Facebook

ದಪ್ಪ, ಸಪೂರದ ನಡುವೆ: ಅಕ್ಷಯ ಕಾಂತಬೈಲು

Spread the love

ಮುಂಚೆ ದಪ್ಪ ಇದ್ದಿಯಲ್ಲಾ. ಈಗ ಎಂತ ಸಡನ್ ಆಗಿ ಸಪೂರ ಆದದ್ದು ಹೀಗೆ ಕೇಳಿದರು, ಸಂಬಂಧಿಕರೊಬ್ಬರು. ನನಗೆ ಏನು ಹೇಳಬೇಕೆಂದು ತಿಳಿಯಲಿಲ್ಲ, ಸ್ವಲ್ಪ ತಡವರಿಸುತ್ತಾ ಅವರಿಗೆ ಹೇಳಿದೆ -ನಾನು ಅಷ್ಟೊಂದು ಸಪೂರ ಆಗಿದ್ದೀನಾ…? ಎಂದು. ಆ ಸಂಬಂಧಿಕರು ನನ್ನ ಮೈಕಟ್ಟಿನ ಬಗ್ಗೆ ಹೇಳಿದ್ದು ನಿಜ ಅನ್ನಿಸಿತು. ಏಕೆಂದರೆ ಈ ಮೊದಲು ಹಲವು ಗೆಳೆಯರು ನನಗೆ ಅದೇ ರೀತಿಯಾಗಿ ಹೇಳಿದ್ದರು. ಆದರೆ ಹೇಳಿದ ಕ್ರಮ ಮಾತ್ರ ಬೇರೆ ಇತ್ತು. ಏನೋ ಲವ್ ಫೆಲ್ಯೂರಾ, ಸಿಕ್ಕಾಪಟ್ಟೆ ಓದಿದರೆ ಹೀಗೇ ಆಗೋದು, ಸ್ವಲ್ಪ ತಿನ್ನು ಮಾರಾಯಾ ದಪ್ಪ ಆಗ್ತಿಯಾ ಎಂದೆಲ್ಲಾ.

ಹೌದು! ಮನೆಯಲ್ಲಿ ಇದ್ದಾಗ ಎಷ್ಟು ಚೆಂದ ಇತ್ತು. ಅಮ್ಮ ಬೇಕಾದ ಹೊತ್ತಿಗೆ ಬೇಕು ಬೇಕಾದ ಅಡುಗೆಯನ್ನು ಮಾಡಿಕೊಡುತ್ತಿದ್ದಳು. ಈಗ ಇಂಜಿನಿಯರಿಂಗ್ ಪದವಿಯನ್ನು ಓದಲು ಊರು ಬಿಟ್ಟು ಚಿಕ್ಕಮಗಳೂರಿಗೆ ಬಂದು ವರ್ಷಗಳೇ ಕಳೆದಿವೆ. ಒಮ್ಮೆ ಅನ್ನಿಸುತ್ತೆ; ಕಣ್ಣು ಮುಚ್ಚಿ ತೆರೆಯುವುದರಲ್ಲಿ ಈ ಇಂಜಿನಿಯರಿಂಗ್ ಕೋರ್ಸ್ ಮುಗಿದರೆ ಸಾಕಪ್ಪಾ ಎಂದು. ಇಲ್ಲಿಗೆ ಮೊದಲು ಮನೆಯಿಂದ ಬರುವಾಗ ದಪ್ಪ ದಪ್ಪವಾಗಿ ಗುಂಡು ಗುಂಡಕ್ಕೆ ಇದ್ದೆ. ನನಗೆ ಮುದ್ದೆ ಊಟ ತಿಂದು ಬೇರೆ ಅಭ್ಯಾಸವಿರಲಿಲ್ಲ. ಇಲ್ಲಿ ನಾನು ಹೋಗುವ ಮೆಸ್ ನಲ್ಲಿ ಮಧ್ಯಾಹ್ನ, ರಾತ್ರಿ ಮುದ್ದೆ ಗ್ಯಾರೆಂಟಿ. ಮುದ್ದೆ ತಿಂದು ಅಭ್ಯಾಸವಿಲ್ಲದ ನಾನು ಮೊದಲು ಮುದ್ದೆಯನ್ನ ಜಗಿ ಜಗಿದು ತಿನ್ನುತ್ತಿದ್ದೆ. ನನ್ನ ಪಕ್ಕದಲ್ಲಿ ಊಟಕ್ಕೆ ಕುಳಿತವರು ಇದನ್ನ ನೋಡಿ ಮುಸಿ ಮುಸಿ ನಗುತ್ತಿದ್ದರು. ಆಮೇಲೆ ಗೆಳೆಯನೊಬ್ಬ ಮುದ್ದೆಯನ್ನು ಜಗಿದು ತಿನ್ನಬಾರದು, ಹಾಗೆಯೇ ಗುಳುಂ ಎಂದು ನುಂಗಬೇಕು ಎಂದ. ಮುಂದೆ ಮುದ್ದೆ ತಿನ್ನುವುದು ಕರಗತವಾಯಿತು. ಆದರೆ ನನ್ನೂರಿನ ಕೆಲವು ತಿನಿಸು ಚಿಕ್ಕಮಗಳೂರಿನಲ್ಲಿ ಎಲ್ಲೂ ಕಾಣದು. ಅಮ್ಮ ಮಾಡುವ ಹಲಸಿನ ಹಣ್ಣಿನ ಕಡುಬು, ಪತ್ರೊಡೆ, ಕಾಡು ಕೆಸುವಿನ ಸಾರು, ಕಣಲೆ ಪಲ್ಯ ವ್ಹಾ! ಬಾಯಲ್ಲಿ ನೀರೂರುತ್ತದೆ. ಒಮ್ಮೆ ಮನೆಗೆ ಓಡಿ ಅಮ್ಮನ ಅಡುಗೆಯನ್ನು ಸವಿಯಬೇಕೆನ್ನಿಸುತ್ತದೆ. ಆದರೆ ಇಂಜಿನಿಯರಿಂಗಿನ ಈ ಇಂಟರ್‍ನಲ್ಸು, ಪ್ರಾಜೆಕ್ಟ್, ಸೆಮಿನಾರ್ಸು ಯಬ್ಬಾ! ಒಂದು ದಿನ ಸುಮ್ಮನೆ ಕೂರಲು ಬಿಡುವುದಿಲ್ಲ. ಡಿಗ್ರಿ ಗಿಟ್ಟಿಸಲು ಓದಲೇಬೇಕು ಅಮ್ಮನ ಅಡುಗೆ ಮುಂದೆಯೂ ಸಿಗುತ್ತಲ್ಲಾ ಎಂಬ ಸೂತ್ರದಡಿಯಲ್ಲಿ ನಾನಿದ್ದೇನೆ. 

