ನನ್ನೊಳಗಿನ ಗುಜರಾತ್..!!! ಭಾಗ – 6: ಸಿ.ಎಸ್. ಮಠಪತಿ

 

ನಲ್ಮೆಯ ಒಂದು ಗೆಳೆತನ, ಒಲವಿನ ಸೆಳೆತನ, ಕಣ್ಣಂಚಿನ ಅಭಯ, ಆಪತ್ತಿನ ಸಹಾಯ ಹಸ್ತ, ವಿದಾಯದಲ್ಲಿನ ಭಾವೊದ್ವೇಗದಿ ಹಚ್ಚಿಕೊಂಡ ಎರಡು ಮನಗಳ ನಡುವಿನ ಬಿಗಿಯಾದ ಆಲಿಂಗನ,  ಎಲ್ಲೋ ಒಂಟಿತನದ ದಿನಗಳಲ್ಲಿ ಜಂಟಿಯಾಗಿ, ಏಕಾಂಗಿ ಬದುಕಿನ ನೊಗಕ್ಕೆ ಹೆಗಲಕೊಟ್ಟು ಸಿಹಿ-ಕಹಿ, ಸೋಲು-ಗೆಲುವು, ಸಕಲ ಏರಿಳಿತಗಳಲ್ಲಿ ಜೊತೆಸಾಗುವ ಜೀವ. ಅಬ್ಬಾ…!!  ಹೆಕ್ಕಿ- ಹೆಕ್ಕಿ ಹೊರ ಬರಸೆಳೆದು ನೆನೆಯಲೋ ಅಥವಾ ಬರೆಯಲೋ ಕುಳಿತರೆ ಒಂದೇ ,ಎರಡೇ? ಏಕಾಂಗಿ  ಬೆತ್ತಲೆ ಹುಟ್ಟು ಸಾವಿನ ನಡುವೆ, ವ್ಯಾಖ್ಯಾನಿಸಲಾಗದಷ್ಟು ಭಾವ ತುಮುಲಗಳು. ಭಾವ ಜೀವಿಗಳಾಗಿ ಬದುಕಿದರೆ, ಕ್ಷಣ-ಕ್ಷಣಕ್ಕೆ ತಿದ್ದಿ ತೀಡಿ ಮನಸ್ಸಲ್ಲಿ ಕಾಲವೆಂಬ ಕುಂಚ ಬಿಡಿಸುವ ತಿಳಿಯಾದ ತೈಲ ವರ್ಣದಂತಹ ಭಾವತುಂಬಿದ ರೇಖಾ ಚಿತ್ರಗಳು. ಒಂದೇ ನೋಟ, ಒಂದೇ ಗ್ರಹಿಕೆ, ಒಂದೇ ಅವಲೋಕನಕ್ಕೆ  ಎದೆ ರಾಗ ಮೀಟಿ ದನಿಗೂಡಿಸುವ ಕೊರಳು. ಶೋಕ ಗೀತೆಯೋ, ಸಾಂತ್ವನದ ಭರವೆಸೆಯೋ ಯಾವದೋ ಒಂದು ಅವರ್ಣನಿಯ ಗಣಿ. ವಿವರಿಸಲು ಪದಗಳು ಬಡವಾದಿ ಬಡವ. ನಿರ್ಗತಿಕರಾಗಿ ಬಿಡುತ್ತವೆ. ಅಕ್ಷಿ ಪಟಲದೊಳಗಿನ ವರ್ಣಾತಿವರ್ಣ ಭಿತ್ತಿ ಚಿತ್ತಗಳನ್ನು ಸವಿಯುತ್ತ ಕಳೆದ್ಹೋಗಿ ಬಿಡುತ್ತೇವೆ, ಎಲ್ಲವುಗಳ ಬಗ್ಗೆ ತುಂಬು ಜಾಣ್ಮೆಯಿಂದ ಬರೆದು ಅಭಿವ್ಯಕ್ತಿಸುಲು ಕೆಲವೊಮ್ಮೆ ಖಂಡಿತಾ ಆಗುವುದಿಲ್ಲ. ಕೆಲವೊಂದು ಅನುಭವಗಳನ್ನು ಅನುಭವಿಸಬೇಕಷ್ಟೇ. ಮಾತು ಕೃತಿಯಿಂದ ನಿವೇದಿಸಲಾಗದು. ಆದಾಗ್ಯೂ ಗುಜರಾತಿನ ಅನುಭವ ತುಸು ಹೇರಳ ಪೀಠಿಕೆ ಜೊತೆಗೆ ನನ್ನ ಲೇಖನಗಳ ಪಯಣ ಸಾಗಿಸುತ್ತಿದೆ ಎಂದೆನಿಸುತ್ತದೆ. ಕ್ಷಮೆ ಇರಲಿ. ಗುಜರಾತಿನ ಬಗೆಗಿನ ನನ್ನ ಅನುಭವಗಳನ್ನು ನಿಮ್ಮ ಮಾನಸಕ್ಕೆ ತೇಲಿಸುವ ನನ್ನ ಕನಸು ನನಸಿನ್ಹಾದಿಯಲ್ಲಿ ಸಾಗುತ್ತಿದೆ ಎಂಬ ಪುಟ್ಟ ಖುಷಿಯೂ ನನ್ನದು.  ತುಂಬು ಗರ್ಭದೊಳು ತುಂಬು ದಿನಗಳನ್ನು ಪೂರೈಸಿದ ಭ್ರೂಣಕ್ಕೆ  ಗರ್ಭದಲ್ಲಿ ಜಾಗವಿಲ್ಲ…!! ಪ್ರಸವ ನೋವನ್ನು ಕೊಟ್ಟು ಹೊರ ಹಾಕುವ ಕಾಲ.!! ಅದೇ ತೆರನಾಗಿ ನಮ್ಮ ಅನುಭವಗಳು ಪಕ್ವಕಾಲದಲ್ಲಿ ಖಂಡಿತವಾಗಿಯೂ ಪ್ರಸವಿಸಿ ಮುಕ್ತಿ ಪಡೆಯುತ್ತವೆ.

