಗಳಿಸುವರು. ಹೆಗ್ಗಣಜ ಕೀಟದಂತೆ ಮೈಮೇಲೆರಗಿ ಜನರ ಹೆಗ್ಗಣ್ಣು ಬಿಡಿಸುವರು. ಗಣದ್ರವ್ಯವನ್ನು (ಸಮಾಜದ ಆಸ್ತಿ) ಅಗಣಿತವಾಗಿ ಕಬಳಿಸಿ, ಲಂಬಜಠರರಾಗುವರು, ವಸುಧೆಯನ್ನು ವಕ್ರತುಂಡುಗಳನ್ನಾಗಿಸಿ, ತುಂಡರಸರಾಗಿ, “ಮೋಸರಸ” ಪಾನಮಾಡುವರು. ಗಾಣದಿಂದ ಜೀವಹಿಂಡಿ “ಗಾಣಪತಿ” ಆಗುವರು. ಈ ಭೂಭಾಗವು ಇಂಥ ಆಳ್ಮರಿಂದಾಗಿ ಹೊಸ “ಆಳ”ಗಳಿಗೆ ಜಾರುವುದು, ವಿ-ನಾಯಕತ್ವ ಅರ್ಥಾತ್ ಅ-ರಾಜಕತ್ವಕ್ಕೆ ಕುಸಿಯುವುದು.


 
> ವಿಘ್ನೇಶ್ವರಯ್ಯರು, ವಿಘ್ನಜ್ಞರು, ವಿಘ್ನಕರ್ಮರು ಉನ್ನತ ಅಧಿಕಾರಗಳನ್ನು ಕಸಿದು, ನಾಡನ್ನು “ವಿಘ್ನಾರಣ್ಯ” ಮಾಡಿಡುವರು. ಕೃತಘ್ನರು, ಮಿತ್ರಘ್ನರು ಮತ್ತಿತರ ಘಾತಕರು, “ಸರ್ವಘ್ನ ಪೀಠ” ಒಂದನ್ನು ಸ್ಥಾಪಿಸುವರು. ವಿಘ್ನಾತ್ಮರು, ವಿಘ್ನಸೇನರು ಮತ್ತು ವಿಘ್ನಸಂತೋಷಿಗಳು, ವಿಘಟನೆ, ವಿಘಾತ, ವಿಗತಿಗಳನ್ನುಂಟುಮಾಡಿ, ವಿಘ್ನಾರ್ಪಣಮಸ್ತು ಎಂದು ಕೈಮುಗಿದು, ಕಂಗೊಳಿಸುವರು. ಕಂಡಲ್ಲಿ ವಿಘ್ನರೂಪದರ್ಶನ ಕೋರೈಸುವುದು. ತಜ್ಞರು-ಅಭಿಜ್ಞರು ಅಜ್ಞಾತವಾಸಕ್ಕೆ ಅಟ್ಟಲ್ಪಡುವರು. ಪ್ರಾಜ್ಞರು-ಪ್ರಜ್ಞಾವಂತರು ಅವಿಜ್ಞಾತರಾಗಿಯೇ ಅಸುನೀಗುವರು. ವಿಜ್ಞಾನಿಗಳೂ ಅವಜ್ಞೆಗೊಳಗಾಗಿ, ದೈವಜ್ಞರ ಸಂಜ್ಞೆ-ಅನುಜ್ಞೆಗಳ ಅವಲಂಬಿತರಾಗುವರು. ಅಜ್ಞಾನಿಗಳು ತಾವೇ ವಿಜ್ಞರೆಂದು ಪ್ರತಿಜ್ಞೆಮಾಡುವರು. ಅಜ್ಞರು ಆಜ್ಞೆ ಕೊಡುವಂತಾಗುವರು. ಜ್ಞಾನಿಗಳ ನ್ಯೂನತೆಯಿಂದಾಗಿ “ಗ್ಲಾನಿರ್ಭವತಿ” ಅವಸ್ಥೆಯೊದಗಿ, “ಸಂಭವಾಮಿ ಪದೇ ಪದೇ” ಎಂದು ಲೋಕೋದ್ಧಾರಕ್ಕಾಗಿ ದೇವರು ಅಡಿಗಡಿಗೆ ಅವತಾರ ಎತ್ತಬೇಕಾದ ಆಪತ್ಕಾಲ ಒತ್ತೊತ್ತಿಬರುವುದು. 

