Facebook

ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ?: ನಂದೀಶ್ ಟಿ.ಜಿ.

ಕನ್ನಡದ ಬರಹಗಳನ್ನು ಹಂಚಿ ಹರಡಿಕೆಲವು ವ್ಯಕ್ತಿಗಳು ನಮ್ಮ ಪಾಲಿಗೆ  ಎಂದಿಗೂ ನಿಲುಕದ ನಕ್ಷತ್ರವಾಗಿ ಉಳಿದುಬಿಡುತ್ತಾರೆ. ಮೊದಲಿಂದಲೂ ನಮ್ಮಿಂದ ಒಂದು ತೆರನಾದ ಅಂತರ ಕಾಯ್ದುಕೊಂಡು, ನಮ್ಮ ಬೇಕು ಬೇಡಗಳಿಗೆ ಸ್ಪಂದಿಸದೆ ಹಾಗೆಯೇ ಇದ್ದರೆ, ತೀರಾ ಈ ಪರಿ ನೋವು ಕಾಡುತ್ತಿರಲಿಲ್ಲ. ಒಂದು ಹೊತ್ತಲ್ಲಿ ನಮ್ಮಿರುವನ್ನೇ ಮರೆಸುವಷ್ಟು ನಮ್ಮವರಾಗಿ ಎಲ್ಲವು ಹಾಯೇನಿಸುವಂತಿರುವಾಗ ಸಂಬಂಧವನ್ನು ಕಳಚಿಕೊಂಡು  ಎದ್ದು ನಡೆದು ಬಿಡುತ್ತಾರೆ. ಒಂದಿನಿತು ಸುಳಿವು ಕೊಡದೆ, ಒಂದಿಷ್ಟು ನೊಂದುಕೊಳ್ಳದೆ ನಮ್ಮಿಂದ ನಮ್ಮವರು ದೂರ ದೂರಕ್ಕೆ ಹೆಜ್ಜೆ ಹಾಕುವಾಗ ನಮ್ಮೀ ಮನಸು ಅಕ್ಷರಶಃ  ಬೆಂಕಿಗೆ ಮೈಯೊಡ್ಡಿದ ಕಾವಲಿ. 

ಮರೆತುಬಿಡಬೇಕು ಎಂದುಕೊಳ್ಳುವೆ 
ಮರುಘಳಿಗೆಯೇ ಮರೆತುಬಿಡುವೆ 
ಒಂದೊಮ್ಮೆ ಉಸಿರು ಸೋಕಿಸಿಕೊಂಡ ಕೊರಳ 
ಯಾರೋ ಒತ್ತಿ ಹಿಡಿದಂತೆ ಭಾಸ
 

ಏನಿಲ್ಲದೆಯೂ ಬದುಕುವೆ ಎಂಬಂತೆ ಬದುಕುವ ಹುಡುಗನ  ಮನಸಿನಲ್ಲಿ "ನಾನು ಅವಳಿಲ್ಲದೆ ಬದುಕಲಾರೆ ಎಂಬುದು ಹೊರಜಗತ್ತಿಗೆ ಕಾಣದಿರಲಿ ಎಂಬ ಹುಚ್ಚು ಆಶಯವಿರುತ್ತದೆ". ಅವಳಿಲ್ಲದೆಯೂ ಇವ ನಗಬಲ್ಲ ಎಂದು ಜನ ಮಾತಾನಾಡಿಕೊಳ್ಳುವುದ ಕೇಳುವ ಸಲುವಾಗಿ ಆವ ನಟನಾಗುವ. ಈಗ ನನ್ನದು ಅಂಥದ್ದೇ ಪರಿಸ್ಥಿತಿ, ಅಂಥದ್ದೇ ಮನಸ್ಥಿತಿ. 

ಮೆದುಳು ಸ್ಥಿಮಿತ ತಪ್ಪಿಲ್ಲವೆಂಬುದು ನಿಜವಾದರೂ ಮನಸು ಹಳಿ ತಪ್ಪಿ ವರ್ಷಗಳೇ ಉರುಳಿದೆ. ಕೊನೆಯ ಬಾರಿ ನನ್ನ ದನಿಗೆ ನೀನು ಕಿವಿಯಾದ ಅವಧಿ ೩೬ ಸೆಕೆಂಡು. ಆ ಅಲ್ಪಾವಧಿ ನನ್ನ ಪೂರ್ಣಾಹುತಿ ತೆಗೆದುಕೊಳ್ಳುತ್ತಿದೆ. ಇದೆಂಥಾ ವಿಪರ್ಯಾಸ. 