ಮೇಲೆ ಹೇಳಿದವುಗಳ ಕೊಡುಗೆ ನಲಿವಿನಿಂದ ಅಥವಾ ನೋವಿನಿಂದ ಕೂಡಿದ್ದರೂ, ಆದರೆ ,ಅವುಗಳ ಇರುವಿಕೆ ಮಾತ್ರ ಧೀರ್ಘ. ಉದ್ದದ ಕಾಲ ಮಿತಿಯವರೆಗೂ ನಮ್ಮಲ್ಲಿ ಉಳಿದು ಬಿಡುತ್ತವೆ. ಅರಿತು ಬೆರೆತ ಮನಗಳು ದೂರಾಗುವ ಕ್ಷಣದಲ್ಲಿ ಬಿಗಿಯಾಗಿ ತೋಳ್ಭಂಧಿಯಾಗಿ ಸುಖಿಸುವ ಆ ತುಂಬು ಆಲಿಂಗನಕ್ಕೆ ಸರಿ ಸಾಟಿ ಎಲ್ಲಿದೆ. ಅದರಲ್ಲಿ ನಮ್ಮನ್ನು ನಾವು ಮರೆತು ಕಳೆದು ಹೋಗುತ್ತೇವೆ. ಜಗವನ್ನು ಮರೆತು ಒಂದು ಕ್ಷಣ ಬಿಗಿಯಾಗಿ ತಬ್ಬಿ ಧ್ಯಾನಸ್ತರಾಗಿ ಶೂನ್ಯಕ್ಕೆ ಇಳಿದು ಅಸಾಮಾನ್ಯವಾದದ್ದನ್ನು ಕ್ಷಣಾರ್ಧದಲ್ಲಿ ಪಡೆದು ಬಿಡುತ್ತೇವೆ. ಕಾಲವೆಂಬ ಮಾಯೆ ಕೈಯಲ್ಲಿ ಗೊಂಬೆಗಳಾಗುತ್ತೇವೆ.

ಜಾಣನಿಗೆ ಜಾಣ, ಅಧಮನಿಗೆ ಅಧಮ, ಮೋಹಿಗೆ ಮೋಹಿ, ನಿಸ್ವಾರ್ಥಿಗೆ ನಿಸ್ವಾರ್ಥಿ, ಸ್ವಾರ್ಥಿಗೆ ಸ್ವಾರ್ಥಿ, ಎಂತೆಂಥ ಜನ ವರ್ಗಕ್ಕೆ ಅವರವರ ಭಾವ ಭಕ್ತಿಗೆ ಒಲಿಯುವಂತ ಜನರ ಸಾಂಗತ್ಯ ಬೇಕು. ಬದುಕಿನ ಪೂರ್ವೊತ್ತರದ ವರೆಗೂ ಹಿತವಾದ ಆಲಾಪ ಬೇಕು, ಒಡನಾಟಬೇಕು, ನಡುನಡುವೆ ಒಂದಿಷ್ಟು ಸುಖಃ ಉನ್ಮಾದಗಳು ಬೇಕು. ನೋವು ತೀರಿ ನಲಿವೊಂದೆ ನಮ್ಮದಾಗಲಿ ಎಂಬ ಆಕಾಂಕ್ಷೆ ಬೇಕು.

