Facebook

ನಾನು ಮತ್ತು ಅವನು……: ಚೈತ್ರಾ ಎಸ್.ಪಿ.

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬದುಕಿನಲ್ಲಿ ಎಲ್ಲವನ್ನು ಸೀರಿಯಸ್ ಆಗಿ ತಗೋಳೋ ನಾನು ಕೆಲವೊಂದು ಸೀರಿಯಸ್ ವಿಚಾರಗಳನ್ನ ತಮಾಷೆಯಾಗಿ ತಗೊಂಡು ನನ್ನನ್ನ ಅದ್ಯಾವುದೋ ಲೋಕಕ್ಕೆ ಲಾಕ್ ಮಾಡ್ಕೊಂಡಿದ್ದೀನಿ ಅನ್ನಿಸ್ತಾ ಇದೆ. ಬೇಡವೆಂದರೂ ಮತ್ತೆ ಹಚ್ಚಿಕೊಂಡೆ. ಪ್ರೀತಿಯೆಂಬ ಮಾಯೆಯೊ, ಸಂತೋಷವೋ ಅಲ್ಲ ಕೊರಗೋ !! ಯಾವುದೋ ಒಂದು ಭಾವಕ್ಕೆ ಮಣಿದೆ. ಪ್ರೀತಿಸಿದೆ, ಮುದ್ದಿಸಿದೆ, ಗೋಳಾಡಿದೆ, ಕಣ್ಣೀರಾದೆ. 

ನನ್ನೆಲ್ಲ ಹುಚ್ಚಾಟಗಳನ್ನು ತಿದ್ದಿ ಬುದ್ದಿ ಹೇಳಿ ಒಂದು ರೂಪ ಕೊಟ್ಟು, ಪ್ರೀತಿಯ ಧಾರೆಯೆರೆದು ನನ್ನನ್ನು ಧಾರೆಯೆರೆಸಿಕೊಳ್ಳಲಾರೆನೆಂಬ ದುಃಖದ ಕೂಪಕ್ಕೆ ತನ್ನನ್ನು ತಾನೇ ತಳ್ಳಿಕೊಂಡ ಆ ಜೀವಕ್ಕೆ ನಾ ನೀಡಿದ್ದೇನು ? ತನ್ನ ಜೀವನದ ಗುರಿಯನ್ನೇ ನನಗಾಗಿ ಬೇಡ ಎಂದು ದೂರ ತಳ್ಳಿದ ಆ ಕ್ಷಣ ನಾನು ದಂಗಾಗಿ ಹೋಗಿದ್ದೆ. ನಾನತ್ತರೆ, ಬೇಸರಿಸಿದರೆ ಓಡಿ ಬಂದು ಮುತ್ತಿಕ್ಕಿ ಸಂತೈಸುವ ಮನಸ್ಸಿಗೆ ಸೋತು ಶರಣಾಗದೆ ಬೇರೆ ದಾರಿಯಿರಲಿಲ್ಲ. ಬುದ್ಧಿ ಹೇಳುವಾಗ ಅವನೆಂದರೆ ತಂದೆ, ಸಂತೈಸುವಾಗ ತಾಯಿ, ತರಲೆ ಮಾಡುವ ಗೆಳೆಯ, ಮುದ್ದಿಸುವ ಸಂಗಾತಿ. 

