ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ (ಅವಲೋಕನ-೮): ಅಖಿಲೇಶ್ ಚಿಪ್ಪಳಿ

ಮುಂದುವರೆದಿದೆ. . .

ಮಾಧವ ಗಾಡ್ಗಿಳ್ ವರದಿ: ಈ ವರದಿಯು ಇಎಸ್‌ಝಡ್೧ರಲ್ಲಿ ಜಲವಿದ್ಯುತ್ ಯೋಜನೆಗಳಿಗೆ ಅನುಮತಿ ನೀಡುವುದನ್ನು ನಿರಾಕರಿಸುತ್ತದೆ. ಕರ್ನಾಟಕ ಪವರ್ ಕಾರ್ಪೊರೇಷನ್‌ನವರು ಗುಂಡ್ಯ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾಗಲಿರುವ ಪ್ರದೇಶದ ವ್ಯಾಪ್ತಿಯನ್ನು ೮೦% ಕಡಿಮೆ ಮಾಡುವುದಾಗಿ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಹೊಂಗದಹಳ್ಳ ಆಣೆಕಟ್ಟು ಕಟ್ಟುವುದನ್ನು ಕೈ ಬಿಡಲಿದೆ. ಆದಾಗ್ಯೂ ಬೆಟ್ಟದ ಕುಮರಿ ಪ್ರದೇಶವೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಹೀಗೆಯೇ ಅತಿರಪಳ್ಳಿ ಜಲವಿದ್ಯುತ್ ಯೋಜನೆಯ ವ್ಯಾಪ್ತಿಯೂ ಇಎಸ್‌ಝಡ್೧ರ ಅಡಿಯಲ್ಲೇ ಬರುತ್ತದೆ. ಇದರಿಂದಾಗಿ ವರದಿಯು ಕೇಂದ್ರ ಪರಿಸರ ಇಲಾಖೆಗೆ ಯಾವುದೇ ಕಾರಣಕ್ಕೂ ಈ ೨ ಜಲ ವಿದ್ಯುತ್ ಯೋಜನೆಗೆ ಅನುಮತಿ ನೀಡಬಾರದು ಎಂದು ಸೂಚಿಸಿದೆ. ಅಲ್ಲದೇ ಈ ಪ್ರದೇಶದಲ್ಲಿ ವಾಸಿಸುತ್ತಿರುವ ಆದಿವಾಸಿಗಳ ಹಿತವನ್ನು ಕಾಯುವ ಅರಣ್ಯ ಹಕ್ಕನ್ನು ನೀಡಿರುವುದಿಲ್ಲವೆಂಬುದೂ ಇನ್ನೊಂದು ಕಾರಣ.

ಕೇರಳ ರಾಜ್ಯ ವಿದ್ಯುತ್ ನಿಗಮವು ತಿರಚೂರು ಜಿಲ್ಲೆಯ ಹರಿಯುವ ಚಲಕುಡಿ ನದಿಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಿ ೧೬೩ ಮೆ.ವ್ಯಾ ವಿದ್ಯುತ್ತನ್ನು ಉತ್ಪಾದಿಸಿ ಅತ್ಯಂತ ಬೇಡಿಕೆ ಇರುವ ಹೊತ್ತಿನಲ್ಲಿ ಅಂದರೆ ಸಂಜೆ ೬ರಿಂದ ರಾತ್ರಿ ೧೦ರ ವರೆಗೆ ಪೂರೈಸುವ ಯೋಜನೆಯನ್ನು ಹೊಂದಿದೆ. ೨೩ ಮೀಟರ್ ಎತ್ತರ ಹಾಗೂ ೩೧೧ ಮೀಟರ್ ಉದ್ದದ ಆಣೆಕಟ್ಟು ಕಟ್ಟುವ ಯೋಜನೆಯಿದು. ಇದಕ್ಕಾಗಿ ೧೩೮ ಹೆಕ್ಟರ್ ಅರಣ್ಯ ಪ್ರದೇಶವನ್ನು ವ್ಯಯಿಸಬೇಕಾಗುತ್ತದೆ. ಈ ಯೋಜನೆಗೆ ಮೊದಲ ಹಂತದ ಅನುಮತಿಯನ್ನು ೨೨/೧೨/೧೯೯೭ರಲ್ಲಿ ಅರಣ್ಯ ಇಲಾಖೆ ಹಾಗೂ ೨೦.೧.೧೯೯೮ರಂದು ಪರಿಸರ ಇಲಾಖೆಯು ಅನುಮತಿಯನ್ನು ನೀಡಿದವು. ಹಾಗೂ ೧೬.೧೨.೧೯೯೯ರಂದು ಎರಡನೇ ಹಂತದ ಅನುಮತಿಯನ್ನು ಅರಣ್ಯ ಇಲಾಖೆ ನೀಡಿತು. ಇದನ್ನು ವಿರೋಧಿಸಿ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಕೇರಳದ ಉಚ್ಛನ್ಯಾಯಾಲಯದಲ್ಲಿ ಸಲ್ಲಿಕೆಯಾಯಿತು. ದೂರನ್ನು ಪರಿಗಣಿಸಿದ ನ್ಯಾಯಾಲಯ ಈ ಯೋಜನೆಯ ಪ್ರಸ್ತಾವನೆಯನ್ನು ರದ್ದುಪಡಿಸಿ, ಕೇರಳ ವಿದ್ಯುತ್ ನಿಗಮಕ್ಕೆ ಇನ್ನೊಂದು ಪ್ರಸ್ತಾವನೆಯನ್ನು ಸಲ್ಲಿಸಲು ೧೭.೧೦.೨೦೦೧ರಂದು ಸೂಚನೆ ನೀಡಿತು. ಈ ನಿಟ್ಟಿನಲ್ಲಿ ಕೇರಳ ಮಾಲಿನ್ಯ ನಿಯಂತ್ರಣ ಮಂಡಳಿಯು ೬.೨.೨೦೦೨ರಂದು ಸಾರ್ವಜನಿಕ ಅಹವಾಲನ್ನು ತಿರಚೂರಿನಲ್ಲಿ ಆಲಿಸಿತು. ಉಷ್ಣವಲಯದ ಸಸ್ಯವೈವಿಧ್ಯ ಮತ್ತು ಸಂಶೋದನಾ ಕೇಂದ್ರದ ಪ್ರಕಾರ ಈ ವಲಯವೂ ಅತ್ಯಂತ ಮಹತ್ವಪೂರ್ಣ ಜೀವಿವೈವಿಧ್ಯ ಪ್ರದೇಶವಾಗಿದೆ, ಆದ್ದರಿಂದ ಸರ್ಕಾರದ ಎಲ್ಲಾ ಇಲಾಖೆಗಳು ಸ್ಥಳೀಯರ ಹಾಗೂ ಸಂಘ ಸಂಸ್ಥೆಗಳ ಸಮಗ್ರ ಹಾಗೂ ಇತರ ವಿಷಯಗಳ  ಅಭಿಪ್ರಾಯ ಪಡೆಯುವುದು ಸೂಕ್ತವಾಗಿದೆ. ತನ್ಮಧ್ಯೆ, ಕೇರಳ ಜೀವಿವೈವಿಧ್ಯ ಮಂಡಳಿಯು ಕೇರಳದ ಉಚ್ಚ ನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿತು. ಈ ಪ್ರಮಾಣ ಪತ್ರವನ್ನು ಸಲ್ಲಿಸುವಾಗ ಯಾವುದೇ ಮಾನದಂಡವನ್ನು ಅಳವಡಿಸಿಕೊಂಡಿರುವುದಿಲ್ಲವೆಂದು ಕೇರಳ ವಿದ್ಯುತ್ ನಿಗಮವೂ ತೀವ್ರವಾದ ಆಕ್ಷೇಪಣೆಯನ್ನು ಸಲ್ಲಿಸಿ ೧೦.೨.೧೦೦೫ರಂದು ಕೇಂದ್ರ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಸಫಲವಾಯಿತು. ನಂತರದಲ್ಲಿ, ಕೇಂದ್ರ ಪರಿಸರ ಇಲಾಖೆ ನೀಡಿದ ಅನುಮತಿಯನ್ನು ಪ್ರಶ್ನಿಸಿ ಅತಿರಪಳ್ಳಿ ಗ್ರಾಮ ಪಂಚಾಯ್ತಿಯು ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿತು. ಕೇರಳದ ಉಚ್ಛನ್ಯಾಯಾಲಯ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಾನ್ಯ ಮಾಡಿ ಕೇಂದ್ರ ಪರಿಸರ ಇಲಾಖೆ ನೀಡಿದ ಅನುಮತಿಯನ್ನು ೨೩/೩/೨೦೦೬ರಂದು ಪುನ: ರದ್ದುಪಡಿಸಿ ಪ್ರಸ್ತಾವನೆಯನ್ನು ಮತ್ತೊಮ್ಮೆ ಸ್ಥಳೀಯರ ಅಹವಾಲನ್ನು ಆಲಿಸಿ ಮರುಪರಿಶೀಲಿಸಲು ಕೇರಳ ವಿದ್ಯುತ್ ಮಂಡಲಿಗೆ ನಿರ್ದೇಶನ ನೀಡಿತು. ೧೫/೬/೨೦೦೬ರಲ್ಲಿ ತಿರಚೂರಿನ ಚಲಕುಡಿಯಲ್ಲಿ ಸಾರ್ವಜನಿಕ ಅಹವಾಲನ್ನು ಆಲಿಸಲಾಯಿತು. ಈ ಸಭೆಯಲ್ಲಿ ೧೨೦೦ ಸಾರ್ವಜನಿಕರು ಭಾಗವಹಿಸಿದ್ದರು. ವಿಶೇಷವೆಂದರೆ ಯಾರೊಬ್ಬರೂ ಈ ಯೋಜನೆಯ ಪರವಾಗಿರಲಿಲ್ಲ. ಅತಿರಪಳ್ಳಿ ಜಲವಿದ್ಯುತ್ ಯೋಜನೆಗೆ ಸಾಮೂಹಿಕವಾಗಿ ವಿರೋಧ ವ್ಯಕ್ತವಾಯಿತು.

ಮತ್ತೆ ಮತ್ತೆ ಈ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದ್ದರಿಂದ ಮತ್ತೊಂದು ಸಮಿತಿಯನ್ನು ರಚಿಸಿ, ಹೇಗಾದರೂ ಯೋಜನೆಗೆ ಒಪ್ಪಿಗೆ ಪಡೆಯಬೇಕೆಂಬ ಹುನ್ನಾರ ನಡೆಯಿತು. ಮತ್ತೊಮ್ಮೆ ಸಭೆ ಕರೆದು ಮನವೊಲಿಸುವ ಕಾರ್ಯಕ್ರಮ ನಡೆಯಿತು. ಕೇರಳ ವಿದ್ಯುತ್ ನಿಗಮದ ಅಧ್ಯಕ್ಷರು ಖುದ್ದು ಈ ಸಭೆಯಲ್ಲಿ ಭಾಗವಹಿಸಿ ಜನರ ಮನವೊಲಿಸುವ ಪ್ರಯತ್ನ ಮಾಡಿದರಾದರೂ, ಜನರ ಪ್ರಶ್ನೆಗಳಿಗೆ ಉತ್ತರ ಹೇಳಲು ಅವರಿಗೆ ಸಾಧ್ಯವಾಗಲ್ಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಆದಾಗ್ಯೂ ಮತ್ತೆ ಕೇಂದ್ರ ಪರಿಸರ ಇಲಾಖೆ ಯೋಜನೆಗೆ ೧೮/೭/೨೦೦೭ರಂದು ಅನುಮತಿ ನೀಡಿತು. ಮತ್ತೆ ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಕೆಯಾಯಿತು. ಹೀಗೆ ಇದೊಂದು ಮುಗಿಯದ ಚಕ್ರವಾಯಿತು. ಕೇರಳ ರಾಜ್ಯದ ಒತ್ತಡಕ್ಕೆ ಮಣಿಯುವ ಕೇಂದ್ರ ಪರಿಸರ ಇಲಾಖೆಗೆ ಇದೊಂದು ತಲೆನೋವಾಗಿ ಪರಿಣಮಿಸಿತು. ಅಂತಿಮವಾಗಿ ಈ ವ್ಯಾಜ್ಯವನ್ನು ಪರಿಹರಿಸಲು ಗಾಡ್ಗಿಳ್ ಸಮಿತಿಗೆ ಅಧಿಕಾರವನ್ನು ನೀಡಲಾಯಿತು. 

