ವಾಸ್ತವಕ್ಕೆ ಮುಖಮಾಡದ ಸಾವುಗಳು: ರಾಘವೇಂದ್ರ ತೆಕ್ಕಾರ್

ಕಳೆದೆರಡು ವಾರದ ಎರಡು ದಿನಗಳಲ್ಲಿ ಎರಡು ಡೆತ್ ನೋಟ್ಗಳನ್ನು ನೋಡಿದೆ of course ಸಾವನ್ನು ಕೂಡ. ವಯಸ್ಸು ಆಜುಬಾಜು 24 ರಿಂದ 28ರ ಮಂದಿ. ಮಹಿಳೆ ಒಳಗೊಂಡಂತೆ ಮತ್ತೋರ್ವ. ಇಬ್ಬರು ವಿವಾಹಿತರು. 2ರಿಂದ 3 ವರುಷದ ದಾಂಪತ್ಯ ಜೀವನ ಇವರುಗಳದ್ದು. ನಾವೆಲ್ಲರೂ ಪ್ರೇಮಿಗಳು ಸಂಗಾತಿಗಳಾಗಲು ಸಾದ್ಯವಿಲ್ಲ ಮನೆಯವರು ಒಪ್ಪಲ್ಲ ಜಾತಿ ಸಮಸ್ಯೆ ಇತ್ಯಾದಿ ಇತ್ಯಾದಿ ಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವದನ್ನು ಕೇಳಿಯೆ ಇರುತ್ತೇವೆ. ಆದರೆ ಇವಕ್ಕೆ ಹೊರತಾದದ್ದು ಮೇಲೆ ತಿಳಿಸಿದ ಎರಡು ಸಾವುಗಳು.ಕಾರಣ ಕೌಟುಂಬಿಕ ಕಲಹ, ಜೀವನದಲ್ಲಿ ಜಿಗುಪ್ಸೆ. ಪ್ರಿತಿಸಿಯೆ ಮದುವೆಯಾದ ಆ ಇರ್ವರು ಮದುವೆಯ ತದ ನಂತರದಲ್ಲಿ ಆ ಪ್ರೀತಿ ಹೊಂದಾಣಿಕೆಯಲ್ಲಿ ಎಡವಿ ಜೀವನದ ಘೋರ ತಪ್ಪನ್ನು ಮಾಡಿದವರು. ಆ ಇಬ್ಬರ ಡೆತ್ ನೋಟ್ಗಳ ಪ್ರಕಾರ ಅವರ ತಪ್ಪು ಒಂದು ಪ್ರೀತಿ ಇನ್ನೊಂದು ಮದುವೆ ಎಂದಾಗಿದ್ದು ವಿಪರ್ಯಾಸ. ಯಾವುದೆ ಸಾವನ್ನು ವಿಶ್ಲೇಷಿಸುವುದು ಆ ಬಗ್ಗೆ ಬರೆಯುವದು ದೊಡ್ಡ ಸಂಕಟದ ಕೆಲಸ, ನೋವಿದೆ ಆದರೂ ಈ ಬಗ್ಗೆ ಬರೆಯುತಿದ್ದೇನೆ…… ಹೋದವರು ಹೋದರು, ಈ ನಿಟ್ಟಲ್ಲಿ ಚಿಂತಿಸುವ  ಇನ್ನಷ್ಟು ಮಂದಿ ಇದ್ದರೆ ತಾವೆಲ್ಲಿ ಎಡವುತಿದ್ದೇವೆ ಎಂಬುದನ್ನು ಮನನ ಮಾಡಿಕೊಳ್ಳುವಲ್ಲಿ ಇದು ಸಹಕಾರಿಯಾದರೆ ಈ ಸಾವಿನ ಬರಹ ಬರೆದಿದ್ದಕ್ಕೆ ಸಾರ್ಥಕ. ಆದರೆ ಈ ಪ್ರೀತಿ ಎಂಬುದು ಮೋಡ ತುಂಬಿದ ಆಗಸದ ಕೆಳಗಿನ ಭುವಿಯಂತೆ, ಕ್ಷಣಕಾಲ ಸೂರ್ಯನ ಇರುವಿಕೆಯನ್ನು ಮರೆಸಿಬಿಡುವಂತದ್ದು.ಮಳೆ ಸುರಿದು ಮೋಡ ಸರಿದಾಗ ಸೂರ್ಯನಿರುವನ್ನು ಕಂಡರೇನು ಫಲ? ಮೋಡದ ಮರೆಯಲ್ಲಿ /ಇರುಳ ಕತ್ತಲ ಹಿಂದೆ ಸೂರ್ಯನಿರುವ ಎಂಬ ತಿಳಿವು ಸದಾ ಕಾಲ ನಮ್ಮಲ್ಲಿರಬೇಕು. ಆವಾಗಲೆ ಎಡವಟ್ಟುಗಳು ನಡೆಯದಂತೆ ಒಂದು ಜಾಗ್ರತ ಭಾವ ನಮ್ಮನ್ನು ಆವರಿಸಬಲ್ಲುದು. ವಾಸ್ತವ ಅನ್ನೋದು ಎಂದಿಗು ಸತ್ಯ.

