ಸ್ವಂತೀ(selpfie): ಪ್ರಶಸ್ತಿ

ಈ ಸ್ವಂತೀ ಅಥವಾ ಸೆಲ್ಪೀ ಅನ್ನೋ ಪದದ ಬಗ್ಗೆ ಕೇಳದ ಸಾಮಾಜಿಕ ತಾಣಗಳ ಬಳಕೆದಾರರು ಇಲ್ಲವೇ ಇಲ್ಲ ಅಂದರೆ ತಪ್ಪಾಗಲಾರದೇನೋ . ಗೆಳೆಯನೊಬ್ಬ ಅಥವಾ ಗೆಳತಿಯೊಬ್ಬಳು ನಮ್ಮ ಪಟ ತೆಗೆಯೋದಕ್ಕೆ ಕಾಯೋ ಬದಲು ನಮ್ಮ ಚಿತ್ರ ನಾವೇ ತೆಗೆದುಕೊಳ್ಳೋದಕ್ಕೆ  ಸೆಲ್ಫೀ ಅಥವಾ ಸ್ವಂತೀ(ಕೃಪೆ: ಮುಖಹೊತ್ತುಗೆಯ "ಪದಾರ್ಥ ಚಿಂತಾಮಣಿ" ಗುಂಪು)ಅಂತ ಕರೆಯುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿರುವಂತದ್ದೇ ಆದರೂ ಆ ಪದವನ್ನು ಮೊದಲು ಹುಟ್ಟುಹಾಕಿದ್ದು ಯಾರಂತ ಗೊತ್ತೇ ? ಆಕ್ಸವರ್ಡ ಪದಕೋಶದಿಂದ ೨೦೧೩ರ "ವರ್ಷದ ಪದ" ಎಂಬ ಬಿರುದು ಪಡೆದ selpfie ಅನ್ನೋ ಪದ ಹುಟ್ಟಿದ್ದು ೨೦೦೨ ರಲ್ಲಿ ಅನ್ನುತ್ತಾ ಆ ಪದ ಹುಟ್ಟುಹಾಕಿದ ಶ್ರೇಯವನ್ನು  ಆಸ್ಟ್ರೇಲಿಯದ ಒಬ್ಬ ವಿದ್ಯಾರ್ಥಿಗೆ ಕೊಡುತ್ತಾರೆ. ಏನಾದ್ರೂ ಹೊಸದು ಬಂದ್ರೆ ಅದರ ಜನಕ ತಾನೇ ಅಂತ ಅದೆಷ್ಟೋ ಜನ ಮುಂದೆ ಬರೋ ಸಂದರ್ಭದಲ್ಲಿ ಈ ಸ್ವಂತಿಯ ಜನಕ ಯಾರು ಅಂತ ನೇರವಾಗಿ ಹೇಳೋ ಬದಲು "ಒಬ್ಬ ವಿದ್ಯಾರ್ಥಿ" ಅಂತ ಯಾಕೆ ಹೇಳ್ತಾ ಇದ್ದೀನಿ ಅಂದ್ಕೊಂಡ್ರಾ ? ಅದರ ಹಿಂದೊಂದು ಸ್ವಾರಸ್ಯಕರವಾದ ಕತೆಯಿದೆ. 

