Facebook

ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ– 7: ಅಖಿಲೇಶ್ ಚಿಪ್ಪಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಕೊನೆಯ ಕಂತು:

ವಸ್ತುಗಳು ಇವತ್ತು ಜನರನ್ನು ಆಳುತ್ತಿವೆ. ಟಿ.ವಿ.ಯಲ್ಲಿ ಬರುವ ಪ್ರತಿಯೊಂದು ವಸ್ತುವೂ ಮನುಷ್ಯನಿಗೆ ಅತಿ ಅಗತ್ಯ ಎಂದು ಬಿಂಬಿಸಲಾಗುತ್ತಿದೆ. ಪ್ರತಿಯೊಂದಕ್ಕೂ ಯಂತ್ರಗಳ ಬಳಕೆ ಶುರುವಾಗಿದೆ. ನಿಮ್ಮಲ್ಲಿ ವಾಶಿಂಗ್ ಮಷಿನ್ ಇಲ್ಲ ಅಂದರೆ ನಿಮ್ಮ ಸಾಮಾಜಿಕ ಸ್ತರದಲ್ಲಿ ಒಂದು ಮೆಟ್ಟಿಲು ಕಡಿಮೆಯಾಗುತ್ತದೆ. ಯಂತ್ರಗಳ ಸಂಖ್ಯೆ ನಿಮ್ಮ ಮನೆಯಲ್ಲಿ ಹೆಚ್ಚು-ಹೆಚ್ಚು ಇದ್ದ ಹಾಗೆ ನಿಮ್ಮ ಸಾಮಾಜಿಕ ಸ್ತರ ಸದಾ ಮೇಲ್ಮುಖಿಯಾಗಿಯೇ ಇರುತ್ತದೆ. ಹವಾಮಾನ ಬದಲಾವಣೆಗೂ ಹಾಗೂ ವೈಯಕ್ತಿಕ ಬದುಕಿಗೂ ನೇರ ಸಂಬಂಧವಿದೆ. ನಿಮ್ಮ ಜೀವನಶೈಲಿಯ ಬದಲಾವಣೆಯಿಂದಾಗಿ ನೀವೊಬ್ಬ ಪರಿಸರಸ್ನೇಹಿ ವ್ಯಕ್ತಿಯಾಗಿ ಬಾಳಬಹುದು. ಆದರೆ, ಇದಕ್ಕೆ ಇಚ್ಛಾಶಕ್ತಿ ಇರಬೇಕು. ಇದನ್ನೆ ನೇರವಾಗಿ ಹೇಳಬಹುದಾದರೆ, ಶಕ್ತಿ ಅವಲಂಬಿತ ಯಂತ್ರಗಳನ್ನು ತ್ಯಜಿಸುವಿಕೆ, ಉದಾಹರಣೆಯಾಗಿ ವಾತಾನುಕೂಲ, ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸುವುದು, ಸೈಕಲ್ ಅಥವಾ ನಡಿಗೆ, ಸ್ಥಳೀಯವಾಗಿ ಬೆಳೆಯುವುದನ್ನೇ ಉಪಯೋಗಿಸುವುದು ಇತ್ಯಾದಿ.

ಹವಾಮಾನ ಬದಲಾವಣೆ ಎನ್ನುವುದು ಒಂದು ವ್ಯವಸ್ಥಿತ ಸಮಸ್ಯೆಯಾಗಿದ್ದು, ವೈಯಕ್ತಿಕ ಮಟ್ಟದ ಪ್ರಯತ್ನಗಳು ಇದನ್ನು ತಗ್ಗಿಸುವಲ್ಲಿ ಯಾವುದೇ ಕೊಡುಗೆಯನ್ನು ನೀಡುವುದಿಲ್ಲ ಎಂಬ ವಾದವೂ ಇದೆ. ಇರಲಿ, ನಿಮಗೆ ಬೇಕಾದ ತರಕಾರಿಗಳನ್ನು ನೀವೇ ಬೆಳೆದುಕೊಳ್ಳುವ, ನಿಮ್ಮ ಮನೆಯ ಸೂರಿಗೆ ಸೌರಶಕ್ತಿಯ ಹಾಳೆಗಳನ್ನು ಹಚ್ಚುವ ಕೆಲಸಕ್ಕೆ ಅದ್ಯಾರೋ ಕ್ಯೂಬಾ ಅಥವಾ ಜರ್ಮನಿಯವರೋ ಬರಬೇಕಾಗಿಲ್ಲ. ನೀವೊಮ್ಮೆ ವಾತಾವರಣ ಬದಲಾವಣೆಯ ಕುರಿತಾದ ಚರ್ಚೆಗೆ ನಾಂದಿ ಹಾಡಿದಿರಿ ಎಂದುಕೊಳ್ಳಿ, ನಿಮ್ಮ ಸುತ್ತಲಿನ ಅಥವಾ ನೀವು ಪ್ರೇರಪಿಸಲ್ಬಟ್ಟ ವ್ಯಕ್ತಿಗಳು ನಿಮ್ಮನ್ನು ಹಿಂಬಾಲಿಸುತ್ತಾರೆ. ಹೀಗೆ ಇಂತದೊಂದು ಮನ:ಸ್ಥಿತಿ, ಧನಾತ್ಮಕವಾಗಿ ವ್ಯಾಪಿಸಲು ಶುರುವಾಗುತ್ತದೆ.

