ಪುಟ್ಟಿ ಮತ್ತು ದೇವರು: ಅನಿತಾ ನರೇಶ್


ನಮ್ಮ ಪಕ್ಕದ ಮನೆ ಪುಟ್ಟಿಗೆ, ನಮ್ಮ ಮನೆಗೆ ಯಾವಾಗೆಂದರಾವಾಗ ಬರಲು ವೀಸಾ, ಪಾಸ್ಪೋರ್ಟ್ ಏನೂ ಬೇಡ. ಇವತ್ತು ಮಧ್ಯಾಹ್ನ ನನ್ನ ಊಟ ಆಗಿತ್ತಷ್ಟೇ. ಅವಳ ಹೆಜ್ಜೆಯ ಅಂದರೆ ಗೆಜ್ಜೆಯ ಸದ್ದು ಕೇಳಿಸಿತು.  ಒಂದು ಕೈಯಲ್ಲಿ ಕಥೆ ಪುಸ್ತಕ, ಇನ್ನೊಂದು ಕೈಯಲ್ಲಿ ಡ್ರಾಯಿಂಗ್ ಪುಸ್ತಕ ಹಿಡಿದು ‘ಅಕ್ಕಾ ಇವತ್ತು ಎರಡು ಕಥೆ, ಮೂರು ಡ್ರಾಯಿಂಗ್ ಗೊತ್ತಾಯ್ತಾ’ ಎಂದಳು. ನನ್ನದಿನ್ನೂ ಊಟದ ಪಾತ್ರೆಗಳನ್ನು ತೊಳೆಯುವ ಕೆಲಸ ಆಗಿರಲಿಲ್ಲ. ಹಾಗಾಗಿ ಅವಳನ್ನು ಅಲ್ಲೇ ಕಟ್ಟೆಯ ಮೇಲೆ ಕೂರಿಸಿ ಪಾತ್ರೆ ತೊಳೆಯಲು ಕುಳಿತೆ. 
ಸುಮ್ಮನೆ ಕೂರಲು ಅವಳೇನು ಮೂಕಮುನಿಯೇ? ಶುರು ಆಯ್ತು ಅವಳ ಪ್ರಶ್ನಾವಳಿ. 

“ಅಕ್ಕಾ ನಿಂಗೆ ಗೊತ್ತಾ?”
ಇದೇನೋ ತಲೆ ತಿನ್ನಲಿರುವ ಸಮಸ್ಯೆ ಎಂದು ಮಾತ್ರ ನನಗೆ ಗೊತ್ತಿದ್ದುದಲ್ಲದೇ ಬೇರೇನು ಗೊತ್ತಿಲ್ಲದ ಕಾರಣ ಏನು ಎಂಬಂತೆ ಅವಳೆಡೆಗೆ ನೋಡಿದೆ.
“ನೀನೀಗ ಪಾತ್ರೆ ತೊಳೀತಾ ಇದ್ದೀಯಲ್ಲ, ಆಗ ಎಲ್ಲಾ ಪಾತ್ರೆಯಲ್ಲೂ ನೊರೆ ಬರುತ್ತಲ್ವಾ.. ಅಲ್ಲೆಲ್ಲಾ ದೇವರು ಇರ್ತಾನೆ” ಎಂದಳು.
ಅಚ್ಚರಿಯಾಯಿತು. ಆದರೆ  ಅವಳು ಈ ಅಭಿಪ್ರಾಯಕ್ಕೆ ಬರಲೇನಾದರೂ ಕಾರಣವಿರಬೇಡವೇ? 
“ಅದ್ಹೇಗೆ ಪುಟ್ಟಿ ಇದರಲ್ಲಿ ದೇವರು ಇರ್ತಾನೆ ಅಂತೀಯಾ” ಎಂದೆ. 