ಆಕೆ ಚಿಕ್ಕಮಗಳೂರ ಬೆಡಗಿ, ವಯಸ್ಸು ಸರಿ ಸುಮಾರು 24 ರಿಂದ 25. ಮನೆಯ ಹಿರಿಯವಳಾಗಿ ಮುದ್ದಿನಿಂದಲೆ ಬೆಳೆದಿರುತ್ತಾಳೆ. ಸರಿ ಸುಮಾರು 2 ವರುಷಗಳ ಹಿಂದೆ ಅಂದರೆ ತನ್ನ 22-23 ವಯಸ್ಸಿನಲ್ಲಿ ತಂದೆ ಡೆಂಗ್ಯೂ ಜ್ವರದಲ್ಲಿ ತೀರಿಕೊಂಡರೆ ಮತ್ತೈದು ತಿಂಗಳಲ್ಲಿ ಅವಳ ಅಸ್ವಸ್ತ ತಾಯಿ ಕೂಡ ಇದೆ ಕೊರಗಲ್ಲಿ ತೀರಿಕೊಳ್ಳುತ್ತಾಳೆ. ಅಲ್ಲಿಗೆ ತನ್ನ ತಂಗಿಯ ಹೊರತಾಗಿ ಈಕೆ ಅನಾಥೆ. ಕಾಫಿ ಪ್ಲಾಂಟೇಷನ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಹೆಂಗೊ ತಂಗಿಯ ವಿದ್ಯಾಭಾಸವು ಇವಳ ಮೇಲುಸ್ತುವಾರಿಯಲ್ಲಿ ನಡೆಯುತ್ತದೆ. ಹೀಗಿರಬೇಕಾದರೆ ಕಾಫಿ ಪ್ಲಾಂಟೇಷನ್ ಮ್ಯಾನೇಜರ್ ಜೊತೆ ಸಲಿಗೆ ಬೆಳೆಯುತ್ತದೆ ಮುಂದಿನೆರಡೆ ತಿಂಗಳಲ್ಲಿ ಈ ಸಲಿಗೆ ಪ್ರೇಮವಾಗಿ ರೂಪಾಂತರಗೊಳ್ಳುತ್ತದೆ. ಆತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಕ್ಕದ ನಿವಾಸಿ. ಟೂರ್ ಒಂದಕ್ಕೆ ಚಿಕ್ಕಮಗಳೂರಿಗೆ ಹೋದವ ಅಲ್ಲಿನ ಸೌಂದರ್ಯಕ್ಕೆ ಮಾರು ಹೋಗಿ ಅಲ್ಲಿಯೆ ಒಂದಷ್ಟು ಕಾಲ ಇರಬೇಕೆಂಬ ಹಂಬಲದಿಂದ ಈ ಕೆಲಸ ಗಿಟ್ಟಿಸಿಕೊಂಡಿದ್ದ. ಈಗ ಚಿಕ್ಕಮಗಳೂರ ಚೆಲುವೆಯೊಬ್ಬಳು ಒಲಿದಿದ್ದಳು. ಪ್ರೇಮಕ್ಕೆ ತಾರ್ಕಿಕ ಅಂತ್ಯ ಮದುವೆಯೆಂಬುದನ್ನು ನಿರ್ಧರಿಸಿದ ಈರ್ವರು ಒಂದು ಅರಸಿನ ಕೊಂಬಿನ ದಾರದ ಮೂಲಕ ಯಾವುದೊ ದೈವ ಸಾಕ್ಷಿಯ ಮುಂದೆ ಸತಿ ಪತಿಗಳಾಗುತ್ತಾರೆ. ಮೊದ ಮೊದಲು ಎಲ್ಲವೂ ಚೆನ್ನ. ಆದರೆ ಈ ಮದುವೆಗೆ ಹುಡುಗನ ಮನೆಯ ಒಪ್ಪಿಗೆ ಇರಲಿಲ್ಲ. ಈ ಆಕರ್ಷಣೆ ಸಲಿಗೆ, ಪ್ರೀತಿ, ಪ್ರೇಮ, ಮದುವೆ ಎಲ್ಲವೂ 1 ವರುಷದೊಳಗೆ ಮುಗಿದು