ಆಸ್ಟ್ರೇಲಿಯಾದ ವಿಶ್ವವಿದ್ಯಾಲಯದ ಹುಡುಗನೊಬ್ಬ ತನ್ನ ೨೧ನೇ ಹುಟ್ಟುಹಬ್ಬದ ದಿನ ವಿಪರೀತವಾಗಿ ಕುಡಿದು ಮನೆಗೆ ವಾಪಾಸ್ ಮರಳುವಾಗ ಮೆಟ್ಟಿಲುಗಳ ಮೇಲೆ ಬಿದ್ದಿರುತ್ತಾನೆ.  ಕೆಳತುದಿಯನ್ನು ಕಚ್ಚಿಕೊಂಡ ಅವ ಆ ಗಾಯವಾದ ತುಟಿಗಳ ಫೋಟೋವನ್ನ ಹಾಕಿ ಆ ಘಟನೆಯ ಬಗ್ಗೆ ಬರೆಯುತ್ತಾ ಈ ಪಟದ ಫೋಕಸ್ ಸರಿಯಾಗಿ ಇಲ್ಲದೇ ಇರಬಹುದು . ಯಾಕೆಂದರೆ ಇದು ಸೆಲ್ಫಿ ಅನ್ನುತ್ತಾನೆ. ಅಲ್ಲಿನ ABC ಎಂಬ ಜಾಲತಾಣದಲ್ಲಿ ಸೆಪ್ಟೆಂಬರ್ ೧೩, ೨೦೦೨ರಲ್ಲಿ ಈ ಪಟವನ್ನು ಹಾಕೋ ಹುಡುಗ ಅದನ್ನು ಸರಿ ಮಾಡೋಕೆ ಬೇಕಾದ ಸಲಹೆಯನ್ನು ಕೇಳಿರುತ್ತಾನೆ. ತನ್ನನ್ನು ತಾನು "hopey" ಅಂತ ಕರೆದುಕೊಳ್ಳೋ ಆ ಯುವಕ ತನ್ನ ಹಿಂದಿನ ಪೋಸ್ಟುಗಳಲ್ಲೂ .ie ಅಥವಾ ey ಇಂದ ಕೊನೆಯಾಗೋ ಪದಗಳನ್ನ ಬಳಸಿರೋ ಅವನಿಗೆ ತನ್ನ ಒಂದು ಪದ ಈ ಪಾಟಿ ಪ್ರಸಿದ್ದಿ ಪಡೆಯಬಹುದು ಎಂಬ ಕಲ್ಪನೆಯಿರಲಿಕ್ಕಿಲ್ಲ. ವಿಶ್ವವಿದ್ಯಾಲಯದ ಜಾಲತಾಣದಲ್ಲೂ ಈ ಪಟ ಹಾಕೋ ಅವ ಆ ಪಟದ ಬಗೆಗಿನ ಚರ್ಚೆ ಜಗತ್ ವ್ಯಾಪಿಯಾದರೂ , ಆ ಪದಕ್ಕೆ ವರ್ಷದ ಪದವೆಂಬ ಬಿರುದೇ ಸಿಕ್ಕರೂ ತಾನ್ಯಾರು ಅಂತ ಹೇಳಿಕೊಳ್ಳೋಕೆ ಮುಂದೆ ಬರೋದೇ ಇಲ್ಲ. ಅವನ್ಯಾರು ಅಂತ ಹುಡುಕೋಕೆ ಯಾರೂ ಆಸಕ್ತಿ ತೋರಿಸೋದೂ ಇಲ್ಲ.  ತಮ್ಮ ಚಿತ್ರ ತೆಗೆದು ಜಾಲತಾಣದಲ್ಲಿ ಹಾಕಿ ಅದಕ್ಕೆಷ್ಟು ಲೈಕ್ ಬಿತ್ತು, ಕಾಮೆಂಟ್ ಬಿತ್ತು ಅನ್ನೋದನ್ನೇ ಗಮನಿಸುತ್ತಿರೋ ಜಗತ್ತಿಗೆ ಅದರ ಜನಕನ್ಯಾರು ಅಂತ ತಿಳಿಯೋ ಆಸಕ್ತಿ ೧೩ ವರ್ಷಗಳ ನಂತರ ಇನ್ನೆಲ್ಲಿ ಉಳಿದಿರುತ್ತೆ ಎಂಬುದೂ ಒಂದು  ವಿಪರ್ಯಾಸ.   