“ಅಯ್ಯೋ ಅಷ್ಟು ಗೊತ್ತಾಗಲ್ವಾ.. ನಮ್ಮ ಮಾಮಿ ಹೇಳಿದ್ರು ಸೂರ್ಯ ನಮಗೆ ಬೆಳಕನ್ನು ಕೊಡುವ ದೇವರು ಅಂತ. ಇದರಲ್ಲಿ ನೋಡು ಎಷ್ಟು ಸೂರ್ಯ ಇದೆ” ಎಂದಳು. ನಾನು ಕಣ್ಣು ಬಿಟ್ಟು ನೋಡಿದೆ. ಹೌದಲ್ವಾ.. ಎಲ್ಲಾ ಸಾಬೂನಿನ ಗುಳ್ಳೆಯೂ ಒಂದೊಂದು ಸೂರ್ಯನನ್ನು ತನ್ನೊಳಗೆ ತುಂಬಿಟ್ಟಿತ್ತು. 
“ಆದ್ರೆ ನಾನೀಗ ನೀರು ಹಾಕಿದಾಗ ಈ ದೇವರು ಎಲ್ಲಾ ಕರಗಿ ಹೋಗ್ತಾರಲ್ವಾ ಪುಟ್ಟಿ”
ಅವಳು ಈವರೆಗೆ ಕಂಡ ಮಹಾಪೆದ್ದಿಯೆಂದರೆ ನಾನೆ ಎಂಬಂತೆ ತಲೆಗೆ ಹೊಡೆದುಕೊಳ್ಳುತ್ತಾ “ ಅಯ್ಯೋ ಅದೆಲ್ಲಿ ಕರಗಿ ಹೋಗುತ್ತೆ. ಅದು ನೀರು ದೇವರ ಜೊತೆ ಆಟ ಆಡಲು ಹೋಗುತ್ತೆ” ಅಂದಳು. 

“ಹೌದಾ.. ಹಾಗಿದ್ರೆ ಸ್ವಲ್ಪ ಹೊತ್ತಿನಲ್ಲಿ ಅವೆರಡು ನೋಡಲ್ಲಿ ಆ ಬಸಳೆ ಚಪ್ಪರದ ಬುಡಕ್ಕೆ ಹೋಗಿ ಕಾಣೆಯಾಗುತ್ತಲ್ವಾ” ಅಂದೆ.. ನನಗೆ ಸ್ಪಷ್ಟವಿತ್ತು. ಈ ಪ್ರಶ್ನೆಗೆ ಪುಟ್ಟಿಯಿಂದ ಉತ್ತರ ಬರಲಾರದೆಂದು.. ಆದರೆ ನನ್ನ ನಂಬಿಕೆಯನ್ನು ಸುಳ್ಳು ಮಾಡಿ ಈಗ ನೇರಾನೇರವಾಗಿ 
“ಅಕ್ಕಾ ನಿನಗೇನೂ ಗೊತ್ತಿಲ್ಲ ಅವೆರಡೂ ಈಗ ಕಣ್ಣಾ ಮುಚಾಲೆ ಆಡ್ತಿದ್ದಾವೆ.. ಆಗ ಕಾಣೋದು ಹೇಗೆ” ಎಂದಳು. 

“ಹೌದಾ.. ಹಾಗಿದ್ರೆ ಮತ್ಯಾವಾಗ ಕಾಣೋದು ಅವು” ಅಂದೆ
ನಳ್ಳಿಯ ನೀರನ್ನು ರಭಸವಾಗಿ ಬಿಟ್ಟಳು. ನೀರಿನ ಜೊತೆ ನೊರೆಯೂ ಬಂತು. “ನೋಡು ಮತ್ತೆ ಬಂತು” ಎಂದಳು. 
ಅರೆರೆ.. ಈ ಲಾಜಿಕ್ ನಂಗೆ ಇಷ್ಟರವರೆಗೆ ಗೊತ್ತೇ ಇರ್ಲಿಲ್ಲವಲ್ಲಾ ಅಂತ ಅಚ್ಚರಿಯಾಗುವುದರ ಜೊತೆಗೆ ಪಾತ್ರೆ ತೊಳೆದೂ ಮುಗಿದಿತ್ತು.