ಹೋಗಿತ್ತು. ಒಂದೊಳ್ಳೆಯ ದಿನ ತನ್ನ ತಂಗಿಯ ವಿದ್ಯಾಭ್ಯಾಸ ಮುಗಿದು ಆಕೆ ಕೆಲಸಕ್ಕಾಗಿ ಬೆಂಗಳೂರಿಗೆ ಹೊರಟು ನಿಂತಾಗ ಈಕೆಯು ಕನಸಿನ ನಗರಿಗೆ ಹೋಗೋಣ ಅಲ್ಲಿ ಬದುಕು ಕಟ್ಟಿಕೊಳ್ಳೋದು ಸುಲಭ ಎಂಬ ಒತ್ತಾಸೆಯನ್ನು  ತನ್ನ ಗಂಡನಲ್ಲಿ ಅರಹುತ್ತಾಳೆ ಆತನೂ ಒಪ್ಪಲೂ ಇದ್ದದ್ದನ್ನೂ ಕಳೆದುಕೊಂಡು ಇಲ್ಲದ ಭವಿಷ್ಯ ಹುಡುಕುತ್ತ ಬೆಂಗಳೂರಿನತ್ತ ಇವರ ಜೀವ ಪಯಣ ಸಾಗಿ ಬಂದಿತ್ತು.,

ಬೆಂಗಳೂರಿನಲ್ಲಿ ಇಳಿದು ಹುಡುಗನ ಮನೆ ಬಾಗಿಲಿನಲ್ಲಿ ನಿಂತಾಗ ಸಿಕ್ಕಿದ್ದು ಮನೆಯವರ ತಿರಸ್ಕಾರ ಬರಿತ ಬಹಿಷ್ಕಾರ, ಎಲ್ಲವು ಮುಂದೊಂದು ದಿನ ಸರಿ ಹೋಗಬಹುದೆಂಬ ನಿರೀಕ್ಷೆಯಲ್ಲಿ ಗೆಳೆಯನ ಮನೆಯಲ್ಲಿ ಒಂದೆರಡು ದಿನದ ವಾಸದ ನಂತರ ಬಾಡಿಗೆ ಮನೆಯೊಂದಕ್ಕೆ ಪಾದಾರ್ಪಣೆ ಹೀಗೆ ಮೊದಲ್ಗೊಂಡಿದ್ದು ಸಂಸಾರ ಜೀವನ. ಬದುಕಿಗೆ ಒಂದು ಕನ್ಸೆಲ್ಟಿಂಗ್ ಏಜೆನ್ಸಿ ತರಹದ್ದೊಂದು ಸ್ವಉದ್ಯೋಗ ಮಾಡಿಕೊಂಡು ಹೆಂಗೊ ಸಾಗುತ್ತಿತ್ತನ್ನಿ. ಹೀಗಿರಬೇಕಾದರೆನೆ ಆಕೆ ಗರ್ಭವತಿಯಾಗಿದ್ದು.ಗರ್ಭವತಿ ಎಂದು ತಿಳಿದ ಕ್ಷಣದಿಂದ ಪ್ರೀತಿಸಿ ಮದುವೆಯಾದವ ಹೆಂಗೆಂಗೋ ಆಡಲತ್ತಿದ್ದ, ಇತ್ತೀಚಿಗೆ ಆತನ ಐಬುಗಳೆಲ್ಲ ಆಕೆಗೆ ತಿಳಿದಾಗಿತ್ತು.ಕುಡಿತ, ಮೋಜು, ಮಸ್ತಿ , ಕೈಯಲ್ಲಿ ನಯಾಪೈಸೆ ಇಲ್ಲೆಂದರು ಪಬ್ ಬಾರ್ ಗೆ ಅದೆಲ್ಲಿಂದಲೊ ಆತನೀಗೆ ಕಾಸು ಹುಟ್ಟುತಿತ್ತು.ದಿನಾ ಜಗಳ ಹೊಡೆತ ಮಾಮೂಲಿಯಾಗಿ ಬಿಟ್ಟಿತ್ತು ಆಕೆಗೆ… ಆದರೂ ತನ್ನ ಪ್ರೀತಿಯ ಗಂಡ ಎಂಬ ಒಂದೆ ಕಾರಣಗಳಿಂದ ಆತ ವಾಂತಿಸಿಕೊಂಡಿದ್ದನ್ನೆಲ್ಲ ಬಾಚಿ ಶುಭ್ರಗೊಳಿಸಿ ತನ್ನವನೆಂದು ಪ್ರೀತಿ ತೋರುತಿದ್ದಳು.