> “ನಾಶಕ” ಎಂಬ ದುಷ್ಕೀರ್ತಿಗೆ ಗುರಿಯಾಗಿರುವ ವಿಘ್ನನಾಶಕನ ವರಮೂಷಕವಾಹನವು, “ಮೌಸ್” ಎಂಬ ಅತಿನವ ಅವತರಣದಲ್ಲಿ ಸಂಗಣಕ (ಕಂಪ್ಯೂಟರ್) ಚಾಲಕನಾಗಿ, ಮಾಹಿತಿತಂತ್ರಯುಗವೆಂಬ ಒಂದು ಕಾಲಘಟ್ಟವನ್ನೇ ಮುನ್ನಡೆಸುವುದು. ಮಾನವನ ಜೀವನವನ್ನು “ಮೌಸ್‍ಪುಲ್” ಆಗಿಸಿ, ಅವನು ಮೌಸ್ ಇಲ್ಲದಾಗ ಮಿಕಿಮಿಕಿ ಪರದಾಡುವಂತೆ “ಮಿಕಿ ಮೌಸ್” ಮಾಡಿಡುವುದು. “ನೀನಾರಿಗಾದೆಯೇ ಒಣಮಾನವ?” ಎಂದು ಗಣಕಮಾನವನ ಗಣ್ಯತೆಯನ್ನು  ಅಣಕಿಸುವುದು. ಕಿನ್ನರಿಯೋಗಿಯಂತೆ, ಮನುಕುಲವನ್ನು ಮರುಳುಗೊಳಿಸಿ, ಒಂದು “ಗುಪ್ತಗುಹೆಗೆ” ಸೆಳೆದೊಯ್ಯುವುದು. ಗಣಪತಿಗೆ ಚಂದ್ರಯಾನದಲ್ಲಿ ಒದಗಿದಂತೆ, ಮಾನವಗಣಕ್ಕೂ “ಸೈಬರಂಬರ” ಜ್ಞಾನಯಾನದಲ್ಲಿ ನಾವಿಕನಾಗಿ ಅಗ್ರಮಾನ್ಯ ಸೇವೆ ಸಲ್ಲಿಸುವುದು. ಇಲಿದೇವನ ವರಬಲದಿಂದಾಗಿ, “ಗಣಕಮತಿ-ಗಣಕಪತಿ” (ಐ.ಟಿ. ವೃತ್ತಿಕರು) ಎಂದೆನಿಸಿಕೊಳ್ಳುವ ಒಂದು ಹೊಸ “ಲಕ್ಷ್ಮೀಪುತ್ರ-ಪುತ್ರಿ ತಳಿ” ಮೊಳೆಯುವುದು. “ಮಿಕಿ ಮೌಸ್” ಎಂಬ ಪುಟಾಣಿಯ ಪಟದಲ್ಲಿ ಇಲಿಮರಿಯು ಇಹಲೋಕಪ್ರಿಯವಾಗುವುದು, ಮತ್ತು ಡಿಜಿû್ನೀಲ್ಯಾಂಡ್ ಎಂಬ ಮಾಯಾಪುರಿಗೆ “ಪಟ್ಟದ ಇಲಿ” ಆಗಿ ಮೆರೆಯುವುದು. ಧಾರ್ಮಿಕ ಕ್ಷೇತ್ರದಲ್ಲೂ ಅಂತೆಯೇ ಹೆಗ್ಣೇಶ್ವರ ಮೂರ್ತಿಗಳು ವಿಘ್ನೇಶ್ವರ ದೇಗುಲಗಳ ಮುಂದೆ ನೀಟಾಗಿ ನಿಲುಗಡೆಯಾಗುವುವು.  