ನಾಳೆ ಭೂದಿನ ಆದ್ದರಿಂದ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ದೀಪವನ್ನು ಉರಿಸಬಾರದು ಎಂಬ ಮನವಿಯಿಂದಾಲಿ, ಯಾರಾದರೊಬ್ಬರು ತಮ್ಮ ಮನೆಯ ಇನ್‍ಕ್ಯಾಂಡಿಸೇಟ್ ಬಲ್ಬ್ ತೆಗೆದು ಎಲ್.ಇ.ಡಿ. ಅಳವಡಿಸಿದರಾಗಲಿ, ವಾತಾವರಣ ಬದಲಾವಣೆಯಾಗುವುದೇನು ನಿಲ್ಲುವುದಿಲ್ಲ. ಈಗಾಗಲೇ ತಿಳಿಸಿದಂತೆ, ಹವಾಮಾನ ಬದಲಾವಣೆಯನ್ನು ಬರೀ ತಂತ್ರಜ್ಞಾನದ ಸಹಾಯದಿಂದ ಮಾತ್ರ ತಡೆಯಲು ಸಾಧ್ಯವಿಲ್ಲ. ಇದಕ್ಕೆ ರಾಜಕೀಯ, ಸಾಮಾಜಿಕ, ಆರ್ಥಿಕ ಸಮಾನತೆಯೂ ಇರಬೇಕಾಗುತ್ತದೆ, ಸಾರ್ವಜನಿಕರ ಸಹಭಾಗಿತ್ವ, ಸರ್ಕಾರಗಳ ಮೇಲೆ ಒತ್ತಡ ಹೇರುವುದು, ಸೂಕ್ತವಾದ ಕಾನೂನು ಅಂಶಗಳ ತಿದ್ದುಪಡಿ ಹೀಗೆ ಹಲವು ಅಂಶಗಳನ್ನು ಒಟ್ಟಿಗೆ ಸೇರಿಸಿಕೊಂಡು ಕೆಲಸ ಮಾಡಬೇಕಾಗುತ್ತದೆ. 

ಹವಾಮಾನ ಬದಲಾವಣೆಯ ಕುರಿತಾದ ವ್ಯಾಪಕವಾದ ಚರ್ಚೆ ನಡೆಯುವ ಅಗತ್ಯ ಇದೆ. ಇದಕ್ಕಾಗಿ ಜನರ ಸಹಭಾಗಿತ್ವ ಹೊಂದುವುದು ಅತಿ ಮುಖ್ಯವಾಗಿದೆ. ಅದರಲ್ಲೂ ಹಳ್ಳಿಗಾಡಿನಲ್ಲಿ ಈ ಕುರಿತ ಜಾಗೃತಿಯಾಗಬೇಕಾದ ಅನಿವಾರ್ಯತೆ ಇದೆ. ವಾತಾವರಣ ಬದಲಾವಣೆಯ ತೂಗುಕತ್ತಿ ಮುಖ್ಯವಾಗಿ ತೂಗುತ್ತಿರುವುದು ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಮೇಲೆ. ಹೀಗಿದ್ದಾಗ, ಈ ಪ್ರಕ್ರಿಯೆ ತಮ್ಮ ಜೀವನದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಈ ವರ್ಗ ತಿಳಿಯಬೇಕಾಗಿದೆ. ಹೇಗೆ ಈ ವಾತಾವರಣ ಬದಲಾವಣೆಯ ಜೊತೆ ಬದುಕಬಹುದು ಎಂದು ಕಂಡುಕೊಳ್ಳಬೇಕಾಗುತ್ತದೆ. ಸೂಕ್ತ ಪಾರಂಪಾರಿಕ ತಳಿಯಾಗಲಿ ಅಥವಾ ಬೆಳೆಯ ಬದಲಾವಣೆಯಾಗಲಿ ಇದಕ್ಕೆ ಉತ್ತರವಾಗಬಲ್ಲದು ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. 