ಬಹುಶಃ ಅದೊಂದರ ಹೊರತಾಗಿ ಆಕೆಗೆ ಬೇರೆ ದಾರಿಯೆ ಇಲ್ಲವೆನ್ನಿ, ಇದ್ದರೂ ಅದ ಹುಡುಕಲು ಆ ಬಗ್ಗೆ ಯೋಚಿಸಲು ಈಗೀಗ ಆಕೆ ಅಶಕ್ತೆ.ಆದರೆ ಆಕೆಯ ಗಂಡನೆನಿಸಿಕೊಂಡವ ಜವಬ್ದಾರಿಗಳಿಂದ ಮಾರು ದೂರ, ಅವನೀಗೆ ಅಪ್ಪ ಎನಿಸಿಕೊಳ್ಳೊ ಮಗದೊಂದು ಸಂಬಂಧದ ಸುಳಿ ಬೇಕಾಗಿರಲಿಲ್ಲ. ಈಗೀಗ ಇದೆಲ್ಲ ಹೊರೆಯಿಂದ ಕಳಚಿ ಬಿಡಬೇಕೆಂಬ ಅವ್ಯಕ್ತ ಬಯಕೆ ಆತನನ್ನು ಕಾಡಿತ್ತು…. ಅಂತೆಯೆ ಆ ಅವಿವೇಕಿ ಬಸುರಿ ಹೆಂಡತಿಯನ್ನು ಬಿಟ್ಟು ಅವಳಿಗೂ ಒಂದು ಮಾತೂ ಹೇಳದೆ ನಡೆದೆ ಬಿಡುತ್ತಾನೆ. ಈಕೆ ಗಂಡನಿಲ್ಲದ ಆ ಮುಂಜಾವದಲ್ಲಿ ಬೀದಿ ಬೀದಿ ಸುತ್ತಿ ಬಸವಳಿದು ಒಂದು ಪೋಲೀಸ್ ಕಂಪ್ಲೆಂಟ್ ಕೊಟ್ಟು ಮನೆಗೆ ಮರಳಿರುತ್ತಾಳೆ, ಒಂದು ತಿಂಗಳಲ್ಲ 2 ತಿಂಗಳಾದರು ಆತನ ಪತ್ತೆಯಿಲ್ಲ… ಇತ್ತ ಮನೆ ಬಾಡಿಗೆ, ವ್ಯವಹಾರ ನಡೆಸುವ ಕ್ಲೈಂಟ್ ಗಳು, ರೆಷನ್ ಎಲ್ಲವನ್ನು ಸಂಬಾಳಿಸುತ್ತಾ ಸುಸ್ತು ಹೊಡೆದು ಜೀವನವೆ ಸಾಕೆನಿಸಿ , ಪ್ರೀತಿಸಿದ ಗಂಡನೆ ನನ್ನ ಬಿಟ್ಟು ಹೋದ ಮೇಲೆ ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ಬದುಕು ನಡೆಸೋದು ಕಷ್ಟವಾಗಿದೆ, ನನ್ನ ಸಾವಿಗೆ ನನ್ನ ಜೀವನದ ತಪ್ಪು ನಿರ್ಧಾರವೆ ಕಾರಣ. ಎಂದೆರಡು ವಾಕ್ಯದ ಡೆತ್ ನೋಟ್ ಎಸೆದಿಟ್ಟು ನೇಣಿಗೆ ಶರಣಾಗುತ್ತಾಳೆ.:(  ಆ ಮೂಲಕ ಆಕೆಯ ಮರಣವು ಕೂಡ ಮತ್ತೊಂದು ತಪ್ಪಲ್ಲೆ ಕೊನೆಗೊಳ್ಳುತ್ತದೆ. ಈ ಈರ್ವರ ತಪ್ಪುಗಳಿಗೆ ಸಾಕ್ಷಿಯಾದ ಆಕೆಯ ಹೊಟ್ಟೆಯಲ್ಲಿ ಇದ್ದ ಇನ್ನು ಜಗ ಕಾಣದ ಆ ಹಸುಳೆ ಕೂಡ………………. :’(  ನನಗಂತು ನಿದ್ದೆ ಇಲ್ಲದ ಇತ್ತೀಚಿನ  ರಾತ್ರಿಯಲ್ಲಿ ಬರೀಯ ಹಸುಳೆಯದೆ ಚೀರಾಟದ ಭ್ರಮೆ.