ಇಲಿಯ ಚಪಲತೆಯನ್ನೂ, ಕಡುರಾತ್ರಿ ವ್ಯವಹಾರವನ್ನೂ ರೂಢಿಸಿಕೊಂಡು, ಎರಡುಕಾಲು ಇಲಿಗಳಾದ ಗಣಿತೋಡುಪತಿ-ಹೆಗ್ಗಣರಾಜ್ಯಪತಿಗಳು, ಇಲಿಜಾತಿಯೇ ನಾಚುವಂತೆ ತಮ್ಮ ಹಲ್-ಆಯುಧಅಳವು ಮತ್ತು ಕಾಲ್‍ಚಳಕ ತೋರುವರು. “ಮೂಷ್” ಎಂದರೆ, “ಕದಿ, ದೋಚು, ಲೂಟಿಹೊಡೆ” ಎಂಬ ಕಟುಭಾವದಲ್ಲಿ ತನ್ನನ್ನು “ಮೂಷಕ” ಎಂದು ಹೀಗಳೆದ ಹುಸಿಮಾನವನು, ಅವನೇ ನಿಜಮೂಷಕನಾಗಿ ನುಸುಳಾಡುತ್ತಾ, ಇಲಿಗಣಕ್ಕೆ ಮಿಥ್ಯಾಪವಾದ ಉಂಟುಮಾಡಿದ್ದಕ್ಕಾಗಿ, ಇಲಿಯು ಹರಿತವಾಗಿಯೇ ಹಗೆ ತೀರಿಸಿಕೊಳ್ಳುವುದು. (ಮೂಷಕಕ್ಕೆ “ಆಖು,” “ಉಂದುರ” ಎಂದೆಲ್ಲ ನಾಮಗೌರವಗಳಿವೆ. “ಚುಚುಂದರ” ಎಂದು ಒಂದು ತೆರದ ಸುಂಡಿಲಿಯೂ ಇದೆ. “ಖನಕ” ಎಂದರೆ “ತೋಡುವ” ಪ್ರಾಣಿ “ಹೆಗ್ಗಣ” ಎಂದಾಗುತ್ತದೆ. ಇಂಗ್ಲಿಷ್‍ನ “ಬ್ಯಾಂಡಿಕೂಟ್” ಎಂಬುದು ತೆಲುಗಿನ “ಪಂದಿ-ಕೊಕ್ಕು” ಅಥವಾ “ಹಂದಿ-ಇಲಿ” ಎಂಬುದರಿಂದ ಬಂದಿದೆ.)

> ಸೇಬಿನ ಹಣ್ಣಿನಿಂದ ಮಂತ್ರಮುಗ್ಧನಾಗುತ್ತಿದ್ದ ಗಜಮುಖನು, ನವೀನಯುಗದಲ್ಲಿ ಯಂತ್ರಮುಗ್ಧ-ತಂತ್ರಮುಗ್ಧನಾಗಿ, ಸೇಬಿನ ಬದಲಿಗೆ ಆ್ಯಪಲ್ ಕಂಪ್ಯೂಟರ್, ವಾಟ್ಸ್‍ಆ್ಯಪ್ ಮೊದಲಾದ ಉಪಕರಣಗಳಿಂದ ಹಸನ್ಮುಖನಾಗುತ್ತ್ತಾ, ಸಂಪ್ರದಾಯಸ್ಥ “ತಾಂತ್ರಿಕ ಗಣಪತಿ” ಉಪಾಸಕರನ್ನು ದಿಗಿಲುಗೊಳಿಸುವನು. ಕೆಲಭಕ್ತರು ಗಾನಪ್ರಾಣ-ಗೀತಲೋಲ ಗಜವದನನ ಅಳತೆಗೆ “ಆ್ಯಪಲ್ ಐ.ಪಾಡ್-ಹೆಡ್‍ಫೋನ್” ತೊಡಿಸಿ ಗಜವಂದನೆ ಸಲ್ಲಿಸುವರು. ಇನ್ನು ಕೆಲವರು ಗಜಮುಖಪುಸ್ತಕ (ಎಲಫಂಟ್ ಫೇಸ್‍ಬುಕ್) ತೆರೆದು, ಗಣೇಶನ ಚಿತ್ರವಿಚಿತ್ರ “ಸೆಲ್ಫೀ”ಗಳನ್ನು ಅದರಲ್ಲಿ ಮಿಂಚಿಸುವರು. ಮತ್ತೂ ಕೆಲವರು, “ಸಿದ್ಧಿ-ಬುದ್ಧಿ” ಜೋಡಿಯಲ್ಲಿ “ಬುದ್ಧಿ” ಭಾಗಕ್ಕೆ ಪರಿಣತ-ಸಾಫ್ಟ್ ವೇರ್ (ಏ.ಐ.) ಜೋಡಿಸಿ, ‘ರೋಬಾಟ್ ಸಿದ್ಧವಿನಾಯಕ” ವಿನ್ಯಾಸ ಮಾಡುವರು.   

> ಅತ್ತ ವಸ್ತುಗಳು “ನ್ಯಾನೋ” ಅಳತೆಗಿಳಿಯುತ್ತಿದ್ದಂತೆ, ಇತ್ತ ಮನುಷ್ಯಶರೀರಶಿಲ್ಪವು ಮೂರು-ನಾಲ್ಕು ಪದರದ “ವಿಶಾಲಮಧ್ಯಪ್ರದೇಶ” ಆಗಿ, “ಕಲ್ಯಾಣಾದ್ಭುತಗಾತ್ರ” ತಲುಪುವ ತವಕದಿಂದ ವಿಕಾಸಗೊಳ್ಳುತ್ತಲೇ ಹೋಗುವುದು. ಉದಾರವಾದದ ಉದರದಲ್ಲೇ ಉದರವಾದವೂ ಉದ್ಗಮಿಸಿ, ಹೊಟ್ಟೆಬಾಕರು, ತಿಂಡಿಪೋತರು, “ತೀರ್ಥರಾಜರು” ಹುಲುಸಾಗಿ ಹೊರಬರುವರು. ವಿದ್ಯಾರ್ಥಿಗಳೂ ವಸ್ತುತಃ ಉದರಾರ್ಥಿಗಳೇ ಆಗಿಹೋಗುವರು. ಸಹೋದರರು ಭೀಮೋದರರಾಗಿ, ಕೇಳಿದಲ್ಲಿ “ಗಣಪತಿದರ್ಶನ” ಕೈಗೆಟಕುವುದು. ಮೋದಕವು ಮುದುಕರಿಗೆ ಮುದಕರ-ಮಧುಕರ ತಿನಿಸಾಗುವುದು. “ಎಳ್ಳುಂಡೆ ಜೇನುತುಪ್ಪ ಗಣನಾಯ್ಕ” ಎಂಬ ಕೋಲಾಟ ಹೋಗಿ, “ಎಲ್ಲ ಉಂಡೆ ಗಪಗಪ್ಪ ಡೊಳ್ಳುನಾಯ್ಕ” ಎಂಬ ಕೋಕಾಕೋಲಾಟ ತಲೆಯೆತ್ತುವುದು. ಉಬ್ಬುತ್ತಿರುವ ಉದರಗಳಿಂದಾಗಿ ಉಡಿದಾರಗಳು ಉದುರುವುವು. ಊರುಗಳು ಉದರಗಿರಿಗಳೆನಿಸಿ ಉರಿಯುವುವು. ಉಮಾಪುತ್ರನ ಉದರಕ್ಕೆ ಉರಗದ ಉಡಿದಾರ ಉಡಿಸುವುದನ್ನು ಕಂಡು ಒಂದೊಮ್ಮೆ ನಕ್ಕಿದ್ದ “ಚಂದಮಾಮಾ ಅಂಕಲ್ಲು,” ಈ ನವನಾಗರಿಕ ಉದರಚೇಷ್ಟೆಗಳಿಗೂ ನಕ್ಕು, ಹೊಟ್ಟೆಹುಣ್ಣನ್ನು ಹೋಗಿಸಿಕೊಳ್ಳಲು ಡಾಕ್ಟರ್‍ಶಾಪ್-ಗ್ರಸ್ತನಾಗಿ ಇಳೆಗಿಳಿಯುವನು.  