ಎಲ್ಲೇ ಮೀರಿ ಕಲ್ಪನದಾಳದಲ್ಲಿಯೂ ನುಸುಳಲಾಗದವುಗಳು ನಮ್ಮ ಜೀವನದಲ್ಲಿ ನೆಗೆದು ಬಂದು ಬಿಗಿಯಾಗಿ ಅಪ್ಪಿಕೊಂಡರೆ ಮಾಡವುದು ಏನು? ಹೇಳುವುದು ಏನು? ಬರೀ ಅನುಭವಕ್ಕೆ ಸೀಮಿತವಾದವುಗಳನ್ನು ಆ ವಲಯದಾಚೆಯಿಂದ ಕಾಣಲಾಗುವದೇ ಇಲ್ಲ; ಕೆಲವೊಮ್ಮೆ ವಿವರಿಸಲೂ ಆಗದು. ದಾರಿ ತಪ್ಪಿದ ಹೆಣ್ಣೊಬ್ಬಳು  ಕಂಬನಿಯಲ್ಲಿ ಮಿಂದೆದ್ದು ಜೀವನ ಸಾರವನ್ನು, ಕೆಟ್ಟು ಹೋಗುತ್ತಿದ್ದ ಜೀವನ ಹಾದಿಯಲ್ಲಿ ಅರಿತು. ಅಮಾನವಿಯ ಕವಚವನ್ನು ಕಳೆದು, ಅಮಾತೃತ್ವ ಮಾರಣ ಕೊಲೆ ಗೈದು, ದಾರಿದ್ರ್ಯಯುಕ್ತ ಜೀವನದಿಂದ ಹೊರ ಬಂದು. ಮತ್ತೆ  ಮಾನವೀಯತೆ, ನೈತಿಕತೆ, ಮಾತೃತ್ವವೆಂಬ ಅರಳು ಮಲ್ಲಿಗೆಯನ್ನು ಮನದ ಮುಡಿಗೆ ಮುಡಿದು  ಕೈ ಕುಲುಕಿ ಕಂಬನಿ ಸುರಿಸಿದಾಗ, ನಾನೇಲ್ಲಿ ಇದ್ದೇನೆ. ಯಾವ ಲೋಕವಿದು. ನಾನ್ಯಾರು. ಇದ್ಯಾವ ಬಂಧ ಅರಿಯಲಾಗಲೇ ಇಲ್ಲ. ಕೊಡಮಾಡಿದ ಆರೋಗ್ಯ ಶಿಕ್ಷಣದಿಂದ ಅವಳಲ್ಲಿ ಅವಳು ತೀರಿ, ಈ ಹೊಸಬಳೊಬ್ಬಳು ಹುಟ್ಟಿದ್ದೇಕೆ? ಕೇವಲ ಕೆಲವೇ ಕೆಲವು ಮಾಹಿತಿಯಿಂದ, ಎಲ್ಲೇ ಮೀರಿದ ಭಾವ ತೀರಕೆ ಜೊತೆಗೆ ಬಂದು ಮಾನವೀಯ ಹಣತೆಯನ್ನು ಮನದೊಳು ಹೊತ್ತಿಸಿ ಕೈ ಕುಲುಕಿದ್ದೇಕೆ ? ನಾನು ಸಹ ಅವಳೊಬ್ಬಳು ಅಂಥವಳು ಎಂದು ಮರೆತು, ಅವಳು ನನಗೇನು ಎನ್ನುವದನ್ನು ಕೆದಕದೆ, ಮನದ ಸ್ನೇಹಿತನಾಗಿ, ಒಡನಾಡಿಯಾಗಿ, ಭೋಧಕನಾಗಿ, ಮಗದೊಮ್ಮೆ ಆತ್ಮೀಯ ಜೀವವಾಗಿ ಕ್ಷಣವೊತ್ತು ಸುಮ್ಮನೆ ನಿರ್ಭಾವುಕನಾಗಿ ಅವಳ ಭಾವತೀರ್ವತೆಗೆ ನಿರುತ್ತರದ ಜೊತೆಗೆ ಸುಮ್ಮನೆ ನಿಂತಿದ್ದೇಕೆ? ಕಾರಣಗಳು ಇವತ್ತಿಗೂ ನಿಗೂಢ…ಅಸ್ಪಸ್ಟ, ಅವರ್ಣನಿಯ…!! ಕಾಲದ ಜೊತೆಗೆ ಆ ಒಂದು ಅನುಭವ ಮಾತ್ರ ಜೀವಂತ ಗೆಳಯ, ಹಸಿರ ಸಿರಿ, ನಿರಂತರ ಚಿಗುರಿ ಸುಗಂಧ ಸೂಸುವ ಮೊಗ್ಗು, ಮಗದೊಮ್ಮೆ ನೂರಾರು ಪ್ರಶ್ನೆ ಮಳೆಗರೆವ ಸವಾಲುಗಳ ಖಣಜ..!!

ಶೂನ್ಯ ಸಮಯ ಎಂದೆನಿಸಿದಾಗ ಸುಮ್ಮನೆ ಕುಳಿತು, ಅಲ್ಲಿಲ್ಲಿ ಅಲೆದಾಡಿ ಕಾಲಹರಣ ಮಾಡುವ ಶಕ್ತಿ ನನ್ನಲ್ಲಿ ಸ್ವಲ್ಪ ಕ್ಷೀಣವಾದದ್ದು. ಏನಾದರೂ ಒಂದು ಆಟ ಆಡುತ್ತಲೇ ಇರುತ್ತದೆ ಮನಸ್ಸು. ಹರಿಯುತ್ತಿರುತ್ತದೆ ಗುಪ್ತಗಾಮಿನಿಯಾಗಿ ತೀರ ಮೇರೆಗಳನ್ನು ಮೀರಿ. ಆವತ್ತು ಸರಿ ಸುಮಾರು ಬೆಳಗಿನ ಸಮಯ, ಹನ್ನೊಂದರ ಕಾಲ. ಪೇಟೆಯಿಂದ ತಿಂಡಿ ತಿಂದುಕೊಂಡು ಮರಳುತಿದ್ದ ನಾನು. ಯಾರದೋ ಕರೆಯನ್ನು ಸ್ವಿಕರಿಸಿ ರಸ್ತೆಯ ಬದಿಗೆ ನಿಂತು ಮಾತಿಗಿಳಿದಿದ್ದೆ. ಮಾತು ಮುಗಿಸಿ ಮುಂದೆ ಸಾಗಬೇಕೆನ್ನುವ ಸನ್ನಾಹದಲ್ಲಿರಲು. ಒಂದು ಹೆಣ್ಣುದನಿ ಏರು ಸ್ವರದಲ್ಲಿ ಕಿರಚಾಡುವ ಶಬ್ಧ ಕೇಳಿಸಿತು. ಸುಮ್ಮನೆ “ಮೋಬೈಲ್ ಫೋನ್” ನನ್ನು ಕೈಯಲ್ಲಿ ಹಿಡಿದುಕೊಂಡು ಆ ಹೆಂಗಳೆಯ ಮಾತುಗಳನ್ನು ಕೇಳಿಸಿಕೊಂಡೆ.  ಕೇಳಿಸಿಕೊಂಡದ್ದೆ ತಡ ಮನಸ್ಸಲ್ಲಿ ನೂರಾರು ಪ್ರಶ್ನೆಗಳ ಸುರಿಮಳೆ ಯಾಗಿ ಹೊಯ್ತು.