ಗಾಡ್ಗಿಳ್ ಸಮಿತಿಯು ಈ ಯೋಜನೆಯ ವಾಸ್ತವಿಕತೆಯನ್ನು ಅರಿಯಲು ಖುದ್ದು ಕ್ಷೇತ್ರಕ್ಕೆ ತೆರಳಿ, ಸರ್ಕಾರದ ಹಲವು ಇಲಾಖೆಗಳ ಮುಖ್ಯಸ್ಥರು ಹಾಗೂ ಸಾರ್ವಜನಿಕರು, ಸ್ಥಳೀಯರು, ಸ್ಥಳೀಯ ಸಂಘ-ಸಂಸ್ಥೆಗಳು, ಸ್ಥಳೀಯ ಆಡಳಿತ ಮಂಡಳಿ ಹೀಗೆ ಹತ್ತು ಹಲವು ಜನರನ್ನು ಭೇಟಿ ಮಾಡಿ, ಲಿಖಿತವಾದ ಅಹವಾಲು ಪಡೆಯಿತು. ಹಾಗೂ ಈ ಹಿಂದೆ ದಾಖಲುಗೊಂಡ ಎಲ್ಲಾ ವಿವರಗಳನ್ನು ಪರಿಶೀಲಿಸಿ, ನ್ಯಾಯಾಲಯದ ಆದೇಶಗಳನ್ನು ಪರಿಗಣಿಸಿ ಈ ಕೆಳಕಂಡ ತೀರ್ಮಾನವನ್ನು ತೆಗೆದುಕೊಂಡು ವರದಿಯಲ್ಲಿ ದಾಖಲಿಸಿತು. 

ಚಲಕುಡಿ ನದಿ ತೀರದ ಸಸ್ಯವೈವಿಧ್ಯವು ಅಪೂರ್ವವಾದದು, ಇಂತಹ ಸಸ್ಯವೈವಿಧ್ಯ ಪಶ್ಚಿಮಘಟ್ಟಗಳ ಇತರ ಭಾಗಗಳಲ್ಲೂ ಕಂಡುಬರುವುದಿಲ್ಲ. ಇಲ್ಲಿ ಕಂಡು ಬರುವ ೧೫೫ ಜಾತಿಯ ಸಸ್ಯಗಳು ಪಶ್ಚಿಮಘಟ್ಟಗಳ ಇತರ ಭಾಗಗಳಲ್ಲೂ ಇಲ್ಲ. ಇದರಲ್ಲಿ ೩೩ ಜಾತಿಗಳು ವಿನಾಶದಂಚಿನ ಪಟ್ಟಿಯಲ್ಲಿವೆ. ಪಶ್ಚಿಮಘಟ್ಟಗಳ ಒಟ್ಟೂ ಪ್ರಬೇಧಗಳ ಪೈಕಿ ೨೧% ಸಸ್ಯ ಪ್ರಬೇಧ, ೧೬% ಚಿಟ್ಟೆ ಪ್ರಬೇಧ, ೫೩% ಉಭಯಚರಗಳು, ೨೧% ಸರಿಸೃಪಗಳು, ೧೩% ಪಕ್ಷಿಗಳು, ೧೪% ಸ್ತನಿಗಳು ಸ್ಥಾನಿಕವಾಗಿವೆ. ಅಲ್ಲದೆ, ಯೋಜನೆಯಿಂದ ಮುಳುಗಡೆಯಾಗಲಿರುವ ಪ್ರದೇಶಗಳು ಸಮುದ್ರ ತೀರದಿಂದ ಪಶ್ಚಿಮಘಟ್ಟದ ತುಟ್ಟತುದಿಗೆ ಬೆಸೆಯುವ ಅಪೂರ್ವ ಪ್ರದೇಶವಾಗಿದೆ. ಜೀವಿವೈಧ್ಯದ ಖಜಾನೆಯಂತಿದೆ. ಇದುವರೆಗೆ ಕೇರಳದಲ್ಲಿ ಗುರುತಿಸಿದ ೪೮೬ ಪಕ್ಷಿ ಪ್ರಬೇಧಗಳಲ್ಲಿ ೨೩೪ ಪ್ರಬೇಧಗಳು ಈ ಪ್ರದೇಶದಲ್ಲಿವೆ. ಅದರಲ್ಲೂ ನಾಲ್ಕೂ ಜಾತಿಯ ಮಂಗಟ್ಟೆ ಪ್ರಬೇಧಗಳು ಇಲ್ಲಿ ಮಾತ್ರ ಕಂಡು ಬರುತ್ತವೆ ಹಾಗೂ ಅತ್ಯಂತ ಈ ಅಪರೂಪ ಸಂಗತಿ ಪ್ರಪಂಚದ ಇನ್ಯಾವುದೇ ಭಾಗದಲ್ಲೂ ಕಂಡುಬರುವುದಿಲ್ಲ. ಕೇಂಬ್ರಿಡ್ಜ್‌ನ ಅಂತಾರಾಷ್ಟ್ರೀಯ ಪಕ್ಷಿ ಸಂಸ್ಥೆ ಈ ಪ್ರದೇಶಕ್ಕೆ ವಿಶ್ವ ಮಾನ್ಯತೆ ನೀಡಿದೆ. ಇಡೀ ಕೇರಳದ ಸಿಹಿನೀರಿನ ೨೧೦ ಮೀನು ಪ್ರಬೇಧಗಳಲ್ಲಿ ೧೦೪ ಪ್ರಬೇಧಗಳು ಚಲಕುಡಿ ನದಿಯಲ್ಲೇ ಕಂಡು ಬರುತ್ತವೆ. ಇದರಲ್ಲಿ ೨೩ ಪ್ರಬೇಧಗಳು ಈ ನದಿಯಲ್ಲಿ ಮಾತ್ರ ವಾಸಿಸುತ್ತವೆ. ಅಲ್ಲದೆ ಇತ್ತೀಚಿಗೆ ಹೊಸದಾಗಿ ೫ ಪ್ರಬೇಧಗಳನ್ನು ಈ ನದಿಯಲ್ಲಿ ಕಂಡುಹಿಡಿಯಲಾಗಿದ್ದು, ಇದರಲ್ಲಿ ಸಾಲರೀಸ್ ರೆಟಿಕುಲಾಟಸ್ ಎಂಬ ಹೊಸ ಪ್ರಬೇಧ ಪ್ರಪಂಚದ ಬೇರೆಲ್ಲೂ ಇಲ್ಲ. ಯೋಜನಾ ಪ್ರದೇಶದ ವ್ಯಾಪ್ತಿಯು ಮೀನುಗಳ ವಂಶಾಭಿವೃದ್ಧಿಯ ಸ್ಥಳವಾಗಿದ್ದು, ಇಲ್ಲಿ ಆಣೆಕಟ್ಟು ಕಟ್ಟಿದಲ್ಲಿ ಎಲ್ಲಾ ಪ್ರಬೇಧಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದರಲ್ಲಿ ಕೆಲವು ಪ್ರಬೇಧಗಳು ನದಿ ಹರಿವಿನ ವಿರುದ್ದವಾಗಿ ಈಜಿ ತಮ್ಮ ವಂಶಾಭಿವೃದ್ದಿ ಕ್ರಿಯೆಯಲ್ಲಿ ತೊಡಗುತ್ತವೆ. ಹೀಗೆ ಅವುಗಳ ಆವಾಸಸ್ಥಾನಕ್ಕೆ ಅಡ್ಡವಾಗಿ ಆಣೆಕಟ್ಟು ಕಟ್ಟಿದಲ್ಲಿ ಈ ಪ್ರಭೇದಗಳೂ ನಾಶವಾಗುತ್ತವೆ. ರಾಷ್ಟ್ರೀಯ ಮೀನು ವಂಶವಾಹಿ ಸಂಸ್ಥೆಯು ಈ ಪ್ರದೇಶವನ್ನು ಮೀನುಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸಿದೆ. ಅಲ್ಲದೆ ಆನೆ ಯೋಜನೆಯಲ್ಲಿ ಬರುವ ಈ ಪ್ರದೇಶವನ್ನು ವಲಸೆ ಹೋಗುವ ಮಾರ್ಗವೆಂದು ಖುದ್ದು ಕೇಂದ್ರ ಪರಿಸರ ಇಲಾಖೆಯೆ ಗುರುತಿಸಿದೆ. ಅತ್ಯಪರೂಪದ ಪ್ರಬೇಧವಾದ ಸಿಂಹಬಾಲದ ಕೋತಿಗಳು ಇಲ್ಲಿವೆ. ಅಪರೂಪದ ಆಮೆ ಪ್ರಬೇಧವೂ ಇಲ್ಲಿ ಕಂಡುಬಂದಿದೆ.

