ನಾ ನೋಡಿದ ಸಿನಿಮಾ ಹಮಾರಿ ಅದೂರಿ ಕಹಾನಿ: ಪ್ರಶಸ್ತಿ

ವಿದ್ಯಾ ಬಾಲನ್ ಅಂದ ತಕ್ಷಣ ಕೆಲವರಿಗೆ ಕಹಾನಿ ಚಿತ್ರ ನೆನಪಾದರೆ ಕೆಲವರಿಗೆ ಡರ್ಟಿ ಪಿಕ್ಚರ್ ನೆನಪಾಗಬಹುದು.ಅವೆರಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧವಯ್ಯಾ ಅಂದ್ರಾ ? ಡರ್ಟಿಪಿಕ್ಚರ್(೨೦೧೨) ಮತ್ತು ಕಹಾನಿ(೨೦೧೩) ಎರಡಕ್ಕೂ ಫಿಲ್ಮಫೇರ್ ಮತ್ತು ಅಂತರರಾಷ್ಟ್ರೀಯ ಭಾರತೀಯ ಸಿನಿಮಾ ಅಕಾಡೆಮಿ, ಸ್ಟಾರ್ ಗಿಲ್ಡ್, ಸ್ಟಾರ್ ಡಸ್ಟ್, ಜೀ ಸಿನಿ ಅವಾರ್ಡುಗಳ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ ಇವರು. ಸಿನಿಮಾ ರಂಗದಲ್ಲಿರುವವರಿಗೆ ಸಿನಿ ಪ್ರಶಸ್ತಿಗಳು ಬರುವುದು ಸಾಮಾನ್ಯ,ಅದರಲ್ಲೇನಿದೆ ಅಂದ್ರಾ ? ೨೦೧೪ರ ಸಾಲಿನ ಪದ್ಮಶ್ರೀ ಪ್ರಶಸ್ತಿಯೂ ಇವರಿಗೆ ಸಂದಿದೆ. ಗುರು, ಪಾ ಹೀಗೆ ಇವರ ಹೆಸರು ಬಂದಾಗೆಲ್ಲಾ ನೆನಪಾಗುವಂತಹ ಅನೇಕ ಚಿತ್ರಗಳಿವೆ ಅನ್ನೋದು ಸರಿಯಾದ್ರೂ ಇವತ್ತಿನ ಲೇಖನಕ್ಕೂ ಅವರಿಗೂ ಏನು ಸಂಬಂಧವಪ್ಪಾ ಅಂದುಕೊಳ್ತಾ ಇದೀರಾ ? ಅಲ್ಲಿಗೇ ಬರೋಣ. ಇತ್ತೀಚೆಗೆ ಬಿಡುಗಡೆಯಾದ "ಹಮಾರಿ ಅದೂರಿ ಕಹಾನಿ" ಚಿತ್ರದ ಮುಖ್ಯ ತಾರಾಗಣದಲ್ಲಿರುವುದು ಇದೇ ವಿದ್ಯಾಬಾಲನ್ ಮತ್ತು ಇಮ್ರಾನ್ ಹಷ್ಮಿ ಮತ್ತು ರಾಜ್ ಕುಮಾರ್ ರಾವ್.

ಕಹಾನಿ ಅಂದಾಕ್ಷಣ ಇವರ ಹಿಂದಿನ ಚಿತ್ರ ಕಹಾನಿಗೂ, ಇದಕ್ಕೂ ಏನಾದ್ರೂ ಸಂಬಂಧವಿದ್ಯಾ ಅನ್ನೋ ಡೌಟ್ ಬಂತಾ ? ಸಿನಿಮಾ ನೋಡುವಾಗ ಮಧ್ಯದಲ್ಲೊಂದು ಕ್ಷಣ ಈ ಸಂದೇಹ ಬರುವಂತದ್ದೇ. ಸಿನಿಮಾದ ಮಧ್ಯದಲ್ಲಿ ಬರುವ ದುರ್ಗಾಪೂಜೆ, ಅಲ್ಲಿ ಬಿಳಿ ಸೀರೆ, ಕೆಂಪು ರವಿಕೆ ತೊಟ್ಟ ವಿದ್ಯಾ ಬಾಲನ್ ಪಾಲ್ಗೊಳ್ಳುವ ದೃಶ್ಯ ಕಹಾನಿಯ ಕ್ಲೈಮಾಕ್ಸನ್ನು ನೆನಪಿಸುತ್ತೆ. ಆದ್ರೆ ಇಲ್ಲಿನ ಕತೆ ಬೇರೆಯೇ ಇದೆ. 