ಸಾಮಾಜಿಕ ತಾಣಗಳಲ್ಲಿ, ವಾಟ್ಯ್ಸಾಪಿನಲ್ಲಿ ಈಗಂತೂ ಸೆಲ್ಪಿಗಳ ಹಾವಳಿ. Dickelfie, musclefie, welfie .. ಹೀಗೆ ಸೆಲ್ಪಿಗಳಲ್ಲಿರೋ ಹದಿನೈದು ಪ್ರಬೇಧಗಳ ಬಗ್ಗೆ ಬರೆಯಹೊರಟರೆ ಅದೇ ಒಂದು ಕಾದಂಬರಿಯಾದೀತೇನೋ ! ಒಬ್ಬೊಬ್ಬರ ಪೋಟೋಗಳನ್ನೇ ತೆಗೆದುಕೊಳ್ಳೋದಕ್ಕಿಂತ ಇಡೀ ಗುಂಪಿನ ಫೋಟೋ ತೆಗೆಯೋ ಗುಂಪು ಸೆಲ್ಫಿಗಳಿಗೆ ಹೆಚ್ಚಿನ 
ಬೇಡಿಕೆ. ಇಡೀ ಗುಂಪಿನ ಫೋಟೋ ತೆಗೆಯೋಕೆ ಅಂತಲೇ ಹಳೇ ಕ್ಯಾಮೆರಾಗಳಲ್ಲಿ ಮತ್ತು ಇತ್ತೀಚಿನ ಮೊಬೈಲುಗಳಲ್ಲೂ ಸೆಲ್ಫ್ ಟೈಮರ್ಗಳಿರಲಿಲ್ವೇ ಅಂತ ಕೇಳ್ಬೋದು ನಿಮ್ಮಲ್ಲಿ ಕೆಲೋರು. ಕ್ಯಾಮೆರಾದಲ್ಲಿ ಸೆಲ್ಪ್ ಟೈಮರ್ಗಳಿದ್ದರೂ ಇಡೀ ಗುಂಪಿನ ಚಿತ್ರ ತೆಗೆಯುವಂತಹ ಜಾಗದಲ್ಲಿ ಕ್ಯಾಮೆರಾವನ್ನು ಕೂರಿಸೋದೇ ಒಂದು ಸಮಸ್ಯೆ. ಯಾವುದೋ ಜಲಪಾತದ ಎದುರೋ, ಜನಜಂಗಳಿಯಿರೋ ಕಾರ್ಯಕ್ರಮದಲ್ಲೋ ನಿಮ್ಮೊಂದು ಗುಂಪಿನ ಪಟ ತೆಗೆಯೋ ಆಸೆಯಿದ್ದರೆ ಕ್ಯಾಮೆರಾವನ್ನು ಎಲ್ಲಿ ಕೂರಿಸೋದು ! ? ಇನ್ನು ಬೇರೆಯವ್ರ ಹತ್ರ ನಮ್ಮ ಗುಂಪಿನ ಫೋಟೋ ತೆಗೆದುಕೊಡಿ ಅಂತ ಹೇಳಬಹುದಾದ್ರೂ ಅವನಿಗೆ ಕ್ಯಾಮೆರಾ ಕೊಟ್ಟು ಅವ ಫೋಟೋ ತೆಗೆಯೋಕೆ ಮನಸ್ಸು ಮಾಡೋ ಹೊತ್ತಿಗೆ ಫೊಟೋದಲ್ಲಿ ಬರಬೇಕಾಗಿದ್ದ ಜನಪ್ರಿಯ ವ್ಯಕ್ತಿಯೇ ಇನ್ನೆಲ್ಲೋ ಹೋಗಬಹುದು ! ಈ ಸೆಲ್ಫ್ ಟೈಮರ್ಗಳು, ಬೇರೆಯವರ ಹತ್ರ ನಮ್ಮ ಗುಂಪಿನ ಫೋಟೋ ತೆಗೆದುಕೊಡಿ ಅಂತ ಬೇಡಬೇಕಾದ ಪರಿಸ್ಥಿತಿ, ಗುಂಪಿನಲ್ಲೇ ಒಬ್ಬ ಫೋಟೋ ತೆಗೆಯೋಕೆ ಹೋದ್ರೂ ಅವ ಫೋಟೋದಲ್ಲಿ ಮಿಸ್ಸಾಗಿಹೋಗೋ ಪ್ರಸಂಗಗಳಿಂದ ತಪ್ಪಿಸಿಕೊಳ್ಳೊಕೆ  ಸೆಲ್ಫಿಗಳು ಒಳ್ಳೆಯ ಉಪಾಯ ! ಹಂಗಾದ್ರೆ ಇನ್ನೇನು ಬೇಕು? ತಮ್ಮ ಫೊಟೋ ತೆಗೆಯೋಕೆ ಇನ್ಯಾರಿಗೋ ಕಾಯೋ ಬದಲು ತಾವೇ ತೆಗೆದುಕೊಳ್ಳಬಹುದಾದ ಸೆಲ್ಪಿಗಳಿಗೆ  ಜೈಅನ್ನೋಣವೇ ಅಂದ್ರಾ? ಸ್ವಲ್ಪ ತಡೀರಿ.  