ಇವೆಲ್ಲವದರೊಂದಿಗೆ ಮುಗ್ಗಲು ಬದಲಿಸುತ್ತಿರಬೇಕಾದರೇನೆ ಸ್ವಲ್ಪ ದಿನದ ನಂತರ ಮತ್ತೊಂದು ಚಿತ್ರ ಈ ಭ್ರಮೆಯೊಂದಿಗೆ ಸೇರ್ಪಡೆಗೊಂಡಿದೆ. ಅದು ನೆಮ್ಮದಿಯರಸಿ ಹೊರಟ ಮತ್ತೊಂದು ಸಾವ ಚಿತ್ರ. ಯು ಆಕಾರದಲ್ಲಿ ನಾಲಿಗೆ ಹೊರಚಾಚಿ ಪ್ಯಾನೊಂದಕ್ಕೆ ಜೋತು ಬಿದ್ದು ಸ್ಪಬ್ದವಾದ ಅಜಾನುಬಾಹು ನನ್ನ ಅಲ್ಪ ನೆಮ್ಮದಿಯನ್ನು ಪೂರ್ತಿಯಾಗಿ ಕಸಿದುಕೊಂಡಿದ್ದಾನೆ.ಮಿಡ್ಲ್ ಕ್ಲಾಸ್ ಫ್ಯಾಮಿಲಿಯ ಹುಡುಗ 2 ವರುಷದ ಹಿಂದೆ ಹೃದಯದ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಾವನ್ನ ಗೆದ್ದವ ಬದುಕನ್ನು ಎದುರಿಸಲಾಗದೆ ಬೆನ್ನು ಹಾಕಿ ಜಗ ಬಿಟ್ಟು ಓಡಿದ್ದ. ತಂದೆ ಸೆಕ್ಯುರಿಟಿ ಗಾರ್ಡ್ ತಾಯಿ ಅಲ್ಲಿ ಇಲ್ಲಿ ಮನೆಕೆಲಸ ಮಾಡಿಕೊಂಡು ಜೀವನ ಸಾಗಿಸುತಿದ್ದ ಕುಟುಂಬವದು. ಇರೊ ಒಬ್ಬನೆ ಮಗನ ಹೃದಯ ಸ್ಥಬ್ದವಾಗೊದನ್ನು ತಪ್ಪಿಸಲು ಸಾಲ ಮೂಲ ಮಾಡಿ ಶಸ್ತ ಚಿಕಿತ್ಸೆ ಮಾಡಿಸಿ ಉಳಿಸಿಕೊಂಡು ಮುಂದಿನ ಆರು ತಿಂಗಳಲ್ಲಿ ಆತ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆನೂ ಮಾಡಿಸಿದ್ದರು.ಅಲ್ಲಿಗೆ ಎಲ್ಲವೂ ಸರಿ ಹೋಯ್ತು ಅಂದನ್ನುಕೊಳ್ಳುವಷ್ಟರಲ್ಲಿ ಯಾವ ಉಸಿರನ್ನು ಉಳಿಸಲು ಹೆಣಗಾಡಿದ್ದರೋ ಅದೆ ಉಸಿರು ಅವರನ್ನು ತೊರೆದು ಹೋಗಿದೆ. ಮಾತೆ ಇಲ್ಲದ ಕಂಬನಿ ಆ ಬಡಪಾಯಿಗಳದ್ದು.

ಸಾವಿಗೆ ಶರಣಾದ ಹುಡುಗ ತುಂಬಾ ಒಳ್ಳೆಯವ, ಆಜಾತ ಶತ್ರು ಎಂದು ಆತನ ಗೆಳೆಯರ ಬಳಗದ ಮಾತು. ಹೆಂಡತಿಯನ್ನು ಕೂಡ ಅತಿ ಅನಿಸುವದರ ಮಟ್ಟಿಗೆ ಪ್ರೀತಿಸಿದ ಹುಡುಗ ಆಕೆಯೂ ಕೂಡ ಈತನನ್ನ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತಿದ್ದಾಕೆ.ಇಷ್ಟೆಲ್ಲ ಇದ್ದರೂ ಕೂಡ ಆತನೀಗೆ ಜೀವನ ಸಹ್ಯ ವಾಗಲಿಲ್ಲ ಅನ್ನೋದು ವಿಪರ್ಯಾಸ.