ಮೊನ್ನೆಯಷ್ಟೇ ಈಶಾನ್ಯ ರಾಜ್ಯಗಳಲ್ಲಿ ನಮ್ಮ ಸೈನಿಕ ಶಿಬಿರದ ಮೇಲೆ ದಾಳಿಮಾಡಿದ ಬಂಡುಕೋರರು ಅನೇಕ ಸೈನಿಕರನ್ನು ಕೊಂದದ್ದನ್ನೂ ಮತ್ತು ನಾಲ್ಕೈದು ದಿವಸದ ನಂತರ ಪ್ರತಿದಾಳಿ ಮಾಡಿದ ನಮ್ಮ ಸೈನಿಕರು ಒಂದಿಷ್ಟು ಬಂಡುಕೋರರನ್ನು ಕೊಂದಿದ್ದನ್ನೂ ಪತ್ರಿಕೆಗಳಲ್ಲಿ ಓದಿದ ನಮಗೆ ಈ ಚಿತ್ರದ ಕತೆಯೂ ಅಲ್ಲಿನ ಚಿತ್ರಣವನ್ನು ಕಣ್ಣ ಮುಂದೆ ತಂದಿಟ್ಟ ಅನುಭವವಾಗುತ್ತದೆ. ಐದು ವರ್ಷದಿಂದ ಕಾಣೆಯಾದ ಗಂಡ ಬಂಡುಕೋರನಾಗಿದ್ದಾನೆಂಬ ಪೋಲೀಸರ ಆರೋಪ ಒಂದು ಕಡೆ. ಐದು ವರ್ಷದ ನಂತರ ತನ್ನನ್ನು ಪ್ರೀತಿಸಲು ಶುರು ಮಾಡೋ ಹೊಸ ಜೀವ ಮತ್ತು ತನ್ನ ಮೊದಲ ಮಗುವಿನ ನಡುವಿನ ಆಯ್ಕೆಯ ಸಂದಿಗ್ದತೆ ಹೆಣ್ಣಿಗಿಲ್ಲಿ.ನಾ ಅನುಭವಿಸಿದ ಕಷ್ಟವನ್ನು ನೀ ಅನುಭವಿಸಬೇಡ , ನಿನ್ನ ಬಾಳು ನೀ ನೋಡಿಕೋ ಎಂಬ ಅತ್ತೆಯ ಬುದ್ದಿವಾದದ ನಡುವೆಯೂ ಬಂದ ಹೊಸ ಕೆಲಸವನ್ನು ಒಪ್ಪಿಕೊಳ್ಳಲೋ ಬಿಡಲೋ ಎಂಬ ಗೊಂದಲವಿಲ್ಲಿ. ಮಗನೇನೋ ಬೋರ್ಡಿಂಗ್ ಸ್ಕೂಲ್ ಸೇರಿದ, ಕೆಲಸವನ್ನೂ ಒಪ್ಪಿಕೊಂಡಾಯಿತು. ಆದರೆ ಕೆಲಸವಿತ್ತ ಪ್ರಭುವೇ ಬಾಳಿಗೊಂದು ಹೊಸ ತಿರುವೀಯಲು ಮುಂದಾದರೆ ? ಅತ್ತಲೋ ಇತ್ತಲೋ ಎಂಬ ಗೊಂದಲದಲ್ಲಿರುವಾಗಲೇ ಪ್ರತ್ಯಕ್ಷವಾಗೋ ಗಂಡನೆಂಬ ಸಂಶಯದ ಹುಳು. ತಾನು ಅಪರಾಧಿಯಲ್ಲದಿದ್ದರೂ ಅಪರಾಧಿಯಂತೆ ಬಿಂಬಿಸಿದ ಬಂಡುಕೋರರ ನಡುವೆ ಐದು ವರ್ಷವಿದ್ದೂ ತಪ್ಪಿಸಿಕೊಂಡು ಬಂದ ನನಗೆ ಇದ್ದ ಏಕಮಾತ್ರ ಆಶಾಕಿರಣ ನೀನೂ ಇಲ್ಲವಾದರೆ ನಾನು ಯಾರಿಗೋಸ್ಕರ ಬದುಕಲೆಂಬ ಅವನ ಪ್ರಶ್ನೆಗೆ ಉತ್ತರವೆಲ್ಲಿ ? ಅವರವರ ದೃಷ್ಟಿಯಲ್ಲಿ ಅವರವರು ಸರಿ !

ಕೊಂದೇ ಬಿಡುವೆ ನಿನ್ನ ಎಂಬ ಗಂಡ ಹರಿಯ ಆರ್ಭಟಕ್ಕೆ ನಾಯಕಿಯ ಉತ್ತರ ಯಾರ ಮನಸನ್ನಾದ್ರೂ ಕರಗಿಸುತ್ತೆ. ಹೆಣ್ಣೆಂದು ಅರಿತಾಗ ಹೊಟ್ಟೆಯಲ್ಲಿದ್ದಾಗೇ ಕೊಲ್ಲುವಿರಿ, ಇಲ್ಲಾ ನಂತರ ಕೊಲ್ಲುವಿರಿ, ಐದು ವರ್ಷ ಒದ್ದಾಡಿದ್ದರ ಅರಿವಿದೆಯಾ ನಿನಗೆ ? ನಿನ್ನ ಕಷ್ಟಗಳ ನೋವಿನಲ್ಲಿ ನಾನು ಕಳೆದ ದಿನಗಳ ಬಗ್ಗೆ ಒಂಚೂರಾದ್ರೂ ಗಮನವಿದೆಯಾ ನಿನಗೆ ? ಮದುವೆಯಾಗಿ ಒಂದು ವರ್ಷಕ್ಕೆ, ಮಗುವಿಗೆ ಒಂದು ತಿಂಗಳಾಗಿದ್ದಾಗ ಅವನ ಬಿಟ್ಟು ಹೊರಟ ನಿನಗೆ ಅವನನ್ನು ಹೇಗೆ ಸಾಕಿರಬಹುದು ಎಂಬ ಕಲ್ಪನೆಯಾದರೂ ಇದೆಯಾ ? ಕತ್ತು ನನ್ನದು, ಆದ್ರೆ ಮಾಂಗಲ್ಯಕ್ಕೆ ನಿನ್ನ ಹೆಸರು, ಕೈಗಳು ನನ್ನದು, ಆದ್ರೆ ತೊಡೋ ಬಳೆಗಳಿಗೆ ನಿನ್ನ ಹೆಸರು. ಗರ್ಭ ನನ್ನದು, ಕುಡಿಸೋ ಹೆಸರು ನನ್ನದು, ಆದ್ರೆ ಮಗುವಿಗೆ ನಿನ್ನ ಹೆಸರು ! ನನ್ನೆಲ್ಲಾ ಸತ್ವಗಳ ಮೇಲೆ ಹಕ್ಕು ಚಲಾಯಿಸಲು ಬರುವ ನೀನು ಕೊಂದು ಬಿಡು ನನ್ನ. ನಿನ್ನ ಗಲ್ಲಿನಿಂದ ಪಾರುಮಾಡಲು ಹೋಗಿ ತನ್ನ ಜೀವವನ್ನೇ ಕಳೆದುಕೊಂಡ ನನ್ನ ಪ್ರೀತಿಯನ್ನು ಸಾವಿನಲ್ಲಾದ್ರೂ ಸೇರುತ್ತೇನೆ, ಕೊಂದು ಬಿಡು ನನ್ನ ಎಂಬ ಅವಳ ಮಾತು ಯಾರ ಕಣ್ಣಲ್ಲಾದರೂ ನೀರ ಹನಿಯನ್ನ ತಂದುಬಿಡುತ್ತೆ.  