ಸ್ವಂತಿಗಳಿಗೆ ಸದ್ಯಕ್ಕೆ ಶಾಪವಾಗಿರೋದು ಮೊಬೈಲುಗಳಲ್ಲಿನ ಮುಂಬಾಗದ ವಿ.ಜಿ.ಎ ಕ್ಯಾಮೆರಾಗಳು ಅಥವಾ ಕಮ್ಮಿ ರೆಸಲ್ಯೂಷನ್ಗಳ ಮುಂಕ್ಯಾಮುಗಳು. ಹಿಂಭಾಗದ ಕ್ಯಾಮೆರಾ ೫ ಮೆಗಾಪಿಕ್ಸಲ್ ಇದ್ರೂ ಮುಂಭಾಗದ ಕ್ಯಾಮು ೦.೩ ಅಥವಾ ೨ ಮೆಗಾಪಿಕ್ಸೆಲ್ಲಷ್ಟೇ. ಹಾಗಾಗಿ ಸೆಲ್ಪಿಗಳ ಗುಣಮಟ್ಟ ಬೇರೆ ಫೋಟೋಗಳಷ್ಟಿರೋಲ್ಲ ಅನ್ನೋದು ಸ್ವಂತೀ ದ್ವೇಷಿಗಳ ಉವಾಚ. ಆದ್ರೆ ಈಗ ಬರುತ್ತಿರೋ ಹೊಸ ಫೋನುಗಳಲ್ಲಿ ಮುಂಕ್ಯಾಮುಗಳೂ ೫ ಅಥವಾ ೮ ಎಂ.ಪಿಗಳದ್ದಾಗಿರೋ ಕಾರಣ ಸ್ವಂತಿಗಳು ಬೇರೆಯದಕ್ಕೆ ಕಮ್ಮಿಯಿಲ್ಲವೆಂಬಂತೆ ಪೈಪೋಟಿ ಕೊಡುತ್ತಿವೆ. 

ಇನ್ನು ಸ್ವಂತಿಗಳಲ್ಲಿ ಗ್ರೂಪ್ ಪಟಗಳನ್ನ ತೆಗಿಬೇಕು ಅನ್ನೋ ಆಸೆಯಿರೋರ ಕಷ್ಟಗಳು ಗುಂಪು ದೊಡ್ಡದಿದ್ದಷ್ಟೂ ದೊಡ್ಡದಾಗುತ್ತಾ ಹೋಗುತ್ತೆ. ಹೆಚ್ಚೆಚ್ಚು ಜನರಿರುವ ಗುಂಪಿನಲ್ಲಿ ಎಲ್ಲರ ಮುಖವನ್ನು ಸ್ವಂತಿಯೊಳಗೆ ತೂರಿಸೋದೆ ಒಂದು ಮಜ. ಕೈಯನ್ನು ಸಾಧ್ಯವಾದಷ್ಟು ಮುಂದೆ ಚಾಚಿ, ಯಾವುದೇ ಕೋನಗಳಲ್ಲಿ ಬಾಗಿ ಒದ್ದಾಡೋ ಜನರ ಕಷ್ಟಗಳನ್ನ ಬಗೆಹರಿಸಲೆಂದೇ ಸ್ವಂತೀಕೋಲುಗಳು(selfie stick)ಗಳು ಬಂದಿವೆ. ಎರಡಡಿ ಉದ್ದದ ಕೋಲಲ್ಲಿ ಕ್ಯಾಮೆರಾ ಸಿಕ್ಕಿಸಿ ಆ ಮುಂಚಾಚಿದ ಕೋಲಲ್ಲಿ ಆರಾಮಾಗಿ ಫೋಟೋ ತೆಗೆದುಕೊಳ್ಳೋದು ಎಷ್ಟು ಆರಾಮವಲ್ಲವೇ ಎಂಬ ಪರಿಕಲ್ಪನೆಯೇ ಈ ಸ್ವಂತೀಕೋಲುಗಳ ಹೆಚ್ಚುತ್ತಿರುವ ಬೇಡಿಕೆಯ ಹಿಂದಿನ ರಹಸ್ಯ. ಆದ್ರೆ ಹೋದ ಪ್ರವಾಸಿ ತಾಣಗಳಲ್ಲೆಲ್ಲಾ ಈ ತರದ್ದೊಂದು ಕೋಲು ಮುಂಚಾಚ್ತಾ ಇರೋದು ಉಳಿದವರಿಗೆ ಎಷ್ಟು ಕಿರಿಕಿರಿಯಾಗಬಹುದಲ್ವಾ ?  ಅದಕ್ಕೇ ಅಂತ್ಲೇ ಬ್ರಿಟನ್ನಿನ ಕೆಲವು ಮ್ಯೂಸಿಯಂಗಳಲ್ಲಿ ಮ್ಯೂಸಿಯಂಗಳ ಒಳತರೋಕೆ ನಿರ್ಬಂಧಿಸಿದ ವಸ್ತುಗಳಲ್ಲಿ ಈ ಸ್ವಂತೀಕೋಲನ್ನೂ ಸೇರಿಸಿದ್ದಾರೆ !