ನೀವು ಹಳ್ಳಿಯಲ್ಲೇ ಇರಿ ಅಥವಾ ಪಟ್ಟಣದಲ್ಲಿ, ವಾತಾವರಣದ ಬದಲಾವಣೆಯಿಂದಾಗುವ ಪರಿಣಾಮಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹೆಚ್ಚು-ಹೆಚ್ಚು ಜನರನ್ನು ಜಾಗೃತಗೊಳಿಸುವುದು ಈ ಹೊತ್ತಿನ ತುರ್ತು ಅಗತ್ಯವಾಗಿದೆ. ವೈಯಕ್ತಿಕ ಮಟ್ಟದಲ್ಲಿ ಸಾಧ್ಯವಾದಷ್ಟು ಸಿತ್ಯಾಜ್ಯ ಪ್ರಮಾಣವನ್ನು ಕಡಿಮೆಗೊಳಿಸುವುದರ ಜೊತೆಗೆ ಸ್ಥಳೀಯ ಆಡಳಿತ, ಆಳುತ್ತಿರುವ ಸರ್ಕಾರಗಳನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಭಾರತದಂತಹ ಸಡಿಲ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಬಂಡವಾಳಶಾಹಿಗಳು ಯಾವಾಗಲೂ ವಿಜೃಂಭಿಸುತ್ತಾರೆ. ಇಡೀ ದೇಶದ ನೈಸರ್ಗಿಕ ಸಂಪತ್ತು ಕೆಲವೇ ಜನರಿಂದ ಅಪಹರಿಸಲ್ಪಡುತ್ತದೆ. ಭಾರತದ ಮಟ್ಟಿಗೆ ಹೇಳುವುದಾದರೆ, ಸೀಮಿತ ನೈಸರ್ಗಿಕ ಸಂಪತ್ತು ಎಣೆಯಿಲ್ಲದ ಬೇಡಿಕೆಯ ನಡುವೆ ನಲುಗುತ್ತಿದೆ. ಸಾರ್ವಜನಿಕರ ತೆರಿಗೆಯ ಹಣದ ಬಹುಪಾಲು ಶಕ್ತಿಯ ಸಂಚಯಕ್ಕೆ ವಿನಿಯೋಗವಾಗುತ್ತಿದೆ. ಪರಿಸರಸ್ನೇಹಿಯಲ್ಲದ ಅಣು ಆಧಾರಿತ ವಿದ್ಯುತ್ (ಕೋಡಂಕುಳಂ, ಜೈತಾಪುರ) ಹಾಗೂ ಕಾಡು-ಅರಣ್ಯಗಳನ್ನು ಮುಳುಗಿಸುವ ಜಲವಿದ್ಯುತ್‍ನಂತಹ (ನರ್ಮದಾ, ಪೂಲಾವರಂ) ಬೃಹತ್ ಯೋಜನೆಗಳಿಗೆ ಎಲ್ಲಾ ಸರ್ಕಾರಗಳೂ ಒತ್ತು ನೀಡುತ್ತಿವೆ. ಜರ್ಮನಿಯಂತಹ ತಂಪು ದೇಶದಲ್ಲಿ ಸೌರಶಕ್ತಿಯನ್ನು ವ್ಯಾಪಕವಾಗಿ ಬಳಸಿಕೊಳ್ಳಲು ಕಾರಣ ಅಲ್ಲಿನ ಜನಜಾಗೃತಿ ಮುಖ್ಯ ಕಾರಣವಾಗಿದೆ. ಇಲ್ಲಿನ ಆಳುವ ಪ್ರಭುಗಳಿಗೆ ಹೊರದೇಶಗಳ ಅಂಧಾನುಕರಣೆ ಮುಖ್ಯವಾಗುತ್ತದೆ. ಸ್ಥಳೀಯವಾದ ಸಂಪತ್ತು ದೊಡ್ಡ ದೊಡ್ಡ ಯೋಜನೆಗಳನ್ನು ಪ್ರೋತ್ಸಾಹಿಸುವ ಧಣಿಗಳಿಗೆ ಕಾಲ ಕಸವಾಗಿ ತೋರುತ್ತದೆ. ಮುಖ್ಯವಾಗಿ ದೇಶದಲ್ಲಿ ಎಲ್ಲಾ ಸ್ತರಗಳಲ್ಲೂ ಅಸಮಾನತೆ ಭೂತ ತಾಂಡವವಾಡುತ್ತಿದೆ. ಜಾತಿಗಳ ಅಸಮಾನತೆ, ಲಿಂಗಾಧಾರಿತ ಅಸಮಾನತೆ, ಆರ್ಥಿಕವಾದ ಅಸಮಾನತೆ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕ್ರತಿಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಸಮಾನತೆ ಎದ್ದು ಕಾಣುತ್ತಿದೆ.