ಜೀವನವೆಲ್ಲ ಭೋರ್ಗರೆವ ಮಳೆಗಾಲದಲ್ಲಿ ಭೂಮಿಯ ಚುಂಬಿಸುವ ಆ ಹನಿಗಳನ್ನೆಲ್ಲ ಅವನ ಭುಜಕ್ಕೊರಗಿ ಪ್ರೀತಿಯ ತೋಳ್ಗಳಲ್ಲಿ ಕಳೆಯಬೇಕೆಂಬ ಬಯಕೆ ಕಾಡದೆ ಇದ್ದಿದ್ದಿಲ್ಲ. ಚಳಿಗಾಲದ ಮುಂಜಾವಿನ ಸಿಹಿ ನಿದ್ದೆಯಲ್ಲಿ ಅವನ ಮೈಯ್ಯ ಬೆಚ್ಚಗಿನ ಹಿತಕ್ಕೆ ಮನ ಬಯಸದೆ ಇದ್ದಿದ್ದಿಲ್ಲ. ಬಿಸಿಲ ಧಗೆಯ ತಣಿಸಲು ತಂಪಾದ ಸಂಜೆಯ ತಂಗಾಳಿಯಲ್ಲಿ ಮನಸ್ಸಿನ ಮಾತುಗಳ ಹಂಚಿಕೊಳ್ಳುವ ಗೆಳೆಯನಾಗಿ ದಕ್ಕಬೇಕೆಂದು ಆಶಿಸದೇ ವಿಧಿಯಿಲ್ಲ. ತನ್ನ ಪ್ರೀತಿಯನ್ನೆಲ್ಲ ಮೊಗೆದು ನನ್ನ ಮೇಲೆ ಸುರಿಯುವಾಗ ಆದ ಆನಂದಕ್ಕೆ ಕಣ್ಣೀರಿನ ಹೊರತು  ಬೇರೆ ಸಾಕ್ಷಿಯಿಲ್ಲ. ನೋಡಿದಾಗ ಉಂಟಾಗುವ ಗೌರವಕ್ಕೆ ಮೌನವೇ ಉತ್ತರ. ಸಂದಿಗ್ಧತೆಗಳಲ್ಲಿ ಸಿಲುಕಿದಾಗಲೆಲ್ಲ ತನ್ನ ಯೋಚನೆಯ ಮಜಲುಗಳನ್ನೆಲ್ಲ ನನ್ನ ಮುಂದೆ ತೆರೆದಿಟ್ಟು ಆಯ್ಕೆಯ ದಾರಿ ತೋರಿಸಿ, ನನ್ನ ತನವನ್ನು ನನ್ನ ಕೈಯಿಂದಲೇ ಹುಡುಕಿಸಿ ದಾರಿ ತೋರಿದ ಅವನ ಮುಂದೆ ಪುಟ್ಟ ಮಗುವಾಗಿ ಮಡಿಲಲ್ಲಿ ತಲೆಯಿಟ್ಟು, ನೀನೆ ನನಗೆಲ್ಲ ಎಂದಾಗ ಅವನಿಗಾಗುವ ಸಂತೋಷವನ್ನು ನೋಡಿ ಮನದಣಿಸಿಕೊಳ್ಳಬೇಕು ಅನಿಸುತ್ತದೆ. 

ಸಂತೋಷಕ್ಕಿಂತ ದುಃಖದ ಮಾಪನ ಹೆಚ್ಚಾಗಿದೆ. ಅತ್ತ ಮನಸ್ಸನ್ನು ಸಂತೈಸುವ ಆ ಪರಿಗೆ ಸಮುದ್ರದಲ್ಲೊಂದಾಗುವ ನದಿಯ ಸಾರ್ಥಕ್ಯದಂತೆ ನಾನೂ ಅವನಲ್ಲೊಬ್ಬಳಾಗಿ ಮುತ್ತಿನ ಮಳೆಗರೆಯುತ್ತೇನೆ. ದಿನವಿಡೀ ಮುದ್ದಿಸಲು ಹಾತೊರೆವ ಮನಸ್ಸುಗಳು ಮುಂದಿನ ದಿನಗಳನ್ನು ನೆನೆಸಿ ಈಗಲೇ ಕೊರಗಬಾರದೆಂದು ನಗುವಿನ ಮುಖ ಹೊತ್ತು ಕಳೆಯುವ ಈ ದಿನಗಳಲ್ಲಿ ಅವನೆಂದ ಮಾತುಗಳನ್ನು ನೆನೆಸಿ ಮನಸಲ್ಲಿ ಸಂತೋಷ, ಧೈರ್ಯ, ಸ್ಪೂರ್ತಿ, ಗುರಿಯನ್ನಿಟ್ಟು ಮುಂದಿನ ಹೆಜ್ಜೆಗಳನ್ನಿಡುತ್ತಿರುವುದೊಂದೇ ಉಳಿದ ಹಾದಿ……

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

6 Responses to “ನಾನು ಮತ್ತು ಅವನು……: ಚೈತ್ರಾ ಎಸ್.ಪಿ.”

 1. RAVI SHANKAR says:

  ಯಾವುದೋ ಕಾಣದ ಕಣಿವೆಯ ನೀರೊಳ ಬೀಸಿರುವ ಪಾಶವೆಂಬ ಬಲೆಗೆ ಬಿದ್ದ ಮತ್ಸ್ಯದ ಒದ್ದಾಟದಂತಿದೆ…

 2. chaithra says:

  ಧನ್ಯವಾದಗಳು, ನಿಮ್ಮ ಪ್ರತಿಕ್ರಿಯೆ ಅದ್ಭುತವಾಗಿದೆ !! ಮದುವೆಯೆಂಬ ಕಾಣದ ಕಣಿವೆ, ಹುಡುಗನೆಂಬ ಪಾಶ ಎಂದು ಅನ್ನಿಸುವ ಕಾಲಘಟ್ಟದಲ್ಲೇ ಇರುವ ಹಾಗೇ ಇದೆ ಸರ್ ……!!

 3. suguna mahesh says:

  Tumba chennagide

 4. chaithra says:

  Thank you mam

   

Leave a Reply