“ಅಕ್ಕಾ ನಂಗೆ ಫ್ರಿಡ್ಜಲ್ಲಿರೋದು ಏನೂ ಕೊಡ್ಬಾರ್ದು ಅಂತ ಅಮ್ಮ ಹೇಳಿದ್ದಾಳೆ. ನಂಗೆ ಕೆಮ್ಮು ದೇವರು ಬರುತ್ತೆ” ಅಂದಳು. 
ನನಗೀಗ ಗೊತ್ತಾಯ್ತು ಇದು ಮೊನ್ನೆಯ ನನ್ನ ಭಕ್ತ ಪ್ರಹ್ಲಾದ ಕಥೆಯ ಆಪ್ಟರ್ ಇಪೆಕ್ಟ್ ಅಂತ. 
ಅವಳ ಮತ್ತಿನೆಲ್ಲಾ ಮಾತುಗಳು ಇಂತಹದೇ ಹತ್ತು ಹಲವು ಕಲ್ಪನೆಗಳ ದಾರಿ ಹಿಡಿದು ಎಲ್ಲೆಲ್ಲೋ ಕವಲೊಡೆದು ಮೂಲವನ್ನು ಸೇರಿಕೊಳ್ಳುತ್ತಿತ್ತು.
ನಮ್ಮ ಪುರಾಣದ ಕಥೆಗಳ ಗಮ್ಮತ್ತೇ ಅಂತಹುದು. ರಾಮಾಯಣ, ಮಹಾಭಾರತದಂತಹ  ಮಹಾಕಾವ್ಯಗಳೇ ಇರಲಿ ವೇದ, ಪುರಾಣಗಳಲ್ಲಿ ಬರುವ ಕಥೆಗಳೇ ಇರಲಿ ಎಲ್ಲವೂ ಎಂತಹ ಅದ್ಭುತ ಲೋಕಗಳನ್ನು ಕೇಳುಗರ ಮನದಲ್ಲಿ ಸೃಷ್ಟಿಸುತ್ತವೆ ಎಂದರೆ ಅದಿನ್ನೂ ನಮ್ಮ ಕಣ್ಣೆದುರೇ ನಡೆಯುತ್ತಿದೆಯೇನೋ ಎನ್ನುವಷ್ಟು.. 
ಇದು ಒಂದು ಕಥಾ ಸೃಷ್ಟಿ ನಮ್ಮಲ್ಲಿ ಮಾಡುವ ಸಂಚಲನ.
 
ಸುಮ್ಮನೆ ಸರಳವಾಗಿ ಕಥೆಯೆಂದೇ ತಿಳಿದು ರಾಮಾಯಣದ ಕಥಾ ಹಂದರವನ್ನೊಮ್ಮೆ ಹರವಿಕೊಳ್ಳಿ. ಮಕ್ಕಳೇ ಇಲ್ಲದ ರಾಜ ದಶರಥ ಒಂದು ಶಾಪ ಪಡೆಯುತ್ತಾನೆ. ನಿನಗೂ ಪುತ್ರ ವಿಯೋಗದ ದುಃಖದಿಂದಲೇ ಮರಣ ಬರಲಿ. ರಾಜ ಒಂದು ಕ್ಷಣ ದಂಗಾದರೂ, ಇದುವರೆಗೆ ಇದ್ದ ಮಕ್ಕಳಿಲ್ಲ ಎನ್ನುವ ದುಃಖದಿಂದ ಮುಕ್ತಿ ಸಿಕ್ಕಿತಿನ್ನು ಎಂದು ಸಂತಸಪಡುತ್ತಾನೆ. ಅಂದರೆ ರಾಮನ ಹುಟ್ಟಿನ ಮೊದಲೇ ಅವನ ವನವಾಸದ ದಿನಗಳು  ನಿಶ್ಚಿತವಾಗಿತ್ತೇ? ಕಥೆ ಮುಂದುವರಿಯುತ್ತಾ ಎತ್ತಣ ಅಯೋಧ್ಯೆಯ ರಾಮ ಎತ್ತಣ ಲಂಕೆಯ ರಾವಣನೊಡನೆ ಯುದ್ಧಮಾಡಬೇಕಾಗುತ್ತದೆ. ಸುಮ್ಮನೆ ಕಣ್ಣು ಮುಚ್ಚಿ ಯೋಚಿಸಿ. ಒಬ್ಬ ಮನುಷ್ಯ ಆಗಿನ ಕಾಲದಲ್ಲಿ ಕಾಲ್ನಡಿಗೆಯಲ್ಲಿಯೋ ಕುದುರೆ ಸವಾರಿಯಲ್ಲಿಯೋ ಎಷ್ಟು ದೂರ ಕ್ರಮಿಸಬಲ್ಲ?  ಅವನಿರುವ ಸ್ಥಳದಿಂದ ಸಂಪೂರ್ಣ ಬೇರಾಗಿರುವ ಮತ್ತು ಈಗಲೂ ಪ್ರತ್ಯಕ್ಷವಾಗಿ ಅಲ್ಲೇ ಇರುವ ಲಂಕೆಯ ವರ್ಣನೆ ಆಗಿನ ಕಾಲದಲ್ಲಿ ಕಲ್ಪನೆಯಲ್ಲೇ ಮೂಡಿದ್ದಾಗಿತ್ತೇ?  ಅಥವಾ ಅದನ್ನು ಬರೆಯಲೆಂದು ವಾಲ್ಮೀಕಿ ಮಹರ್ಷಿಗಳು ಅಷ್ಟು ದೂರವನ್ನು ಕ್ರಮಿಸಿದ್ದರೇ? ಸಮುದ್ರ ಮಾರ್ಗದಲ್ಲಿ ಸಾಗಿ ಲಂಕಾ ನಗರಿಯನ್ನು ಕಂಡಿದ್ದರೇ? ಆಗಿನ ಕಾಲದಲ್ಲೇ ಪುಷ್ಪಕ ವಿಮಾನ ಎಂಬ ಆಕಾಶಮಾರ್ಗದಲ್ಲಿ ಹಾರುವ ವಾಹನವನ್ನು ಕಲ್ಪಿಸಲು ಸಾಧ್ಯವಿತ್ತೇ ಅಥವಾ ಆಗಿನ ಕಾಲದ ವಿದ್ಯೆ ಅಷ್ಟು ಮುಂದುವರಿದಿತ್ತೇ? ಮನುಷ್ಯರಿಗೂ ಮೃಗಗಳಿಗೂ ಸಖ್ಯ ಸಾಧ್ಯವಿತ್ತೇ? ಕ್ಷಣದಲ್ಲಿ ಸುಂದರ ಹೆಣ್ಣಾಗಿ ಮಾರ್ಪಡುವ ಶೂರ್ಪನಖಿಯೋ, ಅಥವಾ ಜಿಂಕೆಯಾಗುವ ಮಾರೀಚನೋ, ಇಂತಹ ವಿದ್ಯೆಯೊಂದು ಇತ್ತೇ? ನಾಗರೀಕತೆ ಅಂತ ನಾವೇನು ಈಗ ಹೆಳುತ್ತೇವೆ ಅದು ಅಷ್ಟು ಮುಂದುವರಿದಿತ್ತೇ? ಅಂತಹ ಅದ್ಭುತ ಪುಸ್ತಕವನ್ನು ನೀವು ಓದುವಾಗ ನಿಮ್ಮಲ್ಲಿ ಇಂತಹ ಹತ್ತು ಹಲವು ವಿಚಾರಗಳನ್ನು ಹುಟ್ಟುಹಾಕಬೇಕೇ ವಿನಃ. ಅದರಲ್ಲಿರುವ ರಾಮ ದಶರಥನ ಮಗನಲ್ಲ, ರಾಮ ಏಕಪತ್ನೀವೃತಸ್ಥನಲ್ಲ ಎಂಬೆಲ್ಲ ಪೊಳ್ಳುವಾದಗಳನ್ನಲ್ಲ. 