ನಿನ್ನೆಲ್ಲ ನೆನಪುಗಳನ್ನು ಮರೆಯಲು ಯಾವ ನದಿ ನೀರಲ್ಲಿ ಮೀಯಲಿ. ತೋರಿಸಿದ್ದನ್ನು ನೋಡುವ ಕಣ್ಣುಗಳು ನಿನ್ನನ್ನೇ ತೋರಿಸುವಂತೆ ದುಂಬಾಲು ಬಿದ್ದಿದೆ. ಹುಡುಕಿಕೊಂಡು ಬರುವ ಆಸೆ, ಆಸಕ್ತಿ ಇದೆಯಾದರೂ ಒಲ್ಲೆಯೆಂದ ನಲ್ಲೆಯಾ ಹಿಂದೆ ನಡೆಯದಿರು ಎಂದೆಚ್ಚರಿಸುತ್ತದೆ ಸ್ವಾಭಿಮಾನ. 

ಇತ್ತೀಚೆಗೆ ಎಲ್ಲೆಂದರಲ್ಲಿ, ಯಾವಾಗೆಂದರೆ ಆವಾಗ ವಿಪರೀತ ನೆನಪಾಗುತ್ತಿ, ಮಲಗಿದೊಡನೆ ಕನಸಾಗುತ್ತಿ. 
ನೆನಪಾದಗೆಲ್ಲಾ ಮನಸೊಳಗೆ ಜೀವ ತಳೆವ ಸಾಲೊಂದೆ  . . . . . 
ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ? 
ಹೀಗೆ ಹುಟ್ಟುವ ಪ್ರಶ್ನೆಗೆ ಎಂದಿಗೂ ಉತ್ತರ ಸಿಗಲಾರದು. 

ನಮ್ಮಿಬ್ಬರ ಒಲವಿನ 
ಪಳೆಯುಳಿಕೆ ನಾನು 
ಮಣ್ಣು ಪಾಲಾಗುವ ಮುನ್ನ 
ಮತ್ತೊಮ್ಮೆ ನಿನ್ನೊಡಲಲ್ಲಿ 
ತಲೆಹುದುಗಿಸಿ ಮೈಮರೆಯಬೇಕು 

ಎಂಥಾ ಹುಚ್ಚು ಆಶಯ ನೋಡು, ಒಂದರೆ ಕ್ಷಣವೂ ನಿನಗೆ ನಾನು ಬೇಕೆನಿಸದೆ ಇರುವಾಗ ಇಲ್ಲೆಲ್ಲೋ  ಮಾಡುವ ಕೆಲಸ ಮರೆತು, ಸಮಯದ ಪರಿವೇ ಇರದಂತೆ ಒಂದಷ್ಟನ್ನು ಬರೆಯುತ್ತೇನೆ, ಬರೆಯುವ ಹೊತ್ತಲ್ಲಿ ಜೊತೆಯಾಗಿ ಕಳೆದ ರಸಕ್ಷಣಗಳ ನೆನೆ ನೆನೆದು ಮೈ ಮರೆಯುತ್ತೇನೆ, ಹೃದಯಾಘಾತಕ್ಕೆ ಈಡಾದವರಂತೆ ಬೆವರುತ್ತೇನೆ, ಮನಸೊಳಗೆ ನೂರು ಸಾರಿ ಮರುಗುತ್ತೇನೆ, ನಿನ್ನ ನೆನಪುಗಳ ಬೆಳಗಿಸೋ ಮೇಣವಾಗಿ ಕರುಗುತ್ತೇನೆ. ನಿನ್ನ ಕಂಡ ಕಣ್ಣುಗಳಿಗೆ ಇನ್ನು ಸಾವಿಲ್ಲ, ಅವು ಇನ್ನೆರಡು ಜೀವಗಳಿಗೆ ಬದುಕನ್ನು ತೋರಿಸುತ್ತದೆ. 