ಕಲಾಂರೊಂದಿಗೆ ಸ್ವಂತೀ, ಮಗಳೊಂದಿಗೆ ಸ್ವಂತೀಯಂತಹ ಟ್ರೆಂಡುಗಳ ಸಖತ್ ಖ್ಯಾತಿಗಳಿಸಿದ ರೀತಿಯಲ್ಲಿ ಕೆಲವು ರಾಜಕಾರಣಿಗಳೊಡನೆಯ ಸ್ವಂತೀಗಳು ಆ ರಾಜಕೀಯ ಪಕ್ಷಗಳ ಬೊಕ್ಕಸವನ್ನೂ ತುಂಬಿಸಿದ್ದವು ! ಯಾವುದೋ ಅನಾಥಾಶ್ರಮದಲ್ಲಿ , ಸ್ವಚ್ವ ಭಾರತ ಕಾರ್ಯಕ್ರಮದಲ್ಲಿ ಬೆವರಿಳಿಸಿದ ಯುವಕರು ತೆಗೆದುಕೊಂಡ ಸ್ವಂತೀ ಅದನ್ನು ನೋಡಿದ ಎಷ್ಟೋ ಜನಕ್ಕೆ ಆ ತರದ ಕೆಲಸಗಳಲ್ಲಿ ಭಾಗಿಯಾಗೋಕೆ ಸ್ಪೂರ್ತಿಯಾಗಬಹುದು. ಜೀವನದ ಮಹತ್ವದ ಘಳಿಗೆಗಳ ದಾಖಲಿಸೋಕೆ ನೆರವಾಗೋ ಈ ಸ್ವಂತೀ ಗೀಳು ಅತಿಯಾದರೆ ಜೀವವನ್ನೂ ತೆಗೆಯಬಹುದು ! ಜಲಪಾತವೊಂದರ ತುತ್ತತುದಿಯಲ್ಲಿ ಸ್ವಂತೀ ತೆಗೆಯೋ ಹುಚ್ಚಾಟಕ್ಕೆ ಮುಂದಾದ ಯುವಕರು ಅಲ್ಲಿಂದ ಬಿದ್ದು ಪ್ರಾಣ ಕಳೆದುಕೊಂಡ ಘಟನೆಯ ಬಗ್ಗೆ ನೀವೂ ಓದಿರಬಹುದಾದ್ದರಿಂದ ಮೇಲಿನ ಹೇಳಿಕೆ ಕಪೋಲಕಲ್ಪಿತವಲ್ಲ !