ಹೊಟ್ಟೆಗಳನ್ನು ಹದ್ದುಬಸ್ತಿನಲ್ಲಿಡಲು ಹೈಟೆಕ್ “ಡಾಕ್ಟರ್‍ಶಾಪಿಂಗ್‍ಮಾಲ್” ಮಳಿಗೆಮಾಳಿಗೆಗಳೂ, ಜೊತೆಯಲ್ಲೇ, “ಜಠರ ಸುದರ್ಶನ ಕ್ರಿಯೆ”, “ಮೇದೋಜ್ಜೀರಕಾಸನ”, “ದೃಢೋದರ ಮುದ್ರೆ” ಎಂಬ ನಮೂನೆಯ ಬಿಸಿಬಿಸಿ “ರಹಸ್ಯತಂತ್ರ” ಪ್ಯಾಕೇಜುಗಳೂ ಮಾರುಕಟ್ಟೆಯನ್ನು ಮುತ್ತುವುವು. “ಯೋಗ ತಾಲೀಮು ಅಖಾಡ”, “ಫ್ಯಾಂಟಸಿ ಮೆಡಿಟೇಶನ್ ಪಾರ್ಕ್”, “ಆಯುರ್ವೇದ ಅಭಯಾರಣ್ಯ” ಥರದ ತಾಣಗಳು ಊರ ಉದ್ದಗಲ ಉಜ್ವಲವಾಗಿ ಉದಿಸಿ, ಉದಾರವಾಗಿ ಊದಿ, ಹಿಗ್ಗುವ ಹೊಳ್ಳು ಹೊಟ್ಟೆಗಳನ್ನು ಹಿಡಿದಿಡಲು ಹೆಣಗುವುವು. 

> ಹೊಟ್ಟೆಯು ಹೊರೆಯಾಗುತ್ತಿದ್ದಂತೆಯೇ, ಜನಕೋಟಿಯನ್ನು ಹಲ್ಲೂ ಅಲ್ಲಾಡಿಸತೊಡಗುವುದು. ಗಜದಂತರು, ಸರ್ಪದಂತರು, ಮೂಷಕದಂತರು, ಬಿಲದಂತರು, ಭಗ್ನದಂತರು, ವಕ್ರದಂತರು ವಗೈರೆ ದಂತರೋಗಿಗಳ ಧಾವಂತದಿಂದಾಗಿ, ದಂತಮೂಲನಾಳ (ರೂಟ್ ಕನಾಲ್) ಇಲಾಜು, ದಂತಶಿರಸ್ತ್ರಚಿಕಿತ್ಸೆ (ಕ್ಯಾಪಿಂಗ್), ಹಲ್ಲುಕಟ್ಟು-ಪಟ್ಟಿ-ನಾಟಿ ಮೊದಲಾದವು ಸರ್ವೇಸಾಮಾನ್ಯವಾಗಿ, ದಂತಿಸ್ಟ್‍ಗಳ ಸೇವೆಯು ಆನೆದಂತಕ್ಕಿಂತ ಅಮೂಲ್ಯ ಎನಿಸಿ ಎಣಿಸಲ್ಪಡುವುದು. ಆ ಸೇವೆ ಎಟುಕದವರು ಹಲ್ಲಿನ ಮೇಲಿನ ಹಲ್ಲೆಯನ್ನು ಹೊರಲಾರದೆ, ಹಲ್ಲಿಯಂತೆ ಲೊಚಲೊಚಗುಟ್ಟುವರು, ದಂತವೀಣೆ ಮೂಲಕ ಬಿಲಹರಿ ರಾಗ-“ಕಟಕಟ” ತಾಳದಲ್ಲಿ, “ಏಕದಂತಂ ಭಜೇಹಂ” ನುಡಿಸುವರು. ಬಾಚಿ-ಕೋರೆ-ಮೇಲ್ದವಡೆ-ಕೆಳದವಡೆ ಎಂದು