ಪರಿಸರ, ಜನಜೀವನ, ಕುಡಿಯುವ ನೀರು, ಆದಿವಾಸಿಗಳ ಸ್ಥಳಾಂತರ, ಕೃಷಿ ಇವುಗಳ ಮೇಲಾಗುವ ವ್ಯತಿರಿಕ್ತ ಪರಿಣಾಮಗಳನ್ನು ಪರಿಗಣಿಸಿ ಗಾಡ್ಗಿಳ್ ಸಮಿತಿಯು ತನ್ನ ವರದಿಯಲ್ಲಿ ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಅತ್ಯಲ್ಪ ವಿದ್ಯುತ್‌ಗಾಗಿ ಬೆಲೆಕಟ್ಟಲಾಗದ ಈ ಪ್ರದೇಶದ ನೈಸರ್ಗಿಕ ಸಂಪತ್ತನ್ನು ಮುಳುಗಿಸುವುದು ನ್ಯಾಯೋಚಿತವಲ್ಲ ಎಂದು ಹೇಳಿದೆ. 

ಕಸ್ತೂರಿ ರಂಗನ್ ವರದಿ: ಸಮಿತಿಯ ಸದಸ್ಯರು ಸ್ಥಳೀಯರು, ಸಂಘ-ಸಂಸ್ಥೆಗಳು, ಸಾರ್ವಜನಿಕರ ಅಭಿಪ್ರಾಯವನ್ನು ದಾಖಲಿಸಿಕೊಂಡು, ವಿದ್ಯುತ್ ನಿಗಮದ ವಾದವನ್ನು ಆಲಿಸಿತು. ಅತಿರಪಳ್ಳಿ ಜಲವಿದ್ಯುತ್ ಯೋಜನೆಯ ಭಾಗವಾದ ಚಲಕುಡಿ ನದಿಗೆ ಆಣೆಕಟ್ಟು ಕಟ್ಟುವುದರಿಂದಾಗುವ ಸರಿಪಡಿಸಲಾಗದ ನಷ್ಟವನ್ನು ಸಂಘ-ಸಂಸ್ಥೆಗಳು ಸಮಿತಿಗೆ ಮನವರಿಕೆ ಮಾಡಿದವು. ಆಣೆಕಟ್ಟು ಕಟ್ಟುವುದರಿಂದ ಪರಿಸರದ ಮೇಲೆ ಬಹಳ ಹಾನಿಯಾಗುವುದಿಲ್ಲವೆಂದು ವಿದ್ಯುತ್ ನಿಗಮ ವಾದಿಸಿತು. ಕಾದಾರ್ ಆದಿವಾಸಿ ಜನಾಂಗವನ್ನು ಒಕ್ಕಲೆಬ್ಬಿಸುವುದರಿಂದ ಆ ಇಡೀ ಸಮುದಾಯ ಛಿದ್ರವಾಗುವುದು ಎಂದು ಅಲ್ಲಿನ ಸಾರ್ವಜನಿಕರು ಬಿಂಬಿಸಿದರು. ಅತಿರಪಳ್ಳಿ ಯೋಜನೆಯ ಕುರಿತು ರಂಗನ್ ಸಮಿತಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ತನ್ನ ವರದಿಯನ್ನು ಸಲ್ಲಿಸಿತು. ಎಲ್ಲಾ ಜಲವಿದ್ಯುತ್ ಯೋಜನೆಗಳ ಅನುಷ್ಠಾನದಲ್ಲೂ ಅಷ್ಟಿಷ್ಟು ಕಾಡು ನಾಶವಾಗುವುದು ಸಹಜ ಕ್ರಿಯೆಯಾಗಿದೆ. ಅಲ್ಲದೆ, ಜನರಿಗೆ ವಿದ್ಯುತ್ ನೀಡುವುದು ಸರ್ಕಾರದ ಕರ್ತವ್ಯವಾಗಿರುತ್ತದೆ ಆದ್ದರಿಂದ, ಪರಿಸರ ಸಮತೋಲನವನ್ನು ಕಾಪಾಡಿಕೊಂಡು, ವಿದ್ಯುತ್ ಉತ್ಪಾದನೆ ಮಾಡುವ ಸಾಧ್ಯತೆಯನ್ನು ಮರುಪರಿಶೀಲಿಸಿ, ಕೇರಳ ಸರ್ಕಾರ ಕೇಂದ್ರ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬಹುದು ಎಂದು ಹೇಳಿತು. 

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x