ಹೆಳೆಗೆ ತನ್ನ ತಾಯಿಗೂ ಹೆಂಡತಿಗೂ ಅಷ್ಟಕಷ್ಟೆ ಅನ್ನೋದು ಕಾರಣ. ಈಕೆ ಈಗಿನ ಕಾಲದ ಯುವತಿ ಆತನ ತಾಯಿ ಚೂರು ಹಳಬಳು, ಎಲ್ಲರ ಮನೆಯಲ್ಲಿರುವಂತೆ ಚೂರು ಹೊಂದಾಣಿಕೆ ಸಮಸ್ಯೆ ಅಷ್ಟು ಬಿಟ್ಟರೆ ಮತ್ತೇನಿಲ್ಲ. ಆದರೆ ಈ ಸೆನ್ಸಿಬಲ್ ಹುಡುಗನೀಗೆ ಅದೆ ದೊಡ್ಡ ಸಮಸ್ಯೆಯಾಗಿ ಬಿಟ್ಟಿತ್ತು, ಜೊತೆಗೆ ಮಿಡ್ಲ್ ಕ್ಲಾಸ್ ಬವಣೆಗಳು ಆತನನ್ನು ಎಡೆಬಿಡದೆ ಸಣ್ಣದರಿಂದಲೆ ಕಾಡಿತ್ತು.ದೂರದ ಮಂಗಳೂರಿನ ಟಿಂಬರ್ ಪ್ಯಾಕ್ಟರಿಯಲ್ಲಿ ಇದ್ದ ಆತ ತನ್ನ ಕುಟುಂಬಕ್ಕೆ ಆಧಾರವಾಗಿದ್ದ… ಆದರೆ ಹೃದಯ ಸಂಬಂದಿ ರೋಗ ಮುಂದೆಂದು ಆ ತರದ ಕಠಿಣ ಕೆಲಸವನ್ನು ಆತ ಮಾಡುವದನ್ನು ತಡೆಗಟ್ಟಿತ್ತು, ಜೊತೆಗೆ ಮದುವೆಯೂ ಆಗಿ ಜವಬ್ದಾರಿಗಳ ಹೊರೆ ಆತನ ತಲೆ ಮೇಲೆ ಬಿತ್ತು. ಆದರು ಅದೆಲ್ಲೊ ಕೊರಿಯರ್ ಬಾಯ್ ಇತ್ಯಾದಿ ಕೆಲಸಗಳನ್ನು ಮಾಡಿ ಚೂರು ಪಾರು ಸಂಪಾದನೆ ಮಾಡುತಿದ್ದ. ಆದರೆ ಈ ಒತ್ತಡಗಳು ಆತನನ್ನ ಇಂಚಿಂಚೆ ತಿಂದು ಎಲ್ಲ ಸಮಸ್ಯೆಗಳು ಜೊತೆಗೂಡಿ ಜೀವನದ ಅತ್ಯಂತ ಘೋರ ತಪ್ಪನ್ನು ಕೈಗೊಳ್ಳಲು ಪ್ರೇರೇಪಿಸಿತ್ತು.ಹೆಂಡತಿಗೊಂದು, ತಂದೆ ತಾಯಿಗೊಂದು ಹಾಗು ಗೆಳೆಯರಿಗೆ ಒಂದು ಕ್ರಮವಾಗಿ ಆತ ಬರೆದ ಮೂರು ಡೆತ್ ನೋಟ್ಗಳು ಮಹಜರಿಗೆ ಬಂದ ಪೋಲಿಸರೀಗೆ ಸಿಗುತ್ತದೆ. ಕ್ಷಮಿಸಿ ಎಂದು ಅಲವತ್ತುಕೊಂಡಿರೊ ಪತ್ರವದು. ಕ್ಷಮಿಸಿ ಎಂದು ಕೇಳುತ್ತಾನೆಂದರೆ ತಾನು ಮಾಡುತ್ತಾ ಇರೋದು ತಪ್ಪು ಎಂಬುದು ಆತನೀಗೂ ಗೊತ್ತಿತ್ತು ಎಂದಾಯ್ತು. ಸಾಯೊ ಮೊದಲು ತಂದೆ ತಾಯಿ ಮಾಡಿರೊ ಸಾಲ ತೀರಿಸಿದ ಬಗ್ಗೆ , ಹೆಂಡತಿಗಾಗಿ ಒಂದಷ್ಟು ಹಣ ಹೊಂದಿಸಿ ಇಟ್ಟ ಬಗ್ಗೆ , ತಾನು ನೆಮ್ಮದಿ ಕಳಕೊಂಡ ಬಗ್ಗೆ ಹಾಗು ತಾನು ಇನ್ನು ನಿಮ್ಮಲ್ಲರೀಗೂ ಹೊರೆಯಾಗಲಾರೆ ಎಂದೆನ್ನುವ ಬಗ್ಗೆ ಬರಕೊಂಡಿದ್ದಾನೆ. ಸುಮಾರು 4 ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಆತ ( ಡೆತ್ ನೋಟಲ್ಲಿ ಬರಕೊಂಡ ಪ್ರಕಾರ), 5/7/15 ರಂದು 5 ನೇ ಭಾರಿಯಲ್ಲಿ ಯಶಸ್ವಿಯಾಗಿದ್ದ. ಸಾವನ್ನು ಎದುರುಗೊಳ್ಳಲೆ ಬೇಕು ಎಂಬ ಆತನ ಈ ಪರಿಯ ಹಠ ನನ್ನನ್ನು ಕ್ಷೋಭೆಗೆ ದೂಡಿದೆ.