ಮೇಲು-ಕೀಳು ಎಣಿಸದೆ ಸರ್ವ ಹಲ್ಲುಗಳನ್ನೂ-ಹಲ್ಲುರೋಗಿಗಳನ್ನೂ ಸಮಾನವಾಗಿ “ಕೀಳುವ” “ಅನೇಕದಂತ ವೈದ್ಯ” ಗಣವು ಹಿಂದುಳಿದು, “ಏಕದಂತ ವೈದ್ಯ” ಎಂಬ ಒಂದೊಂದೇ ನಿರ್ದಿಷ್ಟ ಹಲ್ಲಿನಲ್ಲಿ ಚಾತುರ್ಯ ಪಡೆದ ನವವರ್ಗವೊಂದು ಏಕಾಏಕಿ ಚಿಮುಟ ಚಿಮ್ಮುತ್ತಾ ಹೊರಹೊಮ್ಮುವುದು. ಏಕಮತವಿಲ್ಲದೆ, “ಏಕೈಕ ದಂತವೈದ್ಯ” ಎನಿಸಿಕೊಳ್ಳಲು ಇವರು ಪರಸ್ಪರ ದಂತಾದಂತಿ ಕಾದಾಡುವರು. ಇವೆಲ್ಲವನ್ನು ಹಲ್ಮುಡಿಕಚ್ಚಿ ನೋಡುತ್ತಿರುವ ಹಲ್-ಕಾಯಿಲಸ್ತರು, “ಕಟ್ಟುವೆವು ನಾವು” ಎಂಬ ಬೋರ್ಡ್ ಕಂಡೊಡನೆ, “ಹಲ್-ಕಟ್!” ಎಂದು ಮುಖತಿರುಗಿಸಿ ಹಿಂತಿರುಗುವರು. ಮೂಟೆಗಟ್ಟಲೆ ಕಡಲೆ ಕೂಡಿಟ್ಟುಕೊಂಡು ಹಲ್ಲಿಲ್ಲದೆ ಹಲುಬುತ್ತಿರುವ ಹಲವಾರು ಹಿರಿಯ “ಅ-ಹಲ್ಯ” ಜೀವಿಗಳು, “ಕಲ್ಲನ್ನು ಮೆಲ್ಲುವ ಹಲ್ಲು” ನೆಡಿಸಿಕೊಳ್ಳುವರು. ಶಿಶುಪಾಲರಲ್ಲಿ ಕೆಲವರು ತಮ್ಮ ಮಕ್ಕಳ ದಂತವಕ್ರತೆಯಿಂದ ತಳಮಳಿಸಿದರೆ, ಮತ್ತೆ ಕೆಲವರು ತಮ್ಮ ಮಕ್ಕಳ ಮೊದಲಹಲ್ಲು ಮೂಡಿದಂದು “ಹ್ಯಾಪಿ ಫಸ್ಟ್-ಟೂತ್ ಬರ್ತ್‍ಡೇ” ಬಲೂನು ಒಡೆಯುವರು, ಕಲ್ಪೋಕ್ತಪ್ರಕಾರ “ಪ್ರಥಮದಂತ ಜನ್ಮದಿನ ಕಲ್ಯಾಣೋತ್ಸವ” ಮಾಡಿಸಿ ಪಟಾಕಿ ಹೊಡೆಯುವರು. ಕ್ರಮಕ್ರಮೇಣ ದಂತವೈದ್ಯವು ದಂತವಾಣಿಜ್ಯವಾಗಿ, “ಹೆಲ್ಲೆಲ್ಲೂ ಹಲ್ಲೋಲಕಲ್ಲೋಲವಾಗಿ” ನೋಡಿದವರೆಲ್ಲ “ಹ್ಹಹ್ಹಾ, ಹಿಹ್ಹೀ, ಹೆಹ್ಹೇ, ಹೊಹ್ಹೋ, ಹಃಹಃ!” “ಹೆನ್ನುವಂತಾಗುವುದು.” 