ಅದೊಂದು ಹಿಂದುಳಿದ ಸಮುದಾಯದ ಜನರು ವಾಸಿಯಾಗಿದ್ದ ಗಲ್ಲಿ. ಅಲ್ಲಿ ಸ್ವಚ್ಛ ಬದುಕಿಗಿಂತ ತಳುಕು ಬಳಕಿನ ಪ್ರಪಂಚವೇ ಮೈ ತೆರೆದುಕೊಂಡಿತ್ತು. ಒಂದು ಕ್ಷಣ ನೆನೆದು ಭಯವಾಯ್ತು. ಮತ್ತೊಮ್ಮೆ ಚಕಿತವೆನಿಸಿತು. ಅವರನ್ನೇ ಮೂಲವಾಗಿಟ್ಟುಕೊಂಡು ನೂರಾರು ಸವಾಲುಗಳು ಮನಸ್ಸಲ್ಲಿ ಹರಿದಾಡಿದವು. ಉತ್ತರಕ್ಕಾಗಿ ಕಾಯದೆಯೇ ಒಂದರ ಮೇಲೊಂದು ಸವಾಲುಗಳು. ಅವುಗಳ ದಾಳಿಯನ್ನು ತಡೆಯಲಾಗಲಿಲ್ಲ. ಸುಮ್ಮನೆ ಖಿನ್ನ ಮನೋಭಾವದೊಂದಿಗೆ ಮನೆಯಡೆಗೆ ಹೆಜ್ಜೆ ಹಾಕಿದೆ. ಆ ಹೆಂಗಳೆ ಅವಳ ಪುಟ್ಟಕಂದನಿಗೆ ಬೈಯುತ್ತಿದ್ದ ರೀತಿ , ಉಪಯೋಗಿಸುತ್ತಿದ್ದ ಭಾಷೆ, ಕೊಡುತ್ತಿದ್ದ ದೃಷ್ಟಾಂತಗಳು ಮನಸ್ಸನ್ನು ಆಳವಾಗಿ ಕೆದಕಿದವು. ಮನುಷ್ಯ ಜನ್ಮಕ್ಕೆ ಒಂದಿಷ್ಟು ಧಿಕ್ಕಾರವನ್ನು ಹಾಕುವಂತೆಯೂ ಸಹ ಮಾಡಿದವು.

ಒಂದು ಕಡೆ ಮಾನವೀಯ ನೆಲೆಗಟ್ಟಿನ ಮೇಲೆ ಸ್ವಲ್ಪ ಅನಾರೋಗ್ಯಕರ ಮತ್ತು ಅಸಹ್ಯ ಎನ್ನಿಸಿದರೂ. “ಪ್ರೊಫೆಷನಲಿ” ಸವಾಲಾಗಿ ಪರಿಣಮಿಸಿತು. ಹೇಗಾದರು ಮಾಡಿ  ಆ ಜನರ ಒಳ ಮನಸ್ಸಿನ ಉದ್ದಗಲಗಳನ್ನು ಅರಿಯಬೇಕೆನಿಸಿತು. ಅವರ  ಬದುಕಿನ ಹಿಂದಿನ ಕಪ್ಪ-ಬಿಳುಪಿನ ಬದುಕು ಹೊತ್ತಿಗೆಯ ಒಳ ಪುಟಗಳನ್ನು ತೆರೆದು ಓದಬೇಕೆನಿಸಿತು. ಒಂದೆರಡು ದಿನ ಹೀಗೆಯೇ ಚಿಂತಾಕ್ರಾಂತನಾಗಿ ವಿಚಾರ ಗೂಡಿನಲ್ಲಿ ಮುಳುಗಿ ಹೋದೆ. ಯಾವ ರೀತಿಯಾಗಿ ಸ್ಪಂದಿಸುವುದು?. ಅಂತಹ ಜನರ ಪ್ರಪಂಚವೇ ಬೇರೆ. ಅದೊಂದು ಮನುಷ್ಯ ಬದುಕಿನ ಅತ್ಯಂತ ಹೀನ ಅಂಚಿನ ಅಮಾನವವೀಯ ಬದುಕು. ಅದಕ್ಕಿಂತ ಮೊದಲೇ ನಾನು “ಪ್ರಿಮೆಂಟಿವ್ ಅ್ಯಂಡ್ ಸೋಸಿಯಲ್ ಮೆಡಿಸಿನ್” ನ  ಪಠ್ಯದಲ್ಲಿ  ಓದಿದ್ದೆ. ಈ ರೀತಿಯ ಸಮಾಜದ ಜನರ ಮುಖ ಗಳನ್ನು ಓದಿದ್ದ ನನಗೆ ಪ್ರಾಯೋಗಿಕವಾಗಿ ಕಾಣುವ ಒಂದು ಅವಕಾಶ ಗುಜರಾತ ಮಣ್ಣಲ್ಲಿ ದೊರೆತಂತಾಗಿತ್ತು. ಅವುಗಳ ಹರಿವು  ವಿಸ್ತಾರಗಳನ್ನು “ಕ್ಲೈಂಟ್ಸ್” ನ್ನು ಆಧಾರವಾಗಿಟ್ಟುಕೊಂಡು ನೋಡಬೇಕೆನಿಸಿತು.  ಬರೊಬ್ಬರಿ ಮೂರು ದಿನ ತಲೆಯಲ್ಲಿ ಹುಳು ಬಿಟ್ಟುಕೊಂಡು ಯೋಚಿಸುತ್ತ ಕುಳಿತು ಬಿಟ್ಟೆ. ನನ್ನ ಸಹಾಯಕ್ಕೆ ಯಾರನ್ನಾದರು ವಿನಂತಿಸೋಣ ಎಂದರೆ, ಮನಸ್ಸು ಸಮ್ಮತಿಸದೇ ಹಿಂಜರಿಕೆಯನ್ನು ಹಾಕಿತು. ನಾಲ್ಕನೆಯ ದಿನ ಒಂದು ಉಪಾಯ ತಲೆಯಲ್ಲಿ ಮಿಂಚಿನಂತೆ ಹರಿದು ಸಂಚಲನ ಮೂಡಿಸಿ ಮರೆಯಾಯ್ತು. ವಿಳಂಬ ಮಾಡದೆಯೇ ನನ್ನ  ಅದ್ಯಯನಕ್ಕೆ ಅಣಿಯಾದೆ