ಓದಿಕೊಂಡಿರುವವರು ಎಂದು ಹೇಳುವವರು ಮುಂದಿನ ಪೀಳಿಗೆಗೆ ದ್ವೇಷದ ಬೀಜವನ್ನು ಉಡುಗೊರೆಯಾಗಿ ಕೊಡುವುದಲ್ಲ. ಮಾತು ಬರುತ್ತದೆ ಎಂದು ಏನೇನನ್ನೋ ಹೇಳಿ ತಮ್ಮ ಯೋಗ್ಯತೆಯನ್ನು ಎಲ್ಲರಿಂದಲೂ ಅಳತೆ ಮಾಡಿಸಿಕೊಳ್ಳುವುದಲ್ಲ. 

ರಾಮಾಯಣ ಮಹಾಭಾರತಗಳನ್ನು ನೀವು ನಿಜವೆಂದು ನಂಬುವುದಿಲ್ಲವೇ? ರಾಮ, ಕೃಷ್ಣರನ್ನು ದೇವರೆಂದು ಒಪ್ಪಿಕೊಳ್ಳುವುದಿಲ್ಲವೇ? ಬೇಡ. ಅದರಿಂದೇನೂ ನಷ್ಟವಿಲ್ಲ. ಆದರೆ  ಎಂದೋ, ತಮ್ಮ ಜೀವಿತಕಾಲವನ್ನೆಲ್ಲಾ ಇಂತಹ ಮಹಾನ್ ಗ್ರಂಥಕ್ಕೆಂದೇ ಮೀಸಲಿಟ್ಟ ಮಹಾನ್ ಬರಹಗಾರರನ್ನು. ಅವರು ಬರೆದಿಟ್ಟು ಈಗಲೂ ಜನಮಾನಸದಲ್ಲಿ ಅಳಿಸಲಾಗದಂತೆ ಅಚ್ಚೊತ್ತಿ ಹೋದ ಮಹಾನ್ ಗ್ರಂಥಗಳನ್ನು ನಿಮ್ಮ  ಅಳತೆಗೋಲಿನಲ್ಲಿ ಅಳೆಯುವುದಿದೆಯಲ್ಲ.. ಅದು ಸಮುದ್ರವನ್ನು ಚಮಚದಿಂದ ಅಳೆದಂತೆ. 