> ದಂತವ್ಯಾಧಿಗಳ ಪರಿಹಾರಕ್ಕಾಗಿ, “ಏಕದಂತ ಜಪ” ಮತ್ತು “ದ್ವಾತ್ರಿಂಶತಿ (32) ಲಕ್ಷದೀಪೋತ್ಸವ”, ಅದೇ ಮಾಟದಲ್ಲಿ, “ಗಜಕರ್ಣ” (ರಿಂಗ್‍ವರ್ಮ್) ಮತ್ತು “ಮಹೋದರ” (“ಡ್ರಾಪ್ಸಿ” ಅಥವಾ “ಇಡೀಮ”) ಪೀಡಿತರಿಗಾಗಿ, “ಗಜಕರ್ಣ-ಮಹೋದರ ಮಹಾಶಾಂತಿ”, ಸಾಂಕ್ರಾಮಿಕರೋಗಪರಿಹಾರಕ್ಕಾಗಿ “ಮೂಷಕೇಶ್ವರ ಪ್ರದೋಷ”, ಮನೋವಿಕಾರ ಶಮನಕ್ಕಾಗಿ “ಚಂದ್ರದೋಷ ಸಂಸ್ಕಾರ”, ವಕ್ರತುಂಟ ಮಕ್ಕಳನ್ನು ತಿದ್ದಲು, “ಅಷ್ಟಾವಕ್ರ ಅಷ್ಟೋತ್ತರಶತನಾಮ ದೂರ್ವಾಯುಗ್ಮಾರ್ಚನೆ”, “ಲೆಕ್ಕವೇ ದುಃಖಕ್ಕೆ ಮೂಲಕಾರಣ” ಎಂದು ಗೋಳಿಡುವ ಮಕ್ಕಳಿಗಾಗಿ “ಗಣಿತಸಂಕಷ್ಟಹರಚತುರ್ಥೀವ್ರತ”, ಮಕ್ಕಳು ಉಗುರು ಕಚ್ಚುವುದನ್ನು ತಪ್ಪಿಸಲು “ಉಗುರು ವಾನರಸಿಂಹ ಕಲಶಾಭಿಷೇಕ”, “ನರ್ಸಿಂಗ್ ಹೋಮ್” ಉದ್ಯಮಗಳ ಉತ್ಕರ್ಷಕ್ಕಾಗಿ “ನರಸಿಂಗ ಹೋಮ”, ಶಬ್ದಮಾಲಿನ್ಯ ನಿರ್ಮೂಲನೆಗೆ “ಅಹೋರಾತ್ರಿ ಗಣಗಣ ಘಂಟಾಯಜ್ಞ”, ದೇಶಾರೋಗ್ಯಕ್ಕಾಗಿ “ತೇರಾಕೋಟಿ ವರೇಂದ್ರಮೋದಿನೀ ಪಾರಾಯಣ” ಮೊದಲಾದ “ಪ್ರಾಚೀನಾಧುನಿಕ” ಧಾರ್ಮಿಕವಿಧಿಗಳು, “ಬಹುವೇಷಿ ಬ್ರಹ್ಮಜ್ಞರ” “ದೂರದರ್ಶಕ” ಬಲದಿಂದಾಗಿ, “ಸಂಪ್ರದಾಯ” ಸರಣಿಯೊಳಗೆ ಸರಾಗವಾಗಿ ಸರಿದುಕೊಳ್ಳುವುವು. 