ವಾತಾವರಣ ಬದಲಾವಣೆಯಿಂದಾಗಿ ಈ ಎಲ್ಲಾ ಅಸಮಾನತೆಗಳು ತಮ್ಮ ಪ್ರಸ್ತುತ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಸಾಗಿದೆ. ಮಾನವ ಕೇಂದ್ರಿತ ಹಾಗೂ ಸುಸ್ಥಿರವಲ್ಲದ ಅಭಿವೃದ್ಧಿಯು ಕಟ್ಟ ಕಡೆಗೆ ಅವಸಾನದ ಹೊಸ್ತಿಲಿಗೆ ಬಂದು ನಿಲ್ಲುವುದರಲ್ಲಿ ಯಾವುದೇ ಸಂಶಯ ಬೇಡ. ಮನುಷ್ಯರೆಂದರೆ, ಪ್ರಪಂಚದ ಇನ್ನಿತರ 1.7 ಮಿಲಿಯನ್ ಜೀವಪ್ರಬೇಧಗಳಲ್ಲಿ ಒಂದು ಕೊಂಡಿ ಮಾತ್ರ ಎನ್ನುವುದನ್ನು ಮರೆಯಲಾಗಿದೆ. ಈ ಸಂಕೀರ್ಣವಾದ ಜೀವಜಾಲದ ಕೊಂಡಿಯಲ್ಲಿರುವ ಎಲ್ಲಾ ಪ್ರಾಣಿ-ಸಸ್ಯಪ್ರಬೇಧಗಳು ಅತಿಮುಖ್ಯವಾಗಿವೆ ಎನ್ನುವುದು ಬುದ್ಧಿವಂತ ಜನಾಂಗಕ್ಕೆ ಇನ್ನೂ ಜ್ಞಾನೋದಯವಾಗಿಲ್ಲದಿರುವುದು ಪ್ರಜ್ಞಾಪೂರ್ವಕವಾದ ಗಂಭೀರ ಅಪರಾಧವೇ ಆಗಿದೆ.

ಬಂಡವಾಳಶಾಹಿಯೆನ್ನುವುದು ಅತ್ಯಂತ ನಿಷ್ಕರುಣಿಯಾದ ವ್ಯವಸ್ಥೆಯಾಗಿದೆ. ಇದು ಎಲ್ಲವನ್ನೂ ನುಂಗುತ್ತಾ ಸಾಗುತ್ತದೆ. ಕಾರ್ಮಿಕರನ್ನು ಶೋಷಿಸುತ್ತಾ, ರಾಜಕೀಯಸ್ಥರನ್ನು ಓಲೈಸುತ್ತಾ, ವಿರೋಧಿಗಳನ್ನು ಹತ್ತಿಕ್ಕುತ್ತಾ ಸಾಗುವ ಬಂಡವಾಳಶಾಹಿತನಕ್ಕೆ ಲಾಭವಲ್ಲದೇ ಬೇರೆ ಏನು ಮುಖ್ಯವಲ್ಲ. ಇದರ ಮಧ್ಯೆಯೂ ಅಭಿವೃದ್ಧಿ ಎನ್ನುವ ಮಂತ್ರ ಜಪಿಸುವ ದಾರಿ ತಪ್ಪಿಸಲ್ಪಟ್ಟ ಜನಸಾಮಾನ್ಯರೂ ಇದ್ದಾರೆ. ನಮ್ಮ ತಾಲ್ಲೂಕಿಗೆ ಇಷ್ಟು ಹಣ ಬಂತು ಎಂದು ಸ್ವಯಂಖುಷಿಪಡುವ ಅದೆಷ್ಟೋ ಮಧ್ಯಮವರ್ಗದ ಹಲವರಿಗೆ ಬಂದ ಹಣ ಸರಿಯಾಗಿ ವಿನಿಯೋಗಿಸಲ್ಪಟ್ಟಿಲ್ಲ ಎಂಬ ಸತ್ಯ ಅರಗುವುದಿಲ್ಲ. ಭ್ರಷ್ಟಾಚಾರವೆನ್ನುವುದು ಶಿಷ್ಟಾಚಾರವಾಗಿ ಮಾರ್ಪಟ್ಟಿದ್ದರ ಪರಿಣಾಮವಿದು.