ನಮ್ಮ ಇಂಜಿನಿಯರಿಂಗ್ ಕಾಲೇಜಿನ ಕೆಲವು ಹುಡುಗರನ್ನು ನೀವು ನೋಡಬೇಕು. ಥೇಟ್ ಸುಮೋ ಫೈಟರ್ ನಷ್ಟು ದಪ್ಪ ಇದ್ದಾರೆ. ನನಗೆ ಅವರನ್ನು ನೋಡಿದರೆ ಒಂಥರಾ ಅಸೂಹೆ. ಯಾಕೆಂದರೆ ನಾನು ಎಷ್ಟು ತಿಂದರೂ ಅವರಂತೆ ದಪ್ಪ ಆಗುತ್ತಿಲ್ಲವಲ್ಲಾ ಎಂದು. ಈ ದಪ್ಪಗೆ ಇರುವ ಹುಡುಗರು ತಮ್ಮ ಬಾಡಿಗೆ ಶೇಪ್ ಕೊಡಲು ಬೆಳಗ್ಗೆ ಜಾಗಿಂಗ್ ಮಾಡುವುದು, ಸಂಜೆ ಜಿಮ್ಮಿಗೆ ಹೋಗುವುದು ಏನೆಲ್ಲಾ ಮಾಡುತ್ತಾರೆ. ಇದನ್ನೆಲ್ಲಾ ನೋಡಿದರೆ  ಕಡ್ಡಿ ಪೈಲ್ವಾನ್‍ನಂತಿರುವ ನಾನು ಹೀಗೆ ಇರುವುದು ವಾಸಿ ಎಂದುಕೊಳ್ಳುತ್ತೇನೆ. ಮೊನ್ನೆ ಒಬ್ಬ ಗೆಳೆಯ ಕೂಗುತ್ತಿದ್ದ ಡಂಬಲ್ಸ್ ಎತ್ತಿ ಕೈ ನೋವು ಎಂದು. ಮತ್ತೊಬ್ಬ ಹೇಳುತ್ತಿದ್ದ ಮೂವತ್ತು ಕೆ.ಜಿ ವೈಟ್ ಲಿಫ್ಟ್ ಮಾಡಿ ಸೊಂಟ ನೋವೆಂದು. ಅವರಿಗೆ ಯಾಕೋ ಬೇಕು ಈ ದೈಹಿಕ ಕಸರತ್ತು ಎಂದು ಹೇಳಿದರೆ ತಪ್ಪು. ಯಾಕೆಂದರೆ ಗೆಳೆಯರಲ್ಲಿ ಉದ್ದೇಶದ ಉತ್ತರಗಳಿವೆ. ಇದು ನನ್ನ ಗರ್ಲ್ ಪ್ರೆಂಡಿಗಾಗಿ, ಇದು ಹುಡುಗಿಯರನ್ನು ಆಕರ್ಷಿಸಲು, ಮುಂದೆ ಫಿಲಂಗೆ ಸೇರುವ ಆಸೆ… ಅದಕ್ಕಾಗಿ, ಇದಕ್ಕಾಗಿ ಎಂದೆಲ್ಲಾ. 

ಯಾವ ಗರ್ಲ್ ಪ್ರೆಂಡಿರದ ಮತ್ತೆ ಫಿಲಂ ಹೀರೋ ತರ ಆಕರ್ಷಣೀಯ ಕಾಯದವನಲ್ಲದ ನನಗೆ ಕಥೆ, ಕಾದಂಬರಿ, ಕವಿತೆಗಳನ್ನು ಓದುವುದರಲ್ಲೇ ಪ್ರೀತಿಯನ್ನು ಕಾಣುತ್ತೇನೆ. ಆರೋಗ್ಯ ಚೆನ್ನಾಗಿದೆ. ಅಪ್ಪ ಹೇಳಿದ್ದಾರೆ; ನೋಡು ಇಂಜಿನಿಯರಿಂಗ್ ಮುಗಿಸಿದ ಮೇಲೆ ಖಂಡಿತಾ ನೀನು ದಪ್ಪ ಆಗ್ತಿಯಾ ಮಗ ಅಂತ.   
                                             
-ಅಕ್ಷಯ ಕಾಂತಬೈಲು

You can leave a response, or trackback from your own site.

Leave a Reply