ಮಾಡಿದ್ದಿಷ್ಟು, ಸಂಶೋಧನೆ ನೆಪವನ್ನು ಪ್ರಾಥಮಿಕ ಕಾರಣವಾಗಿಟ್ಟುಕೊಂಡು ಮನ್ನೆಡೆದು. “ಎ ಸ್ಟಡಿ ಟು ಅಸೆಸ್ ದಿ ಪರ್ಸೆಪ್ಚೂವಲ್ ವೀವ್ ಅಬೌಟ್ ಪ್ರಾಸ್ಟಿಟ್ಯುಶನ್  ಅಮಂಗ್ ಪ್ರಾಸ್ಟಿಟ್ಯುಟರ್ಸ್ ಅ್ಯಟ್ ಸೆಲೆಕ್ಟೆಡ್ ರೂರಲ್ ಎರೀಯಾ ಆಫ್ ಸ್ಟೇಟ್  ಗುಜರಾತ್” ಎಂಬ ಶಿರ್ಷಿಕೆಯಡಿ, ಒಂದು ಪುಟ್ಟ ಸಂಶೋಧನಾ ಅಧ್ಯಯನಕ್ಕೆ ಅಣಿಯಾದೆ. ಆ ಅಧ್ಯಯನ ಯಾವ ವಿ.ವಿ ಗೆ ಮಹಾಪ್ರಬಂಧವಾಗಿಯೋ ಅಥವಾ ಸಂಶೋಧನಾ ಲೇಖನವಾಗಿಯೋ ಪ್ರಕಟಿಸ ಬೇಕೆಂಬುದಾಗಿರಲಿಲ್ಲ. ಈ ಸಾಮಾಜಿಕ ಪಿಡುಗಿನ ಬಗ್ಗೆ ನನ್ನಲ್ಲಿದ್ದಂತಹ ನೂರಾರು ದ್ವಂದ್ವಗಳಿಗೆ ಉತ್ತರವಾಗಬೇಕಾಗಿತ್ತು ಅಷ್ಟೆ.

ಸಮುದಾಯದಲ್ಲಿ ಯಾವದೇ ಸಮುದಾಯದ ಜನರನ್ನು ಸಂಶೋಧನಾ ಮಾದರಿಯಾಗಿ ಬಳಸಿಕೊಂಡು ಅಧ್ಯಯನ ಮಾಡಬೇಕಾದರೆ, ಅಧ್ಯಯನದ ಮೊದಲು ಸಂಬಂಧ ಪಟ್ಟ ಇಲಾಖೆ ಮತ್ತು ಸಂಸ್ಥೆಗಳಿಂದ ಪರವಾಣಿಗೆಯನ್ನು ಪಡೆಯಬೇಕು. ಆದರೆ ನನ್ನ ಆ ಅಧ್ಯಯನ ಒಂದು “ಇನ್ ಫಾರ್ಮಲ್ ಸ್ಟಡಿ” ಯಾಗಿದ್ದರಿಂದ ಯಾವ ಪರವಾಣಿಗೆಯೂ ಬೇಡವೆಂದೆನಿಸಿತು . ಹಾಗೆಯೇ ಆ ಜನರ “ರೆಸ್ಪಾನ್ಸ್” ಗಳನ್ನು ಸಂಗ್ರಹಿಸಿದೆ. ಮತ್ತು ಇದರ ಕುರಿತಾಗಿ ಜಾಗೃತೆ ಮೂಡಿಸುವ ಬಯಕೆ ನನ್ನದಾಗಿತ್ತು. 

ದಿನಾಲು ಒಂದು ಹೊಟೇಲ್ ಗೆ ತಿಂಡಿ ತಿನ್ನಲು ಹೋಗುತ್ತಿದ್ದ ನಾನು ಆ ಹೊಟೇಲ್ ನಲ್ಲಿ ಒಂದೆರಡು ಹುಡುಗರು ಜೊತೆ ಚೆನ್ನಾಗಿಯೇ ಮುಖ ಪರಿಚಯ ಬೆಳೆದಿತ್ತು. ತುಂಬು ಪ್ರೀತಿಯಿಂದ ತಿಂಡಿ ತಿನಿಸುಗಳನ್ನು ಬಡಿಸುತ್ತಿದ್ದರು ಕೂಡ. ಈ ಕೆಲಸವನ್ನು ಅಚ್ಚು ಕಟ್ಟಾಗಿ ಮುಗಿಸಲು ಅವರೇ ಸರಿಯಾದ ವ್ಯಕ್ತಿಗಳು ಎಂದರಿತು, ಒಂದು ದಿನ ನನ್ನ ಅಧ್ಯಯನ ಕುರಿತು ಅವರ ಮುಂದೆ ಅರುಹಿಕೊಂಡೆ. ಅವರು ಸಾಹೇಬ್ “ಇದೇನು ಮಹಾ ಕೆಲಸ ಬಿಡಿ, ನೀವು ಅವರನ್ನು ಯಾವ –ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ಹೇಳಿ, ನಾವು ಕೇಳಿ ನಿಮಗೆ ಅವರ ಕೊಟ್ಟ ಉತ್ತರಗಳನ್ನು ಕೊಡುತ್ತೇವೆ” ಎಂದರು. ಅವರ ಮಾತನ್ನು ಕೇಳಿ ನನಗೆ ಎಲ್ಲಿಲ್ಲದ ಸಂತಸವಾಯ್ತು. ಜೊತೆಗೆ ಅವರ ಸಹಕಾರಕ್ಕೆ ಧನ್ಯವಾದಗಳನ್ನು ತಿಳಿಸಿ ಹೊರ ಬಂದೆ.