> ಜನರು ಆರ್ಥಿಕ ವಿಷಯಗಳಲ್ಲಿ, ಅರ್ಥವಿಲ್ಲದೆ ಆರ್ತರೂ, ಆತುರರೂ ಆಗುವರು. ಲಾಭ-ಲೋಭ ಲೀಲೆಗಳಲ್ಲಿ ಲೀನರಾಗಿ, ದಿನವೊಂದಕ್ಕೆ  ಎಂಟುಮಣ ಡಾಲರ್-ನೋಟುಗಳನ್ನು ಕೊಡುವ “ಶಮಂತಕಮಣಿಜಪ” ವಿಧಿಯನ್ನು  ಪ್ರತಿ ಮುಂಜಾನೆ ನೇಮದಿಂದ ನಡೆಸುವರು. ಹೀಗೆ ಮಾಡಿದಲ್ಲಿ, “ಸ್ವೀಡಿಶ್” ಎಂಬುದು “ಸ್ವದೇಶಿ” ಆಗಿ ತಿರುಗಿ, ಸ್ವೀಡನ್ ಗುಪ್ತನಿಧಿಗಳಲ್ಲಿರುವ “ಸ್ವೀಟಿಶ್” ಹಣವು ತಮ್ಮ ಸ್ವಂತ ಖಾತೆಗಳಿಗೆ ತಾನಾಗಿಯೇ ಒಂದಾನೊಂದು ಶುಭರಾತ್ರಿಯಲ್ಲಿ ಹರಿದುಬರುವುದು ಎಂದೂ ಕೆಲವರು ಕನಸುಕಾಣುವರು. ಬಂದೂಕ ಸಂಸ್ಕೃತಿಯು ವಿಪರೀತವಾಗಿ, ಗನ್ನೇಶ-ಗನ್‍ಪತಿಗಳು ಮನೆಗಳೊಳಗೇ ನುಗ್ಗಿ ಗುಂಡಿಕ್ಕುವರು. ಜನಸಾಮಾನ್ಯರು ಮೊರದಗಲ ಕಿವಿ (ಶೂರ್ಪಕರ್ಣ) ಮೂಲಕ ವದಂತಿಗಳಲ್ಲಿ ಕೆಟ್ಟಕುತೂಹಲ ತೋರುವರು. ಯುವನಾಯಕರು ವೈನ್ ಹಾಕಿ ವೈನಾಯಕೋತ್ಸವ ನಡೆಸುವರು, ಅಲ್ಲೇ ಮಧ್ಯೇಮಧ್ಯೇ ಮದ್ಯಾಘ್ರ್ಯವನ್ನು ಸಮರ್ಪಿಸುವರು, “ವಿನಾಯಗರ್” ಜನರು “ವಿನಿಗರ್” ನಿವೇದಿಸುವರು. ಗಣೇಶ ಬೀಡಿ ಸೇದಲು ವಿಘ್ನ ಒಡ್ಡುವುದಿಲ್ಲ ಎಂದು, “ಧೂಮಕೇತವೇ ನಮಃ” ಎನ್ನುತ್ತಾ ಧಿಮಾಕಿನಿಂದ ಧೂಮ್ರಪತ್ರವನ್ನು ಧಗಧಗಿಸುವರು, “ಹವಾನಸಿಗಾರ್ ಹವನ” ಮಾಡುವರು.  ಸ್ವ-ಪ್ರತಿಷ್ಠೆ ಅತಿಯಾದವರು ನವದೈವಮೂರ್ತಿಗಳ ಪ್ರತಿಷ್ಠೆ ಮಾಡುವರು. ವಾಸ್ತುದೇವದೂತರು, “ವಾಸ್ತುದೂಷಿತ” ಶಿಲ್ಪಗಳ ನಿರ್ನಾಮ ಹಾಗೂ “ವಾಸ್ತುಮಾನ್ಯ” ಶಿಲ್ಪಗಳ ನಿರ್ಮಾಣ ಕಾರ್ಯಗಳನ್ನು ರಾತ್ರೋರಾತ್ರಿ ಜಾರಿಗೊಳಿಸಿ, ವಾಸ್ತವತೆಯನ್ನೇ ವ್ಯತ್ಯಸ್ತಗೊಳಿಸುವರು, ತಮ್ಮದೇ ವಸ್ತುಸಂಪತ್ತನ್ನು ಸುವ್ಯವಸ್ಥಿತಗೊಳಿಸಿಕೊಳ್ಳುವರು.  

“ಘನೇಶ ಭವಿಷ್ಯೋತ್ತರ ಪ್ರಲಾಪಮು” ಹೀಗೆ ಹಲವಾರು ನೆಲೆಗಳಲ್ಲಿ ಚಿಂತಾಜನಕ ಶಕುನಗಳನ್ನು ನುಡಿದಿರುವುದಲ್ಲದೆ, ಅವುಗಳನ್ನು ನಿಭಾಯಿಸಲು ಕೆಲವು ಪರಿಹಾರೋಪಾಯಗಳನ್ನೂ ಅಲ್ಲಲ್ಲೇ ಸೂಚಿಸಿರುವುದು. 


ಮುಂದುವರೆಯುವುದು..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x