ಮನುಷ್ಯ ತನ್ನ ನಡವಳಿಕೆಯಿಂದ ಕತ್ತರಿಯಂತೆ ಉಳಿದವರ ಭಾವನೆಗಳನ್ನು ಇಬ್ಬಾಗವಾಗಿಸಬಾರದು. ಸಾಧ್ಯವಿದ್ದರೆ ಸೂಜಿಯಂತೆ ಹರಿದ ತುಂಡುಗಳನ್ನು ಬೆಸೆಯುವ ಪ್ರಯತ್ನ ಮಾಡಲಿ. 
-ಅನಿತಾ ನರೇಶ್ 


 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
ಮಾಲಾ
ಮಾಲಾ
8 years ago

ಇಬ್ಭಾಗವಾಗಿಸುವ ಜನರಿಗೆ ಲೇಖನದ  ಕೊನೆಯ ಸಾಲು ಅರ್ಥವಾದರೆ ಎಷ್ಟು ಚೆನ್ನ. ಈ ಲೇಖನದ ಮೂಲಕ ಅಂಥವರಿಗೆ ಸೂಜಿ ಚುಚ್ಚಿ ಎಚ್ಚರಿಸಿದ ನಿಮಗೆ ವಂದನೆಗಳು! 

ಮಾಲಾ

Kiran
Kiran
8 years ago

ವಕ್ರವಾಗಿ ಮಾತಾಡದಿದ್ದರೆ ಆ ಭಗವಾನ(ರ), ಕಾರ್ನಾಡ,
ಯೋಗೇಶ, ಬರಗೂರು ಇತ್ಯಾದಿ ಗ್ಯಾಂಗಿಗೆ ಪ್ರಚಾರ ಸಿಗುವುದಾದರೂ ಹೇಗೆ?
ಪ್ರ‍ಚಾರ ಸಿಗದಿದ್ದರೆ ಪ್ರಶಸ್ತಿ, ಬಹುಮಾನ ಸಿಗುವುದಾದರೂ ಹೇಗೆ?
ಇದೆಲ್ಲವೂ ಸಿಗದಿದ್ದರೆ ಅವುಗಳು ಹುಟ್ಟಿದ್ದು ಸಾರ್ಥಕವಾಗುವುದಾದರೂ ಹೇಗೆ?

ಬಹುಮಾನ ಸಿಗುವುದೆಂದರೆ ಮಾನ ಹೋದರೂ ಸರಿಯೇ ಅನ್ನುವ
ಕೋಡಂಗಿಗಳನ್ನು ತಿದ್ದುವುದು ಅಸಾಧ್ಯ.

ಸುವಿಚಾರಕ್ಕಿಂತಲೂ ವಿಕೃತಕ್ಕೇ
ಗೆಲುವು ಈ ಕಾಲದಲ್ಲಿ…

Anitha Naresh Manchi
Anitha Naresh Manchi
8 years ago

Tnq 🙂

ಸಾವಿತ್ರಿ.ವೆಂ.ಹಟ್ಟಿ
ಸಾವಿತ್ರಿ.ವೆಂ.ಹಟ್ಟಿ
8 years ago

ಲೇಖನ ಬಹಳ ಇಷ್ಟವಾಯಿತು ಮೇಡಮ್…

ಮಂಜು
ಮಂಜು
7 years ago

ಮಗುವಿನ ನಂಬಿಕೆಗು, ರಾಮಾಯಣಕ್ಕು ಎತ್ತಣದಿಂದೆತ್ತಣ ಸಂಬಂಧವಯ್ಯ, ಕೊನೆಯ ಸಾಲು ಅರ್ಥಗರ್ಭಿತವಾಗಿದೆ.

5
0
Would love your thoughts, please comment.x
()
x