ಹೀಗೆಯೇ ಆ ಹುಡುಗರ ಹೊಟೇಲ್ ಗೆ  ಜನ ಬೇರೆ- ಬೇರೆ ಊರುಗಳಿಂದ ಸುತ್ತಾಡಿಕೊಂಡು ತಿಂಡಿ ತಿನ್ನಲೋ , ಚಹಾ ಕಾಫಿ ಕುಡಿಯಲೋ ಅಂತಹ ಜನ ಬರುತ್ತಿದ್ದರು. ಇಂಥ ಜನರನ್ನು ನಾನು ತಯಾರಿಸಿ ಕೊಟ್ಟು “ಮಲ್ಟಿ ಡೈಮೆನ್ಶನ್” ಪ್ರಶ್ನೆಗಳನ್ನು ಕೇಳಲು ಆ ಹೊಟೇಲ್ ಹುಡುಗರ ಕೈಗೆ ಪ್ರಶ್ನೆಗಳ ಕಡತವನ್ನು ಕೊಟ್ಟೆ. ಸುಮಾರು ಒಂದು ವಾರದ ನಂತರ ಆ “ಸ್ಯಾಂಪಲ್ ರೆಸ್ಪಾನ್ಸ ಸೀಟ್” ನನ್ನ ಕೈಗೆ ಸೇರಿತು. ಇದರ ಹಿಂದಿನ ಕಾರಣಗಳನ್ನು ಪರೀಕ್ಷಿಸಿದೆ. ಕಾರಣಗಳು ಮತ್ತು “ಪರ್ಸೆಪ್ಚೂವಲ್ ವಿವ್ಸ್” ಸ್ಪಲ್ಪ ಅಸ್ಪಷ್ಟ ಎನ್ನಿಸಿತು. ಕೊನೆಗೆ ನನ್ನ ಅಧ್ಯಯನದ ಹೈಪೊಥೀಸಿಸ್,“ಇಂಟರಪಿಟೇಶನ್” ನಲ್ಲಿ ಕಂಡು ಕೊಂಡಂತಹ ಫಲಿತಾಂಶದಿಂದ ಸ್ವಲ್ಪ ಮಟ್ಟಿಗೆ ಸ್ಪಷ್ಟತೆ ದೊರೆಯಿತು. ಕಾರಣಗಳು ಈ ಕೆಳಗಿನಂತಿದ್ದವು.

ಲೈಂಗಿಕ ಸಂಬಂಧ ಬಗ್ಗೆ ಇರುವ ಅಸಮರ್ಪಕ ಜ್ಞಾನದಿಂದ ಹೆಚ್ಚಾಗಿ ಅವಿದ್ಯಾವಂತ ಮಹಿಳೆಯರು ತಮ್ಮ ಕೌಟುಂಬಿಕ ಕಟ್ಟಳೆಯಿಂದ ಇದರಲ್ಲಿ ಭಾಗಿ ಯಾಗುತ್ತಾರೆ

ಕೌಟುಂಬಿಕ ದಿಮಾಳಿತನದಿಂದ ಅಂದರೆ, ನಿರಾಶ್ರಿತರು. ವಿಭಜಿತ ಕುಟುಂಬದಿಂದ ಬಂದವರು ಮತ್ತು ಸಾಮಾಜಿಕವಾಗಿ ಅಭದ್ರತೆಯುಳ್ಳವರು ತಿಳಿದೋ ತಿಳಿಯದೆಯೋ ಇದರಲ್ಲಿ ಭಾಗಿಯಾಗಿರುತ್ತಾರೆ.

ಮೂಲತಃ ಹೆಚ್ಚಿನ ಮಹಿಳೆಯರಲ್ಲಿ ಇಂತಹ ತುಡಿತ ತುಂಬಾನೇ ಕಡಿಮೆ. ಪರಿಸ್ಥಿಯ ಒತ್ತಡಕ್ಕೆ ಸಿಲುಕಿ ಇವರು ಭಾಗಿಯಾರುತ್ತಾರೆ.

ವೈಜ್ಞಾನಿಕವಾದ ಯಾವದೇ ರೀತಿಯಾದ ಪ್ರಾಥಮಿಕ ತಿಳುವಳಿಕೆ ಮತ್ತು ದೂರದೃಷ್ಟಿ ಇದರ ಬಗ್ಗೆ ಈ ಜನ ಸಮುದಾಯಕ್ಕೆ ಇರುವುದಿಲ್ಲ. ಹುಂಬತನದ ವ್ಯಕ್ತಿತ್ವದಿಂದ ಈ ಶಿಷ್ಟಾಚಾರಕ್ಕೆ ಒಳಗಾಗಿರುತ್ತಾರೆ.

 ಅವರಲ್ಲಿಯೂ ಒಂದು ಮಾನವೀಯತೆ ಇರುತ್ತದೆ. ಆದರೆ, ಅದು ನಶಿಸಿ ಹೋಗಿರುತ್ತದೆ.

ಅನಿಶ್ಚತೆ ಗೋಡೆಯ ಬದಿಯ ಜೀವನದ ಅವರ ಬದುಕು ಗೋಡೆ ಯಾವಾಗ ಬಿದ್ದು ಹೋಗುತ್ತದೆಯೋ ಅವರಿಗೆಯೇ ತಿಳಿರುವದಿಲ್ಲ.

