Facebook

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೯): ಅಖಿಲೇಶ್ ಚಿಪ್ಪಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಕರ್ನಾಟಕದ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬರುವ ಗುಂಡ್ಯ ನದಿಗೆ ಅಡ್ಡಡ್ಡಲಾಗಿ ಆಣೆಕಟ್ಟು ಕಟ್ಟುವ ಪ್ರಸ್ತಾವನೆಯನ್ನು  ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆ.ಪಿ.ಸಿ.ಎಲ್) ಹೊಂದಿದೆ. ಮೂರು ಹಂತಗಳಲ್ಲಿ ೨೦೦ ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಯೋಜನೆಯನ್ನು ಸಿದ್ಧಪಡಿಸಿದೆ. ಮೊದಲನೇ ಹಂತವಾಗಿ ಎತ್ತಿನಹೊಳೆ, ಕೇರಿಹೊಳೆ, ಹೊಂಗದಹಳ್ಳ ಮತ್ತು ಬೆಟ್ಟಕುಮಾರಿ ಹರಿವಿನ ನೀರನ್ನು ಬಳಸುವುದು, ಇದರಲ್ಲಿ ನೀರು ಸಂಗ್ರಹಣೆಗಾಗಿ ೧೭೮.೫ ಚ.ಕಿ.ಮಿ ವಿಸ್ತೀರ್ಣ ಮುಳುಗಡೆಯಾಗುತ್ತದೆ. ಹಾಗೆಯೇ ಎರಡನೇ ಹಂತದಲ್ಲಿ ಕುಮಾರಧಾರಾ ಮತ್ತು ಲಿಂಗದಹೊಳೆ ಹಾಗೂ ಮೂರನೇ ಹಂತದಲ್ಲಿ ಕುಮಾರಹೊಳೆ ಮತ್ತು ಅಬಿಲ್‌ಬೀರುಹೊಳೆಯ ಹರಿವನ್ನು ವಿದ್ಯುತ್ ಉತ್ಪಾದನೆಗಾಗಿ ಬಳಸುವುದು. ಇದರಲ್ಲಿ ಒಟ್ಟು ನೀರಿನ ಸಂಗ್ರಹಣೆಗಾಗಿ ಮುಳುಗಡೆಯಾಗುವ ಪ್ರದೇಶ ವಿಸ್ತಾರ ಒಟ್ಟು ೧೪೦ ಚ.ಕಿ.ಮಿಗಳು. ೦೬/೧೦/೧೯೯೮ರಲ್ಲಿ ಕರ್ನಾಟಕ ಸರ್ಕಾರ ಗುಂಡ್ಯ ಯೋಜನೆಯನ್ನು ನಿರ್ಮಿಸಲು ಕೆ.ಪಿ.ಸಿ.ಎಲ್‌ಗೆ ನಿರ್ದೇಶಿಸಿತು. ೧೦ ವರ್ಷಗಳಲ್ಲಿ ಕೆ.ಪಿ.ಸಿ.ಎಲ್ ಸರ್ಕಾರದ ವಿವಿಧ ಇಲಾಖೆಗಳಿಂದ ನಿರಾಪೇಕ್ಷಣ ಪತ್ರ ಪಡೆಯಲು ವ್ಯಯಿಸಿತು. ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಮುನ್ನ ೦೬/೦೬/೨೦೦೮ರಲ್ಲಿ ಸಾರ್ವಜನಿಕ ಅಹವಾಲನ್ನು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕರೆಯಲಾಯಿತು. ಚಿಪ್ಕೋ ಚಳುವಳಿಯ ನೇತಾರ ಶ್ರೀ ಸುಂದರಲಾಲ್ ಬಹುಗುಣ ನೇತೃತ್ವದಲ್ಲಿ ೨೧/೧೨/೨೦೦೯ರಂದು ಹೊಂಗದಹಳ್ಳದಲ್ಲಿ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಯಿತು. ಇದರ ಮಾರನೇ ದಿನ ಮಲೆನಾಡು ಜನಪರ ಹೋರಾಟ ಸಮಿತಿಯವರು ಹಾಸನದಲ್ಲಿ ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿದರು. 