ಈ ಮೇಲಿನೆರಡು ಸಾವು ಹಲವು ಸಾವುಗಳ ಎರಡು ಬಗೆಯಷ್ಟೆ. ಅತ್ಯಂತ ಕ್ಷುಲ್ಲಕ ಕಾರಣ ಎನಿಸುವ, ಸಮಸ್ಯೆ ಪರಿಹಾರಕ್ಕೆ ಕಿಂಚಿತ್ತು ತೆರೆದುಕೊಳ್ಳದೆ ಜೀವನವನ್ನೆ ಸಾಕಾಗಿಸಿದ ಕಥೆ.ಹಾಗೆ ನೋಡಿದಲ್ಲಿ ಹಿರಿಯರೊಡನೆ ಕೂತು ಬಳಗದವರೊಡನೆ ಒಡಗೂಡಿ ಸಮಸ್ಯೆಯನ್ನು ಖಂಡಿತವಾಗಿಯೂ ಪರಿಹರಿಸಬಲ್ಲದ್ದೆ ಕಾರಣಗಳು ಮೇಲಿನಿಬ್ಬರದ್ದು ಆಗಿತ್ತು.ಆದರೆ ಅಷ್ಟೊಂದು ವ್ಯವಧಾನಗಳು ಇಬ್ಬರೀಗೂ ಇದ್ದಂತಿರಲಿಲ್ಲ. ಈಗಿನ ಯುವ ಸಮೂಹ ಯಾಕಿಷ್ಟು ಸೆನ್ಸಿಟಿವ್ ಆಗ್ತಿದೆ? ಏನಾಗಿದೆ ನಮಗೆ?ಒಂದು ಸಲ ಬೆಂಗಳೂರನ್ನು ಸುತ್ತಿ ಬಂದರೆ ನೂರಕ್ಕಿಂತಲೂ ಮಿಗಿಲಾದ ಹರೆಯದ ಭಾವಚಿತ್ರ ಕೆಳಗೆ ಶ್ರದ್ದಾಂಜಲಿ ಎಂದು ಬರೆದ ಪ್ಲೆಕ್ಸ್ ಗಳು ಇಂದಿನ ದಿನಗಳಲ್ಲಿ ಕಾಣ ಸಿಗುತ್ತಿದೆ. ಕಷ್ಟವೆಂದರೆ ಒಲ್ಲದ , ಸಮಸ್ಯೆಗಳನ್ನು ಪರಿಹರಿಸಿಕೊಂಡು ಯಶಸ್ವಿಯಾಗುವಲ್ಲಿ ವಿಫಲವಾಗುವ ಯುವ ಸಮುದಾಯ ಬೆಳೆಯುತ್ತಿದೆ. ಬರೀಯ ಆಕರ್ಷಣೆಯನ್ನು ಪ್ರಿತಿಯೆಂದೆನ್ನುಕೊಳ್ಳುವ, ನಿಜಾತಿ ಪ್ರೀತಿಗಳನ್ನು ಅರಿಯದೆ,ತಾವೆ ಪ್ರಬುದ್ದರೆನಿಕೊಂಬ ಅಪ್ರಬುದ್ದತೆ, ತಾವು ಸತ್ತರೆ ಎಲ್ಲವೂ ಸರಿಹೋಗುತ್ತದೆ ಎಂಬೊ ಭ್ರಮೆಯ ಕಡೆ ಯುವ ಸಮುದಾಯ ಸಾಗುತ್ತಿದೆ. ಒತ್ತಡ ಸಹಿಸಿಕೊಳ್ಳದ, ಅಸಹನೆಗಳನ್ನು ಪೂರ್ತಿಯಾಗಿ ಹೊದ್ದು ಮಲಗಿದ ಯುವ ಸಮುದಾಯಕ್ಕೆ ಈ ಪೂರ್ತಿ ಗೀಳು ಹಬ್ಬುವ ಮುನ್ನ ಚಿಕಿತ್ಸೆ ಕೊಡಬೇಕಾಗಿದೆ. ಹಾಗಿದ್ದರೆ ಚಿಕಿತ್ಸೆ ಏನು? ಹಾಗು ಇದನ್ನು ಕೊಡಮಾಡುವವರು ಯಾರು? ಯಾರ ಮಾತನ್ನು ಕೇಳದ, ಹಿರಿಯರ ಎಲ್ಲಾ ಮಾತು ಝಾಳಾಗಿ ಕಾಣಿಸುವ ಈ ಯುವ ಸಮುದಾಯಕ್ಕೆ ತಿಳಿ ಹೇಳುವವರು ಯಾರು? ಸದ್ಯಕ್ಕೆ ನನ್ನುತ್ತರ ಗೊತ್ತಿಲ್ಲ ಎಂಬುದಷ್ಟೆ.ನನಗ್ಯಾಕೊ ಹುಟ್ಟಿಗೆ ಮೊದಲೆ ಸತ್ತ ಆ ಕಂದನ ಆಕ್ರಂದನ ಆ ಬಡಪಾಯಿ ತಂದೆ ತಾಯಿಗಳ ಕಣ್ಣೀರು ಕಣ್ಣೆದುರಿಗೆ ಬಂದು ನಿಲ್ಲುತ್ತಿದೆ. ಮುಂದಿನದೇನು ತೋಚುತ್ತಿಲ್ಲ. ಇಲ್ಲ!!!!! ನನ್ನ ಮಗನನ್ನು ಕಷ್ಟ ಸುಖ ಎರಡನ್ನು ಸಮಾನವಾಗಿ ಹಂಚಿ ಈಗಿಂದಲೆ ಭ್ರಮೆಗಳತ್ತ ಸಾಗದೆ ವಾಸ್ತವದತ್ತ ಹೊರಳುವ ದೃಷ್ಟಿಯನ್ನು ಅವನಿಗೆ ಕಲಿಸುವ ಹೊಣೆಗಾರಿಕೆ ಅಪ್ಪನಾದ ನನಗಿದೆ ಎಂಬುದನ್ನು ಮನದಟ್ಟು ಮಾಡಿಕೊಂಡು ನಿದ್ದೆಯತ್ತ ಜಾರಲು ತವಕಿಸುತಿದ್ದೇನೆ…..