ಈ ಒಂದು ವಿಷಯದ ಬಗ್ಗೆ ಅವರು ಅಸ್ಪಸ್ಟ ಮನೋಭಾವದಿಂದ ಕೂಡಿರುತ್ತಾರೆ.

ಹೆಚ್ಚಿನವರು ಸಹವಾಸ ದೋಷದಿಂದ ಮತ್ತು ಬಾಹ್ಯ ಒತ್ತಡದಿಂಡ ಇದರಲ್ಲಿ ಭಾಗಿಯಾಗಿರುತ್ತಾರೆ.

ಈ ಒಂದು ಕ್ಯಾಜ್ಯೂವಲ್ ಅ್ಯಂಡ್ ಇನ್ ಫಾರ್ಮಲ್  “ಸೆಲ್ಪ ಇಂಟರೆಸ್ಟ ಓರಿಯಂಟೆಡ್ ಸ್ಟಡಿ” ಮುಗಿದ ನಂತರ, ಒಂದು “ಹೆಲ್ತ ಕೇರ್ ಮೆನು ಗೈಡ್” ತಯಾರು ಮಾಡಿ ಅವರ ಕೈಗೆ ಕೊಟ್ಟಿದ್ದೆ. ಅವರ ಜೊತೆ ಒಂದು ಗಂಟೆ ಸವಿಸ್ತಾರವಾಗಿ ಇದರಿಂದಾಗುವ ಅನಾಹುತಗಳ ಬಗ್ಗೆ “ಹೆಲ್ತ ಎಜ್ಯೂಕೇಶನ್” ನೀಡಿದೆ. ಇದರಿಂದ ಉದ್ಭವಿಸ ಬಹುದಾದ “ಎಸ್ ಟಿ ಡೀಸ್” ಸೆಕ್ಸೂಲ್ ಟ್ರಾಸ್ಮಿಟೆಡ್ ಡಿಸೀಸ್ ಬಗ್ಗೆ ಅರಿವು ಮೂಡಿಸಿದೆ . ನೀವೆನಾದರೂ ಇದೇ ರೀತಿಯಾಗಿ ಜೀವನ ಸಾಗಿಸಿದರೆ. “ಎಸ್ ಟಿ ಡೀಸ್” ಗಳಾದ ಸಿಪಿಲಿಸ್, ಗೊನೋರಿಯೋ, ಕ್ಯಾನ್ಕ್ರ್ಯಡ್, ಜನೈಟಲ್ ವಾರ್ಟ್ಸ್, ಎಚ್ ಐ ವಿ ಮತ್ತು ಏಡ್ಸ್ ನಂತಹ ಮಾರಣಾಂತಿಕ ಖಾಯಿಲೆಗೆ ತುತ್ತಾಗುತ್ತೀರಿ ಎಂದು ಹೇಳಿ, ನನ್ನ ಅಧ್ಯಯನದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು ತಿಳಿಸಿದೆ. ಎಲ್ಲರಿಗೂ ಒಂದು ಚೆಂದದ ನಾಷ್ಟಾ ಕೊಡಿಸಿದೆ. ನಾನು ಅವರಿಗೆ ಕೃತಜ್ಞತೆ ಹೇಳಿ ಕೈ ಕುಲುಕಿ ವಿಶ್ ಮಾಡಿದೆ.

ಇವತ್ತು ಆ ಅಧ್ಯಯನದ ರಿಸರ್ಚ್ ಪೇಪರ್ಸ್ ನನ್ನಲ್ಲಿಲ್ಲ, ಆದರೆ, ಅದರ ಸಾರಾಂಶ ಮಾತ್ರ ನೆನಪಿನಾಳದಲ್ಲಿ ಅಚ್ಚಳಿಯದೇ ಇದೆ. ಇನ್ನೊಂದು ಹೆಮ್ಮೆಯ ವಿಚಾರ ಎಂದರೆ, ಬೇರೆ ರಾಜ್ಯಗಳಲ್ಲಿ ಇರುವಂತಹ ಈ ಸಾಮಾಜಿಕ ಅನಿಷ್ಟ ಪದ್ದತಿ ಗುಜರಾತಿನಲ್ಲಿ ಅಷ್ಟಾಗಿ ಇಲ್ಲ. ತುಂಬಾ ಕಡಿಮೆ ಪ್ರಮಾಣದಲ್ಲಿ ಅದೂ ಅತಿ ವಿರಳವಾದ ರೀತಿಯಲ್ಲಿ ಇದೆ. ಈ ನಿಟ್ಟಿನಲ್ಲಿ ಗುಜರಾತಿಗರು ಬೇರೆ ರಾಜ್ಯಗಳ ಜನರಿಗಿಂತ ಒಳ್ಳೆಯವರು ಎನ್ನಿಸುತ್ತೆ. ಅದಕ್ಕೆ ಕಾರಣವು ಇಲ್ಲದಿಲ್ಲ. ಧಾರ್ಮಿಕ ನೆಲೆಗಟ್ಟಿನ ಜೀವನ, ಇನ್ನು ಗಟ್ಟಿ ಬೇರಿನ ಜೊತೆಗೆ ಗುಜರಾತಿನಲ್ಲಿದ್ದುಕೊಂಡು, ಅವರನ್ನು ಇಂತಹ ಜೀವನ ಕ್ರಮದಿಂದ ತುಸು ದೂರವೇ ಇಟ್ಟಿದೆ. ಕೇವಲ ವಿರಳ ಪ್ರಮಾಣದಲ್ಲಿ ಇದು ಇದೆ ಎಂದು ಹೇಳ ಬಹುದು.