ಈ ಯೋಜನೆಯ ಜಾರಿಯ ಕುರಿತು ವರದಿ ನೀಡಲು ಮತ್ತೆ ಗಾಡ್ಗಿಳ್ ಸಮಿತಿಗೆ ಅಧಿಕಾರ ನೀಡಲಾಯಿತು. ಪ್ರೊ:ಮಾಧವ ಗಾಡ್ಗಿಳ್ ಮತ್ತು ತಂಡದವರು ೨೦೧೦ರಲ್ಲಿ ಯೋಜನೆಯ ಸಂತ್ರಸ್ತರ ಅಹವಾಲನ್ನು ವಿವಿಧ ಹಂತಗಳಲ್ಲಿ ಆಲಿಸಿತು ಹಾಗೂ ಕ್ಷೇತ್ರವಿಕ್ಷಣೆ ನಡೆಸಿತು. ಒಟ್ಟೂ ಸಸ್ಯಪ್ರಬೇಧಗಳ ಪೈಕಿ ೩೬% ಸಸ್ಯಪ್ರಬೇಧಗಳು ಇಲ್ಲಿಗೆ ಮಾತ್ರ ಸೀಮಿತವಾಗಿದೆ, ಹಾಗೂ ೮೭% ಉಭಯಚರಿಗಳು ಹಾಗೂ ೪೧% ಮೀನುಗಳು ಸ್ಥಾನಿಕವಾಗಿವೆ. ಅಲ್ಲದೆ ವನ್ಯಜೀವಿ ಸಂರಕ್ಷಣಾ ಕಾಯ್ದೆ (೧೯೭೨) ಅಡಿಯಲ್ಲಿ ಶ್ರೇಣಿ ೧ ಬರುವ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ಉದ್ದೇಶಿತ ಗುಂಡ್ಯ ಜಲಾನಯನ ಪ್ರದೇಶದ ಜೀವಿವೈವಿಧ್ಯ ಪ್ರಮುಖ ಅಂಶಗಳು ಇಂತಿವೆ. ಕೇರಳದ ಸೈಲೆಂಟ್ ವ್ಯಾಲಿ, ಕರ್ನಾಟಕದ ಕುದರೆಮುಖ, ತಮಿಳುನಾಡಿನ ಕಾಲಾಕ್ಕಾಡ್ ಪ್ರದೇಶದ ಸಸ್ಯವೈವಿಧ್ಯಕ್ಕಿಂತ ಕಡಿಮೆ ವೈವಿಧ್ಯ ಹೊಂದಿದ ಈ ಪ್ರದೇಶದಲ್ಲಿ ಸುಮಾರು ೧೮ ಜಾತಿ ಸಸ್ಯಗಳು ಬರೀ ಇಲ್ಲಿಗೆ ಮಾತ್ರ ಸೀಮಿತವಾಗಿವೆ. ಬಿಸಿಲೆ ಪ್ರದೇಶದಲ್ಲಿ ಮಾತ್ರ ಕಂಡುಬರುವ ಕುಕ್ಕೋ ಎಂಬ ಹೆಸರಿನ ಹೊಸ ತಳಿಯ ಜೇನು ಇಲ್ಲಿ ಕಂಡು ಬಂದಿದೆ. ಮಾಷೀರ್ ಎಂಬ ತಳಿಯ ಮೀನನ್ನು ಈ ಪ್ರದೇಶದಲ್ಲಿ ಸ್ಥಳೀಯರೇ ರಕ್ಷಿಸಿಕೊಂಡು ಬಂದಿದ್ದಾರೆ. ಉಭಯವಾಸಿಗಳಲ್ಲಿ ೨ ಪ್ರಬೇಧಗಳು ಪ್ರಪಂಚದ ಬೇರೆಲ್ಲೂ ಕಂಡು ಬರುವುದಿಲ್ಲ. ಇಲ್ಲಿ ಕಂಡುಬರುವ ೬೯ ಜಾತಿ ಪಕ್ಷಿ ಪ್ರಬೇಧಗಳಲ್ಲಿ ೬ ಪ್ರಬೇಧಗಳು ಇಲ್ಲಿಗೆ ಮಾತ್ರ ಸೀಮಿತವಾಗಿವೆ. ಸಿಂಹಬಾಲದ ಕೋತಿ, ಟ್ರಾವಂಕೋರ್ ಹಾರುವ ಇಣಚಿ, ನೀಲಗಿರಿ ನೀಲ್‌ಗಾಯ್ ಇತ್ಯಾದಿ ಸಸ್ತನಿಗಳು ಕೂಡ ಸ್ಥಾನಿಕ ಸ್ಥಾನಮಾನ ಹೊಂದಿವೆ. ಅಲ್ಲದೆ ಹುಲಿ, ಆನೆಗಳು ಈ ಭಾಗದಲ್ಲಿ ಕಂಡುಬರುತ್ತವೆ. ಮೈಸೂರು ಆನೆ ವಲಯದಿಂದ ಹಾಸನ-ಸಕಲೇಶಪುರಕ್ಕೆ ಹೋಗುವ ಆನೆಮಾರ್ಗವೂ ಈ ಯೋಜನೆಯ ವ್ಯಾಪ್ತಿಯಲ್ಲೇ ಬರುತ್ತದೆ. ಈ ಭಾಗದಲ್ಲಿ ಈಗಾಗಲೇ ಕಾಫಿ ತೋಟಗಳಿಗಾಗಿ ಸಾಕಷ್ಟು ಕಾಡುಗಳನ್ನು ನಾಶ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಏಲಕ್ಕಿಯನ್ನು ಬೆಳೆಯಲಾಗುತ್ತಿದೆ. ಗುಂಡ್ಯ ಜಲವಿದ್ಯುತ್ ಯೋಜನೆಯಿಂದಾಗಿ ಮುಳುಗಡೆಯಾಗಲಿರುವ ಪ್ರದೇಶ ಹಾಗೂ ಜೀವಿವೈವಿಧ್ಯ ನಾಶವು ಸಮ್ಮತವಾದುದಲ್ಲ. ಅಲ್ಲದೆ ರಸ್ತೆಗಾಗಿ, ಕಟ್ಟಡಗಳಿಗಾಗಿಯೂ ಬಹಳಷ್ಟು ಕಾಡು ಪ್ರದೇಶವು ನಾಶವಾಗಲಿದೆ. ಆಣೆಕಟ್ಟು ಕಟ್ಟುವುದರಿಂದಾಗಿ ಕುಮಾರಧಾರ ನದಿಯ ಹರಿವಿನ ಮೇಲೂ ಪರಿಣಾಮ ಬೀರುತ್ತದೆ. ನಿರಂತರವಾಗಿ ಹರಿಯುತ್ತಿರುವ ಕುಮಾರಧಾರ ಹರಿವು, ಶರಾವತಿ ನದಿಯಂತೆ ಮಾರ್ಪಟ್ಟು ಮಳೆಗಾಲದಲ್ಲಿ ಮಾತ್ರ ಹರಿಯುವಂತಾಗುವ ಅಪಾಯವಿದೆ. ಯೋಜನಾ ಪ್ರದೇಶವು ಇಎಸ್‌ಝಡ್೧ ಶ್ರೇಣಿಯಲ್ಲಿ ಬರುವುದರಿಂದ, ಈ ಪ್ರದೇಶದಲ್ಲಿ ಆಣೆಕಟ್ಟು ಕಟ್ಟುವ ಹಾಗಿಲ್ಲ. ಆದ್ದರಿಂದ, ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ಅವಕಾಶ ನೀಡಬಾರದು ಎಂದು ಗಾಡ್ಗಿಳ್ ವರದಿ ಸಂಶಯಾತೀತವಾಗಿ ಹೇಳಿದೆ.