ಇವತ್ತು ನಿದ್ದೆ ನನ್ನಾವರಿಸದಿದ್ದರು ಕಳೆದ ಇಂದುಗಳ ಮಗದೊಂದು ನಾಳೆಯಲ್ಲಿ ಖಂಡಿತ ಸುಖ ನಿದ್ರೆ ನನ್ನದಾಗುತ್ತದೆ ಎಂಬ ವಿಶ್ವಾಸ ನನ್ನದು. ವಾಸ್ತವಕ್ಕೆ ಹೊರಳು ಎಂದೆನ್ನಲಾದರು ನಾನು ವಾಸ್ತವಕ್ಕೆ ಮುಖ ಮಾಡಲೇ ಬೇಕು.ಸಾವೆ ಎಲ್ಲದಕ್ಕೂ ಪರಿಹಾರವೆಂದಾದರೆ ಅದು ಪರಿಹಾರವೆ ಅಲ್ಲ ಯಾಕೆಂದರೆ ಒಂದು ಆತ್ಮಹತ್ಯೆಯಂತ ಸಾವು ಸಮಾಜಕ್ಕೆ ನಾವಿಟ್ಟು ಹೋಗೊ ಕಪ್ಪು ಚುಕ್ಕೆ. ಸಮಾಜ ಹಾಳು ಬಿದ್ದು ಹೋಗಲಿ ನಂಬಿದವರ ಕಣ್ಣೀರು ಲೆಕ್ಕಕ್ಕೆ ಇಲ್ಲ ಎಂಬ ಸ್ವಾರ್ಥಿಗಳಿಗೆ ಹೇಳುವದೇನು ಉಳಿದಿಲ್ಲ.ದಿನಾ ಸಾವು ಕಾಣೊ ಸಮಾಜ ತನ್ನ ಲೆಕ್ಕಕ್ಕೆ ಮಗದೊಂದನ್ನು ಸೇರ್ಪಡೆಗೊಳಿಸುತ್ತಾ ಸಾಗುತ್ತಿರುತ್ತದಷ್ಟೆ.ಋಣಾತ್ಮಕತೆಯತ್ತ ಧನಾತ್ಮಕತೆ ಸಾಗಿ ಬಂದು ಕೊಳೆಯನ್ನು ತೊಳೆದೆ ತೊಳಿಯುತ್ತದೆ ಎಂಬ ಭರವಸೆಯಲ್ಲೆ ಬದುಕು ಮುಂದುವರಿಸುವದು ನಮ್ಮ ತುರ್ತು ಅನಿವಾರ್ಯತೆಗಳಲ್ಲಿ ಒಂದು.

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

3 Comments
Oldest
Newest Most Voted
Inline Feedbacks
View all comments
RAVI SHANKAR
8 years ago

ತುಂಬಾ ದುರ್ಬಲ ಮನಸ್ಸಿನವರು ಈ ರೀತಿ ಮಾಡಿಕೊಳ್ಳುತ್ತಾರೆ. ಅಂತಹವರಿಗೆ ಜೀವನೋತ್ಸಾಹದ ಮಾತುಗಳು ಅಗತ್ಯವೆನಿಸುತ್ತದೆ. ಆದರೆ ಯಾರಿಗೆ ತಿಳಿದಿರುತ್ತದೆ ಯಾರ ಮುಖದಲ್ಲಿ ಆತ್ಮಹತ್ಯ ಮಾಡಿಕೊಳ್ಳುವ ನೆರಳಿರುತ್ತದೆಯೆಂದು…?
ತುಂಬಾ ಚೆನ್ನಾಗಿದೆ.

chaithra
chaithra
8 years ago

ಇತ್ತೀಚಿನ ದಿನಗಳಲ್ಲಿ ಸಾವೆಂಬುದು ಸಾಮಾನ್ಯ ಅನ್ನಿಸೋವಷ್ಟು ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಯುವಜನತೆಯಲ್ಲಿ ಆತ್ಮಹತ್ಯೆ. ತೀರಾ ಹಳ್ಳಿಗಳಲ್ಲೂ ದಿನಾ ಆತ್ಮಹತ್ಯೆಯ ಸುದ್ದಿ ಕೇಳುವಂತಾಗಿದೆ.

Rukmini Nagannavarಋ
Rukmini Nagannavarಋ
8 years ago

No words to say… very sad… 🙁

3
0
Would love your thoughts, please comment.x
()
x