ಏನೇ ಆಗಲಿ, ಈ ಅನಿಷ್ಟ ಪದ್ಧತಿಯ ಬಗ್ಗೆ ನನ್ನಲ್ಲಿದ್ದ ದ್ವಂದ್ವಗಳಿಗೆ ಸ್ವಲ್ಪಮಟ್ಟಿಗಾದರೂ ಉತ್ತರ ದೊರಕುವಂತೆ ಮಾಡಿದ, ಆ ಹೊಟೇಲ್ ಹುಡುಗರಿಗೂ ಮತ್ತು ಆ ಮಹಿಳೆಯರಿಗೂ ನನ್ನ ಅನಂತ ಧನ್ಯವಾದಗಳು.

ಆರೋಗ್ಯ ಶಾಸ್ತ್ರ ಬಗ್ಗೆ ಓದಿದ ನನಗೆ ಇಂತಹ ಒಂದು ಅಧ್ಯಯನ ಮಾಡಲು ಕಾರಣ ವಾಯ್ತು ಎನ್ನಿಸುತ್ತೆ.“ ನಮ್ಮ ಸಮಾಜ ಇಂತಹುಗಳಿಂದ ಮುಕ್ತವಾಗಿ ಆರೋಗ್ಯಯುಕ್ತ ಸಮಾಜ ವಾಗಲಿ ಎನ್ನುವುದು ನನ್ನ ಕೋರಿಕೆ. ಧನ್ಯವಾದಗಳು.

-ಸಿ. ಎಸ್. ಮಠಪತಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

7 Comments
Oldest
Newest Most Voted
Inline Feedbacks
View all comments
ಶ್ರೀವತ್ಸ ಕಂಚೀಮನೆ.

ಇಷ್ಟವಾಯಿತು…

santoshkumar
santoshkumar
11 years ago

i want to read from part I …… hw can i read that……………..

Team Panju
Team Panju
11 years ago
Reply to  santoshkumar

ಮೇಲೆ 'ಹಿಂದಿನ ಸಂಚಿಕೆಗಳು' ಮೇಲೆ ಕ್ಲಿಕ್ ಮಾಡಿ. ಹಿಂದಿನ ವಾರಗಳ ಬರಹಗಳೆಲ್ಲವೂ ಅಲ್ಲಿ ಲಭ್ಯ… ಅಥವಾ ಬಲಬದಿಯ categories ಮೇಲೆ ಕ್ಲಿಕ್ ಮಾಡಿಯೂ ಈ ಬರಹಗಳನ್ನ ಓದಬಹುದು. ಧನ್ಯವಾದಗಳು.
-ಪಂಜು ಬಳಗ

praveenkumar Daivajnacharya
praveenkumar Daivajnacharya
11 years ago

ಕಥನ ಒ೦ದು ರೀತಿಯಲ್ಲಿ ಸಾಹಸಗಾಥೆಯೇ ಆಗುತ್ತಿದೆ ಗೆಳೆಯ.. ಪ್ರವಾಸದ ಘಟನೆಗಳ ವರ್ಣನೆ ಮೈಮರೆಸುವ೦ತಿದೆ. ಮು೦ದುವರೆಸಿ…

Krisna Prasad
Krisna Prasad
11 years ago

 
ನಿಮ್ಮ ದೀರ್ಘ ಲೇಖನ ಕುತೂಹಲಕರವಾಗಿದೆ. ಸಂಪೂರ್ಣವಾಗಿ ಓದಿದೆ. 
ಕೆಂಪು ದೀಪದ ಅಡಿಯಲ್ಲಿನ ಜನರ ಜೀವನ ಗುಜರಾತಿನಲ್ಲೂ 
ಭಿನ್ನವೇನು ಇಲ್ಲ. ನೀವು ತಿಳಿಸಿರುವ ವಿಷಯಗಳು ನಿರೀಕ್ಷಿಸಿದಂತೆಯೇ
ಇತ್ತು. ಅವರ ಮೇಲೆ ಅನುಕಂಪವಿದೆ. ಅವರಲ್ಲಿನ ಕೆಲವರದು
ಸ್ವಯಂಕೃತ ಅಪರಾಧ. 
ನೀವು ಸರ್ಕಾರದ ಪ್ರತಿನಿಧಿಯಾಗಿ ಅಲ್ಲಿಗೆ ಹೋಗಿದ್ದಿರ?
ನೀವು 'ಅಭಿಸಾರಿಕೆ' ಎಂಬ ಪದವನ್ನು ಯಾವ ಅರ್ಥದಲ್ಲಿ 
ಬಳಿಸಿದ್ದೀರಿ ಎಂದು ತಿಳಿಸಿ. 

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ತುಂಬ ಚೆನ್ನಾಗಿ ಮೂಡಿಬರುತ್ತಿದೆ ನಿಮ್ಮ ಲೇಖನ ಸರ್.

ನಿಮ್ಮಲ್ಲಿನ ಸಾಮಾಜಿಕ ಕಳಕಳಿಯ ಮನಸ್ಸು ನೋಡಿ ತುಂಬ ಖುಶಿಯಾಯ್ತು. ಬರೆದು ನುಡಿಯೋ ಅಂತ ಈಗಿನ ಸನ್ನಿವೇಶಗಳಲ್ಲಿ ನೀವು ನೆಡೆದು ಬರೆದಿದ್ದೀರಿ. ಹೆಮ್ಮೆ ಅನ್ನಿಸುತ್ತದೆ ಸರ್. ಧನ್ಯವಾದಗಳು.

ಸಿ. ಎಸ್. ಮಠಪತಿ
ಸಿ. ಎಸ್. ಮಠಪತಿ
11 years ago

ಲೇಖನ ಮೆಚ್ಚಿ, ನುಡಿ ಬರೆದೆಲ್ಲ ಸಹೃದಯರಿಗೆ ಧನ್ಯವಾದಗಳು……………………

7
0
Would love your thoughts, please comment.x
()
x