ಏಕಾಂಗಿಯಾಗಿದೆ ಮನಸು 
ಏಕಾಂತ ಕಾಡುವ ವಯಸು 
ಬಂದುಬಿಡು ವಾಪಸ್ಸು 
ಪ್ರೀತಿಗಿದೆ ಆಯಸ್ಸು 

ನಾ ಬರೆವ ಪದಗಳಲ್ಲಿ ಪ್ರೀತಿ ಜನಿಸಿದೆ, ಪ್ರೀತಿ ನಲಿದಿದೆ, ಪ್ರೀತಿ ನಗುತಿದೆ, ಪ್ರೀತಿ ನಲುಗಿದೆ, ಪ್ರೀತಿ ಮಡಿದಿದೆ. ನಮ್ಮಿಬ್ಬರ ಹೆಜ್ಜೆಗಳಿಗೆ ಕೊನೆಯದಾಗಿ ಮೈಯೊಡ್ಡಿದ ಜಯನಗರದ ಟಾರು ರಸ್ತೆಗಳಿಗೊಂದು ಥ್ಯಾಂಕ್ಸ್, ಹಾಗೆಯೇ ನಮ್ಮಿಬ್ಬರ ಒಡನಾಟಕ್ಕೆ ಸಾಕ್ಷಿಯಾದ ಮಹಾನಗರಿಯ ಅಸಂಖ್ಯಾತ  ಅಪರಿಚಿತರಿಗೂ ಸಹ. 

ಮರೆತು ಬದುಕುವುದು ಸುಲಭ 
ನೆನಪುಗಳೊಡನೆ ಬದುಕುವುದೇ ಕಷ್ಟ 

ನೆನ್ನೆಗಳ ನೆನಪಲ್ಲಿ ಬದುಕುವ ನನ್ನಂಥವರಿಗೆಲ್ಲ  ಹೊಂದುವುದಿಲ್ಲ ಈ ಪ್ರೀತಿ ಗೀತಿ ಇತ್ಯಾದಿ. 

ನೀನು ಮೋಹಕ
ನಾನು ಭಾವುಕ
ನಮ್ಮಿಬ್ಬರ ನಡುವಲ್ಲಿ 
ಜೀವತಳೆದ ಪ್ರೀತಿ ಅಮಾಯಕ.

ನನ್ನೆದೆಯಿಂದ ಹೊಮ್ಮಿದ ಪದಮಾಲೆ ನಿನ್ನೆದೆ  ತಲುಪಬಹುದೆಂಬ ನಿರೀಕ್ಷೆಯೊಂದಿಗೆ ಬರೆದ ಪ್ರೇಮಾಕ್ಷರಗಳಿವು. ನಿನ್ನ ತಲುಪಿದರೂ, ತಲುಪದಿದ್ದರೂ ನನ್ನ ಪ್ರೀತಿ ಸುಳ್ಳಲ್ಲ. 

ನನ್ನರಸಿ, ಚೆನ್ನರಸಿ ಎಲ್ಲಿದ್ದರೂ ಸುಖವಾಗಿರು . . . . . 
-ಟಿ. ಜಿ. ನಂದೀಶ್

*****


ಕನ್ನಡದ ಬರಹಗಳನ್ನು ಹಂಚಿ ಹರಡಿ
You can leave a response, or trackback from your own site.

2 Responses to “ಎನ್ನರಸಿ, ಚೆನ್ನರಸಿ ಎಲ್ಲಿರುವೆ ? ಹೇಗಿರುವೆ ?: ನಂದೀಶ್ ಟಿ.ಜಿ.”

  1. Rukmini Nagannavarಋ says:

    ನಂದೀಶ್… ತೊರೆದು ಹೋದವರ ನೆನಪುಗಳೇ ಹಾಗೆ.. ಮರೆವೆನಂದರೂ ಮರೆಯದೇ ಎದೆ ಇರಿಯುತ್ತವೆ…. ಹಿತವೋ ಅಹಿತವೋ… ನೋವು ನೋವುಗಳೇ…

    ಹೃದಯ ಕಲಕುತ್ತವೆ ನಿಮ್ಮ ಪ್ರತಿ ಪದಗಳು.. ಪ್ರತಿ ಪದಗಳಲ್ಲೂ ಆಕೆಯೇ ಇದ್ದಾಳೆ…

    ನನ್ನದೊಂದು ಪ್ರಾರ್ಥನೆ: ಈ ನೆನಪುಗಳು ನಲಿವಾಗಿ ರೂಪಾಂತರಗೊಳ್ಳಲಿ.

  2. Maithri Merkaje says:

    ಮೃದುವಾಗಿ ಇರಿಯುವ ಮಧುರ ನೆನಪುಗಳು…… ಪ್ರತೀ ಸಾಲುಗಳೂ ಮನ ಕಲಕುವಂತಿದೆ!…..

Leave a Reply