ಏನಿದು. ಇಡೀ ಚಿತ್ರದ ಕತೆಯನ್ನ ಹೇಳಿಬಿಟ್ಟೆ. ಚಿತ್ರ ನೋಡೋ ಉತ್ಸಾಹವೇ ಸತ್ತು ಹೋಯಿತಲ್ಲಾ ಅಂದ್ರಾ ? ಇದು ಚಿತ್ರದ ಒಂದು ಕೋನವಷ್ಟೆ. ಹೇಳದೇ ಉಳಿದ ಇನ್ನೆಷ್ಟೋ ಕೋನಗಳಿವೆ ಈ ಚಿತ್ರಕ್ಕೆ. ಕ್ಯಾಬರೆಯಲ್ಲಿ ಹಾಡುವವಳ ಮಗ ಆರವ್ ೧೦೮ ಹೋಟೇಲ್ಗಳ ಅಧಿಪತಿಯಾದ ಕತೆ, ಈ ಹೂತೋಟದಲ್ಲಿ ೪೦ ಸಾವಿರ ಹೂಗಳಿವೆ ಆದ್ರೂ ಏನೋ ಖಾಲಿಯಾದ ಭಾವ. ಏನು ಮಿಸ್ಸಾಗಿದೆ ಎಂಬುವವನ ಪ್ರಶ್ನೆಗೆ ತರಗೆಲೆಗಳು, ಮುದುಡಿದ ಹೂಗಳು, ಎಲ್ಲರ ಜೀವದಲ್ಲೂ ಏನಾದ್ರೂ ಕಲೆಗಳಿರುತ್ತೆ, ಅವಿಲ್ಲದೇ ಇದ್ದರೆ ಅರಳಿದ ಹೂಗಳ ಸೌಂದರ್ಯ ಅಪೂರ್ಣವೆಂಬೋ ಮಾತುಗಳು..ಆರವ್ಗೆ ವಸುಧಾ ಮತ್ತವಳ ಮಗನಲ್ಲಿ ತನ್ನ ತಾಯಿಯ ಕಷ್ಟಗಳು ನೆನಪಾಗೋ ಪರಿ, ತನ್ನ ತಾಯಿಯನ್ನು ಅವಮಾನಿಸಿದ ಹೋಟೇಲನ್ನೇ ಖರೀದಿಸಿದರೂ ನನ್ನ ಉದ್ದಟತನವನ್ನು ಕ್ಷಮಿಸಿ ಎಂದು ಅದನ್ನು ಅಂದಿನ ಮಾಲೀಕನಿಗೇ ಮರಳಿಸೋ ಪರಿ,ಸಾಜ್ ಎಂಬ ಮಗನಿಗೆ ತನ್ನ ಅಮ್ಮನ ಡೈರಿಯೋದುತ್ತಾ ತಿಳಿಯದ ದಿನಗಳ ತಿಳಿಯೋ ಕತೆ,  ಹೂಗಳ ತೋಟದಲ್ಲಡಗಿರೋ ಲ್ಯಾಂಡ್ ಮೈನಿನ ಕತೆ, ಜೀವನದುದ್ದಕ್ಕೂ ಜೊತೆಯಾದ ಹೃದಯದ ಗೆಳೆಯ, ಆಫೀಸಿನಲ್ಲಿನ ಬಾಸ್ ಕಣ್ಣೆದುರೇ ಛಿದ್ರವಾಗೋದನ್ನು ನೋಡಿದವನ ಹೃದಯ ವಿದ್ರಾವಕ ರೋದನ , ಆ ಭಾವ ಫೋನಿನಾಚೆಗೆ ದಾಟಿ ಮತ್ತೆಲ್ಲೋ ಕುಳಿತವಳ ಮನೆಯ ದೀಪ ಆರಿಸುವ ಪರಿ.. ಹೀಗೆ ಕತೆಯ ಭಿನ್ನ ಭಿನ್ನ ಕಥಾನಕಗಳು ಒಂದಾಗುವ ಪರಿಯನ್ನು ಆ ಚಿತ್ರ ನೋಡಿಯೇ ಸವಿಯಬೇಕು. ಮುಂಚೆಯೇ ಅಂದಂತೆ ವಸುಧಾ, ಹರಿ, ಆರವರಲ್ಲಿ ಯಾರು ಹಿತವರು ನಿನಗೆ ಅಂದ್ರೆ ಒಂದರೆಕ್ಷಣ ನಿರುತ್ತರ ನಾನು. ಒಂದೊಂದು ಕೋನದಿಂದ ಒಬ್ಬೊಬ್ಬರು ಸರಿ. ವಸುಧಾಳೇ ತೂಕವೇ ಮೇಲು ಎಂಬ ಭಾವ ಅನೇಕ ಸಾರಿ ಮೂಡಿದರೂ ಚಿತ್ರ ನೋಡೋ ನಿಮ್ಮಲ್ಲಿ ಮೂಡೋ ಭಾವ ಬೇರೆಯೇ ಇರಬಹುದು.ಕೆಲವೆಡೆ ಬೋರೆನಿಸಿದರೂ ಒಮ್ಮೆ ಧಾರಾಳವಾಗಿ ನೋಡಬಹುದಾದ ಚಿತ್ರವಿದು. ನೋಡಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ.

*****   

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x