ಕಸ್ತೂರಿ ರಂಗನ್ ವರದಿ: ಈ ವರದಿಯಲ್ಲೂ ಕೂಡ ಗುಂಡ್ಯ ಯೋಜನೆಯಿಂದಾಗುವ ಹಲವು ತರಹದ ಪರಿಸರ ನಾಶವನ್ನು ಪ್ರಸ್ತಾಪಿಸಲಾಗಿದೆ. ನದಿಯ ಹರಿವಿನ ಮೇಲಾಗುವ ಪರಿಣಾಮವನ್ನೂ ಗುರುತಿಸಲಾಗಿದೆ. ಮಲೆನಾಡು ಜನಪರ ಹೋರಾಟ ಸಮಿತಿಯ ಸಮಗ್ರ ವಾದವನ್ನು ಕೇಳಿ, ಪರಿಸರಕ್ಕೆ ಪೂರಕವಾಗಿ ಏನು ಕ್ರಮ ತೆಗೆದುಕೊಳ್ಳಲು ಸಾಧ್ಯವಿದೆ ಎಂಬುದನ್ನು ಪುನರ್‌ಪರಿಶೀಲಿಸಲು ಕರ್ನಾಟಕ ಸರ್ಕಾರಕ್ಕೆ ಸಲಹೆ ನೀಡಿದೆ. ಯೋಜನೆಯ ಎಲ್ಲಾ ಹಂತಗಳನ್ನೂ ಪರಿಸರಕ್ಕೆ ಮಾರಕವಾಗದಂತೆ ಹೇಗೆ ಅನುಷ್ಠಾನಗೊಳಿಸಬಹುದು ಎಂಬುದನ್ನು ವೈಜ್ಞಾನಿಕ ನೆಲೆಯಲ್ಲಿ ನೋಡಬೇಕು ಎಂಬುದನ್ನು ಪ್ರತಿಪಾದಿಸುತ್ತಾ, ಜನರಿಗೆ ವಿದ್ಯುತ್ ಅಗತ್ಯದ ಅನಿವಾರ್ಯತೆಯನ್ನು ಗಮನದಲ್ಲಿರಿಸಿಕೊಂಡು, ಯೋಜನೆಗೆ ಷರತ್ತುಬದ್ದ ಅನುಮತಿ ನೀಡಬಹುದು ಎಂದು ಹೇಳಿದೆ. 

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

Leave a Reply