ಚಲಿಸುತ್ತಿರೋ ರೈಲಿನೆದುರು ಸ್ವಂತೀ ತೆಗೆಯೋಕೆ ಹೋದ ಯುವಕ ಮೃತಪಟ್ಟಿದ್ದು, ಕಟ್ಟಡದ ಮೇಲಿಂದ ಸೆಲ್ಪಿ ತೆಗೆಯೋಕೆ ಹೋದ ಪ್ರಯತ್ನ ಜೀವ ತೆಗೆದಿದ್ದು.. ಹೀಗೆ ನೂರೆಂಟು ಪ್ರಕರಣಗಳು ಕಣ್ಣೀರು ಹಾಕಿಸುತ್ತಾ, ಅವರ ಗೀಳಿನ ಮೇಲೆ ಸಿಟ್ಟು ತರಿಸುತ್ತಲೇ ಇರುತ್ತಾದರೂ ಜನರೇಕೆ ಅದರಿಂದ ಹೊರಬರೋಕೆ ಪ್ರಯತ್ನಿಸೋಲ್ಲ ಎಂಬ ಪ್ರಶ್ನೆಯನ್ನೂ ಅದು ಹುಟ್ಟುಹಾಕುತ್ತೆ.ಇನ್ನು ಹೋದಲ್ಲೆಲ್ಲಾ ಸ್ವಂತೀ ತೆಗೆದುಕೊಳ್ಳುತ್ತಲೇ ಇರೋ ಜನರು ಅದನ್ನು ಏನು ಮಾಡುತ್ತಾರೆ ಎಂಬುದು ಮುಂದಿನ ಪ್ರಶ್ನೆ. ಇನ್ನೇನು ಮಾಡೋದು. ಇದಕ್ಕೆ ನೂರೆಂಟು ಉತ್ತರಗಳಿದ್ರೂ ಅದನ್ನು ಸಾಮಾಜಿಕ ತಾಣಗಳಲ್ಲಿ ಹಾಕ್ತಾರೆ ಅನ್ನೋದು ಸಿಗೋ ತಟ್ಟನೆ ಸಿಗೋ ಉತ್ತರಗಳಲ್ಲೊಂದು. 

ಈ ಸಾಮಾಜಿಕ ತಾಣಗಳಲ್ಲೇ ಹೆಚ್ಚುಹೊತ್ತು ಕಳೆಯೋದು ಒಳ್ಳೇದಲ್ಲ. ಅದು ದೀರ್ಘಕಾಲೀನ ಮಾನಸಿಕ, ದೈಹಿಕ ಸಮಸ್ಯೆಗಳನ್ನ ಸೃಷ್ಠಿಸುತ್ತೆ ಎಂಬ ಒಂದು ಗುಂಪಿನ ವಾದ. ಅದಕ್ಕೆ ಅದೆಷ್ಟೋ ಪ್ರತಿವಾದಗಳಿದ್ದರೂ ಆ ಗೀಳಿನಿಂದ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ, ಸಮಾಜದ ಜೊತೆಗಿನ ಸಹಜ ಬೆರೆಯುವಿಕೆ ಮೇಲೆ ಪ್ರಭಾವ ಬೀರುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಾಟ್ಸಾಪಲ್ಲಿ, ಫೇಸ್ಬುಕ್ಕಲ್ಲಿ ದಿನಕ್ಕೊಂದು ಸ್ವಂತೀ ಬದಲಾಯಿಸೋ ಹುಡುಗರು, ಹುಡುಗಿಯರಿದ್ದಾರೆ ಅನ್ನೋ ಸಂಗತಿ ಅಚ್ಚರಿಹುಟ್ಟಿಸೋಲ್ಲ ಇಂದು. ಜಗತ್ತಿಗೆ ಏನನ್ನೋ ಹೇಳಬೇಕೆಂಬ ಆಸೆ ಎಷ್ಟೇ ಸಹಜವೆಂದರೂ ಈ ಸ್ವಂತೀ ಗೀಳು ಸಾಮಾಜಿಕ ತಾಣಗಳ ಗೀಳನ್ನು ಇನ್ನೂ ಹೆಚ್ಚಿಸುತ್ತಿದೆ ಎಂಬುದೂ ಅಷ್ಟೇ ಸತ್ಯ. ಬೆಳಗ್ಗೆ ಒಂದು ಸ್ವಂತೀ ಹಾಕಿ ಮಾರನೇ ದಿನ ಮತ್ತೊಂದು ಸ್ವಂತಿ ಹಾಕೋವರೆಗೆ ಸಾಮಾಜಿಕ ತಾಣಗಳ ಕಡೆ ತಲೆ ಹಾಕೋಲ್ಲ ಅನ್ನುವಂತೋರು ಯಾರಾದ್ರೂ ಇದ್ದಾರಾ ? ಜಗತ್ತೆಲ್ಲಾ ತಮ್ಮನ್ನು ನೋಡಬೇಕು, ತಾವು ಮಾತ್ರ ಯಾರನ್ನೂ ನೋಡೋಲ್ಲ ಎಂಬೋ ಮೇಲಿನ ಕಲ್ಪನೆಯೇ ವಿಚಿತ್ರ, ಪರಮ ಸ್ವಾರ್ಥವೆನಿಸುತ್ತಲ್ವಾ ? ತಾನೊಂದು ಪಟ ಹಾಕಿದೆ. ಅದೇ ತರ ಬೇರೆಯವ್ರು ಏನೇನು ಹಾಕಿದ್ದಾರೆ ನೋಡೋಣವೆಂಬ ಮನಸ್ಥಿತಿಯಿರುತ್ತೆ ಎಲ್ಲರಲ್ಲೂ. ಇನ್ಯಾರದೋ ಪಟ ನೋಡೋ ಹೊತ್ತಿಗೆ ತನ್ನ ಪಟಕ್ಕೊಂದು ಲೈಕೋ ಕಮೆಂಟೋ ಬಿದ್ದ ನೋಟಿಫಿಕೇಷನ್ನಿನಿಂದ ಅದಕ್ಕೆ ಪ್ರತಿಕ್ರಿಯಿಸಲೋಸುಗ ಗಮನ ಮತ್ತೆ ತನ್ನ ಪಟದತ್ತ. ಮತ್ತೆ ಇನ್ನೇನೋ ಮಾಡುವಷ್ಟರಲ್ಲಿ ಮತ್ಯಾವುದೋ ನೋಟಿಫಿಕೇಷನ್ನು. ಹಾಗಾಗಿ ಐದು ನಿಮಿಷಕ್ಕೆಂದು ಕಾಲಿಟ್ಟ ಜಾಲತಾಣ ಒಂದು ಘಂಟೆ ತಿಂದಿರುತ್ತೆ ! ಹನ್ನೊಂದಕ್ಕೆ ಮಲಗೋ ಐಡಿಯಾದಲ್ಲಿದ್ದ ಹುಡುಗ ಐದು ನಿಮಿಷಕ್ಕೆಂದು ಕಾಲಿಟ್ಟ ಜಾಲತಾಣ ಹನ್ನೆರಡದಾದ್ರೂ ಅವನ ಮಲಗೋಕೆ ಬಿಟ್ಟಿರೋಲ್ಲ! ಯಾರೋ ಒಬ್ಬ ಸಾಮಾಜಿಕ ತಾಣಗಳ ಗುಂಗಿನಲ್ಲಿ ತನ್ನ ಅಮೂಲ್ಯ ಸಮಯವನ್ನು ಕಳೆದುಕೊಳ್ಳುತ್ತಿದ್ದಾನೆ ಅಂದ್ರೆ ಅದು ಅವನ ಅವಿವೇಕವೇ ಹೊರತು ಜಾಲತಾಣಗಳದ್ದೋ, ಸ್ವಂತೀಯದೋ ತಪ್ಪಲ್ಲ ಅಂದ್ರಾ ? ೧೦೦% ಸರಿ ನಿಮ್ಮ ಮಾತು. ಈ ಸ್ವಂತೀ, ಜಾಲತಾಣಗಳೆಂಬುದೆಲ್ಲಾ ತಂತ್ರಜ್ಞಾನದ ಕೊಡುಗೆಗಳಷ್ಟೆ. ಅದನ್ನು ಹೇಗೆ ಬಳಸುತ್ತೇವೆಂದು ನಮಗೆ ಬಿಟ್ಟಿದ್ದು. ಸ್ವಂತಿಯೊಂಬುದೊಂದು ಸ್ಪೂರ್ತಿಯ ಚಿಲುಮೆಯಾಗಲಿ, ಅತಿಯಾದ ಬಳಕೆಯಿಂದ ವಿಷವಾಗಿ ಜೀವ ತಿನ್ನದಿರಲಿ ಎಂಬ ಹಾರೈಕೆಯೊಂದಿಗೆ ಮುಂದಿನ ವಾರದವರೆಗೊಂದು ಶುಭವಿರಾಮ.  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
chaithra
chaithra
8 years ago

ಸೆಲ್ಫೀ ಯುಗಕ್ಕೊಂದು  super  ಬರಹ……

prashasti.p
8 years ago

thank you Chaitra avare 🙂

2
0
Would love your thoughts, please comment.x
()
x