ವಾತಾವರಣದ ಬದಲಾವಣೆಯ ಹೊಸ್ತಿಲನ್ನು ದಾಟಿಯಾಗಿದೆ. ವಾತಾವರಣಕ್ಕೆ ತಕ್ಕನಾಗಿ ಬದುಕು ಕಟ್ಟಿಕೊಳ್ಳುವ ಹೊತ್ತಿನಲ್ಲಿ ಸಮಾನತೆ ಸಾಧಿಸುವುದು ಅನಿವಾರ್ಯವಾಗಿದೆ. ಜನಗಳ ನಡುವೆ ಸಮಾನತೆ ಇರಬೇಕು. ಭೂಮಿಯ ಸಮಾನ ಹಂಚಿಕೆ ಆಗಬೇಕು. ಅತ್ಯಂತ ದುರ್ಭಲ ಪ್ರಜಾಪ್ರಭುತ್ವ ಹೊಂದಿದ ಭಾರತದಲ್ಲಿ  ಸಿರಿವಂತರ ಹಪಾಹಪಿತನ ಕಡಿಮೆಯಾಗಬೇಕು ಎಂದು ಬಯಸುವುದು ಅತ್ಯಂತ ಸಂಕೀರ್ಣವಾದ ವಿಷಯವಾದರೂ ಇದಕ್ಕೂ ಗಮನ ನೀಡಬೇಕು. ಶುದ್ಧ ಗಾಳಿ, ನೀರು ಇತ್ಯಾದಿಗಳು ಇಲ್ಲಿನ ಪ್ರತಿ ಪ್ರಜೆಗೂ ಸಮಾನವಾಗಿ ಲಭಿಸಬೇಕು. ನಿಮ್ಮಲ್ಲಿ ಇವತ್ತು ಹದಿನೈದು ರೂಪಾಯಿಗಳಿದ್ದರೆ, ನೀವೊಂದು ಬಾಟಲು ನೀರು ಕುಡಿಯಬಹುದಾಗಿದೆ. ಅದೇ ನೀರಿನ ಬಾಟಲಿಯ ಬೆಲೆ 100 ಅಥವಾ 500 ಅಥವಾ 1000 ರೂಪಾಯಿಗಳಿಗೆ ಮುಟ್ಟಿದರೆ ಎಷ್ಟು ಜನರಿಗೆ ನೀರು ಲಭ್ಯವಾಗಲು ಸಾಧ್ಯ?

ಆದ್ದರಿಂದ, ವೈಯಕ್ತಿಕ ಮಟ್ಟದಿಂದ ಹಿಡಿದು ಸಾಮೂಹಿಕವಾದ ಪ್ರಯತ್ನದಿಂದ ಇನ್ನಷ್ಟು ಸಿತ್ಯಾಜ್ಯಕ್ಕೆ ಕಡಿವಾಣ ಹಾಕುವ ಕಾರ್ಯ ಬೇಧವಿಲ್ಲದೆ ನಡೆಯಬೇಕು. ಈಗಾಗಲೇ ಹಾನಿಯಾಗಿರುವ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಾಂತ್ರಿಕತೆಯನ್ನು ಕಂಡುಕೊಳ್ಳುವುದು, ಮರುಬಳಕೆಯ ಇಂಧನಗಳಿಗೆ ಉತ್ತೇಜನ ನೀಡುವುದು, ಎಲ್ಲಕ್ಕಿಂತ ಮುಖ್ಯವಾಗಿ ಮುಂದಿನ ಪೀಳಿಗೆಗಾಗಿ ಈ ಭೂಮಿಯನ್ನು ಆದಷ್ಟು ಶುದ್ಧವಾಗಿಡುವ ಮಹತ್ತರ ಜವಾಬ್ದಾರಿ ಈ ಪೀಳಿಗೆಯ ಮೇಲಿದೆ.

(ಮುಗಿಯಿತು. . .)

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

One Response to “ಭಾರತೀಯ ಸನ್ನಿವೇಶದಲ್ಲಿ ಹವಾಮಾನ ಬದಲಾವಣೆ – ಒಂದು ನೋಟ– 7: ಅಖಿಲೇಶ್ ಚಿಪ್ಪಳಿ”

  1. ಲಗೋರಿಬಾಬಾ says:

    (y)

Leave a Reply